Advertisement

ಕದಂಬ ನೌಕಾನೆಲೆಯಲ್ಲಿ ಐ.ಎನ್.ಎಸ್ ವಿಕ್ರಾಂತ್ ಯಶಸ್ವಿ ನಿಲುಗಡೆ

04:03 PM May 21, 2023 | Team Udayavani |

ಕಾರವಾರ: ಭಾರತದ ಮೊದಲ ಸ್ವದೇಶಿ ನಿರ್ಮಿತ ವಿಮಾನವಾಹಕ ನೌಕೆ ಎಂದೇ ಹೆಗ್ಗುರುತಿಗೆ ಪಾತ್ರವಾಗಿರುವ ಐ.ಎನ್.ಎಸ್. ವಿಕ್ರಾಂತ್ ಕಾರವಾರದ ಕದಂಬ ನೌಕಾನೆಲೆಯ ನೌಕಾ ನಿಲುಗಡೆ ತಾಣದಲ್ಲಿ ಮೊದಲಬಾರಿ ಯಶಸ್ವಿಯಾಗಿ ಇಂದು ರವಿವಾರ ನಿಲುಗಡೆಯಾಗುವ ಮೂಲಕ ತನ್ನ ಸಾಮರ್ಥ್ಯವನ್ನು ಸಾರಿತು.

Advertisement

ಕೊಚ್ಚಿಯ ಹಡಗು ಕಾರ್ಖಾನೆಯಲ್ಲಿ 2000 ತಂತ್ರಜ್ಞರು, 13 ವರ್ಷಗಳಿಂದ ಹಗಲು ರಾತ್ರಿ ಕಣ್ಣಲ್ಲಿ ಕಣ್ಣಿಟ್ಟು ಕಟ್ಟಿದ ಯುದ್ಧನೌಕೆ ಐಎನ್‌ಎಸ್‌ ವಿಕ್ರಾಂತ್‌ ದೇಶೀಯವಾಗಿ ನಿರ್ಮಾಣಗೊಂಡಿತು. 40 ಸಾವಿರ ಟನ್‌ ತೂಕದ 23 ಸಾವಿರ ಕೋಟಿ ಹಣ ವ್ಯಯಿಸಿ ಯುದ್ಧವಿಮಾನ ವಾಹಕ ನೌಕೆಯನ್ನು ಸ್ವದೇಶಿ ತಂತ್ರಜ್ಞಾನವನ್ನು ಬಳಸಿ ನಿರ್ಮಿಸಿಸುವ ಮೂಲಕ ವಿಶ್ವದ 6 ಪ್ರಮುಖ ರಾಷ್ಟ್ರಗಳ ಸಾಲಿಗೆ ಭಾರತ ಸೇರಿದೆ.ಈ ಹಿಂದೆ ಅಮೆರಿಕ, ರಷ್ಯಾ, ಚೀನಾ, ಫ್ರಾನ್ಸ್‌, ಇಂಗ್ಲೆಂಡ್‌, ಇಟಲಿ ಮಾತ್ರವೇ ಈ ಸಾಧನೆಗೈದಿದ್ದವು.

ಈ ಹಡಗಿನ ಉದ್ದ- 262 ಮೀಟರ್‌ ಆದರೇ ಅಗಲ- 62 ಮೀಟರ್‌, ಎತ್ತರ- 59 ಮೀಟರ್‌, 18 ಮಹಡಿಗಳು ಇದರಲ್ಲಿ ಇದ್ದು 2,400 ವಿಭಾಗಗಳು ಇವೆ. ಒಂದೇ ಬಾರಿಗೆ 1600 ನೌಕಾ ಸಿಬ್ಬಂದಿಯನ್ನು ಐಎನ್‌ಎಸ್‌ ವಿಕ್ರಾಂತ್‌ನಲ್ಲಿ ನಿಯೋಜಿಸಬಹುದಾಗಿದೆ. ಮಿಗ್‌- 29 ಕೆ, ಕಮೋವ್‌- 31 ಹೆಲಿಕಾಪ್ಟರ್‌ಗಳು, ಅಮೆರಿಕ ನಿರ್ಮಿತ ಎಫ್‌-18ಎ ಸೂಪರ್‌ ಹಾರ್ನೆಟ್‌, ಫ್ರಾನ್ಸ್‌ ನಿರ್ಮಿತ ರಫೇಲ್‌ (ಎಂ) ಯುದ್ಧ ವಿಮಾನಗಳು, ಫೈಟರ್‌ ಜೆಟ್‌ ಎಂಎಚ್‌- 60 ರೋಮಿಯೊ ಮಲ್ಟಿರೋಲ್‌ ಹೆಲಿಕಾಪ್ಟರ್‌ಗಳು ಕಾರ್ಯನಿರ್ವಹಿಸುತಿದ್ದು 32 ಮಧ್ಯಮ ಶ್ರೇಣಿಯ ಮೇಲ್ಮೈಯಿಂದ ಚಿಮ್ಮುವ ವಾಯು ಕ್ಷಿಪಣಿಗಳು ಮತ್ತು ಎಕೆ- 630 ಫಿರಂಗಿ ಗನ್‌ಗಳೂ ವಿಕ್ರಾಂತ್‌ ಬತ್ತಳಿಕೆಯಲ್ಲಿದೆ.

ನೌಕೆ ವಿಕ್ರಾಂತ ರನ್‌ ವೇ 262 ಮೀಟರ್‌ಗಳಷ್ಟು ಉದ್ದವಿದ್ದು, ಬರೋಬ್ಬರಿ ಎರಡು ಫುಟ್ಬಾಲ್‌ ಮೈದಾನಗಳಷ್ಟು  ವಿಸ್ತಾರವಿದೆ. ನೌಕಾಪಡೆ ಪ್ರಕಾರ, ಈ ರನ್‌ ವೇಯಲ್ಲಿ 2 ಒಲಿಂಪಿಕ್‌ ಈಜುಕೊಳಗಳನ್ನು ನಿರ್ಮಿಸಬಹುದಾದಷ್ಟು ದೊಡ್ಡದಿದೆ.

2500 ಕಿ.ಮೀ. ಉದ್ದದ ವಿದ್ಯುತ್‌ ಕೇಬಲ್‌ ವಿಕ್ರಾಂತ್‌ನ ಒಡಲೊಳಗಿದೆ. ಇದರ ಅಡುಗೆ ಮನೆಯಲ್ಲಿ ಒಂದೇ ದಿನದಲ್ಲಿ 4,800 ಜನರಿಗೆ ಅಡುಗೆ ಸಿದ್ಧಪಡಿಸಬಹುದು. 1 ಗಂಟೆಯಲ್ಲಿ 3 ಸಾವಿರ ಚಪಾತಿ ಮಾಡುವ, ಇಡ್ಲಿ ಬೇಯಿಸುವ ಅತ್ಯಾಧುನಿಕ ಮೆಷಿನ್‌ಗಳಿವೆ.

Advertisement

ಈ ನೌಕೆ ಗಂಟೆಗೆ 33 ಕಿ.ಮೀ. ವೇಗದಲ್ಲಿ ಚಲಿಸಿ, ಒಂದೇ ಬಾರಿಗೆ 7,500 ನಾಟಿಕಲ್‌ ಮೈಲು ಕ್ರಮಿಸಬಲ್ಲದು. 250 ಟ್ಯಾಂಕರ್‌ಗಳಷ್ಟು ಇಂಧನ ಇದರಲ್ಲಿರುತ್ತದೆ. ಸಿಬ್ಬಂದಿಗಳ ಆರೋಗ್ಯ ಹದಗೆಡದಂತೆ ನೋಡಿಕೊಳ್ಳಲು 16 ಬೆಡ್‌ಗಳ ಆಸ್ಪತ್ರೆ ಕೂಡ ಇದೆ. ಇನ್ನು ಈ ಹಡಗು ಐ.ಎನ್.ಎಸ್ ವಿಕ್ರಮಾದಿತ್ಯಕ್ಕಿಂತಲೂ  ದೊಡ್ಡದಾಗಿದ್ದು ಸಾಮರ್ಥ್ಯ ಕೂಡ ಹೆಚ್ಚಿನದ್ದಾಗಿದೆ.

ಕಾರವಾರದಲ್ಲಿ ನಿಲುಗಡೆ ಮಹತ್ವ: ಏಷ್ಯಾದ ಅತೀ ದೊಡ್ಡ ನೌಕಾ ನೆಲೆ ಕಾರವಾರದ ಕದಂಬ ನೌಕಾನೆಲೆ. ಇಲ್ಲಿ ಈಗಾಗಲೇ 40 ಯುದ್ದ ನೌಕೆಗಳು, ಸಬ್ ಮೆರಿನ್ ಗಳು ಸಮುದ್ರದ ಆಳದಲ್ಲಿ ನಿಲ್ಲುವಷ್ಟು ವ್ಯವಸ್ಥೆ ಕಲ್ಪಿಸಲಾಗಿದೆ. ದೇಶದ ಮೊದಲ ಟ್ರಾಲಿ ಶಿಪ್ಟಿಂಗ್ ಸಿಸ್ಟಮ್, ಶಿಪ್ ಲಿಫ್ಟ್, ಯುದ್ಧನೌಕೆಯನ್ನು  ಸಮುದ್ರದಡದಿಂದ  ಮೇಲೆತ್ತಿ  ತರುವ ತಂತ್ರಜ್ಞಾನ ಅಳವಡಿಸಲಾಗಿದೆ. ಸೀ ಬರ್ಡ ಸ್ಟೇಜ್ -1 ರಲ್ಲಿ ಮೂರು ಜಟ್ಟಿಗಳು ನಿರ್ಮಾಣಗೊಂಡಿದ್ದವು. ಸ್ಟೇಜ್ -2 ರಲ್ಲಿ ಪ್ರತ್ಯೇಕ 3 ಜಟ್ಟಿಗಳನ್ನು ನಿರ್ಮಾಣ ಮಾಡಲಾಗಿದ್ದು ಎರಡು ಜಟ್ಟಿಯಲ್ಲಿ ಏಷ್ಯದ ಅತೀ ದೊಡ್ಡ ಯುದ್ಧ ಹಡಗು ನಿಲುಗಡೆ ಮಾಡಬಹುದಾಗಿದೆ. ಹೀಗಾಗಿಯೇ ವಿಕ್ರಮಾದಿತ್ಯ ಹಾಗೂ ವಿಕ್ರಾಂತ್ ಯುದ್ದ ವಿಮಾನ ವಾಹಕಗಳಿಗೆ ಇಲ್ಲಿ ಸ್ಥಳಾವಕಾಶ ಮಾಡಿಕೊಡಲಾಗಿದೆ. ಈ ಹಿಂದೆ ವಿಕ್ರಾಂತ್ ಹಡಗು ಕೊಚ್ಚಿಯಲ್ಲಿಯೇ ಇದ್ದು ನಂತರ ಅರಬ್ಬಿ ಸಮುದ್ರದಲ್ಲಿ ಪರೀಕ್ಷಾರ್ಥ ಕಾರ್ಯಾಚರಣೆ ನಡೆಸಿತ್ತು. ಇದೀಗ ಕಾರವಾರದ ಕದಂಬ ನೌಕಾ ನೆಲೆಗೆ ಆಗಮಿಸಿ ಪರೀಕ್ಷಾರ್ಥ ನಿಲುಗಡೆಯನ್ನು ಯಶಸ್ಸಿಯಾಗಿ ಪೂರೈಸಿದ್ದು ಇನ್ನೂ ಒಂದು ತಿಂಗಳ ಕಾಲ ಇಲ್ಲಿಯೇ ಇರಲಿದ್ದು ನಂತರ ಇಲ್ಲಿ ಇಂಧನ, ಆಹಾರ ತುಂಬಿಕೊಂಡು ಪೂರ್ವ ಹಾಗೂ ಪಶ್ಚಿಮ ಕರಾವಳಿಯಲ್ಲಿ ಕಾರ್ಯಾಚರಣೆ ನಡೆಸಲಿದೆ.

ಉತ್ತರ ಕನ್ನಡ ಜಿಲ್ಲೆಯ ಕಾರವಾರದ ಬಳಿಯ ಐಎನ್ ಎಸ್ ಕದಂಬ ನೌಕಾನೆಲೆಯು ಏಷ್ಯಾದಲ್ಲೇ ಅತೀ ದೊಡ್ಡ ನೌಕಾನೆಲೆ ನಿರ್ಮಾಣ ಹಂತದಲ್ಲಿದೆ. 2005 ರಲ್ಲಿ ಪ್ರಣವ್ ಮುಖರ್ಜಿ ಮೊದಲ ಹಂತದ ಕಾಮಗಾರಿ ಮುಗಿದಾಗ ದೇಶಕ್ಕೆ ಸಮರ್ಪಿಸಿದ್ದರು. 2025 ಕ್ಕೆ ನೌಕಾನೆಲೆಯ ಎರಡನೇ ಹಂತ ಪೂರ್ಣವಾಗುವ ಸಾಧ್ಯತೆಗಳಿವೆ.

ನಾಗರಾಜ್ ಹರಪನಹಳ್ಳಿ

Advertisement

Udayavani is now on Telegram. Click here to join our channel and stay updated with the latest news.

Next