Advertisement

Inquiry Report: ಬಿಜೆಪಿಗೆ ’40 ಪರ್ಸೆಂಟ್‌’ ಕ್ಲೀನ್‌ಚಿಟ್‌ ಸಿಕ್ಕಿಲ್ಲ: ಸಚಿವ ಪ್ರಿಯಾಂಕ್‌

01:24 AM Nov 19, 2024 | Team Udayavani |

ಬೆಂಗಳೂರು: ಲೋಕಾಯುಕ್ತ ವರದಿಯಲ್ಲಿ ಗುತ್ತಿಗೆದಾರ ಅಂಬಿಕಾಪತಿ ಮರಣ ಹೊಂದಿರುವ ಕಾರಣ ಅವರಿಂದ ಮಾಹಿತಿ ಸಂಗ್ರಹಿಸಲು ಸಾಧ್ಯವಾಗದೆ ಆ ಆಪಾದನೆಯು ಮೇಲ್ನೋಟಕ್ಕೆ ಸಾಬೀತಾಗಿರುವುದಿಲ್ಲವೆಂದು ವಿಚಾರಣಾಧಿಕಾರಿಗಳು ವಿಚಾರಣಾ ವರದಿಯನ್ನು ಸಲ್ಲಿಸಿದ್ದಾರೆಯೇ ಹೊರತು ಅಂದಿನ ಬಿಜೆಪಿ ಸರಕಾರಕ್ಕೆ ಕ್ಲೀನ್‌ಚಿಟ್‌ ನೀಡಿಲ್ಲ ಎಂದು ಸಚಿವ ಪ್ರಿಯಾಂಕ್‌ ಖರ್ಗೆ ಸ್ಪಷ್ಟನೆ ನೀಡಿದ್ದಾರೆ.

Advertisement

ಈ ಬಗ್ಗೆ ಪತ್ರಿಕಾ ಪ್ರಕಟನೆ ನೀಡಿರುವ ಅವರು, ದಿವಂಗತ ಆರ್‌. ಅಂಬಿಕಾಪತಿ ಹಾಗೂ ಗುತ್ತಿಗೆದಾರರ ಸಂಘದ ಇತರ ಪದಾಧಿಕಾರಿಗಳು ಮಾಧ್ಯಮಗಳಿಗೆ ನೀಡಿದ್ದ ಹೇಳಿಕೆಯಲ್ಲಿ ಲೋಕೋಪಯೋಗಿ, ಆರೋಗ್ಯ, ವಸತಿ, ಉನ್ನತ ಶಿಕ್ಷಣ, ಸಣ್ಣ ನೀರಾವರಿ ಹೀಗೆ ಹಲವು ಇಲಾಖೆಗಳಲ್ಲಿನ ಕಮಿಷನ್‌ ಹಾಗೂ ಕೋಲಾರ ಜಿಲ್ಲೆಯ ಹಿಂದಿನ ಉಸ್ತುವಾರಿ ಸಚಿವರಾದ ಮುನಿರತ್ನ ವಿರುದ್ಧ ಲಂಚದ ಆರೋಪ ಮಾಡಿದ್ದರು.

ಜತೆಗೆ ಕರ್ನಾಟಕ ಖಾಸಗಿ ಶಾಲಾ ಮಾಲಕರ 2 ಸಂಘಟನೆಗಳ ಲಂಚದ ಆರೋಪ, ಅಲ್ಲದೆ ಪಾವಗಡ ಆಸ್ಪತ್ರೆ ನಿರ್ಮಾಣ ಕಾಮಗಾರಿಯಲ್ಲಿ ಲಂಚದ ಅಕ್ರಮದ ಬಗ್ಗೆ ಆರೋಪ ಮಾಡಲಾಗಿತ್ತು. ಆದರೆ ಹಿಂದಿನ ಬಿಜೆಪಿ ಸರಕಾರ ತನಿಖೆಗೆ ವಹಿಸಿದ್ದು ಕೇವಲ ಬಿಬಿಎಂಪಿ ಪೂರ್ವ ವಲಯಕ್ಕೆ ಸಂಬಂಧಿಸಿದ ಆಟದ ಮೈದಾನ ಕಾಮಗಾರಿಯ ಒಂದು ಆರೋಪವನ್ನು ಮಾತ್ರ ಎಂದು ವಿವರಿಸಿದರು.

ಪ್ರಕರಣವನ್ನು ಹಿಂದಿನ ಬಿಜೆಪಿ ಸರಕಾರ 2023ರ ಮಾರ್ಚ್‌ನಲ್ಲಿ ತನಿಖೆಗೆ ವಹಿಸಿತ್ತು. ಆಗ ಒಂದು ಆರೋಪದ ಬಗ್ಗೆ ಮಾತ್ರ ತನಿಖೆಗೆ ಒಪ್ಪಿಸಿ ಇನ್ನುಳಿದ ಆರೋಪಗಳನ್ನು ತನಿಖೆಗೆ ವಹಿಸಲಿಲ್ಲ ಏಕೆ? ಇದರ ಜತೆಗೆ 40 ಪರ್ಸೆಂಟ್‌ ಕಮಿಷನ್‌ಗೆ ಸಂಬಂಧಿಸಿದಂತೆ ಇನ್ನೂ ಹಲವು ವಿಷಯಗಳ ಬಗ್ಗೆ ದಾಖಲೆಗಳೊಂದಿಗೆ ದೂರು ಸಲ್ಲಿಸಿದ್ದರೂ ಏಕೆ ತನಿಖೆಗೆ ವಹಿಸಲು ಗಂಭೀರವಾಗಿ ಪರಿಗಣಿಸಲಿಲ್ಲ ಎಂದು ಪ್ರಿಯಾಂಕ್‌ ಖರ್ಗೆ ಪ್ರಶ್ನಿಸಿದ್ದಾರೆ.

ಇದು ಕ್ಲೀನ್‌ಚಿಟ್‌ ಅಲ್ಲ
ಲೋಕಾಯುಕ್ತ ವರದಿಯಲ್ಲಿ ಅಂಬಿಕಾಪತಿಯವರು ಮರಣ ಹೊಂದಿದ ಕಾರಣ, ಅವರಿಂದ ಹೆಚ್ಚಿನ ಮಾಹಿತಿ ಸಂಗ್ರಹಿಸಲು ಸಾಧ್ಯವಾಗಲಿಲ್ಲ, ಹಾಗಾಗಿ ಅಂಬಿಕಾಪತಿ ಮಾಡಿರುವ ಆಪಾದನೆಯು ಮೇಲ್ನೋಟಕ್ಕೆ ಸಾಬೀತಾಗಿರುವುದಿಲ್ಲವೆಂದು ವಿಚಾರಣಾಧಿಕಾರಿಗಳು ವರದಿ ಸಲ್ಲಿಸಿದ್ದಾರೆ. ಇದು ಬಿಬಿಎಂಪಿ ವ್ಯಾಪ್ತಿಯ ಆಟದ ಮೈದಾನಕ್ಕೆ ಸಂಬಂಧಿಸಿದ ಒಂದು ಕಾಮಗಾರಿಗೆ ಸಂಬಂಧಿಸಿದಂತೆ ಮಾಡಿರುವ ತನಿಖೆ, ಇದು ಬಿಜೆಪಿಯ 40 ಪರ್ಸೆಂಟ್‌ ಹಗರಣಕ್ಕೆ ಸಿಕ್ಕಿರುವ ಕ್ಲೀನ್‌ಚಿಟ್‌ ಅಲ್ಲ ಅಥವಾ ಅಕ್ರಮದ ನಿರಾಕರಣೆಯೂ ಅಲ್ಲ ಎಂದು ಅವರು ಪ್ರತಿಪಾದಿಸಿದ್ದಾರೆ.

Advertisement

ಬಿಜೆಪಿಯದ್ದು 40 ಅಲ್ಲ 400 ಪರ್ಸೆಂಟ್‌ ಸರಕಾರ ; ನ್ಯಾ| ಡಿ’ಕುನ್ಹಾ ವರದಿಯಲ್ಲಿ ಬೆಚ್ಚಿ ಬೀಳಿಸುವ ಅಂಶಗಳಿವೆ
ಬಿಜೆಪಿಯದ್ದು 40 ಪರ್ಸೆಂಟೇಜ್‌ ಕಮಿಷನ್‌ ಸರಕಾರವಲ್ಲ, ಅವರದ್ದು 400 ಪರ್ಸೆಂಟ್‌ ಸರಕಾರ ಎಂದು ಐಟಿಬಿಟಿ ಮತ್ತು ಗ್ರಾಮೀಣಾಭಿವೃದ್ಧಿ ಸಚಿವ ಪ್ರಿಯಾಂಕ್‌ ಖರ್ಗೆ ಟೀಕಿಸಿದ್ದಾರೆ.

ಸುದ್ದಿಗಾರರೊಂದಿಗೆ ಬಿಜೆಪಿ ಸರಕಾರದ ಮೇಲೆ ಹೊರಿಸಲಾಗಿದ್ದ ಶೇ. 40 ಆರೋಪ ನಿರಾಧಾರ ಎಂದು ಲೋಕಾಯುಕ್ತ ಕ್ಲೀನ್‌ಚಿಟ್‌ ನೀಡಿದೆ ಎಂಬ ಬಗ್ಗೆ ಪ್ರತಿಕ್ರಿಯಿಸಿದ ಅವರು, 40 ಪರ್ಸೆಂಟೇಜ್‌ ಕಮಿಷನ್‌ ಆರೋಪ ನಿರಾಧಾರವಾಗಿದ್ದರೆ ನ್ಯಾ| ಮೈಕಲ್‌ ಡಿ ಕುನ್ಹಾ ಆಯೋಗ ಕ್ರಮಕ್ಕೆ ಯಾಕೆ ಸೂಚಿಸಿದೆ? ಕೋವಿಡ್‌ ಸಂದರ್ಭದಲ್ಲಿ 300 ರೂ. ಕಿಟ್‌ಗೆ 2 ಸಾವಿರ ರೂ. ಕೊಟ್ಟು ಖರೀದಿಸಿದ್ದಾ ರೆ. ಒಂದು ಕೇಸ್‌ನಲ್ಲಿ ಎಫ್ಐಆರ್‌ ದಾಖಲಿಸಲು ಆಯೋಗ ಸೂಚಿಸಿದೆ ಎಂದರು.

ಕೋವಿಡ್‌ ಅಕ್ರಮದ ಬಗ್ಗೆ ನ್ಯಾ| ಮೈಕಲ್‌ ಡಿ’ಕುನ್ಹಾ ವರದಿ ನೀಡಿದ್ದಾರೆ. ಅದರಲ್ಲಿ ಹಲವು ಬೆಚ್ಚಿ ಬೀಳಿಸುವ ಅಂಶಗಳಿವೆ. ಯಾವ ರೀತಿಯಲ್ಲಿ ವಿದೇಶಗಳಿಂದ ಕೋವಿಡ್‌ ಚಿಕಿತ್ಸೆಗೆ ಉಪಕರಣಗಳನ್ನು ಹೆಚ್ಚಿನ ದರಕ್ಕೆ ತರಿಸಿಕೊಳ್ಳಲಾಯಿತು ಎಂಬುದನ್ನು ಉಲ್ಲೇಖ ಮಾಡಲಾಗಿದೆ. ಈಗ ಮಧ್ಯಾಂತರ ವರದಿ ಮಾತ್ರ ನೀಡಲಾಗಿದೆ. ಪೂರ್ಣ ವರದಿಯಲ್ಲಿ ಮತ್ತಷ್ಟು ಅಂಶಗಳು ಬಹಿರಂಗವಾಗುವ ಸಾಧ್ಯತೆ ಇದೆ ಎಂದು ಪ್ರಿಯಾಂಕ್‌ ವಿವರಿಸಿದರು.

ಬಿಜೆಪಿಯವರಿಗೆ ಜೈಲಿಗೆ ಹೋಗಲು ಯಾಕಿಷ್ಟು ಅವಸರ? ಸಚಿವ ಸಂಪುಟದ ಉಪಸಮಿತಿ ವರದಿ ಬಂದ ಮೇಲೆ ಕ್ರಮ ಆಗಲಿದೆ. ಈ ಸಂಬಂಧ ಎಸ್‌ಐಟಿ ರಚನೆಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ, ಗೃಹ ಸಚಿ ವರು ಮಾಡುತ್ತಾರೆ. ಒಳ್ಳೆಯ ಅಧಿಕಾರಿ ನೇಮಿಸಿ ಎಸ್‌ಐಟಿ ರಚಿಸುತ್ತಾರೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next