Advertisement

ಪೌರ ಸಮಸ್ಯೆಗಳಿಗೆ ವಾಟ್ಸ್‌ ಆ್ಯಪ್‌ “ಪರಿಹಾರ’

06:04 PM Mar 06, 2021 | Team Udayavani |

ದಾವಣಗೆರೆ: ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಪೌರಕಾರ್ಯಗಳ ಕುರಿತು ಸಾರ್ವಜನಿಕರು ವಾಟ್ಸ್‌ಆ್ಯಪ್‌ (8277234444) ಮೂಲಕ ದೂರು, ಅಹವಾಲು ಸಲ್ಲಿಸಲು “ಪರಿಹಾರ’ ಎಂಬ ಹೊಸ ವ್ಯವಸ್ಥೆಯನ್ನು ಮಹಾನಗರ ಪಾಲಿಕೆ ರೂಪಿಸಿದೆ. ಶುಕ್ರವಾರ ತಮ್ಮ ಕಚೇರಿಯಲ್ಲಿಯೇ ಈ ವ್ಯವಸ್ಥೆಗೆ ಚಾಲನೆ ನೀಡಿದ ನೂತನ ಮಹಾಪೌರ ಎಸ್‌.ಟಿ.ವೀರೇಶ್‌, ಈ ಕುರಿತು ಮಾಧ್ಯಮಗಳಿಗೆ ವಿವರಣೆ ನೀಡಿದರು.

Advertisement

ಮಹಾನಗರ ವ್ಯಾಪ್ತಿಯಲ್ಲಿ ನಡೆಯುವ ಎಲ್ಲ ಕಾಮಗಾರಿಗಳು, ರಸ್ತೆ, ಒಳಚರಂಡಿ ದುರಸ್ತಿ, ನೀರು ಸರಬರಾಜು, ಸ್ವತ್ಛತೆ, ಬೀದಿದೀಪ, ಕೊಳವೆ ಮಾರ್ಗ ದುರಸ್ತಿ, ಸತ್ತ ಪ್ರಾಣಿ ವಿಲೇವಾರಿ ಸೇರಿದಂತೆ ಇನ್ನಿತರ  ಪೌರಸೇವೆಗಳ ಕುರಿತು ಸಾರ್ವಜನಿಕರಿಗೆ ದೂರುಸಲ್ಲಿಸಿ, ತಕ್ಷಣ ಪರಿಹಾರ ಕಂಡುಕೊಳ್ಳಲು ಈ ವ್ಯವಸ್ಥೆ ಮಾಡಲಾಗಿದೆ ಎಂದದು ವಿವರಿಸಿದರು.

ಈಗಾಗಾಲೇ ಪಾಲಿಕೆಯಲ್ಲಿ ಸ್ಥಿರ ದೂರವಾಣಿಯಲ್ಲಿ (234444) ಕರೆ ಸ್ವೀಕರಿಸುವ ಮೂಲಕ ಕಾರ್ಯನಿರ್ವಹಿಸುತ್ತಿರುವ ಸಹಾಯವಾಣಿ ಕೇಂದ್ರದಲ್ಲಿಯೇ ವಾಟ್ಸ್‌ಆ್ಯಪ್‌ ಪರಿಹಾರ ಕಾರ್ಯವೂ ನಡೆಯಲಿದೆ. ಇದಕ್ಕಾಗಿ ಸಾರ್ವಜನಿಕ ಸಂಪರ್ಕ  ಅಧಿಕಾರಿಯನ್ನು ನಿಯೋಜಿಸಲಾಗಿದ್ದು, ಸಾರ್ವಜನಿಕರಿಂದ ಸ್ವೀಕರಿಸಿದ ದೂರುಗಳನ್ನು ಸಂಬಂಧಪಟ್ಟ ಅಧಿಕಾರಿ, ಸಿಬ್ಬಂದಿಗೆ ತಿಳಿಸಿ ಪರಿಹಾರ ಕ್ರಮ ಕೈಗೊಳ್ಳಲಾಗುವುದು. ಬಳಿಕ ದೂರುದಾರರಿಗೆ ಪರಿಹಾರ ಒದಗಿಸಿದ ಬಗ್ಗೆ ಮಾಹಿತಿಯೂ ನೀಡಲಾಗುವುದು ಎಂದರು.

ಸ್ವತ್ಛ ಮಂಗಳೂರು ಮಾದರಿಯಲ್ಲಿ ಕಾರ್ಯಕ್ರಮ ರೂಪಿಸಿ ದಾವಣಗೆರೆಯನ್ನೂ ಸ್ವತ್ಛ ದಾವಣಗೆರೆ ಮಾಡುವ ಗುರಿ ಹೊಂದಿದ್ದೇನೆ. ಸ್ವತ್ಛತೆಯಲ್ಲಿ ಮಹಾನಗರವನ್ನು ಐದನೇ ರ್‍ಯಾಂಕ್‌ ಒಳಗೆ ತರುವ ಚಿಂತನೆಯಿದೆ. ಇದಕ್ಕೆ ಸಾರ್ವಜನಿಕರ ಸಹಕಾರ ಮುಖ್ಯವಾಗಿದೆ. ಈ ಕುರಿತು ಜನರಲ್ಲಿಯೂ ಜಾಗೃತಿ ಮೂಡಿಸಲಾಗುವುದು. ಈಗಾಗಲೇ ಆಗಿರುವ ಸರ್ಕಾರಿ ಜಾಗೆ ಒತ್ತುವರಿ ತೆರವುಗೊಳಿಸಲು  ಚಿಂತನೆ ನಡೆಸುವ ಮುಂದೆ ಅತಿಕ್ರಮಣ ಆಗದಂತೆ ತಡೆಯಲು ಸಹ ಕ್ರಮವಹಿಸಲಾಗುವುದು ಎಂದರು.

ಹಿಂದಿನ ಮಹಾಪೌರರರು ಜಾರಿಗೆ ತಂದಿದ್ದ “ಮನೆ ಬಾಗಿಲಿಗೆ ಮಹಾನಗರ ಪಾಲಿಕೆ’ ಕಾರ್ಯಕ್ರಮವನ್ನು ಮುಂದಿನ ದಿನಗಳಲ್ಲಿ ಪಾಲಿಕೆ ಸದಸ್ಯರೊಂದಿಗೆ ಚರ್ಚಿಸಿ, ಕೆಲವು ಮಾರ್ಪಾಡುಗಳೊಂದಿಗೆ ಮುಂದುವರಿಸಲಾಗುವುದು ಎಂದರು.

Advertisement

ಆರೋಪ ಸುಳ್ಳು: ಹಿಂದಿನ ಮೇಯರ್‌ ಅವಧಿಯಲ್ಲಿ 52 ಎಕರೆ ಬಡಾವಣೆಗಳಲ್ಲಿ ಅಕ್ರಮವಾಗಿ ಡೋರ್‌ ನಂಬರ್‌ ನೀಡಲಾಗಿದೆ ಎಂಬ ಕಾಂಗ್ರೆಸ್ಸಿನವರ ಆರೋಪ ಸಂಪೂರ್ಣ ಸುಳ್ಳು. ಹಿಂದಿನ ಮೇಯರ್‌ ಅವರಿಂದ ಯಾವುದೇ ಅಧಿಕಾರ ದುರುಪಯೋಗ, ಅಕ್ರಮ ನಡೆದಿಲ್ಲ. ದೂಡಾ ಅನುಮೋದನೆಯೊಂದಿಗೆ ಎಲ್ಲವೂ ಕಾನೂನಾತ್ಮಕವಾಗಿ ನಡೆದಿದೆ ಎಂದು ಮಹಾಪೌರರು ಹಾಗೂ ಪಾಲಿಕೆ ಸದಸ್ಯ ಪ್ರಸನ್ನಕುಮಾರ ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು. ಪಾಲಿಕೆ ಸದಸ್ಯರಾದ ಪ್ರಸನ್ನಕುಮಾರ್‌, ಕೆ.ಎಂ. ವೀರೇಶ್‌, ಶಿವಪ್ರಕಾಶ್‌, ಸಾರ್ವಜನಿಕ ಸಂಪರ್ಕ ಅಧಿಕಾರಿ ಸುನೀಲ್‌ ಇನ್ನಿತರರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next