ಬೆಳ್ತಂಗಡಿ: ರೈತರು ಬೆಳೆದ ಬೆಳೆಗೆ ಸೂಕ್ತ ಮಾರುಕಟ್ಟೆ ಒದಗಣೆಗೆ ಈಗಾಗಲೆ ಹಾಪ್‌ಕಾಮ್ಸ್ ಹೆಸರು ಚಾಲ್ತಿಯಲ್ಲಿದೆ. ಅದು ರೈತರಿಂದ ಖರೀದಿಸಿದ ಬೆಳೆಗೆ ಮಾರುಕಟ್ಟೆ ಒದಗಿಸುವ ಕ್ರಮವಾದರೆ, ಬೆಳ್ತಂಗಡಿ ತಾಲೂಕಿನ ಮದ್ದಡ್ಕದಲ್ಲಿರುವ ತೋಟಗಾರಿಕ ಕ್ಷೇತ್ರವು ತಮ್ಮ ಇಲಾಖೆಯಿಂದ ಬೆಳೆಯುವ ಹಣ್ಣು, ತರಕಾರಿ ಸಹಿತ, ಜೇನು ಕುಟುಂಬ ಮಾರಾಟಕ್ಕೆ ಹೊಸದಾಗಿ ಮಳಿಗೆ ತೆರೆಯುವ ಮೂಲಕ ವಿನೂತನ ಪ್ರಯೋಗಕ್ಕೆ ಮುಂದಾಗಿದೆ.
ಉಭಯ ಜಿಲ್ಲೆಗೆ ಹೋಲಿಸಿದರೆ ಉಡುಪಿಯ ಶಿವಳ್ಳಿ ಹೊರತುಪಡಿಸಿ ಅತೀ ಹೆಚ್ಚು ವಿಸ್ತೀರ್ಣವುಳ್ಳ ತೋಟಗಾರಿಕ ಕ್ಷೇತ್ರ ಮದ್ದಡ್ಕದಲ್ಲಿದೆ. ರಾಷ್ಟ್ರೀಯ ಹೆದ್ದಾರಿ ಮಂಗಳೂರು-ಚಿಕ್ಕಮಗಳೂರು ಸಾಗುವ ಮದ್ದಡ್ಕ ಸಮೀಪ ಸುಮಾರು 105 ಎಕ್ರೆಯಲ್ಲಿ ವ್ಯಾಪಿಸಿದೆ. ಹಣ್ಣು, ತರಕಾರಿ ಗಿಡ ನರ್ಸರಿ ಕ್ಷೇತ್ರಕ್ಕೆ ಒಳಪಟ್ಟ ಜಾಗದಲ್ಲಿ 5 ಎಕ್ರೆಯಲ್ಲಿ ಗೇರು, 5 ಎಕ್ರೆಯಲ್ಲಿ ಬಾಳೆ ಗಿಡ, ಉಳಿದಂತೆ ಕಾಳುಮೆಣಸು, ತೆಂಗು, ಮಾವು, ಸಪೋಟ, ನಿಂಬೆ, ನುಗ್ಗೆ, ಪಪ್ಪಾಯ, ತರಕಾರಿ ಗಿಡ, 15 ತಳಿಗಳಷ್ಟು ಅಡಿಕೆ ನರ್ಸರಿಗಳಿವೆ.
ಇದರೊಂದಿಗೆ 25 ಜೇನುಪೆಟ್ಟಿಗೆಯನ್ನೂ ಇರಿಸಿ ಕುಟುಂಬ ಮಾರಾಟಕ್ಕೂ ಮುಂದಾಗಿದೆ. ಇವುಗಳ ಮಧ್ಯೆ ರಾಂಬೂಟಾನ್, ಮ್ಯಾಂಗೋಷ್ಟಿನ್, 15 ತಳಿಗಳ ಹಲಸು, ಕೊಕ್ಕೊ ಈಗಷ್ಟೇ ಪ್ರಯೋಗ ಹಂತದಲ್ಲಿದೆ. ಸಸಿಗಳ ಫಸಲು ಕ್ರಮಗಳನ್ನು ಅಧ್ಯಯನ ನಡೆಸಿ ಬಳಿಕ ರೈತರಿಗೆ ಮುಂದೆ ವಿತರಣೆ ಮಾಡುವುದಾಗಿ ನಿರ್ದೇಶಕರು ತಿಳಿಸಿದ್ದಾರೆ. ವಾರ್ಷಿಕ 25 ಲಕ್ಷ ರೂ. ಆದಾಯ ಇಲ್ಲಿನ ಇಳುವರಿಗೆ, ನರ್ಸರಿ ಸಸಿಗಳಿಗೆ ಜಿಲ್ಲೆ ಹಾಗೂ ಹೊರ ಜಿಲ್ಲೆಗಳಿಂದಲೂ ಬೇಡಿಕೆಯಿದೆ. ಮಾರುಕಟ್ಟೆಯಲ್ಲಿ ತೆಂಗಿನ ಸಸಿಗೆ 250 ರಿಂದ 300 ರೂ. ಬೆಲೆ ಇದ್ದರೆ ಇಲ್ಲಿ ಸಾಮಾನ್ಯ ಸಸಿ ದರ 75 ರೂ. ಹೈಬ್ರಿàಡ್ ಸಸಿಗಳಿಗೆ 170 ರೂ.ನಲ್ಲಿ ಲಭ್ಯವಿವೆ.
ಮಾವಿನ ಸಸಿ ಮಾರುಕಟ್ಟೆಯಲ್ಲಿ 200 ರಿಂದ 300 ರೂ. ಇದ್ದರೆ ಇಲ್ಲಿ 40 ರೂ. ಗೆ ಲಭ್ಯವಿವೆ. ಹಾಗಾಗಿ ಕ್ಷೇತ್ರವು ವಾರ್ಷಿಕವಾಗಿ 25 ಲಕ್ಷ ರೂ. ಆದಾಯ ಗಳಿಸುತ್ತಿರುವುದು ಹೆಚ್ಚುಗಾರಿಕೆಯಾಗಿದೆ. ಮೂಲ ಸೌಕರ್ಯಗಳ ಅಗತ್ಯವಿದೆ 105 ಎಕ್ರೆ ವಿಸ್ತೀರ್ಣವಿರುವ ಮದ್ದಡ್ಕ ತೋಟಗಾರಿಕ ಕ್ಷೇತ್ರದಕ್ಕೆ ಕಾಂಪೌಂಡ್ ಸಹಿತ ತಂತಿ ಬೇಲಿ ಇದ್ದರೂ, ಕಾಡು ಹಂದಿ ಇತರ ಕಾಡುಪ್ರಾಣಿಗಳ ಉಪಟಳದಿಂದ ಇಳುವರಿ ರಕ್ಷಣೆ ಸವಾಲಾಗಿದೆ. ಹುದ್ದೆಗಳು ಖಾಲಿ ಬಿದ್ದಿವೆ.
ಪ್ರಸಕ್ತ ಸಹಾಯಕ ತೋಟಗಾರಿಕೆ ನಿರ್ದೇಶಕಿಯಾಗಿ ಲಿಖೀತಾ ರಾಜ್ 5 ವರ್ಷಗಳಿಂದ ನಿರ್ವಹಣೆಯೊಂದಿಗೆ ಇಲಾಖೆಯನ್ನು ಲಾಭದಾಯಕ ವಾಗಿಸಿ ದ್ದಾರೆ. 11 ತೋಟಗಾರರ ಹುದ್ದೆ ಖಾಲಿ ಇದೆ. ಹೊರಗುತ್ತಿಗೆಯಲ್ಲಿ 3 ಮಂದಿಯಿದ್ದು, ಓರ್ವ ತೋಟಗಾರಿಕೆ ಸಹಾಯಕ ಸಹಿತ ಸಹಾಯಕ ತೋಟಗಾರಿಕೆ ಅಧಿಕಾರಿ ಹುದ್ದೆ ಭರ್ತಿಯಾಗಿಲ್ಲ. ಇಲ್ಲಿನ ಖಾಲಿ ಹುದ್ದೆ ಭರ್ತಿ ಮಾಡಿ ಇನ್ನೂ ಹೆಚ್ಚಿನ ಸವಲತ್ತು ಒದಗಿಸಿದಲ್ಲಿ ಕೃಷಿಕರಿಗೆ ವರದಾನವಾಗಲಿದೆ.
ಇದನ್ನೂ ಓದಿ:
ನಾನು ಯಾರಿಗೂ ಹೆದರುವುದಿಲ್ಲ: ಶಿಗ್ಗಾವಿಯಲ್ಲಿ ಸಿಎಂ ಬೊಮ್ಮಾಯಿ
ಮದ್ದಡ್ಕ ತೋಟಗಾರಿಕ ಕ್ಷೇತ್ರದಲ್ಲಿ ಕೃಷಿಕರ ಜತೆಗೆ ಜನಸಾಮಾನ್ಯರಿಗೂ ಇಲಾಖೆ ದರದಲ್ಲಿ ನರ್ಸರಿ ಸಸಿಗಳನ್ನು ನೀಡುತ್ತಿದ್ದೇವೆ. ಇದೀಗ ಮಾರುಕಟ್ಟೆ ಪ್ರಾಂಗಣದ ರೀತಿ ಮಳಿಗೆ ತೆರೆದು ಮುಕ್ತ ಮಾರುಕಟ್ಟೆ ಒದಗಿಸಿದ್ದೇವೆ. ಉತ್ತಮ ಗುಣಮಟ್ಟದ ಇಳುವರಿಗಳು ಇರುವುದರಿಂದ ರೈತರು ಆಸಕ್ತಿ ವಹಿಸಿ ಇಲಾಖೆ ಸೌಲಭ್ಯ ಸದ್ಬಳಕೆ ಮಾಡಿಕೊಳ್ಳಬೇಕು.
-ಲಿಖೀತಾ ರಾಜ್, ಸಹಾಯಕ ತೋಟಗಾರಿಕೆ ನಿರ್ದೇಶಕಿ
ಬೆಳೆದ ಬೆಳೆ ಹಾಳಾಗದಂತೆ ಮಾರುಕಟ್ಟೆ
ಇಲ್ಲಿರುವ ಸಪೋಟ, ಮಾವು, ಸಹಿತ ಹಣ್ಣುಗಳು, ತರಕಾರಿಗಳ ಇಳುವರಿ, ಜೇನು, ಅಣಬೆ, ಎರೆಹುಳು ಗೊಬ್ಬರ ಸಹಿತ ಜೇನು ಕುಟುಂಬವನ್ನು ಇಲಾಖೆ ದರದಲ್ಲಿ ಮಾರಾಟ ಮಾಡಲಾಗುತ್ತಿದೆ. ಇವುಗಳನ್ನು ಆದಾಯ ಮೂಲವಾಗಿಸಲು ಮದ್ದಡ್ಕ ತೋಟಗಾರಿಕ ಕ್ಷೇತ್ರದ ಮುಂಭಾಗವೇ ಒಂದು ಮುಕ್ತ ಮಾರುಕಟ್ಟೆ ಮಳಿಗೆ ತೆರೆಯಲಾಗಿದೆ. ರೈತರು, ಜನಸಾಮಾನ್ಯರು ಬಂದು ಮುಕ್ತವಾಗಿ ಖರೀದಿಸಲು ಅವಕಾಶ ಕಲ್ಪಿಸಲಾಗಿದೆ.