Advertisement

ಜನರಿಗೆ ಉಪಯೋಗವಾಗುವಂಥ ಕೆಲಸ! ನಗೆಪಾಟಲಿಗೀಡಾದ ತ.ನಾ.ಸಚಿವ

03:45 AM Apr 23, 2017 | Harsha Rao |

ಚೆನ್ನೈ: ಇದನ್ನು ಸಮುದ್ರಕ್ಕೆ ಉಪ್ಪು ಸುರಿಯುವ ಕೆಲಸವೆನ್ನಬೇಕೋ, ಹೊಳೆಯಲ್ಲಿ ಹುಣಸೆ ಹಣ್ಣು ತೊಳೆಯುವ  ಪ್ರಯತ್ನ ಎನ್ನಬೇಕೋ ಗೊತ್ತಿಲ್ಲ. “ಜನರಿಗೆ ಉಪಯೋಗವಾಗುವಂಥ ಕೆಲಸ ಮಾಡಬೇಕು’ ಎಂದು ಅಪರೂಪಕ್ಕೆ ಎದ್ದು ನಿಂತ ತಮಿಳುನಾಡಿನ ಸಚಿವರೊಬ್ಬರು ನಗೆಪಾಟಲಿಗೆ ಈಡಾಗಿರುವ ಘಟನೆ ಪಕ್ಕದ ರಾಜ್ಯದಲ್ಲಿ ನಡೆದಿದೆ.

Advertisement

ರಾಜ್ಯ ಬರದಿಂದ ತತ್ತರಿಸಿರುವ ಕಾರಣ, ಜನರಿಗೆ ಮುಂದೆ ನೀರಿನ ತೀವ್ರ ತೊಂದರೆ ಎದುರಾಗಲಿದೆ ಎಂದರಿತು ಮರುಗಿದ ತಮಿಳುನಾಡಿನ ಸಹಕಾರ ಸಚಿವ ಸೆಲ್ಲೂರ್‌ ಕೆ. ರಾಜು, ಅದಕ್ಕೊಂದು ಅದ್ಭುತ ಪರಿಹಾರ ಕಂಡು ಹಿಡಿದರು. ಇಂಥ ಅದ್ಭುತ ಕೆಲಸವನ್ನು ಮೌನವಾಗಿ ಮಾಡಿದರೆ ಸರಿಯಲ್ಲ, ಒಂದಷ್ಟು ಪ್ರಚಾರವನ್ನೂ ಗಿಟ್ಟಿಸಬೇಕೆಂದು ನಿರ್ಧರಿಸಿ, ಅದರಂತೆ ಪತ್ರಿಕಾ ಪ್ರತಿನಿಧಿಗಳನ್ನೆಲ್ಲ ಕರೆಸಿಕೊಂಡು, ಅವರನ್ನೆಲ್ಲ ಮಧುರೈ ಸಮೀಪದ ವಾಯ್‌ಗೈ ಡ್ಯಾಮ್‌ಗೆ ಕರೆದೊಯ್ದರು.

ಕೈಯ್ಯಲ್ಲಿ ಥರ್ಮಾಕೋಲ್‌ ಹಿಡಿದು ಡ್ಯಾಮ್‌ ಮುಂದೆ ನಿಂತ ಸಚಿವ, “ನೋಡಿ, ನೀರು ಆವಿಯಾಗಿ ಹೋಗುವುದನ್ನು ತಡೆಯಲು ಹೊಸ ಉಪಾಯ ಮಾಡಿದ್ದೇವೆ’ ಎಂದು ಹೇಳುತ್ತಿದ್ದಂತೆ, ಅವರ ಬೆಂಬಲಿಗರು ಮತ್ತು ಪಕ್ಷದ ಕಾರ್ಯಕರ್ತರು, ನೀರಿಗಿಳಿದು ಒಂದಕ್ಕೊಂದು ಜೋಡಿಸಲ್ಪಟ್ಟಿದ್ದ ಥರ್ಮಾಕೋಲ್‌ ಶೀಟ್‌ಗಳನ್ನು ಜಲಾಶಯದ ಹಿನ್ನೀರಿನಲ್ಲಿ ಬಿಡಲಾರಂಭಿಸಿದರು. ಇವರೇನು ಮಾಡಲು ಹೊರಟಿದ್ದಾರೆಂದು ತಿಳಿಯದೇ ಪತ್ರಕರ್ತರು ಮೂಕಪ್ರೇಕ್ಷಕರಾಗಿದ್ದರು.

ಕಾರ್ಯಕರ್ತರೆಲ್ಲ ನೀರಿಗಿಳಿದು, ಥರ್ಮಾಕೋಲ್‌ ಶೀಟ್‌ಗಳನ್ನು ನೀರಿಗೆ ತೇಲಿ ಬಿಡಲಾರಂಭಿಸಿದರು. ಅತ್ತ ಜೋರಾಗಿ ಬೀಸುತ್ತಿದ್ದ ಗಾಳಿ ಹೊಡೆತಕ್ಕೆ ಶೀಟ್‌ಗಳು ದಿಕ್ಕಾಪಾಲಾಗಿ ಹಾರಿದವು. ಇತ್ತ ಅದನ್ನೆಲ್ಲ ನೋಡಿ ತಾಳ್ಮೆ ಕಳೆದುಕೊಂಡ ಸಚಿವ ರಾಜು, ಸ್ವತಃ ನೀರಿಗಿಳಿದು ಥರ್ಮಾಕೋಲ್‌ಗ‌ಳನ್ನು ನೀಟಾಗಿ ತೇಲಿಸುವ ಪ್ರಯತ್ನ ಮಾಡಿದರೂ ಅದು ಫ‌ಲಿಸಲಿಲ್ಲ. ಕಡೆಗೆ ಇದು ಆಗದ ಕೆಲಸ ಎಂದರಿತ ಸಚಿವರು ದಡಕ್ಕೆ ಬಂದು, “ಹೀಗೆ ಥರ್ಮಾಕೋಲ್‌ಗ‌ಳನ್ನು ಹಿನ್ನೀರಿನಲ್ಲಿ ತೇಲಿಸುವ ಮೂಲಕ ಜಲಾಶಯದ ನೀರು ಆವಿಯಾಗುವುದನ್ನು ತಡೆಯುವುದು ನಮ್ಮ ಪ್ರಯತ್ನವಾಗಿತ್ತು. ಆದರೆ 10 ಲಕ್ಷ ರೂ. ವೆಚ್ಚದ ಈ ಯೋಜನೆ ಅದೇಕೋ ಕೆಲಸ ಮಾಡುತ್ತಿಲ್ಲ,’ ಎಂದು ಮುಖ ಸಣ್ಣದಾಗಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next