ಗಾಲೆಯಲ್ಲಿ ಶುಕ್ರವಾರ ಕೊನೆಗೊಂಡ ಟೆಸ್ಟ್ ಪಂದ್ಯವನ್ನು ಶ್ರೀಲಂಕಾ ಇನ್ನಿಂಗ್ಸ್ ಹಾಗೂ 10 ರನ್ನುಗಳಿಂದ ಜಯಿಸಿತು. ಇಲ್ಲೇ ಆಡಲಾದ ಮೊದಲ ಟೆಸ್ಟ್‌ನಲ್ಲಿ ಲಂಕಾ ಇನ್ನಿಂಗ್ಸ್ ಹಾಗೂ 280 ರನ್ನುಗಳ ಜಯಭೇರಿ ಮೊಳಗಿಸಿತ್ತು.
Advertisement
ದ್ವಿತೀಯ ಟೆಸ್ಟ್‌ನಲ್ಲಿ ಐರ್ಲೆಂಡ್ ಭರ್ಜರಿ ಬ್ಯಾಟಿಂಗ್ ಪ್ರದರ್ಶನವನ್ನೇ ನೀಡಿತ್ತು. ಮೊದಲ ಇನ್ನಿಂಗ್ಸ್‌ನಲ್ಲಿ 492 ರನ್ ಪೇರಿಸಿತ್ತು. ಇಬ್ಬರಿಂದ ಶತಕವೂ ದಾಖಲಾಗಿತ್ತು. ಪಾಲ್ ಸ್ಟರ್ಲಿಂಗ್ 103, ಕರ್ಟಿಸ್ ಕ್ಯಾಂಫರ್ 111 ರನ್ ಹೊಡೆದಿದ್ದರು. ಆದರೆ ಶ್ರೀಲಂಕಾ ಇದಕ್ಕೂ ಮಿಗಿಲಾದ ಬ್ಯಾಟಿಂಗ್ ಪ್ರದರ್ಶಿಸಿತು. ಮೂರೇ ವಿಕೆಟಿಗೆ 704 ರನ್ ರಾಶಿ ಹಾಕಿತು. ನಿಶಾನ್ ಮದುಷ್ಕ 205, ದಿಮುತ್ ಕರುಣಾರತ್ನೆ 115, ಕುಸಲ್ ಮೆಂಡಿಸ್ 245 ಮತ್ತು ಏಂಜೆಲೊ ಮ್ಯಾಥ್ಯೂಸ್ ಅಜೇಯ 100 ರನ್ ಹೊಡೆದರು.212 ರನ್ನುಗಳ ಹಿನ್ನಡೆಗೆ ಸಿಲುಕಿದ ಐರ್ಲೆಂಡ್ ದ್ವಿತೀಯ ಇನ್ನಿಂಗ್ಸ್‌ನಲ್ಲಿ 202 ರನ್ನಿಗೆ ಕುಸಿಯಿತು. ರಮೇಶ್ ಮೆಂಡಿಸ್ 5, ಅಸಿತ ಫೆರ್ನಾಂಡೊ 3, ಪ್ರಭಾತ್ ಜಯಸೂರ್ಯ 2 ವಿಕೆಟ್ ಕೆಡವಿದರು. ಮೊದಲ ಇನ್ನಿಂಗ್ಸ್‌ನಲ್ಲಿ 5 ವಿಕೆಟ್ ಉರುಳಿಸಿದ ಜಯಸೂರ್ಯ ಪಂದ್ಯಶ್ರೇಷ್ಠ, ಕುಸಲ್ ಮೆಂಡಿಸ್ ಸರಣಿಶ್ರೇಷ್ಠ ಗೌರವಕ್ಕೆ ಪಾತ್ರರಾದರು.