ಬೆಂಗಳೂರು: ಒಳ ಮೀಸಲಾತಿಗೆ ಪ್ರಧಾನಿ ನರೇಂದ್ರ ಮೋದಿಯವರ ಸಹಮತವಿದೆ. ಹಿಂದೆ ಬಿಜೆಪಿ ಸರ್ಕಾರ ಈ ಬಗ್ಗೆ ಪ್ರಯತ್ನ ನಡೆಸಿತ್ತು. ಆದರೆ, ಕಾಂಗ್ರೆಸ್ ಸರ್ಕಾರ ಮಾತ್ರ ಒಳ ಮೀಸಲಾತಿ ಜಾರಿಗೆ ಮೀನಮೇಷ ಎಣಿಸುತ್ತಿದೆ ಎಂದು ವಿಧಾನಸಭೆ ವಿಪಕ್ಷ ನಾಯಕ ಆರ್.ಅಶೋಕ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿದಂತೆ ಕಾಂಗ್ರೆಸ್ ನಾಯಕರು, ಒಳ ಮೀಸಲಾತಿ ಬಗ್ಗೆ ದೊಡ್ಡದಾಗಿ ಮಾತಾಡುತ್ತಾರೆ. ಜಾತಿಗಣತಿ ಬಗ್ಗೆ ಶಂಖ ಊದುತ್ತಿರುತ್ತಾರೆ. ಒಳ ಮೀಸಲಾತಿಯ ಅಧಿಕಾರವನ್ನು ರಾಜ್ಯ ಸರ್ಕಾರಗಳಿಗೆ ನೀಡಿರುವುದನ್ನು ಸುಪ್ರೀಂ ಕೋರ್ಟ್ ಎತ್ತಿ ಹಿಡಿದಿದೆ. ಹಿಂದಿನ ನಮ್ಮ ಬಿಜೆಪಿ ಸರ್ಕಾರ ಒಳ ಮೀಸಲಾತಿಯನ್ನು ಜಾರಿಗೆ ತಂದಿತ್ತು. ಪ್ರಧಾನಿ ನರೇಂದ್ರ ಮೋದಿ ತೆಲಂಗಾಣಕ್ಕೆ ಬಂದಾಗ ಒಳ ಮೀಸಲಾತಿಗೆ ಅನುಮೋದನೆ ನೀಡಿದ್ದರು. ಆದರೂ ಕಾಂಗ್ರೆಸ್ ಮಾತ್ರ ಇನ್ನೂ ಮೀನಮೇಷ ಎಣಿಸುತ್ತಿದೆ ಎಂದು ದೂರಿದರು.
ರಾಜ್ಯದಲ್ಲಿ ಈಗ ಎಸ್‌ಐಟಿಯೇ ಕಂಡು ಬರುತ್ತಿದೆ. ಒಳ ಮೀಸಲಾತಿ ಮತ್ತು ಜಾತಿ ಗಣತಿ ವಿಚಾರದಲ್ಲೂ ಕಾಂಗ್ರೆಸ್ ಸರ್ಕಾರ ಎಸ್‌ಐಟಿ ರಚಿಸಿದರೆ ಅಚ್ಚರಿ ಇಲ್ಲ. ಇಲ್ಲಿ ಒಬ್ಬೊಬ್ಬರಿಗೆ ಒಂದೊಂದು ಕಾನೂನು ಅನ್ವಯವಾಗುತ್ತಿದ್ದು, ಎಸ್‌ಐಟಿಯ ಮೇಲೆ ಅನುಮಾನ ಹೆಚ್ಚಾಗಿ ಅದನ್ನೇ ತನಿಖೆ ಮಾಡುವ ಸ್ಥಿತಿ ಬಂದಿದೆ. ಎಸ್‌ಐಟಿ ಪ್ರಕಾರ, ಶಾಸಕ ಮುನಿರತ್ನ ಅವರಿಗೆ ಒಂದು ಕಾನೂನು, ವಿನಯ್ ಕುಲಕರ್ಣಿ ಅವರಿಗೆ ಒಂದು ಕಾನೂನು. ಎಸ್‌ಐಟಿಗಳ ನಿಜಬಣ್ಣ ಬಯಲು ಮಾಡಲು ಡಬಲ್ ಎಸ್‌ಐಟಿ ಎಂಬ ಘಟಕ ಸ್ಥಾಪಿಸಬೇಕಿದೆ ಎಂದು ವ್ಯಂಗ್ಯವಾಡಿದರು.
ಮೀಸಲು ವರ್ಗೀಕರಣಕ್ಕೆ ಸಿಎಂ ಭೇಟಿ: ಅಶೋಕ್ ನಿಯೋಗಕ್ಕೆ ಸಿಕ್ಕಿಲ್ಲ ಅನುಮತಿ
ಮೀಸಲು ವರ್ಗೀಕರಣಕ್ಕೆ ಸಂಬಂಧಪಟ್ಟಂತೆ ಚರ್ಚಿಸಲು ಬಿಜೆಪಿ ನಿಯೋಗದ ಭೇಟಿಗೆ ಅವಕಾಶ ಕೋರಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಪ್ರತಿಪಕ್ಷ ನಾಯಕ ಆರ್.ಅಶೋಕ್ ಪತ್ರ ಬರೆದಿದ್ದು ಈ ಬಗ್ಗೆ ಇನ್ನೂ ಸಮಯಾವಕಾಶ ನೀಡದೇ ಇರುವುದು ಕುತೂಹಲಕ್ಕೆ ಕಾರಣವಾಗಿದೆ.
ಬಿಜೆಪಿ ಕಚೇರಿಯಲ್ಲಿ ನಡೆದ ಸಭೆ ಬಳಿಕ ಮೀಸಲು ವರ್ಗೀಕರಣ ಜಾರಿಗೆ ಸರ್ಕಾರದ ಮೇಲೆ ಒತ್ತಡ ಹೇರುವುದಕ್ಕೆ ಬಿಜೆಪಿ ನಿರ್ಧರಿಸಿದೆ. ಈ ಹಿನ್ನೆಲೆಯಲ್ಲಿ ಸರ್ಕಾರಕ್ಕೆ ಪತ್ರ ಬರೆಯಲಾಗಿದೆ. ದಸರಾ ಬಳಿಕ ಭೇಟಿಗೆ ಅವಕಾಶ ನೀಡುವುದಾಗಿ ಸಿಎಂ ಕಚೇರಿಯಿಂದ ಈ ಹಿಂದೆ ಮಾಹಿತಿ ನೀಡಲಾಗಿತ್ತು. ಆದರೆ, ಈ ವಾರವೂ ಅವಕಾಶ ಸಿಗುವುದು ಅನುಮಾನ ಎನ್ನಲಾಗುತ್ತಿದ್ದು, ಇದು ಬಿಜೆಪಿ ನಾಯಕರ ಹುಬ್ಬೇರುವಂತೆ ಮಾಡಿದೆ.