Advertisement
ಮಳೆಯ ನೀರನ್ನು ಹಿಡಿಯುವುದಿಲ್ಲ, ವಿಸ್ತೀರ್ಣವೂ ಇಲ್ಲವೆಂದರೆ ವಿಶಾಲ ಕೃಷಿ ಭೂಮಿಗೆ ಪುಟ್ಟ ಕೆರೆಯ ಕೊಡುಗೆ ಕಡಿಮೆಯೆಂದು ಭಾವಿಸುವಂತಿಲ್ಲ.. ಬ್ರಿಟಿಷ್ ಸರ್ವೆ ಕಾಲದಲ್ಲಿ ತೋಟ, ಗದ್ದೆಗಳ ಮೇಲ್ಭಾಗದಲ್ಲಿ ಕೆರೆ ಗುರುತಿಸಲಾಗಿದೆ. ಕೆರೆ ದಾಖಲೆಗಳಲ್ಲಿ ಸಣ್ಣ ರಚನೆಗಳನ್ನು ಸೂಕ್ಷ್ಮವಾಗಿ ಉಲ್ಲೇಖೀಸಿ ಗ್ರಾಮದ ನೈಸರ್ಗಿಕ ಸಂಪನ್ಮೂಲಕ್ಕೆ ಚಾರಿತ್ರಿಕ ಮಹತ್ವ ನೀಡಲಾಗಿದೆ. ಕೆರೆ ನೀರು ಹರಿಯುವ ಕಾಲುವೆಯ ದಿಕ್ಕು, ರೈತರ ಹಕ್ಕು ನಮೂದಿಸಿ ನಕ್ಷೆ ಬರೆಯಲಾಗಿದೆ.
Related Articles
Advertisement
ಮಳೆ ನೀರನ್ನು ಕೆರೆಗೆ ಭರ್ತಿಮಾಡುವ ಅಗತ್ಯವಿಲ್ಲದ್ದರಿಂದ ಕೆರೆಗಳಿಗೆ ಹೂಳು ಬರುವ ಪ್ರಮಾಣ ಬಹುತೇಕ ಕಡಿಮೆ. ಆದರೆ ಮಳೆಗಾಲದಲ್ಲಿ ಒರತೆ ನೀರಿನ ಒತ್ತಡ ಜಾಸ್ತಿಯಾಗುವುದರಿಂದ ಭೂಮಿಯೊಳಗಿನಿಂದ ಮಣ್ಣು, ಹಾವಸೆ, ಸಣ್ಣಪುಟ್ಟ ಕಲ್ಲು, ಮರಳು, ಕಾಡಿನ ಎಲೆ ಟೊಂಗೆಗಳು ಕೆರೆಯಲ್ಲಿ ಭರ್ತಿಯಾಗುವುದು ಇದ್ದೇ ಇದೆ. ಸಹಜವಾಗಿ ಜೌಗು ನೆಲೆಯಾದ್ದರಿಂದ ವಾಟೆ, ಮುಂಡಿಗೆ, ವಾಟಗರಕೆ, ತಾವರೆ, ನೀರತ್ತಿ, ನೀರು ನೇರಲೆ ಮುಂತಾದವು ಕಳೆಗಿಡಗಳಾಗಿ ಕೆರೆಯನ್ನು ಕಬಳಿಸುತ್ತವೆ. ಹೀಗಾಗಿ ಸೂಕ್ತ ನಿರ್ವಹಣೆ ಅಗತ್ಯ.
ಅಳಿವಿನಂಚಿನಲ್ಲಿ ಒರತೆ ಕೆರೆಗಳು: ಅರಣ್ಯನಾಶ, ಮಳೆ ಕೊರತೆಯಿಂದ ಒರತೆ ಕೆರೆಗಳ ಮೂಲಸ್ವರೂಪ ಬದಲಾಗಿದೆ. ಚಿಕ್ಕಪುಟ್ಟ ಕೆರೆಗಳನ್ನು ಸುಸ್ಥಿತಿಯಲ್ಲಿಡಲು ಯಾವತ್ತೂ ಸರಕಾರದ ಗಮನವಿಲ್ಲ, ಜಿಲ್ಲಾ ಪಂಚಾಯತ್‌ಗಳಿಗೆ ಕುಡಿಯುವ ನೀರಿಗೆ ಆದ್ಯತೆಯಿದ್ದಷ್ಟು ಪುರಾತನ ಒರತೆ ಕೆರೆ ಸಂರಕ್ಷಣೆ, ಪುನಶ್ಚೇತನ ನಡೆಯುತ್ತಿಲ್ಲ. ಆಡಳಿತ ಹಾಗೂ ಜನರ ನಿರ್ಲಕ್ಷ್ಯದಿಂದ ಶತಮಾನಗಳಿಂದ ಕೃಷಿಕರ ಬದುಕು ಸಲಹಿದ ಒರತೆ ಕೆರೆಗಳು ಅವಸಾನವಾಗುತ್ತಿವೆ. ಕೆರೆ ಜಾಗ ಕಬಳಿಸಿ ಅಡಿಕೆ ತೋಟ ವಿಸ್ತರಿಸಿ ಒರತೆ ಕೆರೆ ಪಕ್ಕ ಆಳದ ಕೊಳವೆ ಬಾವಿಗಳು ಕಾಣಿಸುತ್ತಿರುವುದು ನೀರ ನೋವಿನ ನೇರ ಸಾಕ್ಷಿ.
ಕೆರೆಗಳ ದಾಖಲೆ: ಕೆರೆಗಳ ಸಮಗ್ರ ವಿವರಗಳ ಟ್ಯಾಂಕ್ ರಿಜಿಸ್ಟರ್ ತೆಗೆದರೆ ಕೆರೆಯಿರುವ ಗ್ರಾಮ, ಮಜಿರೆ, ಸರ್ವೆ ನಂಬರ್, ಕೆರೆ ವಿಸ್ತೀರ್ಣ, ದಂಡೆಯ ಉದ್ದ, ತೂಬಿನ ಎತ್ತರ, ನೀರಾವರಿ ಕ್ಷೇತ್ರ, ನೀರಾವರಿ ಕಾಲುವೆ ಉದ್ದ, ಕೆರೆ ನಿರ್ಮಾಣ ವರ್ಷ, ಜಲಾನಯನ ಪ್ರದೇಶ, ಕೋಡಿಯ ಉದ್ದ, ಅಗಲ ಹೀಗೆ ಹಲವು ದಾಖಲೆಗಳಿರುತ್ತವೆ. ಇವುಗಳ ಜೊತೆಗೆ ಇದು ಇಂಗುಕೆರೆಯೇ? ನೀರಾವರಿ ಕೆರೆಯೇ? ಮಾಹಿತಿಗಳು ಲಭ್ಯ. ಕೆರೆ ನೀರಿನ ಮೂಲದಲ್ಲಿ ಒರತೆ ಕೆರೆ (ಸ್ಪ್ರಿಂಗ್ ಟ್ಯಾಂಕ್)ಯೆಂಬ ದಾಖಲೆ ಮಲೆನಾಡು, ಕರಾವಳಿ ಕೆರೆಗಳಲ್ಲಿ ಸಾಮಾನ್ಯವಾಗಿ ಕಾಣಿಸುತ್ತದೆ.
* ಶಿವಾನಂದ ಕಳವೆ