ಯಾಸ್ಮಿನ್ ಮತ್ತೆ ರಜ ತೆಗೆದುಕೊಂಡು ಮನೆಯಲ್ಲಿಯೇ ಉಳಿದಿದ್ದಳು. ಹೋದಬಾರಿ ಯಾವಾಗ ಇವಳು ರಜೆ ತೆಗೆದುಕೊಂಡಿದ್ದು ಎಂದು ಯೋಚಿಸಿದಾಗ, ಅವಳು ಯಾಕೆ ರಜೆ ತೆಗೆದುಕೊಂಡಳು ಎನ್ನುವುದರ ಸುಳಿವು ಸಿಕ್ಕಿತು. ಅವಳು ಪ್ರತಿ ತಿಂಗಳೂ, ಋತುಸ್ರಾವದ ದಿನಗಳಲ್ಲಿ ವಿಪರೀತ ಕಿಬ್ಬೊಟ್ಟೆ ನೋವು ಮತ್ತು ಕಾಲು ನೋವಿನಿಂದ ಒದ್ದಾಡಿಬಿಡುತ್ತಾಳೆ. ಹಾಗಾಗಿ, ಹೊರಗಾದ ಕೂಡಲೆ ಅವಳು ಮಾಡುವ ಮೊದಲ ಕೆಲಸವೆಂದರೆ, ರಜೆ ತೆಗೆದುಕೊಂಡು ಮಲಗಿಬಿಡುವುದು.
ಉಸ್ಸಪ್ಪಾ, ಸದ್ಯ ಮುಗಿಯಿತು ಎಂದು ನಿಟ್ಟುಸಿರು ಬಿಡುವಷ್ಟರಲ್ಲಿ, ತಿಂಗಳು ಕಳೆದು ಹೋಗಿರುತ್ತದೆ. ಮತ್ತೆ ಮಾಸಿಕ ತಾಪತ್ರಯಕ್ಕೆ ಅಣಿಯಾಗಲೇಬೇಕಾದ ಅನಿವಾರ್ಯಕ್ಕೆ ಪ್ರತಿಯೊಬ್ಬ ಹೆಣ್ಣು ಮಗಳೂ ತಯಾರಾಗಬೇಕಾಗುತ್ತದೆ. 3-5 ದಿನಗಳ ಕಾಲ ಆಗುವ ಋತುಸ್ರಾವದ ಮುನ್ನಾ 5-6 ದಿನಗಳಿಂದಲೇ, ಲಕ್ಷಣಗಳು ಶುರುವಾಗುತ್ತವೆ.
ಕಾಲುನೋವು, ವಾಕರಿಕೆ, ಗ್ಯಾಸ್ಟ್ರಿಕ್, ಗುಪ್ತಜಾಗದಲ್ಲಿ ಬೆವೆಯುವಿಕೆ…. ಹೀಗೆ. ಯಾರೋ ಕೆಲವರಲ್ಲಿ ಇಂಥ ಲಕ್ಷಣಗಳ ತೀವ್ರತೆ ಕಡಿಮೆ ಇರುತ್ತದೆ. ಆದರೆ ಬಹುತೇಕ ಹೆಣ್ಣುಮಕ್ಕಳು ಇದಕ್ಕೆ ಹೊರತಲ್ಲ. ಪಕ್ಕದ ಮನೆಯ ಚಂದ್ರಕಲಾ ಆಂಟಿ ಹೇಳುತ್ತಿರುತ್ತಾರೆ ಅವರಿಗೆ ಮುಟ್ಟಾಗುವುದೆಂದರೆ ಯಮಯಾತನೆಯಾಗುತ್ತಿತ್ತಂತೆ. ರಕ್ತಸ್ರಾವದಲ್ಲಿ ಗಟ್ಟಿಯಾದ ಗಡ್ಡೆಗಳು ಹೋಗುತ್ತಿದ್ದವಂತೆ. ಆಗೆಲ್ಲಾ ಅವರು ಪಡುತ್ತಿದ್ದ ಯಾತನೆ ದೇವರಿಗೇ ಗೊತ್ತು ಎನ್ನುತ್ತಾರೆ. ಅದಕ್ಕಾಗಿ ಅವರು ತೋರಿಸದ ವೈದ್ಯರಿಲ್ಲ, ಮಾಡದ ವೈದ್ಯವಿಲ್ಲ… ನಂತರ, ಗರ್ಭಕೋಶವನ್ನೇ ತೆಗೆಸಿಕೊಳ್ಳುವ ಮೂಲಕ ಅದಕ್ಕೊಂದು ಪರಿಹಾರ ಕಂಡುಕೊಂಡೆ ಎಂದು ಅವರು ಹೇಳುವಾಗ, ಅದನ್ನು ಕಳೆದುಕೊಳ್ಳಬೇಕಾಗಿ ಬಂದದ್ದರ ಬಗೆಗಿನ ನೋವೂ ಅವರ ಕಣ್ಣಲ್ಲಿ ಕಾಣಿಸುತ್ತದೆ.
ಅದು ತನ್ನದೊಂದು ಅಂಗವನ್ನು ಕಳೆದುಕೊಂಡೆನೆಂಬ ನೋವಷ್ಟೇ ಅಲ್ಲ… ನಮ್ಮ ದೇಹಕ್ಕೆ ಅತ್ಯಗತ್ಯವಾಗಿ ಬೇಕಿರುವ ಈಸ್ಟ್ರೋಜನ್ ಮತ್ತು ಪ್ರೊಜೆಸ್ಟ್ರಾನ್ ಎನ್ನುವ ಎರಡು ಹಾರ್ಮೋನುಗಳನ್ನು ಈ ಗರ್ಭಕೋಶ ಉತ್ಪಾದಿಸುತ್ತಿರುತ್ತದೆ ಮತ್ತು ಅದರ ಕಳೆದುಕೊಳ್ಳುವಿಕೆಯಿಂದ, ದೇಹ ತನ್ನ ಸಮತೋಲನದಲ್ಲಿ ವ್ಯತ್ಯಯ ಅನುಭವಿಸುತ್ತದೆ. ಹಾಗಾಗಿ, ಒಂದು ಮಟ್ಟಿಗೆ ಹೆಣ್ಣು ದುರ್ಬಲಳೂ ಆಗುತ್ತಾಳೆ.
ನನ್ನ ಗೆಳತಿಯ ಚಿಕ್ಕಮ್ಮ, ಗರ್ಭಕೋಶದ ಸಮಸ್ಯೆಯಿಂದಲೇ ತೀರಿಹೋಗಿದ್ದರು. ಗರ್ಭಕೋಶಗಳಲ್ಲಿ ಗಡ್ಡೆಗಳು ಬೆಳೆಯುವುದು, ನೀರುಗುಳ್ಳೆಗಳು ಕಾಣಿಸಿಕೊಳ್ಳುವುದು, ಕ್ಯಾನ್ಸರ್ ಕೋಶಗಳು ಪತ್ತೆಯಾಗುವುದು ಇತ್ತೀಚೆಗೆ ಬಹಳ ಸಾಮಾನ್ಯ ಎನ್ನುವಂತಾಗಿಬಿಟ್ಟಿದೆ. ಈ ಎಲ್ಲದರ ಪರಿಣಾಮ, ಕಿಬ್ಬೊಟ್ಟೆ ಚೂರೇ ಚೂರು ನಡುಗಿದರೂ ಮನಸ್ಸಲೇನೋ ಆತಂಕ, ಅನುಮಾನ ಶುರುವಾಗುತ್ತದೆ. ಮೊದಲು ವೈದ್ಯರನ್ನು ಕಂಡು ಸ್ಕ್ಯಾನ್ ಮಾಡಿಸಿಕೊಂಡು, ಅವರು ಏನೂ ತೊಂದರೆ ಇಲ್ಲ ಎಂದ ಮೇಲೆಯೇ ಮನಸ್ಸಿಗೆ ನೆಮ್ಮದಿ.
ಋತುಸ್ರಾವ, ಹೆಣ್ಣೊಬ್ಬಳ ಆರೋಗ್ಯದ ದೃಷ್ಟಿಯಿಂದ ಪ್ರತಿ ತಿಂಗಳೂ ನಡೆಯಲೇಬೇಕಾದದ್ದು. ಆದರೆ, ಅದನ್ನು ಮುಟ್ಟು ಎಂದು ಕರೆಯುತ್ತ, ಮೈಲಿಗೆಯೆಂದು ಅವಳನ್ನು ಹೊರಗಿಡುವ ಪದ್ಧತಿಯ ಬಗ್ಗೆ ವ್ಯಥೆ ಎನಿಸುತ್ತದೆ. ಈಗಲೂ ಈ ಪದ್ಧತಿಯನ್ನು, ತೀರಾ ಓದಿಕೊಂಡವರೂ ಚಾಚೂ ತಪ್ಪದೆ ಪಾಲಿಸುವುದನ್ನು ಕಂಡಾಗ, ಬದಲಾವಣೆ ಎನ್ನುವುದು ಹೇಗೆ, ಎಲ್ಲಿಂದ ಸಾಧ್ಯವಪ್ಪಾ ಅಂತಲೂ ಅನಿಸಿ ಭ್ರಮನಿರಸನವಾಗುತ್ತದೆ. ಕನಿಷ್ಠ, ಇಂಥ ಪದ್ಧತಿಗಳನ್ನು ಪಾಲಿಸುವ ಮೊದಲು ಅದರ ಹಿಂದಿನ ವೈಜ್ಞಾನಿಕ ಕಾರಣಗಳನ್ನು ಅರಿತು ಮುನ್ನಡೆಯುವುದು ಅತ್ಯಗತ್ಯ.
-ಆಶಾ ಜಗದೀಶ್