Advertisement

ಇನ್ನಾ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ

11:11 PM Nov 05, 2019 | Team Udayavani |

19ನೆಯ ಶತಮಾನದ ಉತ್ತರಾರ್ಧದಲ್ಲಿ ಬ್ರಿಟಿಷ್‌ ಆಡಳಿತದಡಿ, ಊರ ಹಿರಿಯರ ಮುತುವರ್ಜಿಯಲ್ಲಿ ಸ್ಥಾಪನೆಗೊಂಡು ಈಗಲೂ ವಿದ್ಯೆಯ ಬೆಳಕನ್ನು ಪಸರಿಸುತ್ತಿರುವ ಹಲವು ಸರಕಾರಿ ಶಾಲೆಗಳು ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿವೆ. ಈಗಿನ ಆಂಗ್ಲ ಮಾಧ್ಯಮ ಶಿಕ್ಷಣದ ಆಕರ್ಷಣೆಯ ನಡುವೆ ಈ ಶಾಲೆಗಳು ಸುತ್ತಮುತ್ತಲಿನ ಊರುಗಳಿಗೆ ಅಕ್ಷರಶಃ ಜ್ಞಾನ ದೇಗುಲಗಳೇ ಆಗಿವೆ. ಇಂತಹ ಶತಮಾನದ ಹಿರಿಮೆಯ ಕನ್ನಡ ಮಾಧ್ಯಮ ಸರಕಾರಿ ಶಾಲೆಗಳನ್ನು ಗುರುತಿಸಿ ಪರಿಚಯಿಸುವ ಪ್ರಯತ್ನ ನಮ್ಮದು.

Advertisement

1905 ಶಾಲೆ ಸ್ಥಾಪನೆ
ಇತರ ಕನ್ನಡ ಮಾಧ್ಯಮ ಶಾಲೆಗಳಂತೆ ವಿದ್ಯಾರ್ಥಿಗಳ ಕೊರತೆ

ಬೆಳ್ಮಣ್‌: ಕಾರ್ಕಳ ತಾಲೂಕಿನ ಇನ್ನಾ ಗ್ರಾ.ಪಂ.ನಲ್ಲಿ ಕಳೆದ 115 ವರ್ಷಗಳ ಹಿಂದೆ ಆರಂಭಗೊಂಡ ಇನ್ನಾ ಸರಕಾರಿ ಮಾದರಿ ಹಿ.ಪ್ರಾ. ಶಾಲೆ ಪ್ರಸ್ತುತ 50 ವಿದ್ಯಾರ್ಥಿಗಳನ್ನು ಹೊಂದಿದ್ದು ಇತರ ಕನ್ನಡ ಮಾಧ್ಯಮ ಶಾಲೆಗಳಂತೆ ವಿದ್ಯಾರ್ಥಿಗಳ ಕೊರತೆ ಎದುರಿಸುತ್ತಿದೆ.

1905ರಲ್ಲಿ ಇನ್ನ ಶೇಷಪ್ಪನಯ್ಯನವರು ತನ್ನ ಮನೆಯಂಗಳದ ಚಪ್ಪರದಲ್ಲಿ ಆರಂಭಿಸಿದ ಇನ್ನ ಶಾಲೆಯಲ್ಲಿ ಅವರ ಮನೆಯವರೇ ಆದ ಗೋವಿಂದ ರಾಯರು, ಗೋಪಾಲ ರಾಯರು, ವೆಂಕಟರಾಯರು ಹಾಗೂ ಮಂಜುನಾಥ ರಾಯರು ಒಂದೊಂದು ದಿನ ಒಬ್ಬೊಬ್ಬರಾಗಿ ಪಾಠ ಹೇಳಿಕೊಡುತ್ತಿದ್ದರು. ಬಳಿಕ ಶೇಷಪ್ಪಯ್ಯನವರು ಇನ್ನ ಸುವರ್ಣಪಡು³ವಿನಲ್ಲಿ ಇನ್ನದ ಗುತ್ತಿನವರ ಮೂಲಗೇಣಿಯಲ್ಲಿ ಜಾಗ ಪಡೆದು ಶಾಲೆ ಆರಂಭಿಸಿದರು. ಅಂದಿನಿಂದ ಇಂದಿನವರೆಗೆ ಹಲವು ಶಿಕ್ಷಕರು, ಮುಖ್ಯ ಶಿಕ್ಷಕರು ಈ ಶಾಲೆಯಲ್ಲಿ ನಿರಂತರವಾಗಿ ದುಡಿದು ಸಹಸ್ರಾರು ಮಂದಿ ವಿದ್ಯಾರ್ಥಿಗಳ ಬಾಳಿಗೆ ಬೆಳಕಾಗಿದ್ದಾರೆ.

ಬೇಡಿಕೆಗಳು
ಬಲು ದೊಡ್ಡ ಹಳೆಯ ಕಟ್ಟಡ ಇದ್ದರೂ ಮಕ್ಕಳು ಕೂರುವ ಬೆಂಚು, ಓದಲು, ಬರೆಯುವ ಡೆಸ್ಕ್ಗಳು ಸರಿ ಇಲ್ಲ. ಶಾಲೆಯಕಿಟಕಿ ಬಾಗಿಲುಗಳು ಸರಿ ಇಲ್ಲ, ಮಕ್ಕಳಿಗೆ ಉಣ್ಣಲು ಊಟದ ಬಟ್ಟಲುಗಳಿಲ್ಲ, ಶಾಲೆಗೆ ಸರಿಯಾದ ಪ್ರಯೋಗಾಲಯವೇ ಇಲ್ಲ. ಈ ಇಲ್ಲಗಳ ನಡುವೆ ಇಲ್ಲಿನ ಶಿಕ್ಷಕರು ಉತ್ತಮವಾಗಿ ಕರ್ತವ್ಯ ನಿರ್ವಹಿಸಿ ವಿದ್ಯಾರ್ಥಿಗಳ ಭವಿಷ್ಯ ರೂಪಿಸುತ್ತಿದ್ದಾರೆ.ಮುಂಬಯಿ ಸಹಿತ ಇತರ ಹೊರ ರಾಜ್ಯದ
ದಾನಿಗಳು ಹಳೆ ವಿದ್ಯಾರ್ಥಿಗಳ ನೆರವಿನಿಂದ ಈ ಹಿಂದೆ ಸಂಭ್ರಮದ ಶತಮಾನೋತ್ಸವ ಕಂಡ ಶಾಲೆಯತ್ತ ಹಳೆ ವಿದ್ಯಾರ್ಥಿಗಳು ಇನ್ನಷ್ಟು ಗಮನ ಹರಿಸಬೇಕಾದ ಅಗತ್ಯವಿದೆ.

Advertisement

ದಾನಿಗಳ ಕೊಡುಗೆ
ಶತಮಾನ ಕಂಡ ಈ ಕನ್ನಡ ಶಾಲೆ 2005ರಲ್ಲಿ ಶತಮಾನೋತ್ಸವ ಆಚರಿಸಿದ್ದು ಪ್ರಸ್ತುತ ಈ ಶಾಲೆ ದಾನಿಗಳು, ಹಳೆ ವಿದ್ಯಾರ್ಥಿಹಾಗೂ ಪೋಷಕರ ನೆರವಿನಿಂದ ಮುಂದುವರಿದು ಬಂದಿದೆ. ವಿದ್ಯಾರ್ಥಿಗಳಿಗೆ ವಾಹನದ ವ್ಯವಸ್ಥೆ, ಕಂಪ್ಯೂಟರ್‌ ಕಲಿಕೆ, ಕುಡಿಯುವ ನೀರಿಗಾಗಿ ಬೋರ್‌ವೆಲ್‌, ರಂಗಮಂಟಪ, ಉದ್ಯಾನವನ ನಿರ್ಮಾಣ, ಒಂದನೇ ತರಗತಿಯ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ಧನ ನೀಡಿಕೆ,
ಗೌರವ ಶಿಕ್ಷಕರ ವೇತನ ಕೊಡುಗೆಗಳೆಲ್ಲವೂ ದಾನಿಗಳ ಕೊಡುಗೆಯಾಗಿದೆ. ಹಳೆ ವಿದ್ಯಾರ್ಥಿಗಳ ಸಾಧನೆ
ಈ ಶಾಲೆಯಲ್ಲಿ ಕಲಿತವರು ಮುಂಬಯಿ, ಬೆಂಗಳೂರು, ಮದ್ರಾಸ್‌ ಹಾಗೂ ವಿದೇಶಗಳಲ್ಲಿ
ಉನ್ನತ ಸ್ಥಾನದಲ್ಲಿದ್ದಾರೆ. ವೈದ್ಯರಾಗಿ, ಎಂಜಿನಿಯರ್‌ರಾಗಿ, ವಕೀಲರಾಗಿ, ರಾಜಕಾರಣಿಗಳಾಗಿ, ಉದ್ಯಮಿಗಳಾಗಿ, ಕೃಷಿಕರಾಗಿ ಶಾಲೆಗೆ ಹಾಗೂ ಊರಿಗೆ ಕೀರ್ತಿ ತಂದಿದ್ದಾರೆ. ಒಂದು ಕಾಲದಲ್ಲಿ
ಎಲ್ಲ ಕನ್ನಡ ಶಾಲೆಗಳಂತೆ ತುಂಬಿ ತುಳುಕುತ್ತಿದ್ದ ಈ ಶಾಲೆಯಲ್ಲಿ ಈಗ 50 ವಿದ್ಯಾರ್ಥಿಗಳಿದ್ದು ಮುಖ್ಯ ಶಿಕ್ಷಕಿ, ದೈಹಿಕ ಶಿಕ್ಷಣ ಶಿಕ್ಷಕಿ ಸಹಿತ 4 ಖಾಯಂ ಶಿಕ್ಷಕರು,ಓರ್ವ ಗುಬ್ಬಚ್ಚಿ ಇಂಗ್ಲಿಷ್‌ ಸ್ಪೀಕಿಂಗ್‌
ಕೋರ್ಸ್‌ನ ಅತಿಥಿ ಶಿಕ್ಷಕಿ ಹಾಗೂ ದಾನಿಗಳ ನೆರವಿನ ಓರ್ವ ಗೌರವ ಶಿಕ್ಷಕಿ ಇದ್ದಾರೆ.

ಉಳಿದ ಕನ್ನಡ ಶಾಲೆಗಳಂತೆ ವಿದ್ಯಾರ್ಥಿಗಳ ಕೊರತೆ ಇದ್ದರೂ ಈ ಶಾಲೆಗೆ ದಾನಿಗಳ ಕೊರತೆ ಇಲ್ಲ. ಇನ್ನೂ ಹಲವು ಮೂಲ ಸೌಕರ್ಯಗಳ ಕೊರತೆ ಇದ್ದು ದಾನಿಗಳು, ಶಿಕ್ಷಣ ಪ್ರೇಮಿಗಳು, ಹಳೆ ವಿದ್ಯಾರ್ಥಿಗಳು ಸಹಕರಿಸುವ ಭರವಸೆ ಇದೆ.
-ವಸಂತಿ ಬಾೖ, , ಮುಖ್ಯ ಶಿಕ್ಷಕಿ

ಶತಮಾನ ಕಂಡ ಇನ್ನ ಶಾಲೆ ನೂರಾರು ಕೀರ್ತಿವಂತರಿಗೆ ಅಕ್ಷರ ಜ್ಞಾನ ಕಲಿಸಿದ ವಿದ್ಯಾದೇಗುಲ. ಇನ್ನದಲ್ಲಿ ಸಿಕ್ಕಿದ ಶಿಕ್ಷಣ ಇನ್ನೆಲ್ಲೂ ಸಿಕ್ಕಿಲ್ಲ. ಈ ಶಾಲೆಯ ಹಳೆ ವಿದ್ಯಾರ್ಥಿ ಎನ್ನಲು ಹೆಮ್ಮೆ ಎನಿಸುತ್ತದೆ. ಈ ಶಾಲೆಯನ್ನು ಉಳಿಸಿ ಬೆಳೆಸುವಲ್ಲಿ ನಮ್ಮ ಪ್ರಯತ್ನ ನಿರಂತರ ನಡೆಯಲಿದೆ.
-ಇನ್ನಾ ಕಾಚೂರು ಪಡುಮನೆ ಶೇಖರ ಶೆಟ್ಟಿ,, ಉದ್ಯಮಿ

-  ಶರತ್‌ ಶೆಟ್ಟಿ ಮುಂಡ್ಕೂರು

Advertisement

Udayavani is now on Telegram. Click here to join our channel and stay updated with the latest news.

Next