ಧಾರವಾಡ: ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಡಿಸಿ ದೀಪಾ ಚೋಳನ್ ಅಧ್ಯಕ್ಷತೆಯಲ್ಲಿ ಜಿಲ್ಲಾ ಜಾಗೃತಿ ಮತ್ತು ಉಸ್ತುವಾರಿ ಸಮಿತಿಯ 3ನೇ ತ್ತೈಮಾಸಿಕ ಸಭೆ ಶುಕ್ರವಾರ ಜರುಗಿತು.
ಕರ್ನಾಟಕ ವಿದ್ಯಾವರ್ಧಕ ಸಂಘವು 1977-78ನೇ ಸಾಲಿನಿಂದ ಸರ್ಕಾರದ ಧನಸಹಾಯ ಪಡೆದು ಕಾರ್ಯ ನಿರ್ವಹಿಸುತ್ತಿದೆ. ಆದರೆ ಈವರೆಗೂ ಸಂಘದ ನೇಮಕಾತಿ, ಪದೋನ್ನತಿ, ಮಳಿಗೆಗಳ ಹಂಚಿಕೆ ಹಾಗೂ ಕಾರ್ಯಕಾರಿ ಸಮಿತಿಯಲ್ಲಿ ಪದಾಧಿಕಾರಿಗಳ ಹುದ್ದೆಗಳನ್ನು ನಿಯಮಾನುಸಾರ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡ ವರ್ಗಕ್ಕೆ ನೀಡಿಲ್ಲ ಎಂದು ಸಮಿತಿಯ ಸದಸ್ಯರು ಆರೋಪಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಡಿಸಿ ದೀಪಾ ಚೋಳನ್, ಈ ಕುರಿತು ಸೂಕ್ತ ಕ್ರಮ ಕೈಗೊಳ್ಳಲು ಕೋರಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಿರ್ದೇಶಕರಿಗೆ ಪತ್ರ ಬರೆಯಲಾಗಿದೆ ಎಂದು ತಿಳಿಸಿದರು.
ಸ್ಮಶಾನಭೂಮಿ ಗುರುತಿಗೆ ಕ್ರಮ: ಜಿಲ್ಲೆಯಲ್ಲಿ ಬೇಡ ಜಂಗಮ ಹೆಸರಿನಲ್ಲಿ ಕಳೆದ 5 ವರ್ಷಗಳಲ್ಲಿ ಒಟ್ಟು 7 ಪರಿಶಿಷ್ಟ ಜಾತಿ ಪ್ರಮಾಣಪತ್ರಗಳನ್ನು ಮಾತ್ರ ವಿತರಿಸಲಾಗಿದೆ. ಅವುಗಳ ನೈಜತೆ ಪರಿಶೀಲಿಸಲು ಕ್ರಮ ಕೈಗೊಳ್ಳಲಾಗುವುದು ಎಂದ ಡಿಸಿ ದೀಪಾ, ಸಮಾಜ ಕಲ್ಯಾಣ ಇಲಾಖೆಯ ಹೊಸ ಸುತ್ತೋಲೆ ಪ್ರಕಾರ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಕ್ಕೆ ಪ್ರತ್ಯೇಕವಾಗಿ ಸ್ಮಶಾನ ಭೂಮಿ ಖರೀದಿಸಬಾರದು. ಸಮಾಜದ ಎಲ್ಲ ವರ್ಗಗಳಿಗೂ ಒಂದೇ ಕಡೆ ಸ್ಮಶಾನ ಭೂಮಿ ಇರಬೇಕು ಎಂದು ನಿರ್ದೇಶನ ನೀಡಿದೆ. ಸ್ಮಶಾನ ಭೂಮಿ ಕೊರತೆ ಇರುವ ಕಡೆ ಭೂಮಿ ಗುರುತಿಸಲು ಸಂಬಂ ಧಿಸಿದ ತಹಶೀಲ್ದಾರ್ ಗೆ ಸೂಚಿಸಲಾಗಿದೆ. ಸರ್ಕಾರಿ ಭೂಮಿ ಲಭ್ಯವಿರದಿದ್ದರೆ ಭೂಮಿ ಖರೀದಿಸಲು ಕ್ರಮ ಕೈಗೊಳ್ಳಲಾಗುವುದು ಎಂದರು.
ಹಾಸ್ಟೆಲ್‌ಗೆ ನಿವೇಶನ ಹಂಚಿಕೆ: ಧಾರವಾಡಕ್ಕೆ ಸುತ್ತಮುತ್ತಲಿನ ಜಿಲ್ಲೆಗಳಿಂದ ಎಸ್‌ಸಿ, ಎಸ್‌ಟಿ ಮಾತ್ರವಲ್ಲದೇ ಎಲ್ಲ ಜಾತಿವರ್ಗಗಳ ಮಕ್ಕಳು ವಿದ್ಯಾಭ್ಯಾಸಕ್ಕೆ ಬರುವುದು ಸಾಮಾನ್ಯ. ಎಲ್ಲರಿಗೂ ಹಾಸ್ಟೆಲ್ ಒದಗಿಸಿಕೊಡುವುದಕ್ಕೆ ತೊಂದರೆ ಆಗುತ್ತಿರುವ ವಿಷಯವನ್ನು ಈಗಾಗಲೇ ಸರ್ಕಾರದ ಗಮನಕ್ಕೆ ತರಲಾಗಿದೆ. ಸಮಾಜ ಕಲ್ಯಾಣ ಇಲಾಖೆ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಹಾಸ್ಟೆಲ್ ನಿರ್ಮಾಣಕ್ಕೆ ಬೇಡಿಕೆಯನುಸಾರ ನಿವೇಶನಗಳನ್ನು ಹಂಚಿಕೆ ಮಾಡಲಾಗಿದೆ ಎಂದು ತಿಳಿಸಿದರು.
ಜಿಲ್ಲೆಯ ಗ್ರಾಮೀಣ ಪ್ರದೇಶಗಳು ಹಾಗೂ ಅವಳಿ ನಗರ ವ್ಯಾಪ್ತಿಯ ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರ ಕುಂದು-ಕೊರತೆ ಸಭೆಗಳು ನಿರಂತರವಾಗಿ ನಡೆಯುತ್ತಿವೆ. ಸಭೆ ಬಗ್ಗೆ ಮುಂಚಿತವಾಗಿ ಸ್ಥಳೀಯವಾಗಿ ಇರುವ ಸಮಿತಿ ಸದಸ್ಯರಿಗೆ ಮಾಹಿತಿ ನೀಡಿ ಕಾಲಮಿತಿಯೊಳಗೆ ಅನುಸರಣಾ ವರದಿ ನೀಡಬೇಕು ಎಂದು ದೀಪಾ ತಿಳಿಸಿದರು.
ಸಮಾಜ ಕಲ್ಯಾಣ ಇಲಾಖೆ ಜಂಟಿನಿರ್ದೇಶಕ ನವೀನ ಶಿಂತ್ರೆ ಸಭೆ ನಿರೂಪಿಸಿದರು. ಡಿವೈಎಸ್‌ಪಿ ರಾಮನಗೌಡ ಹಟ್ಟಿ, ಎಸಿಪಿ ಎಂ.ಎನ್. ರುದ್ರಪ್ಪ, ಸಮಿತಿ ಸದಸ್ಯರಾದ ಅಶೋಕ ದೊಡ್ಡಮನಿ, ಇಂದುಮತಿ ಶಿರಗಾಂವ, ಅರ್ಜುನ ವಡ್ಡರ, ರಮೇಶ ಹುಲಕೊಪ್ಪ, ಸಿದ್ಧಲಿಂಗಪ್ಪ ಕರೆಮ್ಮನವರ, ಕಾಡಯ್ಯ ಹೆಬ್ಬಳ್ಳಿಮಠ, ಕಸ್ತೂರಿ ಹಳ್ಳದ, ವಾರ್ತಾ ಇಲಾಖೆ ಹಿರಿಯ
ಸಹಾಯಕ ನಿರ್ದೇಶಕ ಮಂಜುನಾಥ ಡೊಳ್ಳಿನ, ಕವಿವಿ ಸಹಾಯಕ ಪ್ರಾಧ್ಯಾಪಕ ಡಾ| ಸುಭಾಷ ನಾಟೀಕಾರ ಇದ್ದರು.