ಬೆಂಗಳೂರು: ಬರ ಪರಿಹಾರ ನಿಗದಿ ಹಾಗೂ ವಿತರಣೆಯಲ್ಲಿ ಕೇಂದ್ರ ಸರ್ಕಾರವು ಕರ್ನಾಟಕಕ್ಕೆ ತಾರತಮ್ಯ ತೋರಿದೆ ಎಂದು ಗುರುವಾರ ನಡೆದ ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ಅತೃಪ್ತಿ ವ್ಯಕ್ತವಾಗಿದೆ.
ಮುಂಗಾರು ಹಂಗಾಮಿನ ಬೆಳೆ ನಷ್ಟಕ್ಕೆ ಸಂಬಂದಪಟ್ಟಂತೆ ಅಕ್ಟೋಬರ್‌ನಲ್ಲಿ ಸಲ್ಲಿಸಿದ ಪ್ರಸ್ತಾವಕ್ಕೆ ಕೇಂದ್ರ ಸರ್ಕಾರ 949 ಕೋಟಿ ರೂ. ಪರಿಹಾರ ನಿಗದಿಪಡಿಸಿದ್ದು, ಈವರೆಗೆ 430 ಕೋಟಿ ರೂ. ಮಾತ್ರ ಬಿಡುಗಡೆ ಮಾಡಿದೆ. ಆದರೆ ಕೇಂದ್ರ ಸರ್ಕಾರವು ಮಹಾರಾಷ್ಟ್ರ ಸರ್ಕಾರಕ್ಕೆ 4,700 ಕೋಟಿ ರೂ. ಪರಿಹಾರ ಘೋಷಿಸಿದ್ದು, ಈ ತಾರತಮ್ಯದ ಬಗ್ಗೆ ಸಚಿವ ಸಂಪುಟದಲ್ಲಿ ತೀವ್ರ ಅಸಮಾಧಾನ ವ್ಯಕ್ತವಾಯಿತು ಎಂದರು.
ಹಿಂಗಾರು ಹಂಗಾಮಿಗೆ ಸಂಬಂಧಪಟ್ಟಂತೆ 11,384 ಕೋಟಿ ರೂ. ನಷ್ಟದ ಅಂದಾಜು ಇತ್ತು. ಆದರೆ ಕೇಂದ್ರ ಸರ್ಕಾರದ ನಿಯಮಾವಳಿ ಪ್ರಕಾರ 2064 ಕೋಟಿ ರೂ. ಪರಿಹಾರ ಬರಬೇಕಿದ್ದು, ಆ ಸಂಬಂಧ ಪ್ರಸ್ತಾವವನೆಯನ್ನು ಫೆಬ್ರವರಿ ಮೊದಲ ವಾರದಲ್ಲೇ ಸಲ್ಲಿಸಲಾಗಿತ್ತು. ಕೇಂದ್ರ ಸರ್ಕಾರದ ಅಧಿಕಾರಿಗಳ ತಂಡವೂ ಪರಿಶೀಲನೆ ನಡೆಸಿ ವರದಿಯನ್ನೂ ಸಲ್ಲಿಸಿದೆ. ಹಾಗಿದ್ದರೂ ಈವರೆಗೆ ನಯಾ ಪೈಸೆ ಬಿಡುಗಡೆಯಾಗಿಲ್ಲ. ಜತೆಗೆ ಪರಿಹಾರ ಮೊತ್ತವೇ ಈವರೆಗೆ ನಿಗದಿಯಾಗಿಲ್ಲ. ಹಾಗಿದ್ದರೂ ಪ್ರತಿಪಕ್ಷದ ನಾಯಕರು ಅನಗತ್ಯ ಹೇಳಿಕೆ ನೀಡಿ ಬರಗಾಲವನ್ನೂ ರಾಜಕೀಯಕ್ಕೆ ಬಳಸಿಕೊಳ್ಳುತ್ತಿದ್ದಾರೆ ಎಂದು ದೂರಿದರು.
ರಾಜ್ಯದಲ್ಲಿನ ಪ್ರತಿಪಕ್ಷದ ನಾಯಕರು ಕೇಂದ್ರದಲ್ಲಿರುವ ತಮ್ಮದೇ ಸರ್ಕಾರದಲ್ಲಿ ಪ್ರಭಾವ ಬಳಸಿ ರಾಜ್ಯಕ್ಕೆ ನಾಯಯುತ ಪಾಲು ಕೊಡಿಸುವ ನಿಟ್ಟಿನಲ್ಲಿ ಕಾರ್ಯ ನಿರ್ವಹಿಸಬೇಕು. ಆದರೆ ಅವರು ಅನಗತ್ಯವಾಗಿ ಆರೋಪ ಮಾಡುತ್ತಾ, ಬರ ವಿಚಾರದಲ್ಲಿ ರಾಜಕೀಯ ಮಾಡುತ್ತಿರುವುದು ಸ್ಪಷ್ಟ ಎಂದು ಹೇಳಿದರು.
Advertisement
ರಾಜ್ಯದಲ್ಲಿ ಚುನಾವಣೆ ಪ್ರಕ್ರಿಯೆ ಮುಕ್ತಾಯವಾದ ಬಳಿಕ ನಡೆದ ಮೊದಲ ಸಂಪುಟ ಸಭೆಯಲ್ಲಿ ಬೆಳೆ ನಷ್ಟಕ್ಕೆ ಪರಿಹಾರ ನಿಗದಿ ಹಾಗೂ ಪರಿಹಾರ ಮೊತ್ತ ಬಿಡುಗಡೆ ವಿಚಾರದಲ್ಲಿ ಕೇಂದ್ರ ಸರ್ಕಾರ ತಾರತಮ್ಯ ತೋರುತ್ತಿದೆ ಎಂಬ ಬಗ್ಗೆ ಆಕ್ಷೇಪ ವ್ಯಕ್ತವಾಯಿತು ಎಂದು ಸಚಿವ ಕೃಷ್ಣ ಬೈರೇಗೌಡ ತಿಳಿಸಿದರು.
Related Articles
Advertisement
1,697 ಕೋಟಿ ರೂ. ಬಾಕಿ: ಉದ್ಯೋಗ ಖಾತರಿ ಯೋಜನೆಯಡಿ ಕೇಂದ್ರ ಸರ್ಕಾರದಿಂದ ಈವರೆಗೆ 1697 ಕೋಟಿ ರೂ. ಕೂಲಿ ಮೊತ್ತ ಬಾಕಿ ಇದೆ. 2015-16 ಹಾಗೂ 2016-17ನೇ ಸಾಲಿನಲ್ಲಿ 856 ಕೋಟಿ ರೂ. ಬಾಕಿ ಇದೆ. ಜತೆಗೆ 2018-19 ಹಾಗೂ ಪ್ರಸಕ್ತ 2019-2020ನೇ ಸಾಲಿನ ಬಾಕಿ ಸೇರಿದಂತೆ ಒಟ್ಟು 1697 ಕೋಟಿ ರೂ. ಬಾಕಿ ಉಳಿಸಿಕೊಂಡಿದೆ. ಇದು ಅನುದಾನವಲ್ಲ. ಬದಲಿಗೆ ಪೂರ್ಣಗೊಂಡಿರುವ ಕೆಲಸಕ್ಕೆ ಪಾವತಿಸಬೇಕಾದ ಕೂಲಿ ಮೊತ್ತವಾಗಿದೆ ಎಂದು ಹೇಳಿದರು.
ಉದ್ಯೋಗ ಖಾತರಿ ಯೋಜನೆಯಡಿ ಕೂಲಿ ಹಣವನ್ನು ನಿಯಮಾನುಸಾರ 15 ದಿನದಲ್ಲಿ ಪಾವತಿಸಬೇಕು. ಆದರೆ ಮೂರ್‍ನಾಲ್ಕು ತಿಂಗಳಾದರೂ ಕೇಂದ್ರ ಸರ್ಕಾರ ಹಣ ಪಾವತಿಸುತ್ತಿಲ್ಲ.
ಕಳೆದ ಜ.6ರಂದು ರಾಜ್ಯದ 25 ಸಂಸದರು, ಇಬ್ಬರು ಕೇಂದ್ರ ಸಚಿವರು, ಲೋಕಸಭೆಯಲ್ಲಿ ಕಾಂಗ್ರೆಸ್ ಸಂಸದೀಯ ನಾಯಕರು ನಿಯೋಗದಲ್ಲಿ ತೆರಳಿ ಕೇಂದ್ರ ಸಚಿವರಿಗೆ ಮನವಿ ಸಲ್ಲಿಸಲಾಗಿತ್ತು. ಆಗ ಬಾಕಿ ಇರುವ 2,500 ಕೋಟಿ ರೂ. ಬಿಡುಗಡೆ ಮಾಡುವ ಭರವಸೆಯನ್ನು ಕೇಂದ್ರ ಸಚಿವರು ನೀಡಿದ್ದರು. ಆದರೆ ಮಾ.31ರವರೆಗೆ ಬಿಡುಗಡೆಯಾಗಿದ್ದು, 200 ಕೋಟಿ ರೂ. ಮಾತ್ರ. ಅಂದರೆ ಬಾಕಿ ಮೊತ್ತದ ಶೇ.10ರಷ್ಟು ಹಣವನ್ನೂ ಕೇಂದ್ರ ಪಾವತಿಸಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ಕೇಂದ್ರ ಸರ್ಕಾರ ಕಾನೂನು ಪ್ರಕಾರ ಪಾವತಿಸಲೇ ಬೇಕಾದ ಹಣ. ಅವರು ಬಡವರಿಗೆ ಸೇರಬೇಕಾದ ಹಣ. ಬಡವರು ಪ್ರಶ್ನಿಸಲಾರರು ಎಂಬ ಕಾರಣಕ್ಕೆ ಕೇಂದ್ರ ಸರ್ಕಾರ ತುಚ್ಛವಾಗಿ ಕಾಣುತ್ತಿರುವಂತಿದೆ. ಬಡವರಿಗೆ ತೊಂದರೆಯಾಗುವುದನ್ನು ತಪ್ಪಿಸಲು ರಾಜ್ಯ ಸರ್ಕಾರ ಮಧ್ಯ ಪ್ರವೇಶಿಸಿ ತನ್ನ ಖಜಾನೆಯಿಂದ ಸಾಲದ ರೂಪದಲ್ಲಿ ಹಣ ಪಾವತಿಸುತ್ತಿದೆ. ಅಧಿಕೃತವಾಗಿ ಹಣ ಬಿಡುಗಡೆ ಮಾಡುವುದಾಗಿ ಹೇಳುವ ಕೇಂದ್ರ ಸರ್ಕಾರದ ಪ್ರಮುಖರು, ತೀವ್ರ ಸಂಕಷ್ಟವಿದ್ದರೇ ನೀವೇ ಕೂಲಿ ಹಣ ಪಾವತಿಸಿ ಎಂದು ಅನೌಪಚಾರಿಕವಾಗಿ ಹೇಳುತ್ತಿದ್ದಾರೆ.
ಇತರೆ ರಾಜ್ಯಗಳಲ್ಲೂ ಉದ್ಯೋಗ ಖಾತರಿಯಡಿ ಕೇಂದ್ರ ಸರ್ಕಾರ ಹಣ ಬಾಕಿ ಉಳಿಸಿಕೊಂಡಿರುವ ಸಾಧ್ಯತೆ ಇದೆ. ಈ ಎಲ್ಲ ಅಂಶಗಳನ್ನು ಗಮನಿಸಿದರೆ ಬಡವರು ಹಾಗೂ ಗ್ರಾಮೀಣ ಜನರಿಗೆ ಅನುಕೂಲವಾಗುವ ಯೋಜನೆ ಬಗ್ಗೆ ಕೇಂದ್ರ ಸರ್ಕಾರಕ್ಕೆ ಒಲವಿದೆಯೋ ಇಲ್ಲವೋ ಎಂಬ ಅನುಮಾನ ಮೂಡುತ್ತದೆ ಎಂದು ಹೇಳಿದರು.
ಕುಡಿವ ನೀರಿಗೆ ಹೆಚ್ಚುವರಿ 201 ಕೋಟಿ
ರಾಜ್ಯದಲ್ಲಿ ತೀವ್ರ ಬರ ಕಾಣಿಸಿಕೊಂಡಿರುವ ಹಿನ್ನೆಲೆಯಲ್ಲಿ ಪ್ರಸಕ್ತ ಸಾಲಿನಲ್ಲಿ ಕುಡಿಯುವ ನೀರಿನ ಕಾಮಗಾರಿಗಳಿಗೆ 3,600 ಕೋಟಿ ರೂ.ಮೊತ್ತದ ಕ್ರಿಯಾ ಯೋಜನೆ ಹೊರತುಪಡಿಸಿ 201 ಕೋಟಿ ರೂ.ಹೆಚ್ಚುವರಿ ಹಣ ಒದಗಿಸಲಾಗಿದೆ. ಕುಡಿಯುವ ನೀರು ಪೂರೈಕೆ ಸೇರಿದಂತೆ ಬರ ನಿರ್ವಹಣೆ ಕಾರ್ಯವನ್ನು ತ್ವರಿತವಾಗಿ ಕೈಗೊಳ್ಳಬೇಕು ಎಂದು ಮುಖ್ಯಮಂತ್ರಿ ಸಂಪುಟ ಸಭೆಯಲ್ಲಿ ಸೂಚಿಸಿದ್ದಾರೆ. ಬರಪೀಡಿತ ಪ್ರತಿ ತಾಲೂಕಿಗೆ ತಲಾ 2 ಕೋಟಿ ರೂ.ನಂತೆ ಒಟ್ಟು 324 ಕೋಟಿ ರೂ. ಈಗಾಗಲೇ ಬಿಡುಗಡೆಯಾಗಿದೆ. ನೀರಿನ ತೀವ್ರ ಅಭಾವವಿರುವ ಕಡೆ ಟ್ಯಾಂಕರ್ ವ್ಯವಸ್ಥೆ ಹಾಗೂ ಖಾಸಗಿ ಬೋರ್‌ವೆಲ್ ಬಾಡಿಗೆಗೆ ಪಡೆದು ನೀರು ಪೂರೈಕೆ ಅಧಿಕಾರವನ್ನು ಜಿಲ್ಲಾಧಿಕಾರಿಯಿಂದ ತಹಶೀಲ್ದಾರ್‌ಗೆ ನೀಡುವ ಬಗ್ಗೆ ಕೂಡ ಸಂಪುಟ ಸಭೆಯಲ್ಲಿ ನಿರ್ಧರಿಸಲಾಗಿದೆ.
15ಕ್ಕೆ ಮುಖ್ಯಮಂತ್ರಿ ವಿಡಿಯೋ ಸಂವಾದ
ಬರ ವಿಚಾರಕ್ಕೆ ಸಂಬಂಧಿಸಿದಂತೆ ಸಿಎಂ ಕುಮಾರಸ್ವಾಮಿ 15ರಂದು ಜಿಲ್ಲಾಧಿಕಾರಿಗಳು ಸಿಇಒಗಳೊಂದಿಗೆ ವಿಡಿಯೋ ಸಂವಾದದ ಮೂಲಕ ಪರಿಶೀಲನಾ ಸಭೆ ನಡೆಸಲಿದ್ದಾರೆ. ಉಪಚುನಾವಣೆ ನಡೆದಿರುವ ಕುಂದಗೋಳ ಹಾಗೂ ಚಿಂಚೋಳಿ ಕ್ಷೇತ್ರ ಒಳಗೊಂಡ ಎರಡು ಜಿಲ್ಲೆ ಹೊರತುಪಡಿಸಿ ಉಳಿದೆಡೆ ಜಿಲ್ಲಾ ಉಸ್ತುವಾರಿ ಸಚಿವರು ವಾರದೊಳಗೆ ಬರ ನಿರ್ವಹಣೆ ಪರಿಶೀಲನಾ ಸಭೆ ನಡೆಸುವಂತೆ ಸಿಎಂ ಸೂಚಿಸಿದ್ದಾರೆ. ಇದಕ್ಕೂ ಮೊದಲೇ ಉಸ್ತುವಾರಿ ಸಚಿವರು ಪರಿಶೀಲನಾ ಸಭೆ ನಡೆಸುವ ಸಾಧ್ಯತೆ ಇದೆ. ಬರ ಹಾಗೂ ಇತರ ಪ್ರಕೃತಿ ವಿಕೋಪಕ್ಕೆ ಸಂಬಂಧಪಟ್ಟಂತೆ ಮುಖ್ಯಮಂತ್ರಿ ಹಾಗೂ ಸಚಿವರು ಪರಿಶೀಲನಾ ಸಭೆ ನಡೆಸಲು ಕಳೆದ ಸೋಮವಾರವಷ್ಟೇ ಚುನಾವಣಾ ಆಯೋಗ ನೀತಿ ಸಂಹಿತೆ ಸಡಿಲಿಸಿ ಅನುಮತಿ ನೀಡಿತ್ತು.