Advertisement

ಅನ್ಯಾಯ, ಗೂಂಡಾಗಿರಿ ಕಾಂಗ್ರೆಸ್‌ ಸಂಸ್ಕೃತಿ

11:42 AM Feb 27, 2018 | Team Udayavani |

ಕಲಬುರಗಿ: ಅನ್ಯಾಯ, ಗುಂಡಾಗಿರಿ ಹಾಗೂ ಕುಟುಂಬ ರಾಜಕಾರಣ ಕಾಂಗ್ರೆಸ್‌ನ ಸಂಸ್ಕೃತಿಯಾಗಿದೆ. ಎಲ್ಲ ರಂಗದಲ್ಲೂ ಸಿದ್ದರಾಮಯ್ಯ ನೇತೃತ್ವ ಸರ್ಕಾರ ವಿಫ‌ಲವಾಗಿದೆ. ಚುನಾವಣೆ ಗೆಲ್ಲಲು ಎಲ್ಲ ತರಹದ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ. ಉತ್ತರ ಪ್ರದೇಶ ಚುನಾವಣೆ ಗೆದ್ದ ನಂತರವೇ ಅಮಿತ್‌ ಶಾ ಶಕ್ತಿ ಏನೆಂಬುದು ಗೊತ್ತಾಗಿದೆ. ಕರ್ನಾಟಕದಲ್ಲೂ ಅದೇ ಆಗಲಿದೆ ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಶಾ ಹೇಳಿದರು.

Advertisement

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾನೂನು ಹದಗೆಟ್ಟಿರುವುದಕ್ಕೆ ಇತ್ತೀಚಿನ ಆರು ತಿಂಗಳಿನಲ್ಲಿ ಸತತವಾಗಿ ನಡೆದ ಘಟನೆಗಳೇ ಸಾಕ್ಷಿ. ಸರಣಿಯಾಗಿ ಹಿಂದೂ ಕಾರ್ಯಕರ್ತರ ಹತ್ಯೆ, ಪಿಎಫ್‌ಐ ಮೇಲೆ ಹಾಕಲಾಗಿರುವ ಪ್ರಕರಣಗಳನ್ನು ವಾಪಸ್‌ ಪಡೆದಿರುವುದು, ರೈತರ ಆತ್ಮಹತ್ಯೆ ನಿಲ್ಲದಿರುವುದು, ಹೆಚ್ಚಳವಾಗಿರುವ ಭ್ರಷ್ಟಾಚಾರವನ್ನು ಅವಲೋಕಿಸಿದರೆ ಸಿದ್ದರಾಮಯ್ಯ ಸರ್ಕಾರ ಸಂಪೂರ್ಣ ವಿಫಲವಾಗಿರುವುದನ್ನು ನಿರೂಪಿಸುತ್ತದೆ ಎಂದರು.

ತೊಗರಿ ಖರೀದಿಯಲ್ಲೂ ರಾಜ್ಯ ಸರ್ಕಾರ ವಿಫಲವಾಗಿದೆ. ಸೂಕ್ತ ಮಾನದಂಡಗಳನ್ನು ಪಾಲನೆ ಮಾಡಿಲ್ಲ. ಸೂಕ್ತ ಮಾನದಂಡ ಪಾಲನೆ ಮಾಡಿದ್ದರೆ ಜತೆಗೆ ರಾಜ್ಯವೂ ಕೇಂದ್ರದ ಜತೆಗೆ ಕೈ ಜೋಡಿಸಿದಲ್ಲಿ ರೈತರ ಎಲ್ಲ ತೊಗರಿ ಖರೀದಿ ಮಾಡಬಹುದು. ರಾಹುಲ್‌ ಗಾಂಧಿ ರಾಜ್ಯದ ಭೇಟಿ ಫಲಪ್ರದವಾಗಲ್ಲ.

2014ರ ನಂತರ ನಡೆದ ಚುನಾವಣೆಯಲ್ಲಿ ಪಂಜಾಬ್‌ವೊಂದನ್ನು ಬಿಟ್ಟರೆ ಉಳಿದ ಎಲ್ಲ ರಾಜ್ಯಗಳಲ್ಲಿ ಕಾಂಗ್ರೆಸ್‌ ಸೋಲನುಭವಿಸಿದೆ. 2020ರೊಳಗೆ ಭಾರತ ಬಲಿಷ್ಠ ರಾಷ್ಟ್ರವಾಗಿ ಹೊರಹೊಮ್ಮಲಿದೆ. ಭಾರತದ ಅಭಿವೃದ್ಧಿ ಕಂಡು ಇತರೆ ದೇಶಗಳು ಅಚ್ಚರಿಗೆ ಒಳಗಾಗಲಿವೆ. ಆಮದು ಹಾಗೂ ರಫ್ತು ವಲಯದಲ್ಲಿ ಸುಧಾರಣಾ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ ಎಂದರು.

 ನಿಶ್ಚಿತ ಬಿಜೆಪಿ ಸರ್ಕಾರ: ಹೈದ್ರಾಬಾದ್‌ ಕರ್ನಾಟಕ ತಮ್ಮ ಪ್ರವಾಸ ಯಶಸ್ವಿಯಾಗಿದೆ. ಒಟ್ಟು 9 ಕಾರ್ಯಕ್ರಮಗಳು ಮುಕ್ತಾಯವಾಗಿವೆ. ಈ ಪ್ರವಾಸದಿಂದ ಜನರ ಉತ್ಸಾಹ ಇಮ್ಮಡಿಗೊಂಡಿದೆ. ನಿಶ್ಚಿತವಾಗಿ ಚುನಾವಣೆ ನಂತರ ಬಿಜೆಪಿ ಸರ್ಕಾರ ಮಾಡಲಿದೆ. ರಾಜ್ಯದ ಎಲ್ಲ ಕ್ಷೇತ್ರಗಳಲ್ಲಿ ಅಭೂತಪೂರ್ವ ಬೆಂಬಲ ಸಿಗುತ್ತಿದೆ. ಈ ಭಾಗವನ್ನು ಪ್ರತಿನಿಧಿಸುತ್ತಾ ಬಂದಿರುವ ಸಂಸದ ಖರ್ಗೆ ಅವರ ಕ್ಷೇತ್ರವನ್ನು ನೋಡಲಾಗಿದೆ. ಅಭಿವೃದ್ಧಿ ಪರಿಶೀಲನೆ ಮಾಡುವ ಅಗತ್ಯವಿದೆ ಎಂದರು.

Advertisement

ಯಡಿಯೂರಪ್ಪ ಸರ್ಕಾರದ ಮುಗಿದ ವೇಳೆಯಿಂದ ಅಭಿವೃದ್ಧಿ ಎಂಬುದು ಸ್ಥಗಿತಗೊಂಡಿದೆ. ಕೇಂದ್ರ ಸರ್ಕಾರ ರಾಜ್ಯಕ್ಕೆ ಫೈನಾನ್ಸ್‌ನಲ್ಲಿ ತನ್ನ ಪಾಲು 2.19 ಲಕ್ಷ ಕೋಟಿ ರೂ. ನೀಡಿದೆ. ಇದು ಹಿಂದಿನ ಅವಧಿಯಲ್ಲಿದ್ದ 88500 ರೂ. ಇರುವುದನ್ನು 1.30 ಲಕ್ಷ ಕೋಟಿ ರೂ. ಹೆಚ್ಚಳವಾಗಿ ನೀಡಲಾಗಿದೆ. ಸ್ಮಾರ್ಟ್‌ ಸಿಟಿಗೆ 960 ಕೋಟಿ, ರಾಷ್ಟ್ರೀಯ ಹೆದ್ದಾರಿಗೆ 2700 ಕೋಟಿ, ಪ್ರಧಾನಮಂತ್ರಿ ಆವಾಸ್‌ ಯೋಜನೆ 290 ಕೋಟಿ, ಮೆಟ್ರೋ 2800 ಕೋಟಿ, ಉಜ್ವಲ ಯೋಜನೆಗೆ 4300 ಕೋಟಿ, ಬಸ್‌ಗಳ ಖರೀದಿಗೆ 239 ಕೋಟಿ, ಅಮೃತ ಯೋಜನೆ 4900 ಕೋಟಿ ನೀಡಲಾಗಿದೆ. 6.15 ಲಕ್ಷ ಜನರಿಗೆ ಉಚಿತ ಗ್ಯಾಸ್‌ ಸಂಪರ್ಕ ಕಲ್ಪಿಸಲಾಗಿದೆ. ಬಿಜೆಪಿ ಅಧಿಕಾರಕ್ಕೆ ಬಂದ ಮೇಲೆ ಬಿಎಸ್‌ಎಸ್‌ಕೆ ಸಕ್ಕರೆ ಕಾರ್ಖಾನೆ ನವೀಕರಣ ಗೊಳಿಸಲಾಗಿದೆ. 

ಕೃಷಿ ಉತ್ಪನ ಖರೀದಿಯಲ್ಲಿದೆರಾಜ್ಯದ್ದೂ ಜವಾಬ್ದಾರಿ: ಶಾ
ಕಲಬುರಗಿ: ರಾಜ್ಯದಲ್ಲಿ ತೊಗರಿ ಬೆಲೆ ಕುಸಿತವಾಗಿದ್ದರಿಂದ ಮಾರುಕಟ್ಟೆ ಪ್ರವೇಶಿಸಿ ಕೇಂದ್ರ ಸರ್ಕಾರ ಪ್ರಸಕ್ತವಾಗಿ 26 ಲಕ್ಷ ಕ್ವಿಂಟಲ್‌ ಖರೀದಿ ಮಾಡಿದೆ. ಇದರಲ್ಲಿ ಅರ್ಧವನ್ನಾದರೂ ರಾಜ್ಯ ಸರ್ಕಾರ ಖರೀದಿ ಮಾಡಿದ್ದರೆ ರೈತರಿಗೆ ಹೆಚ್ಚಿನ ಅನುಕೂಲವಾಗುತ್ತದೆ ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಶಾ ಹೇಳಿದರು.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಆದರೆ ಕೇವಲ 1.74 ಲಕ್ಷ ಕ್ವಿಂಟಲ್‌ ಮಾತ್ರ ಖರೀದಿಸಿದೆ. ಉತ್ತರ ಪ್ರದೇಶ, ಮಧ್ಯಪ್ರದೇಶ, ಛತ್ತೀಸಗಢ ಮತ್ತು ಗುಜರಾತ್‌ ರಾಜ್ಯಗಳಲ್ಲಿ ಆಯಾ ರಾಜ್ಯ ಸರ್ಕಾರಗಳೂ ಬೆಲೆ ಕುಸಿತದ ಕೃಷಿ ಉತ್ಪನ್ನಗಳನ್ನು ಖರೀದಿ ಮಾಡಿವೆ. ಆದರೆ ಕರ್ನಾಟಕ ಸರ್ಕಾರ ಬರೀ ಕೇಂದ್ರದ ಮೇಲೆ ಭಾರ ಹಾಕುವುದು ಸಮಂಜಸವಲ್ಲ. ಉಳಿದ ತೊಗರಿಯನ್ನು ರಾಜ್ಯ ಸರ್ಕಾರ ಮಧ್ಯಪ್ರದೇಶದ ಮಾದರಿಯಲ್ಲಿ ಖರೀದಿಗೆ ಮುಂದಾಗುವ ಮೂಲಕ ರೈತರಿಗೆ ಸ್ಪಂದಿಸಬೇಕು. ರಾಷ್ಟ್ರೀಕೃತ ಬ್ಯಾಂಕ್‌ಗಳಲ್ಲಿನ ರೈತರ ಸಾಲ ಮನ್ನಾ ಅಷ್ಟು ಸುಲಭದ ಮಾತಲ್ಲ ಎಂದರು.

ರಾಜ್ಯದ ಎಲ್ಲ 224 ವಿಧಾನಸಭಾ ಕ್ಷೇತ್ರಗಳ ಟಿಕೆಟ್‌ಗಳನ್ನು ಪಕ್ಷದ ಕೇಂದ್ರೀಯ ಸಂಸದೀಯ ಮಂಡಳಿಯೇ ಅಂತಿಮಗೊಳಿಸುತ್ತದೆ. ಪಕ್ಷದ ಸಂಘಟನೆಗಳು ತಂತ್ರಗಳನ್ನು ರೂಪಿಸಲಾಗುತ್ತಿದೆ. ಪ್ರಮುಖವಾಗಿ ಪಕ್ಷಕ್ಕೆ ಹೊಸದಾಗಿ ಯುವ ಪಡೆಯನ್ನು ರಚಿಸಲಾಗುವುದು ಎಂದರು.
 
ಅನುಭವ ಮಂಟಪಕ್ಕೆ ಭೇಟಿ 
ಬಸವಕಲ್ಯಾಣ (ಬೀದರ): ವಿಶ್ವದ ಪ್ರಥಮ ಪಾರ್ಲಿಮೆಂಟ್‌ ಎಂದೆನಿಸಿಕೊಂಡಿರುವ ಬಸವಕಲ್ಯಾಣದ ಅನುಭವ ಮಂಟಪಕ್ಕೆ ಎಐಸಿಸಿ ಅಧ್ಯಕ್ಷ ರಾಹುಲ್‌ ಗಾಂಧಿ  ಭೇಟಿ ಬೆನ್ನಲ್ಲೇ ಸೋಮವಾರ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಶಾ ಭೇಟಿ ನೀಡಿ ಬಸವೇಶ್ವರರ ದರ್ಶನ ಪಡೆದರು. ಬಸವ ಭಾವಚಿತ್ರಕ್ಕೆ ಪುಪ್ಪಾರ್ಚನೆ ಮಾಡಿ ಧನ್ಯತೆ ವ್ಯಕ್ತಪಡಿಸಿದರು. ಈ ವೇಳೆ ಒಂದು ಶಬ್ದವನ್ನೂ ಮಾತನಾಡದಿರುವುದು
ಬಸವಾನುಯಾಯಿಗಳಲ್ಲಿ ಬೇಸರ ಮೂಡಿಸಿತು. 

ಸೇಡಂ ನಿಂದ ಹೆಲಿಕಾಪ್ಟರ್‌ ಮೂಲಕ ಬಸವಕಲ್ಯಾಣಕ್ಕೆ ಆಗಮಿಸಿ ನೆರವಾಗಿ ಅನುಭವ ಮಂಟಪಕ್ಕೆ ತೆರಳಿದ ಅಮಿತ್‌ ಶಾ ಅವರಿಗೆ ಅನುಭವ ಮಂಟಪ ಟ್ರಸ್ಟ್‌ ನಿಂದ ಸ್ವಾಗತ ಕೋರಲಾಯಿತು. ಟ್ರಸ್ಟ್‌ ಅಧ್ಯಕ್ಷರಾದ ಡಾ.ಬಸವಲಿಂಗ ಪಟ್ಟದ್ದೇವರು ಶಾ ಅವರ ಹಣೆಗೆ ವಿಭೂತಿ ಹಚ್ಚಿ, ರುದ್ರಾಕ್ಷಿ ಮಾಲೆ ಹಾಕಿದರು. ನಂತರ ಶಾಲು, ಪೇಟಾ ಹಾಕಿ ಸನ್ಮಾನ ಮಾಡಿದರು. ಬಸವಣ್ಣನ ನೇತೃತ್ವದಲ್ಲಿ ಶರಣರು ನಡೆಸುತಿದ್ದ ಚಿಂತನೆಯ ಪರಿಕಲ್ಪನೆಯುಳ್ಳ ಭಾವಚಿತ್ರವನ್ನು ಸ್ಮರಣಿಕೆಯಾಗಿ ನೀಡಿ ಗೌರವಿಸಿದರು. ತದನಂತರ ನೂತನ ಅನುಭವ ಮಂಟಪ ಮಾದರಿಯ ವಿನ್ಯಾಸದ ಬಗ್ಗೆ ಪಟ್ಟದ್ದೇವರಿಂದ ತಿಳಿದುಕೊಂಡರು.

ಈ ಸಂದರ್ಭದಲ್ಲಿ ಮಾತನಾಡಿದ ಡಾ.ಪಟ್ಟದ್ದೇವರು, 12ನೇ ಶತಮಾನದಲ್ಲಿ ಬಸವಣ್ಣ ಸ್ಥಾಪಿಸಿದ ಅನುಭವ ಮಂಟಪ ವಿಶ್ವದ ಮೊದಲ ಪಾರ್ಲಿಮೆಂಟ್‌ ಆಗಿದೆ. ರಾಜಾಶ್ರಯದ ಕಾಲದಲ್ಲಿ ಪ್ರಜಾಪ್ರಭುತ್ವದ ಮೌಲ್ಯವನ್ನು ಕೊಟ್ಟಿರುವ ಕೇಂದ್ರ ಇದಾಗಿದೆ. ಜಾತಿ- ವರ್ಗ ರಹಿತ, ಹೊಸ ಸಮಾಜ ನಿರ್ಮಾಣಕ್ಕಾಗಿ ಬಸವಣ್ಣನ ನೇತೃತ್ವದಲ್ಲಿ ಮಹಾನ್‌ ಕ್ರಾಂತಿ ಈ ನೆಲದಲ್ಲಿ ನಡೆದಿದೆ. 

ಸಂಸತ್‌ನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಅನುಭವ ಮಂಟಪದ ಬಗ್ಗೆ ಪ್ರಸ್ತಾಪಿಸುವ ಮೂಲಕ ಪವಿತ್ರ ಕೇಂದ್ರದ ಮೌಲ್ಯಗಳನ್ನು ಜಗತ್ತಿಗೆ ಸಾರಿದ್ದಾರೆ ಎಂದು ಸ್ಮರಿಸಿದರು. ವಿಶಿಷ್ಟ ಕ್ಷೇತ್ರ ಅಂತಾರಾಷ್ಟ್ರೀಯ ಮಟ್ಟದ ಪ್ರವಾಸಿ ಕೇಂದ್ರವಾಗಿ ಬೆಳೆಯುವ ಮೂಲಕ ಜಗತ್ತಿಗೆ ಬಸವಣ್ಣನವರ ಸಂದೇಶಗಳನ್ನು ಸಾರಬೇಕಿದೆ. ಗುರುನಾನಕ ಜಯಂತಿ ಮಾದರಿಯಲ್ಲಿ ಬಸವಣ್ಣನವರ ಜಯಂತಿಯನ್ನು ಭಾರತ ಸರ್ಕಾರದಿಂದ ದೇಶಾದ್ಯಂತ ಆಚರಣೆಗೆ ತರಬೇಕು ಎಂದು ಡಾ| ಪಟ್ಟದ್ದೇವರು ಮನವಿ ಮಾಡಿದರು.

Advertisement

Udayavani is now on Telegram. Click here to join our channel and stay updated with the latest news.

Next