Advertisement

BJP ಯ “ಪುಕ್ಕಲುತನ”ದಿಂದಲೇ ಅನ್ಯಾಯ: ಡಿಕೆಶಿ

11:23 PM Sep 15, 2023 | Team Udayavani |

ಬೆಂಗಳೂರು: ಕಾವೇರಿ ವಿಚಾರ ಸಹಿತ ರಾಜ್ಯದ ಹಿತಾಸಕ್ತಿಗೆ ಸಂಬಂಧಿಸಿದ ವಿಷಯಗಳಿಗೆ ಬಿಜೆಪಿ ರಾಜ್ಯ ನಾಯಕರ ಪುಕ್ಕಲುತನದಿಂದಲೇ ಕರ್ನಾಟಕಕ್ಕೆ ತೊಂದರೆ ಆಗುತ್ತಿದೆ ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಆರೋಪಿಸಿದರು.

Advertisement

ಕುಮಾರಕೃಪಾ ಅತಿಥಿಗೃಹದ ಬಳಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರಧಾನಿ ಮೋದಿ ಅವರ ಎದುರು ನಿಂತು ಮಾತನಾಡುವ ಧೈರ್ಯ ರಾಜ್ಯ ಬಿಜೆಪಿ ನಾಯಕರಿಗಿಲ್ಲ. ಕರ್ನಾಟಕಕ್ಕೆ ತೊಂದರೆ ಆಗಿರುವುದೇ ಇಂತಹ ನಾಯಕರಿಂದ ಎಂದು ದೂರಿದರು.

ಕೇಂದ್ರ ಪರಿಸರ ಇಲಾಖೆಯಿಂದ ಅನೇಕ ಕಾಮಗಾರಿಗೆ ನಿರಾಕ್ಷೇಪಣ ಪತ್ರ ತರಲೂ ಬಿಜೆಪಿ ನಾಯಕರಿಂದ ಆಗಿಲ್ಲ. ರಾಜ್ಯದ ಅಭಿವೃದ್ಧಿಗೆ ಅವರಿಂದಲೇ ತೊಂದರೆ ಆಗುತ್ತಿದೆ ಎಂದು ತೀಕ್ಷ್ಣವಾಗಿ ಹೇಳಿದ ಅವರು, ನೀರಿನ ವಿಚಾರದಲ್ಲಿ ನಮಗೆ ರಾಜಕಾರಣ ಬೇಕಿಲ್ಲ. ಎಲ್ಲರೂ ಒಟ್ಟಿಗೆ ಸೇರಿ ಕೆಲಸ ಮಾಡೋಣ ಎನ್ನುವುದು ನನ್ನ ಧೋರಣೆ. ಬಿಜೆಪಿಯವರು ನನಗೆ ಬಯ್ಯಲಿ, ಉಗಿಯಲಿ, ಏನು ಬೇಕಾದರೂ ಹೇಳಲಿ, ನಾನು ರಾಜ್ಯದ ಹಿತಾಸಕ್ತಿಗೆ ಕೆಲಸ ಮಾಡುತ್ತೇನೆ. ಅದೇ ರೀತಿ, ಬಿಜೆಪಿ ರಾಜ್ಯ ನಾಯಕರು ಕೂಡ ರಾಜ್ಯದ ಹಿತಾಸಕ್ತಿಯ ವಿಚಾರಗಳ ಬಗ್ಗೆ ತಮ್ಮ ಪಕ್ಷದ ರಾಷ್ಟ್ರೀಯ ನಾಯಕರ ಎದುರು ಮಾತನಾಡುವ ಧೈರ್ಯ ಮಾಡಬೇಕು ಎಂದರು.

ಕೇಂದ್ರ ಸಚಿವ ಗಜೇಂದ್ರ ಸಿಂಗ್‌ ಶೆಖಾವತ್‌ ಅವರಿಗೆ ವಸ್ತುಸ್ಥಿತಿ ವಿವರಿಸಿದ್ದೇವೆ. ಮುಂದೆ ನಾವು ಯಾವ ನಿರ್ಧಾರ ತೆಗೆದುಕೊಳ್ಳುತ್ತೇವೆ ಎನ್ನುವುದನ್ನೂ ತಿಳಿಸಿದ್ದೇವೆ. ದಿಲ್ಲಿಯಲ್ಲಿ ಸಚಿವರ ಬಳಿ ಚರ್ಚೆ ಏನಾಯಿತು ಎಂದು ಸಂದರ್ಭ ಬಂದಾಗ ವಿವರಿಸುತ್ತೇನೆ ಎಂದು ಸ್ಪಷ್ಟಪಡಿಸಿದರು.

ಕೇಂದ್ರ ಪರಿಹಾರ ಹುಡುಕಲಿ: ಎಚ್ಕೆ
ಗದಗ: ಕಾವೇರಿ ನೀರನ್ನು ತಮಿಳುನಾಡಿಗೆ ಹರಿಸುವ ವಿಚಾರವಾಗಿ ಕೇಂದ್ರ ಸರಕಾರ ಕೂಡಲೇ ಎರಡೂ ರಾಜ್ಯಗಳ ಮುಖ್ಯಮಂತ್ರಿ ಗಳನ್ನು ಕರೆದು ಕಾನೂನು, ತಾಂತ್ರಿಕತೆಯ ಬದಲು ರಾಜಕೀಯ ಪರಿಹಾರ ಹುಡುಕಿಕೊಳ್ಳಬೇಕೆಂದು ಕಾನೂನು ಸಚಿವ ಎಚ್‌.ಕೆ.ಪಾಟೀಲ್‌ ಹೇಳಿದರು.

Advertisement

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯ ಮಳೆಯಿಲ್ಲದೆ ಬರದ ಸಂಕಷ್ಟ ಎದುರಿಸುತ್ತಿದೆ. ಕುಡಿಯುವ ನೀರಿಗಾಗಿ ಪರಿತಪಿಸುವಂತಾಗಿದೆ. ಇಂತಹ ಸಂದರ್ಭದಲ್ಲಿ ಸುಪ್ರೀಂ ಕೋರ್ಟ್‌, ಕಾವೇರಿ ನೀರು ನಿರ್ವಹಣ ಪ್ರಾಧಿಕಾರದಲ್ಲಿ ಕಾನೂನು ಹೋರಾಟ ಮಾಡಿ ಎಂಬ ಹಾರಿಕೆ ಉತ್ತರ ನೀಡದೆ ರಾಜಕೀಯವಾಗಿ ಪರಿಹಾರ ಒದಗಿಸಬೇಕು. ಮುಂದಿನ ಮುಂಗಾರುವರೆಗೆ ಕೃಷಿ ಹಾಗೂ ಬೆಂಗಳೂರು ನಗರಕ್ಕೆ ಕುಡಿಯುವ ನೀರು ಪೂರೈಕೆ ಕನಿಷ್ಠ 106 ಟಿಎಂಸಿ ನೀರು ಬೇಕು. ಆದರೆ, ಕಬಿನಿ, ಹಾರಂಗಿ, ಹೇಮಾವತಿ, ಕೆಆರ್‌ಎಸ್‌ ಜಲಾಶಯದಲ್ಲಿ ಕೇವಲ 53 ಟಿಎಂಸಿ ನೀರು ಮಾತ್ರ ಸಂಗ್ರಹವಿದೆ. ಸದ್ಯ ಮಳೆಯಿಲ್ಲ ಮತ್ತು ಮುಂದಿನ 15 ದಿನಗಳ ಕಾಲ ಮಳೆ ಬರುವ ಲಕ್ಷಣಗಳು ಕಾಣುತ್ತಿಲ್ಲ. ಇದರಿಂದ ಜಲಾಶಯಗಳಿಗೆ ಒಳಹರಿವಿಲ್ಲ. ಈ ಹಿನ್ನೆಲೆಯಲ್ಲಿ ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್‌ ದಿಲ್ಲಿಗೆ ತೆರಳಿ ಜಲಸಂಪನ್ಮೂಲ ಸಚಿವರನ್ನು ಭೇಟಿ ಮಾಡಿ ನಮ್ಮ ಪರಿಸ್ಥಿತಿಯನ್ನು ವಿವರಿಸಿದ್ದಾರೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next