Advertisement

ಕಾರ್ಮಿಕ ಕಾನೂನು ತಿದ್ದುಪಡಿಯಿಂದ ಅನ್ಯಾಯ: ಅಬ್ದುಲ್

04:55 PM Aug 03, 2019 | Team Udayavani |

ಕುಣಿಗಲ್: ಕೇಂದ್ರ ಸರ್ಕಾರವು ಕಾರ್ಮಿಕ ಕಾನೂನು ತಿದ್ದುಪಡಿ ಮಾಡಿರುವುದನ್ನು ವಿರೋಧಿಸಿ ಕಾರ್ಮಿಕ ಸಂಘಟನೆಗಳ ಜಂಟಿ ಸಮಿತಿ ಸೆಂಟರ್‌ ಆಫ್ ಇಂಡಿಯನ್‌ ಟ್ರೇಡ್‌ ಯೂನಿಯನ್‌ ಪದಾಧಿ ಕಾರಿಗಳು ಸರ್ಕಾರಿ ಸಾರಿಗೆ ಬಸ್‌ ನಿಲ್ದಾಣ ಬಳಿ ಪ್ರತಿಭಟನೆ ನಡೆಸಿದರು.

Advertisement

ಅಧ್ಯಕ್ಷ ಅಬ್ದುಲ್ ಮುನಾಫ್‌ ಮಾತನಾಡಿ, ಜು.23ರಂದು ಕೇಂದ್ರ ಸರ್ಕಾರ ವೇತನ ಮಸೂದೆ ಮತ್ತು ಔದ್ಯೋಗಿಕ ರಕ್ಷಣೆ, ಆರೋಗ್ಯ ಮತ್ತು ಕಾರ್ಯಸ್ಥಳದ ಸ್ಥಿತಿಗತಿ ಬಗ್ಗೆ ಲೋಕ ಸಭೆಯಲ್ಲಿ ಮಂಡಿಸಿದೆ. ಕಾರ್ಮಿಕ ಹಿತಾಸಕ್ತಿಯ ಕುರಿತು ಕೇಂದ್ರ ಸರ್ಕಾರ ಕಾರ್ಮಿಕ ಸಂಘಟನೆಗಳ ಆಕ್ಷೇಪಣೆ ಪೂರ್ವ ಗ್ರಹಗಳಿಂದ ನೋಡಲಾಗಿದೆ. ಕೇವಲ ಒಂದು ಕಂಪನಿಯಲ್ಲಿ ಇರಬೇಕಾದ ಕನಿಷ್ಠ ಕಾರ್ಮಿಕರ ಸಂಖ್ಯೆ ಏರಿಸುವುದರಿಂದಾಗಿ ಬಹುತೇಕ ಕಾರ್ಮಿಕರು, ಹಾಗೂ ಹಲವಾರು ಕಾರ್ಮಿಕರ ಕಾನೂನುಗಳ ಪ್ರಯೋಜನ ಪಡೆಯದಂತೆ ಮಾಡಲಾಗಿದೆ ಎಂದು ಆರೋಪಿಸಿದರು.

ಏಳನೇ ವೇತನ ಆಯೋಗ ಜ.1, 2016ರಿಂದ ಜಾರಿಗೆ ಬರುವಂತೆ ಕನಿಷ್ಠ ವೇತನವನ್ನು 18 ಸಾವಿರ ರೂ. ಎಂದು ಘೋಷಿಸಿತ್ತು. ಕೇಂದ್ರ ಕಾರ್ಮಿಕ ಸಚಿವ ಜು. 10ರಂದು ರಾಷ್ಟ್ರೀಯ ಕನಿಷ್ಠ ವೇತನವನ್ನು ಕೇವಲ ಮಾಸಿಕ 4, 628 ರೂ. ಎಂದು ಘೋಷಿಸಿರುವುದು ಕಾರ್ಮಿಕರ ಬದುಕು ಬೀದಿಗೆ ತಳ್ಳಿದೆ ಎಂದು ಕಿಡಿಕಾರಿದರು.

ಕಾರ್ಪೋರೇಟ್‌ಗಳ ಸೇವೆ: ಔದ್ಯೋಗಿಕ ರಕ್ಷಣೆ, ಆರೋಗ್ಯ ಮತ್ತು ಕಾರ್ಯಸ್ಥಳದ ಸ್ಥಿತಿ ಗತಿ ಮಸೂದೆ 13 ಪ್ರತ್ಯೇಕ ಕಾರ್ಮಿಕರ ಕಾನೂನುಗಳ ಬದಲಾಗಿ ಜಾರಿಗೆ ತರಲಾಗಿದೆ. ಇದು 10ಕ್ಕಿಂತ ಹೆಚ್ಚು ಕೆಲಸಗಾರರಿರುವ ಉದ್ಯಮಿಗಳಿಗೆ ಮಾತ್ರ ಅನ್ವಯವಾಗಿರುವುದರಿಂದ ಅಸಂಘಟಿತ ವಲಯ, ಹೊರಗುತ್ತಿಗೆ ಮತ್ತು ಗುಡಿ ಕೈಗಾರಿಕೆಗಳಲ್ಲಿ ದುಡಿಯುವ ದೇಶದ ಶೇ. 90ಕ್ಕೂ ಹೆಚ್ಚು ಕಾರ್ಮಿಕರು ಮಸೂದೆ ಸೌಲಭ್ಯಗಳಿಂದ ವಂಚಿತರಾಗುತ್ತಾರೆ. ಈಗ ಜಾರಿಗೆ ತರಲು ಉದ್ದೇಶಿಸಿರುವ ಮಸೂದೆ ಈ ಹಿಂದೆ ಅನುಭವಿಸುತ್ತಿದ್ದ ಸವಲತ್ತು ಕಸಿದುಕೊಂಡು ಮಾಲೀಕರಿಗೆ ಪ್ರಯೋಜನವಾಗಲಿದೆ. ಕಾರ್ಮಿಕರ ಹಕ್ಕು ಕಿತ್ತುಕೊಂಡು ಕೇಂದ್ರ ಬಿಜೆಪಿ ಸರ್ಕಾರ ಕಾರ್ಪೋರೇಟ್‌ಗಳ ಸೇವೆಯಲ್ಲಿ ತೊಡಗಿದೆ ಎಂದು ಕಿಡಿಕಾರಿದರು.

ಜಾನ್ಸನ್‌ ಕಾರ್ಮಿಕ ಸಂಘದ ಅಧ್ಯಕ್ಷ ಎಚ್.ನರಸಿಂಹಮೂರ್ತಿ, ಸ್ಟೆಡ್‌ ಫಾರಂ ಎಂಪ್ಲಾಯಿಸ್‌ ಯೂನಿಯನ್‌ ಸಂಘದ ಅಧ್ಯಕ್ಷ ಶಂಕರ್‌, ಸಹಕಾರ್ಯದರ್ಶಿಗಳಾದ ರಾಮಣ್ಣ, ಕೃಷ್ಣ, ಸದಸ್ಯರಾದ ನಾಗೇಂದ್ರ, ಲಕ್ಷ ್ಮಣ್‌, ಎನ್‌.ಗೋಪಾಲ್, ಲೋಕೇಶ್‌, ಗಿರೀಶ್‌, ಸಿಐಟಿಯುನ ನಸೀಮಾಬಾನು ಇದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next