ಧಾರವಾಡ: ಮಹಾದಾಯಿ ವಿಷಯದಲ್ಲೂ ಕಾಂಗ್ರೆಸ್ ಪಕ್ಷದ ನಿಲುವು ರಾಜ್ಯಕ್ಕೆ ಮಾರಕವಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಜಗದೀಶ ಶೆಟ್ಟರ್ ಹೇಳಿದರು.
ನಗರದಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಅವರು, ಗೋವಾಕ್ಕೆ ಭೇಟಿ ನೀಡಿರುವ ದಿನೇಶ್ ಗುಂಡೂರಾವ್ ಅವರು ಮಹದಾಯಿ ವಿಷಯದಲ್ಲಿ ಗೋವಾ ಪರ ಮಾತನಾಡಿದ್ದಾರೆ. ಈ ಬಗ್ಗೆ ಸಿದ್ದರಾಮಯ್ಯ, ಡಿಕೆ ಶಿವಕುಮಾರ್ ತಮ್ಮ ನಿಲುವು ಸ್ಪಷ್ಟಪಡಿಸಬೇಕು. ದಿನೇಶ ಗುಂಡೂರಾವ್ ರಾಜ್ಯದ ಜನತೆಯಲ್ಲಿ ಕ್ಷಮೆಯಾಚಿಸಬೇಕು ಎಂದರು.
ರಾಜ್ಯದಲ್ಲಿ ಮಹದಾಯಿ ಪರ ಹೋರಾಟ ಮಾಡುವ ಕಾಂಗ್ರೆಸ್ ಪಕ್ಷವು ಗೋವಾದಲ್ಲಿ ರಾಜ್ಯದ ವಿರುದ್ದ ಹೋರಾಟ ಮಾಡುತ್ತಿದೆ. ಇದು ಗೋವಾಕ್ಕೆ ಕುಮ್ಮಕ್ಕು ನೀಡುವಂತಾಗಿದೆ. ಮಹಾದಾಯಿ ವಿಷಯದಲ್ಲಿ ಇಬ್ಬಗೆ ನೀತಿ ಇದೆ. ರಾಜ್ಯದ ಪರ ಸ್ಪಷ್ಟ ನಿಲುವು ಇಲ್ಲ ಎಂದರು.
ಒಂದಾಗಿ ಕೆಲಸ ಮಾಡಿದರೆ ಐದು ನಿಮಿಷದಲ್ಲಿ ಪರಿಹಾರ ಆಗುತ್ತದೆ. ಆದರೆ ಇದು ಕಾಂಗ್ರೆಸನವರಿಗೆ ಬೇಕಾಗಿಲ್ಲ. ಮಹಾದಾಯಿ ಇಷ್ಟು ವಿಳಂಬ, ವಿವಾದ ಆಗಲು ಕಾಂಗ್ರೆಸ್ ನವರೇ ಕಾರಣ ಎಂದರು.
ಬೆಳೆ ಹಾನಿ ಸಮೀಕ್ಷೆ, ಪರಿಹಾರ ವಿತರಣೆ ಮಾಡುವಂತೆ ಅಧಿಕಾರಿಗಳಿಗೆ ಸೂಚನೆ ಕೊಟ್ಟಿದ್ದೇನೆ. ಜಿಲ್ಲೆಯ ಗ್ರಾಮೀಣ ಭಾಗದ ಹಾಗೂ ಅವಳಿ ನಗರದ ರಸ್ತೆಗಳ ದುರಸ್ತಿ ಕಾರ್ಯಕ್ಕೆ ಸೂಚಿಸಿದ್ದೇನೆ ಎಂದರು.
ಬೆಳಗಾವಿ ಲೋಕಸಭಾ ಉಪಚುನಾವಣೆಯಲ್ಲಿ ಅಭ್ಯರ್ಥಿ ಯಾರಾಗಬೇಕೆಂಬ ಬಗ್ಗೆ ಚರ್ಚೆಯೇ ಆಗಿಲ್ಲ. ಚುನಾವಣಾ ಪಟ್ಟಿಯೇ ಬಿಡುಗಡೆ ಆಗಿಲ್ಲ. ಹಾಗಾಗಿ ಅಭ್ಯರ್ಥಿ ಆಯ್ಕೆಯ ಪ್ರಶ್ನೆಯೇ ಉದ್ಬವಿಸದು. ಇನ್ನೂ ಕೋವಿಡ್ ನಿಯಂತ್ರಣಕ್ಕಾಗಿ ಸಾರ್ವಜನಿಕರು ಮುನ್ನೆಚ್ಚರಿಕಾ ಕ್ರಮ ಮರೆಯಬಾರದು ಎಂದರು.