Advertisement

ಪದಾರ್ಪಣೆ ಪಂದ್ಯದಲ್ಲೇ ಗಾಯ: ಕನಸು ನನಸಾದ ಖುಷಿಯಲ್ಲಿಗಾಯದ ನೋವು!

08:46 AM May 15, 2021 | Team Udayavani |

ಯಾವುದೇ ಆಟಗಾರನಾಗಲಿ ಆತನಿಗೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಪದಾರ್ಪಣಾ ಪಂದ್ಯವೆಂದರೆ ಅದು ನಿಜಕ್ಕೂ ಸ್ಮರಣೀಯವಾಗಿರುತ್ತದೆ. ತನ್ನ ದೇಶವನ್ನು ಪ್ರತಿನಿಧಿಸುವ ಅವಕಾಶಕ್ಕಾಗಿ ವರ್ಷಗಳ ಕಾಲ ಕಾದವರು ಆ ಒಂದು ಅವಕಾಶವನ್ನು ಸದುಪಯೋಗ ಪಡಿಸುವ ಯೋಚನೆಯಲ್ಲಿರುತ್ತಾರೆ. ಕ್ರಿಕೆಟ್ ನಲ್ಲಿ ಬ್ಯಾಟ್ಸಮನ್ ಆದರೆ ಶತಕ ಬಾರಿಸಲು, ಬೌಲರ್ ಆದರೆ ಪ್ರಮುಖ ವಿಕೆಟ್ ತೆಗೆಯಲು ಯೋಜನೆ ಮಾಡಿರುತ್ತಾರೆ. ಆದರೆ ಮೊದಲ ಪಂದ್ಯದಲ್ಲೇ ಗಾಯಗೊಂಡರೆ ಆ ಆಟಗಾರ ಭವಿಷ್ಯಕ್ಕೆ ಕಲ್ಲು ಹಾಕಿದಂತೆ. ಇಂತಹ ಐದು ಕ್ರಿಕೆಟ್ ಆಟಗಾರರ ಪರಿಚಯ ಇಲ್ಲಿದೆ.

Advertisement

ಕ್ರೇಗ್ ಓವರ್ಟನ್

ಇಂಗ್ಲೆಂಡ್ ವೇಗಿ ಕ್ರೇಗ್ ಓವರ್ಟನ್ 2017-18ರ ಆ್ಯಶಸ್ ಸರಣಿಯಲ್ಲಿ ಪದಾರ್ಪಣೆ ಮಾಡಿದರು. 6 ಅಡಿ 5 ಇಂಚು ಉದ್ದದ ಈ ಬೌಲರ್ ಉತ್ತಮ ಬೌಲಿಂಗ್ ಮಾಡಿದ್ದರು. ಆದರೆ ಬ್ಯಾಟಿಂಗ್ ಗೆ ಬಂದಾಗ ಮಾತ್ರ ಅದೃಷ್ಟ ಕೆಟ್ಟಿತ್ತು. ಆಸೀಸ್ ವೇಗಿ ಪ್ಯಾಟ್ ಕಮಿನ್ಸ್ ಎಸೆದ ಬೌನ್ಸರ್ ಓವರ್ಟನ್ ಪಕ್ಕೆಲುಬಿಗೆ ತಾಗಿತ್ತು. ಕೂಡಲೇ ಓವರ್ಟನ್ ಮೈದಾನಕ್ಕೆ ಒರಗಿದ್ದರು. ಆದರೆ ಈ ಗಾಯದಿಂದ ಚೇತರಿಸಿಕೊಂಡ ಓವರ್ಟನ್ ಸಂಪೂರ್ಣ ಪಂದ್ಯ ಆಡಿದರು.

ಬಾಯ್ಡ್ ರಾಂಕಿನ್

ತನ್ನ ಕ್ರಿಕೆಟ್ ಕೆರಿಯರ್ ಅನ್ನು ಮೊದಲು ಐರ್ಲೆಂಡ್ ದೇಶದ ಪರವಾಗಿ ಆರಂಭಿಸಿದ ರಾಂಕಿನ್ ನಂತರ ಇಂಗ್ಲೆಂಡ್ ಪರವಾಗಿ ಆಡಿದರು. 2014ರ ಆ್ಯಷಸ್ ನಲ್ಲಿ ಇಂಗ್ಲೆಂಡ್  ಪರವಾಗಿ ಮೊದಲ ಟೆಸ್ಟ್ ಕ್ಯಾಪ್ ಪಡೆದ ರಾಂಕಿನ್ ಮೊದಲ ಪಂದ್ಯದಲ್ಲೇ ಗಾಯಗೊಂಡರು.

Advertisement

ಮೊದಲ ಪಂದ್ಯದ ಮೊದಲ ದಿನ ಬೌಲಿಂಗ್ ಮಾಡುತ್ತಿದ್ದ ರಾಂಕಿನ್ ಮಂಡಿರಜ್ಜು ಗಾಯಕ್ಕೆ ಒಳಗಾದರು, ಎರಡೆರಡು ಸಲ ಮೈದಾನ ತೊರೆದ ರಾಂಕಿನ್ ಹಾಕಿದ್ದು ಕೇವಲ ಎಂಟು ಓವರ್. ಅದಲ್ಲದೇ ರಾಂಕಿನ್ ಪದಾರ್ಪಣೆ ಪಂದ್ಯವೇ ಅವರ ಇಂಗ್ಲೆಂಡ್ ಪರವಾಗಿ ಅಂತಿಮ ಪಂದ್ಯವಾಯಿತು. ನಂತರ ರಾಂಕಿನ್ ಮತ್ತೆ ಐರ್ಲೆಂಡ್ ದೇಶದ ಪರವಾಗಿ ಆಡಿದರು.

ಶಾರ್ದೂಲ್ ಠಾಕೂರ್

ಮೊದಲ ಪಂದ್ಯದಲ್ಲೇ ಗಾಯಗೊಂಡ ಪಟ್ಟಿಗೆ ಇತ್ತೀಚಿನ ಸೇರ್ಪಡೆಯೆಂದರೆ ಭಾರತದ ವೇಗಿ ಶಾರ್ದೂಲ್ ಠಾಕೂರ್. ನಿಗಧಿತ ಓವರ್ ಕ್ರಿಕೆಟ್ ಗೆ ಆಗಲೇ ಪದಾರ್ಪಣೆ ಮಾಡಿದ್ದ ಠಾಕೂರ್ ಟೆಸ್ಟ್ ಆಡುವ ಕನಸಿಗೆ ವೆಸ್ಟ್ ಇಂಡೀಸ್ ವಿರುದ್ದ ಸರಣಿಯಲ್ಲಿ ಅವಕಾಶ ಸಿಕ್ಕಿತ್ತು. ಮೊಹಮ್ಮದ್ ಶಮಿ ಬದಲಿಗೆ ಮೈದಾನಕ್ಕಿಳಿದ ಶಾರ್ದೂಲ್ ಕನಸು ನನಸಾದ ಸಂಭ್ರಮ ಮೊದಲ ದಿನವೇ ನುಚ್ಚುನೂರಾಗಿತ್ತು. ತನ್ನ ಎರಡನೇ ಓವರ್ ಹಾಕುತ್ತಿದ್ದ ಠಾಕೂರ್ ಮಂಡಿರಜ್ಜು ಗಾಯಕ್ಕೆ ಒಳಗಾದರು. ಆಗ ಮೈದಾನ ತೊರೆದ ಠಾಕೂರ್ ಗೆ ಮತ್ತೆ ಟೆಸ್ಟ್ ಕ್ರಿಕೆಟ್ ಆಡುವ ಅವಕಾಶ ಸಿಕ್ಕಿದ್ದು ಕೆಲವು ಸರಣಿಗಳ ಬಳಿಕ.

ಇಮಾಮ್ ಉಲ್ ಹಕ್

ಪಾಕಿಸ್ಥಾನದ ಆರಂಭಿಕ ಆಟಗಾರ ಇಮಾಮ್ ಉಲ್ ಹಕ್ ಟೆಸ್ಟ್ ಪದಾರ್ಪಣೆ ನಾಟಕೀಯವಾಗಿತ್ತು. ತನ್ನ ಮೊದಲ ಟೆಸ್ಟ್ ನ ಮೊದಲ ಎಸೆತದಲ್ಲೇ ಇಮಾಮ್ ಗಾಯಗೊಂಡು ಬಿದ್ದಿದ್ದರು. ನಾನ್ ಸ್ಟ್ರೈಕ್ ನಲ್ಲಿದ್ದ ಇಮಾಮ್ ಸ್ಟ್ರೈಕ್ ನ ಅಜರ್ ಅಲಿಯ ಕರೆಗೆ ಒಂಟಿ ರನ್ ಕದಿಯಲು ಒಡಿದಾಗ ಎದುರಾಳಿ ಐರ್ಲೆಂಡ್ ನೀಲ್ ಒಬ್ರೈನ್ ಜೊತೆಗೆ ಢಿಕ್ಕಿಯಾಗಿ ಬಿದ್ದರು.

ಕೆಲಕಾಲ ಮೈದಾನದದಲ್ಲೇ ಬಿದ್ದಿದ್ದ ಇಮಾಮ್ ಗೆ ಕೂಡಲೇ ವೈದ್ಯಕೀಯ ಚಿಕಿತ್ಸೆ ನೀಡಲಾಯಿತು. ನಂತರ ಎದ್ದು ನಿಂತರೂ ಇಮಾಮ್ ಆಟ ಕೇವಲ ಎಳು ರನ್ ಗೆ ಅಂತ್ಯವಾಯಿತು. ಆದರೆ ದ್ವಿತೀಯ ಇನ್ನಿಂಗ್ಸ್ ನಲ್ಲಿ 74 ರನ್ ಬಾರಿಸಿದ್ದರು.

ಶಿಖರ್ ಧವನ್

ಟೀಂ ಇಂಡಿಯಾ ಆರಂಭಿಕ ಆಟಗಾರ ಶಿಖರ್ ಧವನ್ ರ ಟೆಸ್ಟ್ ಪದಾರ್ಪಣೆ ಭಾರತೀಯರು ಮರೆಯಲು ಅಸಾಧ್ಯ. ಆಸೀಸ್ ವಿರುದ್ಧದ ಮೊಹಾಲಿ ಪಂದ್ಯದಲ್ಲಿ ಪದಾರ್ಪಣೆ ಮಾಡಿದ ಶಿಖರ್ ಭರ್ಜರಿ ಬ್ಯಾಟಿಂಗ್ ಮಾಡಿದ್ದರು. ಮೊದಲ ಇನ್ನಿಂಗ್ಸ್ ನಲ್ಲಿ ಬೊಂಬಾಟ್ ಶತಕ ಬಾರಿಸಿ 187 ರನ್ ನೊಂದಿಗೆ ದಾಖಲೆ ಬರೆದಿದ್ದರು.

ಆದರೆ ಆಸೀಸ್ ನ ದ್ವಿತೀಯ ಇನ್ನಿಂಗ್ಸ್ ನಲ್ಲಿ ಫೀಲ್ಡಿಂಗ್ ಮಾಡುತ್ತಿದ್ದ ಧವನ್ ಗಾಯಗೊಂಡರು. ಕೈ ಬೆರಳನ್ನು ಜಜ್ಜಿಸಿಕೊಂಡಿದ್ದ ಧವನ್ ಮುಂದೆ ಆರು ವಾರಗಳ ಕ್ರಿಕೆಟ್ ಆಡದಂತಾದರು. ಮುಂದೆ ಚಾಂಪಿಯನ್ಸ್ ಟ್ರೋಫಿಯಲ್ಲಿ ಟೀಂ ಇಂಡಿಯಾಗೆ ಕಮ್ ಬ್ಯಾಕ್ ಮಾಡಿದ ಧವನ್ ಕೂಟದ ಸರಣಿ ಶ್ರೇಷ್ಠರಾದರು.

Advertisement

Udayavani is now on Telegram. Click here to join our channel and stay updated with the latest news.

Next