ಮುದ್ದೇಬಿಹಾಳ: ತಾಲೂಕಿನ ಬಿದರಕುಂದಿ ಗ್ರಾಮದ ಭಾವೈಕ್ಯತೆಯ ಜಾತ್ರೆ ಎಂದೇ ಕರೆಯಲ್ಪಡುವ ಶನಿವಾರ ಸಂಜೆ ನಡೆದ ಶ್ರೀ ಸಂಗಮೇಶ್ವರ ಜಾತ್ರಾ ಮಹೋತ್ಸವದಲ್ಲಿ ಅವಘಡವೊಂದು ಸಂಭವಿಸಿದೆ.
ಶ್ರೀ ಸಂಗಮೇಶ್ವರನ ತೇರು ಎಳೆಯುವಾಗ ಯುವಕನೊಬ್ಬ ತೇರಿನ ಮೇಲೆ ಕನ್ನಡ ಚಲನ ಚಿತ್ರ ರಂಗದ ಖ್ಯಾತ ನಾಯಕ ನಟರಾಗಿದ್ದ ಡಾ| ಪುನೀತ್ ರಾಜಕುಮಾರ ಅವರ ಭಾವಚಿತ್ರ ಇಡಲು ಹೋಗಿ ಸಂಭವಿಸಿದ ಅವಘಡದಲ್ಲಿ ಮೂವರು ಯುವಕರು ತೇರಿನ ಚಕ್ರಕ್ಕೆ ಸಿಕ್ಕಿ ಹಾಕಿಕೊಂಡು ಗಾಯಗೊಂಡ ಘಟನೆ ನಡೆದಿದೆ.
ಮಣಿಕಂಠ ಪಾಟೀಲ ಎಂಬಾತ ರಥದ ಮೇಲೆ ಏರಿ ಫೋಟೋ ಇಡುವಾಗ ಕಾಲು ಜಾರಿ ಕೆಳಗಿದ್ದ ಜನರ ಮೇಲೆ ಬಿದ್ದು ಚಕ್ರದಲ್ಲಿ ಸಿಲುಕಿಕೊಂಡಿದ್ದಾನೆ. ಕೆಳಗಿದ್ದ ಆಸೀಫ್ ಗುರಿಕಾರ ಮತ್ತು ಸಂಗಮೇಶ ಬಿರಾದಾರ ಅವರೂ ತೇರಿನ ಚಕ್ರಗಳಿಗೆ ಸಿಕ್ಕಿದ್ದಾರೆ. ಇವರಲ್ಲಿ ಮಣಿಕಂಠ ಮತ್ತು ಆಸೀಫ್ ಕಾಲುಗಳಿಗೆ ಗಂಭೀರ ಗಾಯಗಳಾಗಿವೆ. ಮೂವರನ್ನು ಇಲ್ಲಿನ ತಾಲೂಕು ಸರ್ಕಾರಿ ಆಸ್ಪತ್ರೆಗೆ ಕರೆ ತಂದು ಪ್ರಾಥಮಿಕ ಚಿಕಿತ್ಸೆ ನೀಡಲಾಗಿದೆ.
ಮಣಿಕಂಠ ಮತ್ತು ಆಸೀಫ್ ರನ್ನು ಹೆಚ್ಚಿನ ಚಿಕಿತ್ಸೆಗೆ ಬಾಗಲಕೋಟೆ ಆಸ್ಪತ್ರೆಗೆ ಕಳಿಸಲಾಗಿದೆ. ಸಂಗಮೇಶನಿಗೆ ಸಣ್ಣಪುಟ್ಟ ಗಾಯಗಳಾಗಿದ್ದು ಅವರು ಚೇತರಿಸಿಕೊಂಡಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಗಾಯಗೊಂಡವರು ನೇರವಾಗಿ ಆಸ್ಪತ್ರೆಗೆ ದಾಖಲಾಗಿದ್ದರಿಂದ ಮೆಡಿಕೋ ಲೀಗಲ್ ಕೇಸ್ ದಾಖಲಾಗಿದೆ ಎಂದು ಪೊಲೀಸ್ ಮೂಲಗಳು ಖಚಿತಪಡಿಸಿವೆ.