ರಾಜ್ ಕೋಟ್; ದ್ವಿತೀಯ ಏಕದಿನ ಪಂದ್ಯದ ಬ್ಯಾಟಿಂಗ್ ವೇಳೆ ಶಿಖರ್ ಧವನ್ ಅವರ ಪಕ್ಕೆಲುಬಿಗೆ ಚೆಂಡಿನೇಟು ಬಿದ್ದಿದೆ. ಹೀಗಾಗಿ ಅವರು ಕ್ಷೇತ್ರರಕ್ಷಣೆಗೆ ಇಳಿಯಲಿಲ್ಲ. ಧವನ್ ಬದಲು ಯಜುವೇಂದ್ರ ಚಹಲ್ ಫಿಲ್ಡಿಂಗ್ ನಡೆಸಿದರು.
ಕಾಕತಾಳೀಯವೆಂಬಂತೆ, ಮುಂಬಯಿಯಲ್ಲಿ ರಿಷಭ್ ಪಂತ್ ಅವರಿಗೆ ಬೌನ್ಸರ್ ಎಸೆದು ಏಟು ಮಾಡಿದ ಪ್ಯಾಟ್ ಕಮಿನ್ಸ್ ಅವರೇ ರಾಜ್ ಕೋಟ್ ನಲ್ಲಿ ಧವನ್‌ಗೆ ಕಂಟಕವಾಗಿ ಕಾಡಿದರು.
ಪಂದ್ಯದ 10ನೇ ಓವರಿನಲ್ಲಿ ಇವರೆಸೆದ ಬೌನ್ಸರ್ ವೇಳೆ ಚೆಂಡು ಧವನ್ ಅವರ ಬಲ ಪಕ್ಕೆಲುಬಿಗೆ ಹೋಗಿ ಬಡಿಯಿತು. ಕೂಡಲೇ ವೈದ್ಯಕೀಯ ಚಿಕಿತ್ಸೆ ಪಡೆದರು. ಆದರೆ ನೋವಿನಲ್ಲೇ ಬ್ಯಾಟಿಂಗ್ ಮುಂದುವರಿಸಿದರು. ಔಟಾದ ಬಳಿಕ ಸಿಟಿ ಸ್ಕ್ಯಾನ್ ನಡೆಸಲಾಯಿತು.
ವಿಶ್ವಕಪ್ ವೇಳೆ ಆಸ್ಟ್ರೇಲಿಯ ಎದುರಿನ ಲೀಗ್ ಪಂದ್ಯದಲ್ಲೂ ಧವನ್ ಗಾಯಾಳಾಗಿದ್ದರು. ನಥನ್ ಕೋಲ್ಟರ್ ನೈಲ್ ಅವರ ಎಸೆತವೊಂದಕ್ಕೆ ಕೈಬೆರಳಿನ ಮೂಳೆ ಮುರಿತಕ್ಕೆ ಸಿಲುಕಿ ಕೂಟದಿಂದಲೇ ಬೇರ್ಪಡುವ ಸಂಕಟಕ್ಕೆ ಸಿಲುಕಿದ್ದರು.
ಫೀಲ್ಡಿಂಗ್ ನಡೆಸುವ ವೇಳೆ ರೋಹಿತ್ ಶರ್ಮಾ ಕೂಡಾ ಎಡಗೈಗೆ ಗಾಯ ಮಾಡಿಕೊಂಡಿದ್ದಾರೆ. ಚೆಂಡನ್ನು ತಡೆಯಲು ಡೈವ್ ಹಾಕಿದ ಶರ್ಮಾ ನಂತರ ಎಡಗೈಯನ್ನು ಹಿಡಿದುಕೊಂಡು ನೋವಿನಿಂದ ಮೇಲೆದ್ದರು.
ಯಾವುದೇ ಗಂಭೀರ ಪ್ರಮಾಣದ ಗಾಯವಾಗಿಲ್ಲ ಎಂದು ವಿರಾಟ್ ಕೊಹ್ಲಿ ಪಂದ್ಯದ ನಂತರ ತಿಳಿಸಿದ್ದು, ಮುಂದಿನ ಪಂದ್ಯಕ್ಕೆ ರೋಹಿತ್ ಲಭ್ಯವಾಗುವ ನಿರೀಕ್ಷೆಯಿದೆ.