ಕೆ.ಆರ್.ಪುರ: ಮನೆ ಮಹಡಿ ಮೇಲೆ ಆಟವಾಡುತ್ತಿದ್ದ ಮಕ್ಕಳು ಹೈಟೆನ್ಷನ್ ತಂತಿ ತಗುಲಿ ಗಂಭೀರವಾಗಿ ಗಾಯಗೊಂಡ ಘಟನೆ ಕೆ.ಆರ್.ಪುರ ಪೊಸ್ ಠಾಣೆ ವ್ಯಾಪ್ತಿಯ ತ್ರಿವೇಣಿನಗರದಲ್ಲಿ ನಡೆದಿದೆ. ಸೈಯದ್ ಇರ್ಫಾನ್ ಮಾಝ್ (11) ಹಾಗೂ ಆರಿಫಾ (15) ಗಾಯಗೊಂಡ ಮಕ್ಕಳು. ಘಟನೆ ವೇಳೆ ಹಲವು ಮನೆಗಳಲ್ಲಿ ಶಾರ್ಟ್ ಸರ್ಕಿಟ್‌ನಿಂದಾಗಿ ಎಲೆಕ್ಟ್ರಾನಿಕ್ ವಸ್ತುಗಳು ಹಾನಿಗೀಡಾಗಿವೆ.
ದೇವಸಂದ್ರ ವಾರ್ಡ್‌ನ ತ್ರಿವೇಣಿನಗರದ ರಾಜಣ್ಣ ಎಂಬವರಿಗೆ ಸೇರಿದ ಕಟ್ಟಡದಲ್ಲಿ ಘಟನೆ ಸಂಭವಿಸಿದೆ. ರಾಜಣ್ಣ ಅವರ ಕಟ್ಟಡದಲ್ಲಿನ ಬಾಡಿಗೆ ಮನೆಯೊಂದರಲ್ಲಿ ಆರಿಫಾ ಕುಟುಂಬ ವಾಸವಿತ್ತು. ಬಾಲಕ ಸೈಯದ್ ಇರ್ಫಾನ್ ಕುಟುಂಬ ಪಕ್ಕದ ಮನೆಯಲ್ಲಿ ವಾಸವಿದೆ. ಶನಿವಾರ ಸಂಜೆ 4 ಗಂಟೆಗೆ ಇಬ್ಬರೂ ಕೂಡಿ ಆರಿಫಾಳ ಮನೆಯ ಮಹಡಿ ಮೇಲೆ ಆಟವಾಡಲು ತೆರಳಿದ್ದಾರೆ.
ಈ ವೇಳೆ ಮನೆ ಮೇಲೆ ಕೈಟುಕುವ ಅಂತರದಲ್ಲಿ ಹಾದುಹೋಗಿರುವ ಹೈಟೆನ್ಷನ್ ತಂತಿಯನ್ನು ಮುಟ್ಟಿದ ಪರಿಣಾಮ ಇಬ್ಬರಿಗೂ ಶಾಕ್ ಹೊಡೆದಿದೆ. ಶಾಕ್ ಹೊಡೆದ ರಭಸಕ್ಕೆ ಬಾಲಕ ಸೈಯದ್ ಇರ್ಫಾನ್ ಮಹಡಿಯಿಂದ ಕೆಳಗೆ ಬಿದ್ದಿದ್ದಾನೆ. ಆರಿಫಾಳ ದೇಶ ಶೇ.50ರಷ್ಟು ಸುಟ್ಟುಹೋಗಿದ್ದು, ಇಬ್ಬರ ಸ್ಥಿತಿಯೂ ಚಿಂತಾಜನಕವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ನಿಯಲಮ ಉಲ್ಲಂಘಿಸಿ ಕಟ್ಟಡ ನಿರ್ಮಾಣ: ದೇವಸಂದ್ರ ವಾರ್ಡ್‌ನ ತ್ರಿವೇಣಿನಗರದಲ್ಲಿ 2011ರಲ್ಲಿ ಕಟ್ಟಡ ನಿರ್ಮಿಸಿರುವ ರಾಜಣ್ಣ ಅಪಾಯದ ಅರಿವಿದ್ದರೂ ಹೈಟೆನ್ಷನ್ ತಂತಿಗಳ ಕೆಳಗೇ ಕಟ್ಟಡ ನಿರ್ಮಿಸಿಸುವ ಮೂಲಕ ಕಾನೂನು ಉಲ್ಲಂಘಿಸಿದ್ದಾರೆ. ಆದರೆ ಈ ಬಗ್ಗೆ ಬಿಬಿಎಂಪಿ, ಬೆಸ್ಕಾಂ ಅಧಿಕಾರಿಗಳು ಗಮನಹರಿಸಿಲ್ಲ. ಅಲ್ಲದೆ ಕಟ್ಟಡ ಮಾಲೀಕರ ವಿರುದ್ಧ ಕ್ರಮ ಕೈಗೊಂಡಿಲ್ಲ. ಮನೆ ಮಾಲೀಕ ರಾಜಣ್ಣ ಹಾಗೂ ಬಿಬಿಎಂಪಿ, ಬೆಸ್ಕಾಂ ಅಧಿಕಾರಿಗಳ ಬೇಜವಾಬ್ದಾರಿಯಿಂದಲೇ ಈ ಅವಘಡ ಸಂಭವಿಸಿದೆ ಎಂದು ಸ್ಥಳೀಯ ನಿವಾಸಿಗಳು ಆರೋಪಿಸಿದ್ದಾರೆ. ಕೆ.ಆರ್.ಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಂಡಿದ್ದಾರೆ.
ಆಸ್ಪತ್ರೆಗೆ ಕರೆದೊಯ್ಯಲು ಪರದಾಟ: ಘಟನೆ ಸಂಭವಿಸಿದ ಬಳಿಕ ಗಾಯಾಳು ಮಕ್ಕಳನ್ನು ಆಸ್ಪತ್ರೆಗೆ ಕರೆದೊಯ್ಯಲು ಸ್ಥಳೀಯರು ಹರಸಾಹಸ ಪಟ್ಟರು. ಘಟನೆ ನಡೆದ ತಕ್ಷಣವೇ “108’ಕ್ಕೆ ಕರೆ ಮಾಡಿದರೂ ಸಮಯಕ್ಕೆ ಸರಿಯಾಗಿ ಆ್ಯಂಬುಲೆನ್ಸ್ ಬರಲಿಲ್ಲ. ಹೀಗಾಗಿ ಸೈಯದ್ ಇರ್ಪಾನ್‌ನನ್ನು ಬೈಕ್‌ನಲ್ಲೇ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆರಿಫಾಳನ್ನು ಕೆಇಬಿ ವಾಹನದಲ್ಲಿ ಸರ್ಕಾರಿ ಆಸ್ಪತ್ರೆಗೆ ಕರೆದೊಯ್ದು ಪ್ರಥಮ ಚಿಕಿತ್ಸೆ ಕೊಡಿಸಿದ ಬಳಿಕ ಹೆಚ್ಚಿನ ಚಿಕಿತ್ಸೆಗೆ ವಿಕೋrರಿಯಾ ಆಸ್ಪತ್ರೆಗೆ ದಾಖಲಿಸಲಾಯಿತು.
“ಉದಯವಾಣಿ’ ಮೊದಲೇ ಎಚ್ಚರಿಸಿತ್ತು: ದೇವಸಂದ್ರ ವಾರ್ಡ್‌ನ ತ್ರಿವೇಣಿನಗರದ ವಸತಿ ಪ್ರದೇಶದಲ್ಲಿ ಹೈಟೆನ್ಷನ್ ತಂತಿಗಳು ಕೈಗೆಟುಕುವ ಮಟ್ಟದಲ್ಲಿರುವುದು, ಜತೆಗೆ ನಿಯಮ ಉಲ್ಲಂ ಸಿ ಹೈಟೆನ್ಷನ್ ತಂತಿಗಳ ಕೆಳಗೇ ಮನೆಗಳನ್ನು ನಿರ್ಮಿಸಿರುವುದು ಹಾಗೂ ಅದರಿಂದ ಈ ಹಿಂದೆ ಸಂಭವಿಸಿರುವ ಅಪಾಯಗಳ ಕುರಿತು 2019ರ ಏ.26ರಂದು “ಹೈಟೆನ್ಷನ್ ತಂತಿಗಳ ಕೆಳಗೆ ಅಪಾಯದ ಬದುಕು’ ಎಂಬ ಶೀರ್ಷಿಕೆಯಡಿ ವರದಿ
“ಉದಯವಾಣಿ’ ವರದಿ ಪ್ರಕಟಿಸಿ, ಸಂಬಂಧಿಸಿದ ಇಲಾಖೆ, ಪಾಲಿಕೆಯನ್ನು ಎಚ್ಚರಿಸುವ ಕೆಲಸ ಮಾಡಿತ್ತು. ಆದರೂ, ಅಧಿಕಾರಿಗಳು, ಜನಪ್ರತಿನಿದಿಗಳು ಆ ಬಗ್ಗೆ ಗಮನಹರಿಸಿಲ್ಲ.