ಬೆಂಗಳೂರು: ಏಷ್ಯ ಕಪ್ ಪಂದ್ಯಾವಳಿಯಲ್ಲಿ ಪಾಲ್ಗೊಳ್ಳಲಿರುವ ಭಾರತೀಯ ಹಾಕಿ ತಂಡಕ್ಕೆ ದೊಡ್ಡದೊಂದು ಹಿನ್ನಡೆಯಾಗಿದೆ. ನಾಯಕ ರೂಪಿಂದರ್ ಪಾಲ್ ಸಿಂಗ್ ಗಾಯಾಳಾಗಿ ತಂಡದಿಂದ ಬೇರ್ಪಟ್ಟಿದ್ದಾರೆ.
ಉಪನಾಯಕ ಬೀರೇಂದ್ರ ಲಾಕ್ರಾ ಅವರಿಗೆ ತಂಡದ ಸಾರಥ್ಯ ವಹಿಸಲಾಗಿದೆ. ಸ್ಟ್ರೈಕರ್ ಎಸ್.ವಿ. ಸುನೀಲ್ ನೂತನ ಉಪನಾಯಕರಾಗಿದ್ದಾರೆ.
ಡ್ರ್ಯಾಗ್ ಫ್ಲಿಕರ್ ರೂಪಿಂದರ್ ಪಾಲ್ ಅಭ್ಯಾಸದ ವೇಳೆ ಮಣಿಗಂಟಿನ ಗಾಯಕ್ಕೆ ಸಿಲುಕಿದ್ದರು. ಇವರ ಸ್ಥಾನಕ್ಕೆ ನೀಲಂ ಸಂಜೀಪ್ ಕ್ಸೆಸ್ ಅವರನ್ನು ಸೇರಿಸಿಕೊಳ್ಳಲಾಗಿದೆ.
ಏಷ್ಯ ಕಪ್ ಹಾಕಿ ಪಂದ್ಯಾವಳಿ ಮೇ 23ರಂದು ಜಕಾರ್ತಾದಲ್ಲಿ ಆರಂಭ ಗೊಳ್ಳಲಿದೆ. ಭಾರತ ಹಾಲಿ ಚಾಂಪಿಯನ್ ಆಗಿದ್ದು, ಪ್ರಶಸ್ತಿ ಉಳಿಸಿಕೊಳ್ಳಲು ಭಾರೀ ಹೋರಾಟ ನಡೆಸಬೇಕಿದೆ.
“ರೂಪಿಂದರ್ ಗಾಯಾಳಾಗಿ ಪಂದ್ಯಾವಳಿಯಿಂದ ಬೇರ್ಪಟ್ಟಿದ್ದು ದುರ ದೃಷ್ಟಕರ ಸಂಗತಿ. ಆದರೆ ಅನುಭವಿಗಳಾದ ಬೀರೇಂದ್ರ ಲಾಕ್ರಾ ಮತ್ತು ಎಸ್.ವಿ. ಸುನೀಲ್ ಪರಿಸ್ಥಿತಿಯನ್ನು ನಿಭಾಯಿಸಬಲ್ಲ ನಂಬಿಕೆ ಇದೆ. ಇಬ್ಬರಲ್ಲೂ ನಾಯಕತ್ವದ ಗುಣಗಳಿವೆ’ ಎಂದು ಕೋಚ್ ಬಿ.ಜೆ. ಕಾರ್ಯಪ್ಪ ಪ್ರತಿಕ್ರಿಯಿಸಿದ್ದಾರೆ.
“ನಮ್ಮ ತಂಡ ವೈವಿಧ್ಯಮಯವಾಗಿದೆ. ರೂಪಿಂದರ್ ಸಿಗದೇ ಹೋದರೂ ಈ ಸ್ಥಾನ ತುಂಬಬಲ್ಲ ಸಾಕಷ್ಟು ಪ್ರತಿಭಾನ್ವಿತ ಆಟಗಾರರು ತಂಡದಲ್ಲಿದ್ದಾರೆ. ಇವರೆಲ್ಲ ಈ ಅವಕಾಶವನ್ನು ಬಳಸಿಕೊಳ್ಳುವರೆಂಬ ನಂಬಿಕೆ ನಮ್ಮದು’ ಎಂದು ಕಾರ್ಯಪ್ಪ ಹೇಳಿದರು.