ಚಾಮರಾಜನಗರ/ಕೊಳ್ಳೇಗಾಲ: ತಾಲೂಕಿನ ಮಧುವನಹಳ್ಳಿ ಸಮೀಪ ಜಮೀನಿಗೆ ನುಗ್ಗಿದ್ದ ಕಾಡಾನೆಗಳನ್ನು ಓಡಿಸುವ ಕಾರ್ಯಾಚರಣೆ ಸಂದರ್ಭದಲ್ಲಿ ಅರಣ್ಯ ಇಲಾಖೆ ಸಿಬ್ಬಂದಿ ಡಬಲ್ ಬ್ಯಾರೆಲ್ ಗನ್‌ನಿಂದ ಶೂಟ್ ಮಾಡಿದಾಗ ಸಣ್ಣ, ಸಣ್ಣ ಗುಂಡುಗಳು (ಪೆಲ್ಲೆಟ್ಸ್) ತಗುಲಿ ಆರು ಮಂದಿಗೆ ಗಾಯಗಳಾಗಿದೆ. ಸಿದ್ದಾರ್ಥ (20), ರಾಜಶೇಖರ್ (22) ಸುಜಿತ್ (15) ರಘುವೀರ್ (21) ದರ್ಶನ್ (17) ಪ್ರವೀಣ್ (18) ಗಾಯಗೊಂಡವರು. ಕೊಳ್ಳೇಗಾಲ ತಾಲೂಕಿನ ಚಿಕ್ಕಲ್ಲೂರು ಅರಣ್ಯ ಪ್ರದೇಶದಿಂದ ಬಂದ ಕಾಡಾನೆಗಳು ಮಧುವನಹಳ್ಳಿ ಗ್ರಾಮದ ಸುಬ್ಬಶೆಟ್ಟಿ ಮತ್ತು ಹೊಂಗಶೆಟ್ಟಿ ಎಂಬುವರ ಕಬ್ಬಿನ ಗದ್ದೆ ಮೇಲೆ ಬುಧವಾರ ದಾಳಿ ನಡೆಸಿ, ಕಬ್ಬಿನ ಫಸಲನ್ನು ನಾಶಪಡಿಸಿವೆ.
ಗುಂಪಿನಲ್ಲಿ ಎರಡು ಮರಿಯಾನೆ ಸೇರಿ ಆರು ಆನೆಗಳಿದ್ದವು. ಗ್ರಾಮಸ್ಥರು ಅರಣ್ಯಾಧಿಕಾರಿ ಗಳಿಗೆ ವಿಷಯ ತಿಳಿಸಿದಾಗ ಸ್ಥಳಕ್ಕೆ ಉಪ ಅರಣ್ಯ ಸಂರಕ್ಷಣಾಧಿಕಾರಿ ಏಡುಕೊಂಡಲು, ಆರ್‌ಎಫ್ಒಗಳಾದ ಧನುಷ್, ಮಹದೇವ ಸ್ವಾಮಿ, ಡಿಆರ್ ಎಫ್ಒ ಬೋಜಪ್ಪ ಮತ್ತು ಬಿಆರ್‌ಟಿ ಹಾಗೂ ಮಲೆ ಮಹದೇಶ್ವರ ವನ್ಯಜೀವಿ ಸಿಬ್ಬಂದಿ ಆಗಮಿಸಿದರು. ಕಬ್ಬಿನ ಗದ್ದೆಯ ಮಧ್ಯಭಾಗದಲ್ಲಿ ಆನೆಗಳ ಹಿಂಡು ಬೀಡುಬಿಟ್ಟಿದ್ದು, ಬೇರೆಡೆಗೆ ಓಡಿಸಲು ಅಧಿಕಾರಿಗಳು ಮತ್ತು ಗ್ರಾಮಸ್ಥರು ಹರಸಾಹಸ ಪಟ್ಟರು. ಆದರೂ ಜಗ್ಗದೆ ಆನೆಗಳು ಕಬ್ಬಿನ ಗದ್ದೆಯಲ್ಲೆ ಬೀಡುಬಿಟ್ಟವು. ಒಂದೆಡೆ ಗ್ರಾಮಸ್ಥರು ನೂರಾರು ಸಂಖ್ಯೆಯಲ್ಲಿ ಜಮಾಯಿಸಿ ಆನೆಗಳತ್ತ ಕಲ್ಲು ತೂರಲಾರಂಭಿಸಿದರು.
ಮತ್ತೂಂದೆಡೆ, ಅರಣ್ಯಾಧಿಕಾರಿಗಳು ಸುಮಾರು 10 ರಿಂದ 12 ಬಾರಿ ಗುಂಡು ಮತ್ತು ಪಟಾಕಿ ಸಿಡಿಸಿದರು. ಇದಕ್ಕೂ ಆನೆಗಳು ಜಗ್ಗದಿದ್ದಾಗ ಡಬಲ್ ಬ್ಯಾರೆಲ್ ಗನ್‌ನಿಂದ ಶೂಟ್ ಮಾಡಿದರು. ಈ ಸಂದರ್ಭದಲ್ಲಿ ಕಾಡತೂಸಿನೊಳಗಿರುವ ಪೆಲೆಟ್ಸ್ (ಸಣ್ಣ ಗುಂಡುಗಳು) ಆನೆಗಳನ್ನು ನೋಡಲು ಮರದ ಮೇಲೆ ಕುಳಿತಿದ್ದ 6 ಮಂದಿ ಯುವಕರಿಗೆ ತಗುಲಿವೆ. ಯುವಕರ ಹೊಟ್ಟೆ, ಕೈ, ಕತ್ತಿನ ಕೆಳಬಾಗ, ಎದೆ ಭಾಗ ಸೇರಿದಂತೆ ಹಲವೆಡೆ ತಗುಲಿದ ಪರಿಣಾಮ ಗಾಯಗಳಾಗಿವೆ. ತಕ್ಷಣವೆ ಅರಣ್ಯಾಧಿಕಾರಿಗಳು ಯುವಕರನ್ನು ಕೊಳ್ಳೇಗಾಲ ಸಾರ್ವಜನಿಕ ಆಸ್ಪತ್ರೆಗೆ ಕರೆ ತಂದು ಚಿಕಿತ್ಸೆ ಕೊಡಿಸಿದರು. ಇಬ್ಬರು ಅಪಾಯದಿಂದ ಪಾರಾಗಿದ್ದು, ನಾಲ್ವರನ್ನು ಹೆಚ್ಚಿನ
ಚಿಕಿತ್ಸೆಗಾಗಿ ಮೈಸೂರಿನ ಕೆ.ಆರ್.ಆಸ್ಪತ್ರೆಗೆ ದಾಖಲಿಸಲಾಗಿದೆ.
ನಾಗರಿಕರು ಹಾಗೂ ನಮ್ಮ ಸಿಬ್ಬಂದಿಯತ್ತ ನುಗ್ಗಿ ಬರುತ್ತಿದ್ದ ಕಾಡಾನೆಗಳಿಂದ ಪ್ರಾಣ ರಕ್ಷಣೆಗಾಗಿ ಶೂಟ್ ಮಾಡಲಾಯಿತು. ಇದರಿಂದ ಮರದ ಮೇಲೆ ಕುಳಿತಿದ್ದ ಆರು ಮಂದಿಗೆ ಪೆಲೆಟ್ಸ್ ತಗುಲಿದೆ. ಇಬ್ಬರಿಗೆ ಯಾವುದೇ ತೊಂದರೆ ಇಲ್ಲ. ನಾಲ್ಕು ಮಂದಿಯನ್ನು ಎಕ್ಸ್ ರೇ ಹಾಗೂ ಇನ್ನಿತರ ತಪಾಸಣೆಗಾಗಿ ಕೆ.ಆರ್. ಆಸ್ಪತ್ರೆಗೆ ಕಳುಹಿಸಲಾಗಿದೆ. ಯಾವುದೇ ಅಪಾಯವಾಗಿಲ್ಲ..
● ಏಡುಕೊಂಡಲು, ಡಿಸಿಎಫ್, ಮಹದೇಶ್ವರ ವನ್ಯಜೀವಿ ಧಾಮ.