Advertisement

Gram Panchayat ಪ್ರತ್ಯೇಕ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ಆದೇಶಕ್ಕೆ ತಡೆಯಾಜ್ಞೆ

01:04 AM Aug 30, 2023 | Team Udayavani |

ಉಪ್ಪಿನಂಗಡಿ: ಗ್ರಾ.ಪಂ.ಗಳಲ್ಲಿ ಪ್ರತ್ಯೇಕ ಕೃಷಿ ಪತ್ತಿನ ಸಹಕಾರಿ ಸಂಘ ಸ್ಥಾಪನೆ ಮಾಡಬೇಕು ಎಂದು ಸರಕಾರ ಹೊರಡಿಸಿರುವ ಆದೇಶಕ್ಕೆ ರಾಜ್ಯ ಹೈಕೋರ್ಟ್‌ ತಡೆಯಾಜ್ಞೆ ನೀಡಿದೆ.

Advertisement

ಉಡುಪಿ 18 ಸಹಕಾರಿ ಸಂಘಗಳು ಸೇರಿದಂತೆ ದಕ್ಷಿಣ ಕನ್ನಡ ಜಿಲ್ಲೆಯ ಕೆಲವು ಸಹಕಾರಿ ಸಂಘಗಳು ಸರಕಾರದ ಆದೇಶವನ್ನು ಪ್ರಶ್ನಿಸಿ ಹೈಕೋರ್ಟ್‌ ಮೆಟ್ಟಿಲೇರಿದ್ದವು. ಅರ್ಜಿ ವಿಚಾರಣೆ ನಡೆಸಿದ ನ್ಯಾಯಾಲಯವು ಆಯಾ ಸಹಕಾರಿ ಸಂಸ್ಥೆಗಳಿಗೆ ಅನ್ವಯವಾಗುವಂತೆ (ನ್ಯಾಯಾಲಯದ ಮೆಟ್ಟಿಲೇರಿರುವ ಸಂಸ್ಥೆಗಳಿಗೆ) ತಡೆಯಾಜ್ಞೆ ನೀಡಿದೆ.

ನ್ಯಾಯಾಲಯದ ಮೆಟ್ಟಿಲೇರಿ ರುವ ಸಹಕಾರಿ ಸಂಘಗಳಿಗೆ ಸರಕಾರದ ಆದೇಶ ಅನ್ವಯಿಸದಂತೆ ತಡೆಯಾಜ್ಞೆ ಬಂದಿದೆ. ಹೀಗಾಗಿ ಮತ್ತಷ್ಟು ಸಂಘಗಳು ನ್ಯಾಯಾಲಯದ ಮೆಟ್ಟಿಲುಏರಲಿವೆ ಎಂದು ಉಡುಪಿ ಜಿಲ್ಲಾ
ಸಹಕಾರಿ ಯೂನಿಯನ್‌ ಅಧ್ಯಕ್ಷ ಜಯಕರ ಶೆಟ್ಟಿ ಇಂದ್ರಾಳಿ ತಿಳಿಸಿದರು.

ಮೈಸೂರು ಪ್ರಾಂತ ಕಚೇರಿಯ ಸಹಕಾರ ಸಂಘಗಳ ಜಂಟಿ ನಿರ್ದೇಶಕರು ಜು. 28ರಂದು ಆದೇಶಿಸಿ ಅವಿಭಜಿತ ದ.ಕ. ಜಿಲ್ಲೆ ಯನ್ನು ಒಳಗೊಂಡಂತೆ 8 ಜಿಲ್ಲೆಗಳ 646 ಗ್ರಾ.ಪಂ.ಗಳ ವ್ಯಾಪ್ತಿಯಲ್ಲಿ ಪ್ರತ್ಯೇಕ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳನ್ನು ರಚಿಸಲು ಸೂಚಿಸಿತ್ತು.

ಈ ಆದೇಶ ರದ್ದು ಪಡಿಸುವಂತೆ ಕೋರಿ ಉಪ್ಪಿನಂಗಡಿ ಸಹಕಾರಿ ವ್ಯಾವಸಾಯಿಕ ಸಂಘ ಸಹಿತ ಹಲವು ಸಂಘಗಳು ನ್ಯಾಯಾಲಯದಲ್ಲಿ ರಿಟ್‌ ಅರ್ಜಿ ಸಲ್ಲಿಸಿದ್ದವು. ನ್ಯಾಯಾಲಯವು ಅರ್ಜಿ ವಿಚಾರಣೆ ನಡೆಸಿ ಸರಕಾರದ ಆದೇಶಕ್ಕೆ ತಡೆಯಾಜ್ಞೆ ನೀಡಿದೆ ಎಂದು ಉಪ್ಪಿನಂಗಡಿ ಸಹಕಾರಿ ವ್ಯಾವಸಾಯಿಕ ಸಂಘದ ಅಧ್ಯಕ್ಷ ಕೆ.ವಿ. ಪ್ರಸಾದ್‌ ತಿಳಿಸಿದ್ದಾರೆ.

Advertisement

ಸರಕಾರದ ಆದೇಶದಲ್ಲಿ ಏನಿತ್ತು?
ಪ್ರಸ್ತುತ ಕಾರ್ಯನಿರ್ವಹಿಸುತ್ತಿರುವ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳು ಪ್ರಧಾನ ಕಚೇರಿ ಹೊಂದಿರುವ ಗ್ರಾ.ಪಂ. ಹೊರತುಪಡಿಸಿ ಶಾಖಾ ಕಚೇರಿ ಹೊಂದಿರುವ ಗ್ರಾ.ಪಂ.ಗಳಿಂದ ಆ. 25ರೊಳಗೆ ಹೊರಬರಬೇಕು. ಗ್ರಾಮವಾರು ನೂತನ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳ ರಚನೆಯ ಸಂಬಂಧ ಷೇರು ಸಂಗ್ರಹಣೆಗೆ ಪ್ರಸ್ತಾವನೆ ಪಡೆದು ಅನುಮತಿ ನೀಡಲು ಸೆ. 6ರವರೆಗೂ ಕಾಲಾವಕಾಶ ನೀಡಲಾಗಿದೆ. ನೋಂದಣಿ ಸಂಬಂಧ ಪ್ರಸ್ತಾವೆಯನ್ನು ಪಡೆದು ಸಂಘವನ್ನು ನೋಂದಾಯಿಸಲು ಸೆ. 16 ಕೊನೆಯದಿನವಾಗಿತ್ತು ಮತ್ತು ನೂತನವಾಗಿ ರಚನೆಯಾದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳ ಆಡಳಿತ ಮಂಡಳಿಯನ್ನು ರಚಿಸಲು ಅ. 31ರ ವರೆಗೂ ಗಡವು ನೀಡಿ ಸರಕಾರ ಆದೇಶಿಸಿತ್ತು. ಸದ್ಯ ಈ ಆದೇಶಕ್ಕೆ ನ್ಯಾಯಾಲಯ ತಡೆ ನೀಡಿರುವುದರಿಂದ ಮುಂದೇನಾಗಲಿದೆ ಎಂದು ಕಾದು ನೋಡಬೇಕಿದೆ.

Advertisement

Udayavani is now on Telegram. Click here to join our channel and stay updated with the latest news.

Next