ಬೆಳ್ತಂಗಡಿ: ಕೋವಿಡ್ ವೈರಸ್‌ನಿಂದಾಗಿ ಸರಕಾರಿ ಆಸ್ಪತ್ರೆ, ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಮಕ್ಕಳಿಗೆ ವಿವಿಧ ಹಂತಗಳಲ್ಲಿ ಚುಚ್ಚುಮದ್ದು ನೀಡುವ ವ್ಯವಸ್ಥೆಗೆ ತಾತ್ಕಾಲಿಕ ನಿರ್ಬಂಧ ಹೇರಲಾಗಿತ್ತು. ಜಿಲ್ಲೆಯಾದ್ಯಂತ ಹೆತ್ತವರು ದುಬಾರಿ ದರ ತೆತ್ತು ಖಾಸಗಿ ಆಸ್ಪತ್ರೆಗಳನ್ನು ಅವಲಂಬಿಸುವ ಅನಿವಾರ್ಯತೆ ಎದುರಾಗಿದ್ದರಿಂದ ನವಜಾತ ಶಿಶುಗಳಿಗೆ ಸರಕಾರಿ ಆಸ್ಪತ್ರೆಗಳಲ್ಲೇ ಚುಚ್ಚುಮದ್ದು ನೀಡಲಾಗುತ್ತಿದೆ.
ಚುಚ್ಚುಮದ್ದು ಒಂದು ತಿಂಗಳ ಅಂತರದಲ್ಲಿ ನೀಡಬಹುದಾಗಿದ್ದರೂ ಗ್ರಾಮೀಣ ಭಾಗದ ಜನರು ಮಾಹಿತಿ ಕೊರತೆಯಿಂದ ಖಾಸಗಿ ವೈದ್ಯರ ಬಳಿ ತೆರಳುತ್ತಿದ್ದಾರೆ. ಪರಿಸ್ಥಿತಿ ಲಾಭ ಪಡೆದು ದುಬಾರಿ ಮೊತ್ತಕ್ಕೆ ಚುಚ್ಚುಮದ್ದು ನೀಡುತ್ತಿರುವ ಆರೋಪ ವ್ಯಕ್ತವಾಗಿದೆ.
ಮಗು ಹುಟ್ಟಿದ 24 ಗಂಟೆಯೊಳಗೆ ಬಿಸಿಜಿ (0.05 ಎಂಎಲ್), ಹೆಪಟೈಟಿಸ್ ಬಿ (0.5 ಎಂಎಲ್) ಆಸ್ಪತ್ರೆಯಲ್ಲೇ ನೀಡಲಾಗುತ್ತಿದೆ. ಬಳಿಕ ವಿವಿಧ ಹಂತಗಳಲ್ಲಿ ಆ್ಯಂಟಿಮೈಕ್ರೋ ಬ್ಯಾಕ್ಟೀರಿಯಾ, ಪೆಪ್ಟೀರಿಯಾ ಹಾಗೂ ಇತರೆ ಲಸಿಕೆ ನೀಡಬೇಕು. ಸರಕಾರಿ ಆಸ್ಪತ್ರೆಯಲ್ಲಿ ಇವುಗಳು ಉಚಿತವಾಗಿವೆ. 15 ದಿನಗಳ ಹಸುಗೂಸಿಗೆ ಒಪಿವಿ ಸಿಂಗಲ್ ಡ್ರಾಪ್, 6ರಿಂದ 14 ವಾರಗಳ ಮಗುವಿಗೆ ಪೆಂಟಾವಾಲೆಂಟ್ 1.2.3 (0.5ಎಂಲ್) ಚುಚ್ಚುಮದ್ದು, 9 ತಿಂಗಳ ಮಗುವಿಗೆ ಮೀಸೆಲ್ಸ್ (0.5 ಎಂಎಲ್), 14 ತಿಂಗಳ ಮಗುವಿಗೆ ಒಪಿವಿ ಡಬಲ್ ಡ್ರಾಪ್ ಮತ್ತು ಮೊದಲ ಹಂತದ ಡಿಪಿಟಿ ಚುಚ್ಚುಮದ್ದು, 5 ವರ್ಷದ ಮಗುವಿಗೆ 2ನೇ ಹಂತದ ಡಿಪಿಟಿ ಚುಚ್ಚುಮದ್ದು ನೀಡಬೇಕು. ಇವು ಸರಕಾರಿ ಆಸ್ಪತ್ರೆಯಲ್ಲಿ ಉಚಿತವಾಗಿ ಲಭ್ಯ. ಆದರೆ, ಸದ್ಯ ಸರಕಾರಿ ಆಸ್ಪತ್ರೆಗಳಲ್ಲಿ ಚುಚ್ಚುಮದ್ದು ಹಾಗೂ ಲಸಿಕೆ ನೀಡುವುದನ್ನು ನಿಲ್ಲಿಸಿದ್ದರಿಂದ ಖಾಸಗಿ ಆಸ್ಪತ್ರೆ, ಕ್ಲಿನಿಕ್‌ಗಳು 2ರಿಂದ 4 ಸಾವಿರ ರೂ. ಪಡೆದು ಚುಚ್ಚುಮದ್ದು ನೀಡುತ್ತಿದ್ದಾರೆ ಎನ್ನುವ ಆರೋಪ ಹೆತ್ತವರಿಂದ ಕೇಳಿಬಂದಿದೆ.
ಸದ್ಯ ಪರಿಸ್ಥಿತಿ ಮನಗಂಡು ಗರ್ಭಿಣಿಯರಿಗೆ ನೀಡುವ (ಖಛ), ನವಜಾತ ಶಿಶುಗಳಿಗೆ (ಹೆರಿಗೆ ಬಳಿಕ) ಬಿಸಿಜಿ, ಓರಲ್ ಪೋಲಿಯೋ ಹನಿ, ಹೆಪಟೈಟಿಸ್ ಬಿ. ಇವುಗಳನ್ನು ಸರಕಾರಿ ಆಸ್ಪತ್ರೆಯಲ್ಲೇ ನೀಡಲು ಸೂಚಿಸಲಾಗಿದೆ. ಪ್ರತಿ ಗುರುವಾರ ಸರಕಾರಿ ಆಸ್ಪತ್ರೆಗಳಲ್ಲಿ ಹಾಗೂ ಅಂಗನವಾಡಿಗಳಲ್ಲಿ ನಡೆಸುತ್ತಿದ್ದ ಲಸಿಕಾ ಶಿಬಿರವನ್ನು ತಾತ್ಕಾಲಿಕವಾಗಿ ಮುಂದೂಡಲಾಗಿದೆ.
ತಿಂಗಳಿಗೆ ಸರಾಸರಿ 2,500 ಶಿಶು ಜನನ
ಜಿಲ್ಲೆಯಲ್ಲಿ ಒಟ್ಟು 66 ಪ್ರಾಥಮಿಕ ಆರೋಗ್ಯ ಕೇಂದ್ರ, 12 ನಗರ ಪ್ರಾಥಮಿಕ ಆರೋಗ್ಯ, 6 ಸಮುದಾಯ ಆರೋಗ್ಯ ಕೇಂದ್ರ, 4 ತಾಲೂಕು ಆಸ್ಪತ್ರೆ, 2 ಜಿಲ್ಲಾ ಆಸ್ಪತ್ರೆಗಳಿವೆ. ಜಿಲ್ಲೆಯಲ್ಲಿ ಪ್ರತಿ ತಿಂಗಳು ಸರಾಸರಿ 2,500 ಶಿಶುಗಳು ಜನಿಸುತ್ತವೆ. ವರ್ಷದಲ್ಲಿ ಸುಮಾರು 30,000 ಶಿಶು ಜನನವಾಗುತ್ತಿದೆ.
ಆತಂಕ ಬೇಡ
ಸರಕಾರಿ ಆಸ್ಪತ್ರೆಗಳಲ್ಲಿ ನವಜಾತ ಶಿಶುಗಳಿಗೆ ಹಾಗೂ ಗರ್ಭಿಣಿಯರಿಗೆ ಅಗತ್ಯವಾಗಿ ಚುಚ್ಚುಮದ್ದು ನೀಡಲಾಗಿದೆ. 16ರಿಂದ 24 ತಿಂಗಳ ಮಧ್ಯೆ ಹಾಗೂ 5 ವರ್ಷಗಳ ಒಳಗಾಗಿ ನೀಡುವ ಡೋಸೇಜನ್ನು ಕೊರೊನಾ ಹಿನ್ನೆಲೆ ಸದ್ಯ ಮುಂದೂಡಲಾಗಿದೆ. ಹೆತ್ತವರು ಆತಂತಕ್ಕೆ ಒಳಗಾಗಬೇಕಿಲ್ಲ. ಔಷಧ ನೀಡಲು ಒಂದು ತಿಂಗಳ ಹೆಚ್ಚುವರಿ ಕಾಲಾವಕಾಶವಿದೆ. ಲಾಕ್‌ಡೌನ್ ಮುಗಿದ ಬಳಿಕ ಸರಕಾರಿ ಆಸ್ಪತ್ರೆಗಳಲ್ಲಿ ಚುಚ್ಚುಮದ್ದು ಪಡೆಯಬಹದು.
– ಡಾ| ರಾಮಚಂದ್ರ ಬಾಯರಿ, ಆರೋಗ್ಯಾಧಿಕಾರಿ, ದ.ಕ. ಜಿಲ್ಲೆ