Advertisement

ಪ್ರವಾಸಿಗರಿಗೆ ತೊರಕೆ ಮೀನಿನ ಇಂಜೆಕ್ಷನ್‌!

11:38 AM Sep 27, 2017 | |

ಮಲ್ಪೆ: ಪ್ರವಾಸಿಗರೇ ಸಮುದ್ರದಲ್ಲಿ ಆಟವಾಡಲು ನೀರಿಗಿಳಿದಿರಾ ಜೋಕೆ… ತೊರಕೆ ಮೀನಿನಿಂದ ಚುಚ್ಚಿಸಿಕೊಳ್ಳಬೇಕಾದೀತು.

Advertisement

ಎರಡು ದಿನದಿಂದ ಮಲ್ಪೆ ಬೀಚ್‌ನಲ್ಲಿ ನೀರಿಗಿಳಿಯುವ ಪ್ರವಾಸಿಗರಿಗೆ ತೊರಕೆ ಮೀನು (ಸ್ಟಿಂಗ್‌ರೇ) ಇಂಜೆಕ್ಷನ್‌ ರುಚಿ ತೋರಿಸುತ್ತಿದೆ. ಸಣ್ಣ ಗಾತ್ರದ ತೊರಕೆ ಮೀನು ತನ್ನ ಬಾಲದ ಮುಳ್ಳಿನಿಂದ ಚುಚ್ಚುತ್ತಿದ್ದು ಮಂಗಳವಾರ 8 ಮಂದಿ ಪ್ರವಾಸಿಗರು ಗಾಯಗೊಂಡಿದ್ದಾರೆ. ಅವರೆಲ್ಲ ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದಾರೆ.

ಮರಿ ಇಡಲು ಬರುತ್ತದೆ
ಸಾಮಾನ್ಯವಾಗಿ ಆಳಸಮುದ್ರದಲ್ಲಿ ಕಂಡುಬರುವ ಈ ಮೀನುಗಳು ಈ ಅವಧಿಯಲ್ಲಿ ಮರಿ ಇಡಲು ತಣ್ಣನೆ ನೀರನ್ನು ಅರಸಿಕೊಂಡು ತೀರಕ್ಕೆ ಬರುತ್ತವೆ. ಅದರಂತೆ ಈ ವರ್ಷವೂ ಸಾಕಷ್ಟು ಸಂಖ್ಯೆಯಲ್ಲಿ ಮೀನುಗಳು ತೀರ ಸೇರಿವೆ. ಇನ್ನೂ ಒಂದು ವಾರದ ವರೆಗೆ ತೀರದಲ್ಲಿ ಇರುತ್ತವೆ ಎನ್ನಲಾಗಿದೆ.

ಎರಡು ವರ್ಷದ ಹಿಂದೆಯೂ ಕೂಡ ಇದೇ ರೀತಿ ಇಲ್ಲಿ ತೊರಕೆ ಮೀನುಗಳು ಪ್ರವಾಸಿಗರನ್ನು ಚುಚ್ಚಿ ಗಾಯಗೊಳಿಸಿದ್ದವು. ಈ ಸಣ್ಣ ತೊರಕೆ ಮೀನಿನ ಮೈಬಣ್ಣ ಮತ್ತು ನೀರಿನಡಿಯ ಮರಳಿನ ಬಣ್ಣ ಒಂದೇ ತೆರನಾಗಿದ್ದು ನೀರಿಗಿಳಿದು ಆಟವಾಡುತ್ತಾ ಮೈಮರೆಯುವ ಪ್ರವಾಸಿಗರು ಕಾಲಿನಡಿಯಲ್ಲಿ ಸಂಚರಿಸುವ ತೊರಕೆ ಮೀನಿನ್ನು ಅರಿವಿಲ್ಲದೆ ಮೆಟ್ಟಿ ಚುಚ್ಚಿಸಿಕೊಂಡಿದ್ದಾರೆ.

ತೊರಕೆ ಮೀನು ಬಾಲದ ಮುಳ್ಳಿನಿಂದ ಚುಚ್ಚಿದಾಗ ವಿಪರೀತ ರಕ್ತ ಸುರಿಯುತ್ತದೆ ಜತೆಗೆ ಸಹಿಸಲಸಾಧ್ಯವಾದ ನೋವುಂಟಾಗುತ್ತದೆ. ಮುಳ್ಳು ನಂಜಿನ ಗುಣವುಳ್ಳದ್ದರಿಂದ ಗಾಯ ಗುಣಮುಖವಾಗುವವರೆಗೆ ಆಹಾರ ಸೇವನೆಯಲ್ಲಿ ಪಥ್ಯ ಮಾಡುವ ಅಗತ್ಯವಿದೆ ಎಂದು ಆರೋಗ್ಯ ತಜ್ಞರು ಹೇಳುತ್ತಾರೆ.

Advertisement

ಕಡಲತೀರದಲ್ಲಿ ಇನ್ನು ಕೆಲವು ದಿನ ಈ ಮೀನುಗಳು ಬೀಡು ಬಿಟ್ಟಿರುತ್ತವೆ. ಈ ಹಿನ್ನೆಲೆಯಲ್ಲಿ ಪ್ರವಾಸಿಗರಿಗೆ ಇಲ್ಲಿನ
ಜೀವರಕ್ಷಕ ತಂಡದಿಂದ ಎಚ್ಚರಿಕೆ ನೀಡಲಾಗುತ್ತಿದೆ ಎಂದು ತಂಡದ ಮೋಹನ್‌ ಕಾಂಚನ್‌ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next