Advertisement

ಮುಂಗಾರಿಗಾಗಿ ಬಿತ್ತನೆ ಬೀಜ ದಾಸ್ತಾನು ಆರಂಭ; ಬೀಜ ದರ ಪ್ರತೀ ಕೆ.ಜಿ.ಗೆ 9.75 ರೂ. ಹೆಚ್ಚಳ!

01:24 AM May 14, 2024 | Team Udayavani |

ಉಡುಪಿ: ಮುಂಗಾರು ಹಂಗಾಮಿಗಾಗಿ ಕರಾವಳಿಯಲ್ಲಿ ರೈತರು ಸಿದ್ಧತೆ ಆರಂಭಿಸಿರುವಾಗಲೇ ಬಿತ್ತನೆ ಬೀಜದ ಬೆಲೆ ಏರಿಕೆ ಆತಂಕ ಸೃಷ್ಟಿಸಿದೆ.

Advertisement

ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮುಂಗಾರಿಗೆ ಭತ್ತ ಬೇಸಾಯವೇ ಪ್ರಧಾನ. ಸ್ಥಳೀಯ ಹವಾಮಾನಕ್ಕೆ ಪೂರಕ
ವಾಗಿ ಎಂಒ4, ಸಹ್ಯಾದ್ರಿ (ಕೆಂಪಕ್ಕಿ), ಉಮಾಮೊದಲಾದ ತಳಿಗಳ ಭತ್ತ ಬೀಜವನ್ನು ಸಬ್ಸಿಡಿ ದರದಲ್ಲಿ ಕೃಷಿ ಇಲಾಖೆಯ ಮೂಲಕ ಕೃಷಿ ಕೇಂದ್ರ/ ರೈತ ಸಂಪರ್ಕ ಕೇಂದ್ರದಲ್ಲಿ ವಿತರಿಸ ಲಾಗುತ್ತದೆ. ರೈತರು ಹೊಂದಿರುವ ಜಮೀನಿಗೆ ಅನುಸಾರವಾಗಿ ಬಿತ್ತನೆ ಬೀಜ ವಿತರಣೆಗೆ ಕ್ರಮ ಕೈಗೊಳ್ಳಲಾಗುತ್ತದೆ.

ಬಿತ್ತನೆ ಬೀಜದ ದರ ಹೆಚ್ಚಳ
ಈ ವರ್ಷ ಎಂಒ4 ಭತ್ತಕ್ಕೆ ಪ್ರತೀ ಕೆ.ಜಿ.ಗೆ 55.50 ರೂ. ನಿಗದಿ ಮಾಡಲಾಗಿದೆ. ಇದರಲ್ಲಿ ಸ್ವಲ್ಪ ಕಡಿಮೆ ಗುಣಮಟ್ಟದ ಭತ್ತಕ್ಕೆ 54.50 ರೂ. ನಿಗದಿಯಾಗಿದೆ. ಸಹ್ಯಾದ್ರಿ ತಳಿಗೆ 55.25 ರೂ., ಉಮಾ ತಳಿಗೆ 47.25 ರೂ. ನಿಗದಿ ಮಾಡಲಾಗಿದೆ. ಕಳೆದ ವರ್ಷ ಎಂಒ4ಕ್ಕೆ 45.75 ರೂ. ಇತ್ತು. ಅಂದರೆ ಈ ಬಾರಿ ಪ್ರತೀ ಕೆ.ಜಿ. ಮೇಲೆ ಸುಮಾರು 9.75 ರೂ.ಗಳಷ್ಟು ಹೆಚ್ಚಳವಾಗಿದ್ದು, ರೈತರನ್ನು ಕಂಗೆಡಿಸಿದೆ.

ಏರದ ಸಬ್ಸಿಡಿ
ಕೃಷಿ ಇಲಾಖೆಯಿಂದ ರೈತರಿಗೆ ಸಬ್ಸಿಡಿ ದರದಲ್ಲಿ ಬಿತ್ತನೆ ಬೀಜ ವಿತರಣೆ ಮಾಡಲಾ ಗುತ್ತದೆ. ಇದಕ್ಕೆ ರೈತರು ಜಾಗದ ದಾಖಲೆಗಳನ್ನು ನೀಡಬೇಕಾಗುತ್ತದೆ. ಪ್ರತೀ ಕೆ.ಜಿ. ಬಿತ್ತನೆ ಬೀಜಕ್ಕೆ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ರೈತರಿಗೆ 12 ರೂ. ಹಾಗೂ ಸಾಮಾನ್ಯ ವರ್ಗದ ರೈತರಿಗೆ 8 ರೂ. ಸಬ್ಸಿಡಿ ನೀಡಲಾಗುತ್ತದೆ. ಯಾವುದೇ ತಳಿಯ ಭತ್ತ ತೆಗೆದುಕೊಂಡರೂ ಸಬ್ಸಿಡಿಯಲ್ಲಿ ವ್ಯತ್ಯಾಸ ಇರದು.

ಬಿತ್ತನೆ ಬೀಜದ ದರ ಹೆಚ್ಚಳಕ್ಕೆ ಅನುಗುಣ ವಾಗಿ ಭತ್ತದ ಖರೀದಿ ದರವೂ ಹೆಚ್ಚಾಗಿದೆ ಎಂದು ಕಾರಣ ಹೇಳುವ ಕೃಷಿ ಅಧಿಕಾರಿಗಳು ಕಳೆದ 5-6 ವರ್ಷಗಳಿಂದ ಬಿತ್ತನೆ ಬೀಜಕ್ಕೆ ಸಬ್ಸಿಡಿ ಏರಿಕೆಯಾಗಿಲ್ಲವಲ್ಲ ಏಕೆ ಎಂಬ ಮರು ಪ್ರಶ್ನೆಗೆ ಮೌನವಾಗುತ್ತಾರೆ.

Advertisement

ಬಿತ್ತನೆ ಬೀಜ ದಾಸ್ತಾನು
ಉಡುಪಿ ಜಿಲ್ಲೆಗೆ ಸುಮಾರು 2,250 ಕ್ವಿಂಟಾಲ್‌ ಬೀಜ ಅಗತ್ಯವಿದ್ದು, ಈಗಾಗಲೇ 340 ಕ್ವಿಂ. ದಾಸ್ತಾನಿನಲ್ಲಿದೆ. ಉಳಿದ ಪ್ರಮಾಣವನ್ನು ಕೆಲವೇ ದಿನಗಳಲ್ಲಿ ಸಂಗ್ರಹಿಸಲಾಗುತ್ತದೆ. ಈಗ ಬಂದಿರುವುದು ಎಂಒ4 ಮಾತ್ರ. ಸಹ್ಯಾದ್ರಿ ಹಾಗೂ ಉಮಾ ತಳಿಯ ಬಿತ್ತನೆ ಬೀಜವನ್ನು ಇನ್ನಷ್ಟೇ ಸಂಗ್ರಹಿಸಬೇಕಿದೆ. ದಕ್ಷಿಣ ಕನ್ನಡ ಜಿಲ್ಲೆಗೆ ಸುಮಾರು 600 ಕ್ವಿಂಟಾಲ್‌ಗೆ ಬೇಡಿಕೆ ಸಲ್ಲಿಸಲಾಗಿದ್ದು, ದಾಸ್ತಾನು ಪ್ರಕ್ರಿಯೆ ಮೇ 15ರ ಬಳಿಕ ಆರಂಭವಾಗಲಿದೆ. ಕಳೆದ ಋತುವಿನಲ್ಲಿ ಉಡುಪಿ ಜಿಲ್ಲೆಯಲ್ಲಿ 2,288 ಕ್ವಿಂಟಾಲ್‌ ಹಾಗೂ ದಕ್ಷಿಣ ಕನ್ನಡದಲ್ಲಿ ಸುಮಾರು 400-450 ಕ್ವಿಂಟಾಲ್‌ ಬಿತ್ತನೆ ಬೀಜ ವಿತರಿಸಲಾಗಿತ್ತು.

ಕಳೆದ ಋತುವಿನಲ್ಲಿ ಉಡುಪಿಯಲ್ಲಿ 38 ಸಾವಿರ ಹೆಕ್ಟೇರ್‌ ಹಾಗೂ ದಕ್ಷಿಣ ಕನ್ನಡದಲ್ಲಿ ಸುಮಾರು 9 ಸಾವಿರ ಹೆಕ್ಟೇರ್‌ ಭತ್ತದ ಬಿತ್ತನೆ ಗುರಿ ಹೊಂದಲಾಗಿತ್ತು. ಮಳೆ ಕೊರತೆ ಸಹಿತ ಹವಾಮಾನ ವೈಪರೀತ್ಯದ ಕಾರಣದಿಂದ ನಿರ್ದಿಷ್ಟ ಗುರಿ ತಲುಪಿರಲಿಲ್ಲ. ಈ ಬಾರಿಯೂ ಸರಿ ಸುಮಾರು ಅಷ್ಟೇ ಪ್ರಮಾಣದ ಬಿತ್ತನೆ ಗುರಿಯನ್ನು ಕೃಷಿ ಇಲಾಖೆ ಹೊಂದಿದೆ.

ಬಿಸಿಲಿನ ತಾಪಕ್ಕೆ ಭತ್ತದ ಬಿತ್ತನೆ ಸಾಧ್ಯವಾಗದು. ಹೀಗಾಗಿ ಮುಂಗಾರು ಪ್ರವೇಶದ ಬಳಿಕ ಭೂಮಿ ಯನ್ನು ಹದಗೊಳಿಸಿ, ಭತ್ತ ಬಿತ್ತನೆ ಮಾಡಬೇಕು. ರೈತರಿಗೆ ಯಾವುದೇ ವಿಳಂಬ ಇಲ್ಲದೆ ನಿರ್ದಿಷ್ಟ ಅವಧಿಯಲ್ಲಿ ಬಿತ್ತನೆ ಬೀಜ ಒದಗಿಸಲಾಗುತ್ತದೆ.
-ಡಾ| ಕೆಂಪೇಗೌಡ, ಜಂಟಿ ನಿರ್ದೇಶಕರು, ಕೃಷಿ ಇಲಾಖೆ, ದ.ಕ.
-ಸತೀಶ್‌, ತಾಂತ್ರಿಕ ಅಧಿಕಾರಿ, ಕೃಷಿ ಇಲಾಖೆ, ಉಡುಪಿ

-ರಾಜು ಖಾರ್ವಿ ಕೊಡೇರಿ

Advertisement

Udayavani is now on Telegram. Click here to join our channel and stay updated with the latest news.

Next