ಗೋಣಿಕೊಪ್ಪಲು: 2015 ರೂ. ಬೆಂಬಲ ಬೆಲೆ ಯೋಜನೆಯಡಿ ಭತ್ತ ಖರೀದಿ ಕೇಂದ್ರಗಳನ್ನು ಗೋಣಿಕೊಪ್ಪ ಎಪಿಎಂಸಿ ಗೋದಾಮುಗಳಲ್ಲಿ ಪ್ರಾರಂಭಿಸಲಾಗಿದೆ ಎಂದು ತಾಲೂಕು ಕೃಷಿ ಅಧಿಕಾರಿ ಶಿವಮೂರ್ತಿ ಮಾಹಿತಿ ನೀಡಿದ್ದಾರೆ.
ಪೊನ್ನಂಪೇಟೆ ಸಾಮರ್ಥ್ಯ ಸೌಧ ಸಭಾಂಗಣದಲ್ಲಿ ತಾ.ಪಂ. ಅಧ್ಯಕ್ಷೆ ಬೊಳ್ಳಚಂಡ ಸ್ಮಿತಾ ಪ್ರಕಾಶ್ ಅಧ್ಯಕ್ಷತೆಯಲ್ಲಿ ನಡೆದ ತಾಲೂಕು ಪ್ರಗತಿ ಪರಿಶೀಲನ ಸಭೆಯಲ್ಲಿ ಮಾಹಿತಿಯನ್ನು ನೀಡಿದರು.
ಭತ್ತ ಬೆಳೆದ ರೈತರು ವ್ಯಾಪ್ತಿಗೆ ಬರುವ ಈ ಖರೀದಿ ಕೇಂದ್ರಗಳಲ್ಲಿ ಹೆಸರು ನೋಂದಣಿ ಮಾಡಿಕೊಳ್ಳಲು ತಿಳಿಸಿದ್ದಾರೆ. ಜನವರಿ ಮೊದಲನೆಯ ವಾರದಿಂದ ರೈತರ ನೋಂದಣಿ ಆರಂಭವಾಗಿದೆ. ಕೃಷಿ ಇಲಾಖೆಯಿಂದ ನೀಡಿದ ಫ್ರುಟ್ಸ್ ನೋಂದಣಿ ಸಂಖ್ಯೆ ಒದಗಿಸಿ ರೈತರು ನೋಂದಣಿ ಮಾಡಿಕೊಳ್ಳಬೇಕು. ರೈತರು ಬೆಳೆದ ಬೆಳೆಯ ಮಾಹಿತಿ ಫ್ರುಟ್ಸ್ ದತ್ತಾಂಶದಲ್ಲಿ ಲಭ್ಯವಿಲ್ಲದಿದ್ದರೆ ರೈತರು ತಕ್ಷಣ ಕೃಷಿ ಇಲಾಖೆಯ ರೈತ ಸಂಪರ್ಕ ಕೇಂದ್ರ ಸಂಪರ್ಕಿಸಿ ಬೆಳೆ ಮಾಹಿತಿ ಫ್ರುಟ್ಸ್ ದತ್ತಾಂಶದಲ್ಲಿ ಸೇರ್ಪಡೆ ಮಾಡಿ ನಂತರ ಬೆಂಬಲ ಬೆಲೆ ಖರೀದಿ ಕೇಂದ್ರದಲ್ಲಿ ನೋಂದಾಯಿಸಬೇಕು.
ಖರೀದಿ ಮಿತಿ ರೈತರು ಬೆಳೆದ ಪ್ರತಿ ಎಕರೆಯಿಂದ 16 ಕ್ವಿಂಟಲ್, ಪ್ರತಿ ರೈತರಿಂದ ಗರಿಷ್ಠ 40 ಕ್ವಿಂಟಲ್ ಭತ್ತ ಖರೀದಿಸಲಾಗುವುದು. ಭತ್ತ ಪ್ರಮುಖ ಅಂಶಗಳ ಗುಣಮಟ್ಟ ಶೇ.17 ತೇವಾಂಶ, ಶೇ.3 ಜೊಳ್ಳು , ಶೇ.13 ಭತ್ತದ ಕಾಳು, ಶೇ.4 ಬಣ್ಣ ಮಾಸಿದ, ಮುರಿದ ಮತ್ತು ಹುಳು ಹಿಡಿದ ಕಾಳು, ಶೇ.1 ಮಿಶ್ರಣ ಕಲ್ಲು, ಮಣ್ಣು ಪ್ರಮಾಣದ ಅಂಶ ಪರಿಗಣಿಸಲಾಗುವುದು. ಒಂದು ವೇಳೆ ಗುಣಮಟ್ಟದಲ್ಲಿ ಯಾವುದೇ ನ್ಯೂನತೆ ಕಂಡುಬಂದಲ್ಲಿ ಸಂಪೂರ್ಣ ಪ್ರಮಾಣ ತಿರಸ್ಕರಿಸಲಾಗುವುದು ಎಂದು ಮಾಹಿತಿ ನೀಡಿದರು.
ಈಗಾಗಲೇ 16 ರೈತರು ತಮ್ಮ ಆರ್. ಟಿ.ಸಿ ನೀಡಿ ನೋಂದಾವಣಿ ಮಾಡಿಸಿದ್ದಾರೆ. ಗಣಕ ಯಂತ್ರದ ತಾಂತ್ರಿಕ ದೋಷದಿಂದ ಕೆಲವು ಆರ್.ಟಿ.ಸಿ.ಗಳು ನೋಂದಾವಣಿ ಆಗುತ್ತಿಲ್ಲ. ಶೀಘ್ರವಾಗಿ ನೋಂದಾವಣಿ ಕಾರ್ಯ ನಡೆಯಬೇಕಾಗಿದೆ ಎಂದು ಈ ಸಂದರ್ಭ ಉಪಾಧ್ಯಕ್ಷ ನೆಲ್ಲೀರ ಚಲನ್ ಅಧಿಕಾರಿಗೆ ಸೂಚಿಸಿದರು. ಎಸ್.ಎಸ್. ಎಲ್.ಸಿಯಲ್ಲಿ ಈ ಬಾರಿ 100ರಷ್ಟು ಫಲಿತಾಂಶ ಪಡೆಯಲು ಇಲಾಖೆ ಪೂರ್ವ ಸಿದ್ದತೆ ಕೈಗೊಂಡಿದೆ. ಶಿಕ್ಷಕರು ಮಕ್ಕಳನ್ನು ಹೆಚ್ಚು ಹುರುಪುಗೊಳಿಸುವ ಮೂಲಕ ವಿಶೇಷ ತರಗತಿಯನ್ನು ತೆಗೆದುಕೊಳ್ಳುತ್ತಿದ್ದಾರೆ ಎಂದು ತಾಲ್ಲೂಕು ವಿಸ್ತರಣ ಅಧಿಕಾರಿ ಉತ್ತಪ್ಪ ಸಭೆಗೆ ಮಾಹಿತಿ ನೀಡಿದರು. ತಿತಿಮತಿ ಗ್ರಾಮದ ಮೂಲಕ ಹಾದುಹೋಗುವ ಎಕ್ಸ್‌ಪ್ರೆಸ್ ವಿದ್ಯುತ್ ಲೈನ್ ಕಾಮಗಾರಿ ಪೂರ್ಣಗೊಂಡಿದ್ದರೂ ಕಳೆದ ಒಂದು ತಿಂಗಳಿನಿಂದ ಚಾಲನೆ ದೊರೆತ್ತಿಲ್ಲ. ಈ ವಿಳಂಬಕ್ಕೆ ಅಧಿಕಾರಿಗಳ ನಿರ್ಲಕ್ಷ್ಯವೇ ಕಾರಣ ಎಂದು ಆರೋಪಿಸಿ ನೆಲ್ಲೀರ ಚಲನ್ ಚೆಸ್ಕಾಂ ಇಂಜಿನಿಯರ್ ಅವರನ್ನು ತರಾಟೆಗೆ ತೆಗೆದುಕೊಂಡರು. ಶೀಘ್ರದಲ್ಲೇ ಎಕ್ಸ್‌ಪ್ರೆಸ್ ಲೈನ್ ಚಾಲನೆ ನೀಡುವಂತೆ ಒತ್ತಾಯಿಸಿದರು ಕಳೆದ ಎಂಟು ತಿಂಗಳಿನಿಂದ ತಾಲೂಕು ಪಂಚಾಯತ್ ಸದಸ್ಯರ ಗೌರವ ಧನ ಬಂದಿಲ್ಲ. ಈ ಬಗ್ಗೆ ಅಧ್ಯಕ್ಷೆ ಸ್ಮಿತಾ ಪ್ರಕಾಶ್ ವಿಷಾದ ವ್ಯಕ್ತಪಡಿಸಿದರು. 9/11 ಅರ್ಜಿಗಳು ವಿಲೇವಾರಿ ಮಾಡದೇ ಲಾಬಿ ಗಾಗಿ ವಿಳಂಬ ಧೋರಣೆ ಅನುಸರಿಸಲಾಗುತ್ತಿದೆ. ಈ ಬಗ್ಗೆ ಕಾರ್ಯ ನಿರ್ವಹಣಾಧಿಕಾರಿ ಜಾಗೃತರಾಗಬೇಕು. ಮಧ್ಯವರ್ತಿಗಳ ಮೂಲಕ ಬಂದ ಅರ್ಜಿಗಳು ಶೀಘ್ರದಲ್ಲೇ ವಿಲೇವಾರಿ ಆಗುತ್ತವೆೆ. ನೇರವಾಗಿ ಬಂದ ಅರ್ಜಿಗಳು ತಿಂಗಳು ಕಳೆದರೂ ವಿಲೇವಾರಿ ಯಾಗುವುದಿಲ್ಲ. ಮುಂದಿನ ದಿನಗಳಲ್ಲಿ ಅರ್ಜಿಗಳನ್ನು ತಾಲ್ಲೂಕು ಕಚೇರಿಗೆ ಪಂಚಾಯಿತಿ ಅಭಿವೃದ್ದಿ ಅಧಿಕಾರಿಗಳ ಮೂಲಕ ನೇರವಾಗಿ ಅಂಚೆ ಮೂಲಕ ಬರುವ ವ್ಯವಸ್ಥೆ ಮಾಡಬೇಕು ಇದರಿಂದ ಭ್ರಷ್ಟಚಾರವನ್ನು ತಡೆಗಟ್ಟಬಹುದು ಎಂದು ನೆಲ್ಲೀರ ಚಲನ್ ಅವರು ಸಲಹೆ ನೀಡಿ ಸಭೆಯ ಗಮನ ಸೆಳೆದರು. ವಿವಿಧ ಇಲಾಖೆಗಳ ಅಧಿಕಾರಿಗಳು ತಮ್ಮ ಇಲಾಖೆಯ ಪ್ರಗತಿಗಳ ಬಗ್ಗೆ ಮಾಹಿತಿ ನೀಡಿದರು.
ಈ ಸಂದರ್ಭ ಕಾರ್ಯನಿರ್ವಹಣಾ ಧಿಕಾರಿ ಷಣ್ಮುಗ ಅವರಿಗೆ ಪ್ರಗತಿ ಪರಿಶೀಲನೆಗೆ ಬಾರದೆ ಗೈರು ಹಾಜರಾದ ಅಧಿಕಾರಿಗಳಿಗೆ ನೋಟಿಸು ನೀಡಿ ಶಿಸ್ತು ಕ್ರಮ ಜರಗಿಸುವಂತೆ ಸಭೆ ಸೂಚಿಸಿತು.