ಬೆಂಗಳೂರು: ಜನವರಿ 1ರಿಂದ ಶೈಕ್ಷಣಿಕ ಚಟುವಟಿಕೆ ಆರಂಭವಾಗುತ್ತಿರುವುದು ಸಂತಸಕರ ವಿಚಾರ. ರಾಜ್ಯ ಸರ್ಕಾರ ಅಗತ್ಯ ಕ್ರಮ ಕೈಗೊಂಡೇ ಈ ನಿರ್ಧಾರವನ್ನು ತೆಗೆದುಕೊಂಡಿದೆ. ಈಗ ಮಕ್ಕಳ ಶೈಕ್ಷಣಿಕ ಭವಿಷ್ಯದ ದೃಷ್ಟಿಯಿಂದ ನಾವೆಲ್ಲರೂ ಸೇರಿ ಈ ಹೆಜ್ಜೆಯನ್ನು ಇಡಲೇಬೇಕಾದ ಅನಿವಾರ್ಯತೆ ಇದೆ. ಎರಡೂ ಕೈ ಸೇರಿದರೆ ಹೇಗೆ ಚಪ್ಪಾಳೆಯಾಗುತ್ತದೋ, ಹಾಗೆಯೇ ಸರ್ಕಾರದ ಜೊತೆ ಪಾಲಕರೂ ಸಹಕಾರವನ್ನು ನೀಡಬೇಕಾಗುತ್ತದೆ. ಕೋವಿಡ್ -19ರ ನಿಯಮವನ್ನು ಕಡ್ಡಾಯವಾಗಿ ಪಾಲಿಸಬೇಕಾಗುತ್ತದೆ ಎಂದು ಸಹಕಾರ ಹಾಗೂ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರಾದ ಎಸ್.ಟಿ.ಸೋಮಶೇಖರ್ ತಿಳಿಸಿದ್ದಾರೆ.
ಸದ್ಯದ ಆದೇಶದ ಪ್ರಕಾರ ಜನವರಿ 1 ರಿಂದ ತರಗತಿಗಳು ಆರಂಭವಾಗುತ್ತಿವೆ. ಮೊದಲಿಗೆ ಹತ್ತನೇ ತರಗತಿ ಮತ್ತು ದ್ವಿತೀಯ ಪಿಯುಸಿ ತರಗತಿಗಳು ಪ್ರಾರಂಭವಾಗುತ್ತಿದೆ. ಆದರೆ, ಇದು ಸಹ ಕಡ್ಡಾಯವಲ್ಲ. ವಿದ್ಯಾರ್ಥಿಗಳು ಮನೆಯಲ್ಲಿಯೇ ಇದ್ದು ಆನ್ ಲೈನ್, ಯುಟ್ಯೂಬ್ ಚಾನೆಲ್ ಮತ್ತು ಇತರ ಮೂಲಗಳಿಂದಲೂ ಅಭ್ಯಾಸ ಮಾಡಬಹುದಾಗಿದೆ.
ಇನ್ನು 6 ರಿಂದ 9ನೇ ತರಗತಿ ವರೆಗೆ ವಿದ್ಯಾಗಮ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಅಂದರೆ, ಈ ತರಗತಿಗಳ ಮಕ್ಕಳು ವಾರಕ್ಕೆ 2 ದಿನ ಶಾಲೆಗಳಿಗೆ ಹಾಜರಾಗಿ ಪಾಠವನ್ನು ಕೇಳಬಹುದಾಗಿದೆ.
ಇದನ್ನೂ ಓದಿ: 2021ರಲ್ಲಿ ಕೋವಿಡ್ ಲಸಿಕೆ ವಿತರಣೆಗೆ 80 ಸಾವಿರ ಕೋಟಿ ರೂಪಾಯಿ ಅಗತ್ಯವಿದೆ: ಸೇರಂ
ಇಲ್ಲಿ ಎಲ್ಲರೂ ಕೋವಿಡ್ -19ರ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಬೇಕು. ಯಾರಿಗೇ ಸಹ ಸೋಂಕಿನ ಲಕ್ಷಣಗಳು ಕಾಣಿಸಿಕೊಂಡರೆ ಅಂಥವರನ್ನು ಶಾಲೆ-ಕಾಲೇಜಿಗೆ ಕಳುಹಿಸದಿರುವುದೇ ಒಳಿತು. ಇದು ಸಾಂಕ್ರಾಮಿಕ ರೋಗವಾಗಿರುವುದರಿಂದ ಜಾಗ್ರತೆ ಅತಿ ಅಗತ್ಯ. ಇನ್ನು ರಾಜ್ಯ ಕೋವಿಡ್ 19 ತಾಂತ್ರಿಕ ಸಲಹಾ ಸಮಿತಿಯ ಶಿಫಾರಸಿನಂತೆ ಮಕ್ಕಳು ಶಾಲೆಗೆ ಮತ್ತು ವಿದ್ಯಾಗಮ ಕಾರ್ಯಕ್ರಮಕ್ಕೆ ಹಾಜರಾಗುವಾಗ ಪೋಷಕರ ಅನುಮತಿ ಪತ್ರ ಕಡ್ಡಾಯವಾಗಿದೆ.
ಅನುಮತಿ ಪತ್ರದಲ್ಲಿ ವಿದ್ಯಾರ್ಥಿಗೆ ಕೋವಿಡ್ – 19 ಸೋಂಕಿನ ಲಕ್ಷಣಗಳಿಲ್ಲವೆಂದು ದೃಢೀಕರಿಸಬೇಕು. ಒಟ್ಟಿನಲ್ಲಿ ಮಕ್ಕಳ ಭವಿಷ್ಯದ ದೃಷ್ಟಿಯಿಂದ ಕೈಗೊಳ್ಳಲಾದ ಕ್ರಮಗಳನ್ನು ಕಟ್ಟುನಿಟ್ಟಾಗಿ ಅನುಸರಿಸುವ ಹೊಣೆ ಸರ್ಕಾರದ ಜೊತೆಗೆ ಶಿಕ್ಷಕರು, ಪಾಲಕರದ್ದೂ ಆಗಿರುತ್ತದೆ ಎಂದು ಎಸ್.ಟಿ.ಸೋಮಶೇಖರ್ ಹೇಳಿದ್ದಾರೆ.
ಇದನ್ನೂ ಓದಿ: ಉಜಿರೆ ಪ್ರಕರಣ: ಕಿಡ್ನಾಪರ್ಸ್ ಗೆ ಏಳು ಲಕ್ಷ ರೂ. ಗೆ ಸುಪಾರಿ, ಪ್ರಮುಖ ಆರೋಪಿಗಾಗಿ ಶೋಧ