Advertisement
ಪ್ರಧಾನಿ ನರೇಂದ್ರ ಮೋದಿ ಅವರ ಅವಧಿಯಲ್ಲಿ ದೇಶದ ಶೇ.40ರಷ್ಟು ಸಂಪತ್ತು ಕೇವಲ ಅಗ್ರ ಶೇ.1ರಷ್ಟು ಶ್ರೀಮಂತರ ಪಾಲಾಗಿದೆ. ದೇಶದ 21 ಶತಕೋಟ್ಯಾಧೀಶರ ಆಸ್ತಿ ಉಳಿದ 70 ಕೋಟಿ ಭಾರತೀಯರ ಸಂಪತ್ತಿಗೆ ಸಮಾನವಾಗಿದೆ. ಹೀಗಾಗಿ ದೇಶದಲ್ಲಿ ಇಂಡಿಯಾ ಕೂಟ ಅಧಿಕಾರಕ್ಕೆ ಬಂದರೆ ಮಾತ್ರ ಸಮಗ್ರ ಆರ್ಥಿಕ ಸುಧಾರಣೆ ಸಾಧ್ಯ ಎಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜೈರಾಂ ರಮೇಶ್ ಟ್ವೀಟರ್ ನಲ್ಲಿ ತಿಳಿಸಿದ್ದರು.
Related Articles
Advertisement
ಸ್ಯಾಮ್ ಪಿತ್ರೋಡಾ ಮಾತಿನ ಮರ್ಮವೇನು?
ಅಮೆರಿಕ ಸಂಯುಕ್ತ ಸಂಸ್ಥಾನದಲ್ಲಿ ಪಿತ್ರಾರ್ಜಿತ ತೆರಿಗೆ (Inheritance tax) ಪದ್ಧತಿ ಚಾಲ್ತಿಯಲ್ಲಿದೆ. ಅಲ್ಲಿ ವ್ಯಕ್ತಿಯ ಸಂಪತ್ತಿನ ಮೇಲೆ 55% ತೆರಿಗೆ ವಿಧಿಸಲಾಗುತ್ತದೆ. ವ್ಯಕ್ತಿಯ ಮಕ್ಕಳು, ಕುಟುಂಬ ಸದಸ್ಯರಿಗೆ ಕೇವಲ 45% ಪಾಲನ್ನು ನೀಡಲಾಗುತ್ತದೆ.
ಉದಾಹರಣೆಗೆ- ಒಬ್ಬ ವ್ಯಕ್ತಿ 100 ಮಿಲಿಯನ್ ಡಾಲರ್ ಮೌಲ್ಯದ ಆಸ್ತಿ ಹೊಂದಿದ್ದರೆ, ಆತನ 45 ಪ್ರತಿಶತ ಸಂಪತ್ತು ಮಕ್ಕಳಿಗೆ ವರ್ಗಾವಣೆಯಾಗಲಿದ್ದು, ಉಳಿದ 55 ಪ್ರತಿಶತ ಆಸ್ತಿ ಸರ್ಕಾರದ ವಶಕ್ಕೆ ಹೋಗಲಿದೆ. ಇದೊಂದು ಕುತೂಹಲಕಾರಿ ಕಾನೂನು. ಈ ರೀತಿಯ ಯಾವುದೇ ಕಾನೂನು ಭಾರತದಲ್ಲಿ ಇಲ್ಲ. ಆದರೆ 10 ಸಾವಿರ ಕೋಟಿ ರೂ. ಮೌಲ್ಯದ ಆಸ್ತಿ ಇದ್ದ ವ್ಯಕ್ತಿ ನಿಧನರಾದರೆ, ಆ ಆಸ್ತಿ ಆತನ ಮಕ್ಕಳು, ಮೊಮ್ಮಕ್ಕಳಿಗೆ ಹಂಚಿಕೆಯಾಗುತ್ತದೆ. ಸಾರ್ವಜನಿಕರಿಗೆ ಏನೂ ಸಿಗುವುದಿಲ್ಲ. ಈ ವಿಚಾರದ ಬಗ್ಗೆ ಚರ್ಚೆ ನಡೆದರೆ ಒಳ್ಳೆಯದು ಎಂದು ಪಿತ್ತೋಡಾ ಉಲ್ಲೇಖಿಸಿದ್ದರು.
ಭಾರತದಲ್ಲಿಯೂ ಚಾಲ್ತಿಯಲ್ಲಿತ್ತು….!
ಅಮೆರಿಕದಲ್ಲಿ ಸಾಮಾನ್ಯವಾದ ಉತ್ತರಾಧಿಕಾರ ತೆರಿಗೆ(Inheritance tax) ಪದ್ಧತಿ ಜಾರಿಯಲ್ಲಿದೆ. ಆದರೆ ಭಾರತದಲ್ಲಿ ಅದು ದೀರ್ಘಾವಧಿಯವರೆಗೆ ಜಾರಿಯಲ್ಲಿಡಲು ಸಾಧ್ಯವಾಗಿಲ್ಲ. 1953ರಿಂದ 1985ರವರೆಗೂ ಭಾರತದಲ್ಲಿ ಪಿತ್ರಾರ್ಜಿತ ತೆರಿಗೆ ಪದ್ಧತಿ ಜಾರಿಯಲ್ಲಿತ್ತು. ಆದರೆ ವಿಪಿ ಸಿಂಗ್ ವಿತ್ತ ಸಚಿವರಾಗಿದ್ದ ಸಂದರ್ಭದಲ್ಲಿ ಪ್ರಧಾನಿಯಾಗಿದ್ದ ರಾಜೀವ್ ಗಾಂಧಿ ಪಿತ್ರಾರ್ಜಿತ ಆಸ್ತಿ(Inheritance tax) ತೆರಿಗೆ ಕಾಯ್ದೆಯನ್ನು ರದ್ದುಗೊಳಿಸಿದ್ದರು. ಈ ವ್ಯವಸ್ಥೆಯಿಂದ ಶ್ರೀಮಂತರು ಮತ್ತು ಬಡವರ ನಡುವೆ ಸಾಮಾಜಿಕ, ಆರ್ಥಿಕ ಸಮಾನತೆ ತರಲು ಯಶಸ್ವಿಯಾಗುವುದಿಲ್ಲ ಎಂಬ ನಂಬಿಕೆ ಸಿಂಗ್ ಅವರದ್ದಾಗಿತ್ತು.
ಜಗತ್ತಿನಲ್ಲಿ ಉತ್ತರಾಧಿಕಾರ ತೆರಿಗೆ (Inheritance tax )ಪದ್ಧತಿ ತುಂಬಾ ವಿರಳ. ಅಮೆರಿಕದ ಕೇವಲ ಆರು ರಾಜ್ಯಗಳಲ್ಲಿ ಮಾತ್ರ ಈ (Inheritance tax) ಉತ್ತರಾಧಿಕಾರ ತೆರಿಗೆ ಪದ್ಧತಿ ಜಾರಿಯಲ್ಲಿದೆ. ಸ್ವಂತ ಆಸ್ತಿ ಹೊಂದಿದ್ದ ವ್ಯಕ್ತಿ ಮೃತಪಟ್ಟಲ್ಲಿ ಆ ಆಸ್ತಿಯ ಮೌಲ್ಯದ ಆಧಾರದ ಮೇಲೆ ತೆರಿಗೆ ವಿಧಿಸಲಾಗುತ್ತದೆ.
ಅಮೆರಿಕದ ಲೋವಾ, ಕೆಂಟುಕಿ, ಮೇರಿ ಲ್ಯಾಂಡ್, ನೆಬ್ರಾಸ್ಕಾ, ನ್ಯೂ ಜೆರ್ಸಿ ಮತ್ತು ಪೆನಿನ್ಸುಲ್ವೇನಿಯಾ ಸೇರಿದಂತೆ ಆರು ರಾಜ್ಯಗಳಲ್ಲಿ (ಎಸ್ಟೇಟ್ ಟ್ಯಾಕ್ಸ್) ಉತ್ತರಾಧಿಕಾರಿ ತೆರಿಗೆಯನ್ನು ಸಂಗ್ರಹಿಸಲಾಗುತ್ತಿದೆ.
ಭಾರತ ಸೇರಿದಂತೆ ಆಸ್ಟ್ರಿಯಾ, ಜೆಕ್ ರಿಪಬ್ಲಿಕ್, ನ್ಯೂಜಿಲ್ಯಾಂಡ್, ನಾರ್ವೆ, ಪೋರ್ಚುಗಲ್ ಸೇರಿದಂತೆ ಹಲವು ದೇಶಗಳು ಪಿತ್ರಾರ್ಜಿತ ತೆರಿಗೆ ಪದ್ಧತಿಯನ್ನು ಕೈಬಿಟ್ಟಿದ್ದವು. ಯುಎಸ್ ಎ, ಬ್ರಿಟನ್, ಜಪಾನ್ ಗಳಲ್ಲಿ ಈ ಪದ್ಧತಿ ಚಾಲ್ತಿಯಲ್ಲಿದೆ.
ಪಿತ್ರಾರ್ಜಿತ ತೆರಿಗೆ ಹಳೆಯ ಪದ್ಧತಿಗಳಲ್ಲಿ ಒಂದಾಗಿದೆ. ಇದು ರೋಮನ್ ಸಾಮ್ರಾಜ್ಯಕ್ಕಿಂತಲೂ ಹಿಂದೆ ಚಾಲ್ತಿಯಲ್ಲಿತ್ತು. ಹಿರಿಯ ಸೈನಿಕರ ಪಿಂಚಣಿ ಪಾವತಿಸಲು ಪಿತ್ರಾರ್ಜಿತ ಆಸ್ತಿಯ ಮೇಲೆ ತೆರಿಗೆ ವಿಧಿಸಲಾಗುತ್ತಿತ್ತಂತೆ. ಗ್ರೇಟ್ ಬ್ರಿಟನ್, ನೆದರ್ಲ್ಯಾಂಡ್, ಸ್ಪೇನ್, ಪೋರ್ಚುಗಲ್ ಸೇರಿದಂತೆ ಯುರೋಪಿಯನ್ ದೇಶಗಳಲ್ಲಿ ಸುಮಾರು 21ನೇ ಶತಮಾನದ ಆರಂಭದಲ್ಲಿ ಉತ್ತರಾಧಿಕಾರ ತೆರಿಗೆ ಪದ್ಧತಿಯಲ್ಲಿ ಸುಧಾರಣೆಯ ಬೇಡಿಕೆಗಾಗಿ ಒತ್ತಾಯ ಕೇಳಿಬರತೊಡಗಿತ್ತು. 2001ರಲ್ಲಿ ಇಟಲಿ ಕೂಡಾ ಈ ತೆರಿಗೆ ಪದ್ದತಿಯನ್ನು ರದ್ದುಗೊಳಿಸಿತ್ತು.