ಕುಂದಾಪುರ: ಉಡುಪಿ ಜಿಲ್ಲೆಯಲ್ಲಿಯೇ ಮೂಲ ಸೌಕರ್ಯಗಳಿಂದ ಅತೀ ಹೆಚ್ಚು ವಂಚಿತ ಗೊಂಡ ಗ್ರಾಮಗಳಲ್ಲಿ ಕಾಡಂಚಿನ, ನಕ್ಸಲ್ ಬಾಧಿತ ಹಣೆಪಟ್ಟಿ ಹೊತ್ತಿರುವ ಮಡಾಮಕ್ಕಿ ಗ್ರಾಮವೂ ಒಂದು. ರಸ್ತೆ, ನೆಟÌರ್ಕ್ ಸಹಿತ ಅನೇಕ ಬೇಡಿಕೆಗಳು ಹತ್ತಾರು ವರ್ಷಗಳಿಂದ ಇದ್ದರೂ ಇಲ್ಲಿನ ನಿವಾಸಿಗಳ ಕೂಗು ಮಾತ್ರ ಅರಣ್ಯ ರೋದನವಾಗಿದೆ.
ಕುಂದಾಪುರದ ತಾಲೂಕು ಕೇಂದ್ರದಿಂದ ಸುಮಾರು 55 ಕಿ.ಮೀ. ದೂರದಲ್ಲಿರುವ, ಕುಂದಾಪುರ -ಆಗುಂಬೆಯನ್ನು ಸಂಪರ್ಕಿಸುವ ರಸ್ತೆಯ ಸೋಮೇಶ್ವರ ಸಮೀಪ ಸಿಗುವ ಗ್ರಾಮವೇ ಈ ಮಡಾಮಕ್ಕಿ.
ಪಶ್ಚಿಮ ಘಟ್ಟದ ತಪ್ಪಲಿನ ಮಡಾಮಕ್ಕಿ ಗ್ರಾಮದ ಜನರ ಬದುಕು ಇಂದಿಗೂ ಸಂಕಷ್ಟದಲ್ಲೇ ಸಾಗುತ್ತಿದೆ. ಮಳೆಗಾಲದಲ್ಲಿ ಯಾರಿಗಾ ದರೂ ಅನಾರೋಗ್ಯ ಉಂಟಾದರೆ ಕೆಸರು ಮಯ ರಸ್ತೆಯಲ್ಲಿ ವಾಹನ ಬರಲಾಗದೇ ಆಸ್ಪತ್ರೆಗೆ ಕರೆದುಕೊಂಡು ಹೋಗಬೇಕಾದರೆ ಕಂಬಳಿ ಬಳಸಿ ಹೊತ್ತುಕೊಂಡೇ ಸಾಗಬೇಕಾದ ಸ್ಥಿತಿಯಿದೆ. ಆಸ್ಪತ್ರೆಗೆ ಹೋಗಲು ಕನಿಷ್ಠ 16 ಕಿ.ಮೀ. ದೂರದ ಬೆಳ್ವೆಗೆ ತೆರಳಬೇಕು.
ಮಡಾಮಕ್ಕಿಯಿಂದ ಹಂಜ, ಎಡ್ಮಲೆ, ಕಾರಿಮನೆ, ಕುಂಟಾಮಕ್ಕಿ ಕಡೆಗೆ ಸಂಚರಿಸುವ 7 ಕಿ.ಮೀ. ಉದ್ದದವರೆಗೂ ಮಣ್ಣಿನ ರಸ್ತೆ ಯಾಗಿದೆ. ಅದರಲ್ಲೂ ಎರಡು ಕಿ.ಮೀ. ರಸ್ತೆ ಯಂತೂ ಮಳೆಗಾಲದಲ್ಲಿ ಸಂಚರಿಸಲು ಸಾಧ್ಯವಿಲ್ಲದಂತಾಗುತ್ತದೆ. ಈ ರಸ್ತೆಯನ್ನೇ ಆಶ್ರಯಿಸಿ 58 ಮನೆಗಳಿದ್ದು, 250ಕ್ಕೂ ಮಿಕ್ಕಿ ಮಂದಿ ಮತದಾರರಿದ್ದಾರೆ. ಮಕ್ಕಳು ಸೇರಿದಂತೆ ನೂರಾರು ಮಂದಿ ನಿತ್ಯ ಈ ರಸ್ತೆಯನ್ನು ಆಶ್ರ ಯಿಸಿದ್ದಾರೆ. ರಸ್ತೆಗೆ ಡಾಮರು ಆಗಬೇಕು ಎನ್ನುವುದು ಕಳೆದ 35-40 ವರ್ಷಗಳ ಬೇಡಿಕೆ ಯಾಗಿದೆ. ಇದಿಷ್ಟೇ ಅಲ್ಲದೆ ಗ್ರಾಮದ ಪ್ರಮುಖ ಊರುಗಳಿಗೆ ಸಂಪರ್ಕಿಸುವ 4-5 ರಸ್ತೆಗಳ ಪಾಡು ಸಹ ಇದೇ ಆಗಿದೆ. ಇಲ್ಲಿನ 15 ಮನೆಗಳಿಗೆ ಇನ್ನೂ ಜಾಗದ ಹಕ್ಕುಪತ್ರವೇ ಸಿಕ್ಕಿಲ್ಲ. ಕೃಷಿಗೆ ನಿತ್ಯವೂ ಕಾಡು ಪ್ರಾಣಿಗಳ ಹಾವಳಿಯಿಂದ ರೈತರು ಹೈರಣಾಗಿ ಹೋಗಿದ್ದಾರೆ.
ಗ್ರಾಮದ ಹಲವೆಡೆಗಳಿಗೆ ಇನ್ನೂ ನೆಟÌರ್ಕ್ ಸಂಪರ್ಕ ಇಲ್ಲದಂತಾಗಿದೆ. ಒಂದು ಕರೆ ಮಾಡಲು 5-6 ಕಿ.ಮೀ. ದೂರ ಹೋಗ ಬೇಕಿದೆ. ಯಾರಿಗಾದರೂ ಅನಾರೋಗ್ಯ ಉಂಟಾದರೆ ಇಲ್ಲಿನ ಜನ ಪಡುವ ಪಾಡು ಆ ದೇವರಿಗೆ ಪ್ರೀತಿ. ಪ್ರತೀ ವರ್ಷ ಚುನಾವಣೆ ಬಂದಾಗೊಮ್ಮೆ ಈ ವಿಷಯ ಚರ್ಚೆಗೆ ಬರುತ್ತವೆ. ಎಲ್ಲ ಪಕ್ಷದವರಿಂದ ಆಶ್ವಾಸನೆ ಬರುತ್ತವೆ. ಆದರೆ ಚುನಾವಣೆ ಮುಗಿಯುತ್ತಿದ್ದಂತೆ ಮತ್ತೆ ಈ ಸಮಸ್ಯೆ ನನೆಗುದಿಗೆ ಬೀಳುತ್ತವೆ.
ಭರವಸೆ ಬೇಡ..
ನಮ್ಮ ಸಮಸ್ಯೆಯನ್ನು ಕಳೆದ ಅನೇಕ ವರ್ಷ ಗಳಿಂದ ಹೇಳುತ್ತಾ ಬರುತ್ತಿದ್ದೇವೆ. ಆದರೆ ಯಾರಿಗೂ ಕೇಳದಾಗಿದೆ. ಸಂಬಂಧ ಪಟ್ಟ ಅಧಿಕಾರಿಗಳು, ಜನಪ್ರತಿನಿಧಿಗಳ ಗಮನಸೆಳೆ ಯುವಲ್ಲಿ ಅವರು ವಿಫಲರಾಗಿದ್ದಾರೆ. ಚುನಾ ವಣೆ ಸಂದರ್ಭದಲ್ಲಿ ನೀಡಿದ ಭರವಸೆಗಳೆಲ್ಲ ಸುಳ್ಳಾಗಿದೆ. ನಮಗೆ ಭರವಸೆಗಳು ಬೇಡ, ಅನುಷ್ಠಾನವಷ್ಟೇ ಬೇಕು ಎನ್ನುವುದು ಗ್ರಾಮಸ್ಥರ ಒಕ್ಕೊರಲ ಆಗ್ರಹ.
-ಪ್ರಶಾಂತ್ ಪಾದೆ