Advertisement

ಆಡಿನ ಕಣಿವೆಯಲ್ಲಿ ಮೂಲಸೌಲಭ್ಯ ಮರೀಚಿಕೆ

07:42 PM Dec 09, 2019 | Lakshmi GovindaRaj |

ಗುಂಡ್ಲುಪೇಟೆ: ಬಂಡೀಪುರ ಹುಲಿ ಯೋಜನೆಯ ವ್ಯಾಪ್ತಿಯಲ್ಲಿರುವ ತಾಲೂಕಿನ ಆಡಿನಕಣಿವೆ ಗಿರಿಜನ ಕಾಲೋನಿಯಲ್ಲಿ ಅಗತ್ಯ ಮೂಲಸೌಕರ್ಯಗಳಿಂದ ವಂಚಿತವಾಗಿದೆ. ಮಂಗಲ ಗ್ರಾಮ ಪಂಚಾಯ್ತಿ ವ್ಯಾಪ್ತಿಗೆ ಸೇರಿರುವ ಗಿರಿಜನ ಕಾಲೋನಿಯಲ್ಲಿ ಸರಿ ಸುಮಾರು 60 ಕುಟುಂಬಗಳು ವಾಸಿಸುತ್ತಿವೆ.

Advertisement

ಈ ಕಾಲೋನಿಗೆ ಸಮರ್ಪಕವಾದ ರಸ್ತೆ, ವಿದ್ಯುತ್‌ ಸರಬರಾಜು ಇಲ್ಲದೇ ಜನತೆ ತೊಂದರೆ ಎದುರಿಸಬೇಕಾಗಿದೆ. ಇತ್ತೀಚಿಗೆ ಇಲ್ಲಿ ಕುಡಿಯುವ ನೀರಿನ ಕೊರತೆ ತೀವ್ರವಾಗಿದೆ. ಹಳೆಯ ಚರಂಡಿಗಳಲ್ಲಿ ಹೂಳು, ಕೊಳಚೆ ತುಂಬಿಕೊಂಡು ಸ್ವತ್ಛತೆ ದೂರವಾಗಿದ್ದರೂ, ಗ್ರಾಮ ಪಂಚಾಯ್ತಿಯ ಸಿಬ್ಬಂದಿ ಇದನ್ನು ತೆರವುಗೊಳಿಸಲು ಮುಂದಾಗಿಲ್ಲ.

ಮನೆ ಕಟ್ಟಿಸಲೂ ಮನಸ್ಸು ಮಾಡಿಲ್ಲ: ಗಿರಿಜನ ಉದ್ಧಾರದ ಬಗ್ಗೆ ಮಾತನಾಡುವ ಗ್ರಾಮ ಪಂಚಾಯ್ತಿ, ಸಮಾಜ ಕಲ್ಯಾಣ ಇಲಾಖೆ, ಗಿರಿಜನ ಕಲ್ಯಾಣ ಇಲಾಖೆಗಳು ಹಾಡಿಯ ನಿವಾಸಿಗಳಿಗೆ ವಸತಿ ಯೋಜನೆಯಲ್ಲಿ ಮನೆ ಕಟ್ಟಿಸಿಕೊಡಲು ಸಾಧ್ಯವಿದ್ದರೂ ಇನ್ನೂ ಮನಸ್ಸು ಮಾಡಿಲ್ಲ.

ಜನಪ್ರತಿನಿಧಿಗಳ ನಿರ್ಲಕ್ಷ್ಯದಿಂದ ಕಿಟಕಿ, ಬಾಗಿಲು ಮತ್ತು ಮೇಲ್ಚಾವಣಿ ಕಿತ್ತುಹೋದ ಹಾಗೂ ಗೋಡೆಗಳು ಶಿಥಿಲವಾಗಿರುವ ಯಾವುದಾದರೂ ಸಮಯದಲ್ಲಿ ಬಿದ್ದುಹೋಗುವಂತಿರುವ ಗುಡಿಸಲುಗಳಲ್ಲಿ ಗಿರಿಜನರು ತಮ್ಮ ಜೀವ ಕೈಯಲ್ಲಿ ಹಿಡಿದುಕೊಂಡು ವಾಸಿಸಬೇಕಾಗಿದೆ.

ಸಂಪರ್ಕ ರಸ್ತೆಯನ್ನೇ ನಿರ್ಮಿಸಿಲ್ಲ: ಪರಿಶಿಷ್ಟ ಹಾಗೂ ಗಿರಿಜನರ ಬಡಾವಣೆಗಳಿಗೆ ಕಾಂಕ್ರೀಟ್‌ ರಸ್ತೆ ನಿರ್ಮಿಸಬೇಕಾಗಿದ್ದರೂ ಗಿರಿ ಜನರ ಹಾಡಿಗೆ ಸಂಪರ್ಕ ರಸ್ತೆಯನ್ನೇ ನಿರ್ಮಿಸಿಲ್ಲ. ಇಲ್ಲಿ ಯಾರಿಗಾದರೂ ಅನಾರೋಗ್ಯವುಂಟಾದರೆ ಪಟ್ಟಣಕ್ಕೆ ಕೊಂಡೊಯ್ಯಲು ಯಾವುದೇ ವಾಹನ ಸೌಲಭ್ಯಗಳಿಲ್ಲ. ಅಲ್ಲದೆ, ಹದಗೆಟ್ಟ ರಸ್ತೆಯಲ್ಲಿ ಯಾವುದೇ ವಾಹನಗಳೂ ಬರಲು ನಿರಾಕರಿಸುವುದರಿಂದ ತೀವ್ರ ತೊಂದರೆಯಾಗುತ್ತಿದೆ.

Advertisement

ಹಾಡಿಯ ಸುಮಾರು 8 ಮಕ್ಕಳು ವನ್ಯಜೀವಿಗಳ ಭೀತಿಯ ನಡುವೆಯೂ ಕಾಲ್ನಡಿಗೆಯಲ್ಲಿ 4 ವರ್ಷದಿಂದ ಮಂಗಲ ಗ್ರಾಮದ ಸರ್ಕಾರಿ ಶಾಲೆಗೆ ಹೋಗಬೇಕಾಗಿದೆ. ಇನ್ನಾದರೂ ಗಿರಿಜನ ಬಗ್ಗೆ ಕಾಳಜಿ ವಹಿಸಿ ನಮ್ಮ ಕಾಲೋನಿಗೆ ಅಗತ್ಯ ಮೂಲಸೌಕರ್ಯವನ್ನು ಕಲ್ಪಿಸಲು ಜನಪ್ರತಿನಿಧಿಗಳು ಮುಂದಾಗಲಿ ಎಂದು ಇಲ್ಲಿನ ನಿವಾಸಿಗಳ ಆಗ್ರಹವಾಗಿದೆ.

ಮಂಗಲ ಗ್ರಾಪಂ ವ್ಯಾಪ್ತಿಗೆ ಸೇರಿರುವ ನಮ್ಮ ಕಾಲೋನಿಯಲ್ಲಿ ಯಾವುದೇ ರೀತಿಯ ಸೌಲಭ್ಯವಿಲ್ಲ. ಕುಡಿಯುವ ನೀರಿನ ಸೌಕರ್ಯ, ಬೀದಿದೀಪ, ಸಾರಿಗೆ ವ್ಯವಸ್ಥೆಗಳಿಲ್ಲ. ಅನಾರೋಗ್ಯವಾದರೆ ನಮಗೆ ಸೂಕ್ತ ಚಿಕಿತ್ಸೆ ಪಡೆಯಲು ಪರದಾಡುವ ಸ್ಥಿತಿ ಇದೆ. ಇನ್ನಾದರೂ ನಮ್ಮ ಜೀವದ ಬಗ್ಗೆ ಜನಪ್ರತಿನಿಧಿಗಳು ಗಮನಹರಿಸಿ, ನಮ್ಮ ಕಾಲೋನಿಗೆ ಅಗತ್ಯವಾದ ಮೂಲಸೌಕರ್ಯಗಳನ್ನು ಕಲ್ಪಿಸಲಿ.
-ಮಾದ, ಗುರುಮಲ್ಲ, ಆಡಿನ ಕಣಿವೆ

ಮೂಲ ಸೌಲಭ್ಯವನ್ನು ಕಲ್ಪಿಸುವ ಬಗ್ಗೆ ಗ್ರಾಮಸ್ಥರು ನನಗೆ ಮನವಿ ಸಲ್ಲಿಸಿದ್ದು, ಕುಡಿಯುವ ನೀರು ಹಾಗೂ ಚರಂಡಿಗಳ ಹೂಳೆತ್ತಿಸುವಂತೆ ಮತ್ತು ರಸ್ತೆ ಸೇರಿದಂತೆ ಅಗತ್ಯ ಮೂಲ ಸೌಕರ್ಯವನ್ನು ಒದಗಿಸಲು ಮಂಗಲ ಗ್ರಾಮ ಪಂಚಾಯ್ತಿಗೆ ಸೂಚನೆ ನೀಡಲಾಗುವುದು.
-ನಂಜುಂಡಯ್ಯ, ತಹಶೀಲ್ದಾರ್‌, ಗುಂಡ್ಲುಪೇಟೆ

* ಸೋಮಶೇಖರ್‌

Advertisement

Udayavani is now on Telegram. Click here to join our channel and stay updated with the latest news.

Next