Advertisement

ಅರಣ್ಯವಾಸಿಗಳಿಗೆ ಮೂಲಸೌಕರ್ಯ 

12:11 AM Sep 03, 2021 | Team Udayavani |

ಬೆಳ್ತಂಗಡಿ: ಕುದುರೆಮುಖ ರಾಷ್ಟ್ರೀಯ ಉದ್ಯಾನ ವ್ಯಾಪ್ತಿಯಲ್ಲಿ ಒಂದೂವರೆ ಶತಮಾನದಿಂದ ವಾಸಿಸುತ್ತಿರುವ ಮಲೆಕುಡಿಯ ಹಾಗೂ ಪರಿಶಿಷ್ಟ ಪಂಗಡಗಳ ಮಂದಿ ಮೂಲಸೌಕರ್ಯಗಳಾದ ವಿದ್ಯುತ್‌, ರಸ್ತೆ ಇತ್ಯಾದಿಗಳಿಂದ ವಂಚಿತರಾಗಿದ್ದಾರೆ. ಈ ಕುರಿತು ತತ್‌ಕ್ಷಣ ವರದಿ ನೀಡಬೇಕೆಂಬ ರಾಷ್ಟ್ರೀಯ ಪರಿಶಿಷ್ಟ ಪಂಗಡಗಳ ಆಯೋಗದ ಆದೇಶದ ಮೇರೆಗೆ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಡಾ| ರಾಜೇಂದ್ರ ಕೆ.ವಿ. ಗುರುವಾರ ತಾಲೂಕಿನ ಸವಣಾಲು ಗ್ರಾಮದ ಇತ್ತಿಲಪೇಲ ಮಲೆಕುಡಿಯ ನಿವಾಸಿಗಳ ಮನೆಗಳಿಗೆ ಭೇಟಿ ನೀಡಿ ಅಹವಾಲು ಆಲಿಸಿದರು.

Advertisement

ಬಳಿಕ ಮಾತನಾಡಿ, ಅರಣ್ಯ ವ್ಯಾಪ್ತಿಯಲ್ಲಿ ಏಕಾಏಕಿ ಅಭಿವೃದ್ಧಿಯ ಭರವಸೆ ಕಷ್ಟಸಾಧ್ಯ. ಅರಣ್ಯ ಕಾನೂನಿನ ಚೌಕಟ್ಟು ಮೀರದಂತೆ ರಸ್ತೆ, ವಿದ್ಯುತ್‌ ನೀಡುವ ಬಗ್ಗೆ ತಿಂಗಳ ಒಳಗೆ ವರದಿ ಸಿದ್ಧಪಡಿಸಲಾಗುವುದು ಎಂದರು.

ಒಕ್ಕಲೆದ್ದಲ್ಲಿ ಪರಿಹಾರ :

ರಾಷ್ಟ್ರೀಯ ಉದ್ಯಾನವನ ವ್ಯಾಪ್ತಿಯಲ್ಲಿ ಬೆಳ್ತಂಗಡಿ ತಾಲೂಕಿನ 9 ಗ್ರಾಮಗಳಲ್ಲಿ ಈ ರೀತಿಯ ಸಮಸ್ಯೆ ನನ್ನ ಗಮನದಲ್ಲಿದೆ. ಸರಕಾರದ ಮಾರ್ಗಸೂಚಿಯಂತೆ ಗರಿಷ್ಠ ಪ್ರಮಾಣದಲ್ಲಿ ಅಭಿವೃದ್ಧಿಗೆ ಒತ್ತು ನೀಡುತ್ತೇವೆ. ಇತ್ತಿಲಪೇಲದಲ್ಲಿರುವ 8 ಕುಟುಂಬಗಳ ಪೈಕಿ 4 ಕುಟುಂಬಗಳು ಅರಣ್ಯ ತೊರೆಯಲು ಮುಂದಾಗಿದ್ದು  ಒಂದು ತಿಂಗಳ ಒಳಗೆ ಪರಿಹಾರ ಒದಗಿಸುವಂತೆ ಅರಣ್ಯಾಧಿಕಾರಿಗಳಿಗೆ ಸೂಚಿಸಿದರು.

ಉಳಿಯಲು ಇಚ್ಛಿಸಿರುವ 4 ಕುಟುಂಬಗಳಿಗೆ ಸಾರ್ವಕಾಲಿಕ ರಸ್ತೆ ನಿರ್ಮಾಣಕ್ಕೆ ಕೇಂದ್ರ ಸರಕಾರದ ಮಾರ್ಗಸೂಚಿಯಂತೆ ಸವಣಾಲಿನಿಂದ ಇತ್ತಿಲಪೇಲ ವರೆಗೆ ಕಾಂಕ್ರೀಟ್‌ ರಸ್ತೆಯ ಜತೆಗೆ ಅರಣ್ಯ ವ್ಯಾಪ್ತಿಯಲ್ಲಿ ಬರುವ 1.5 ಕಿ.ಮೀ. ರಸ್ತೆಗೆ ಶಾಸಕ ಹರೀಶ್‌ ಪೂಂಜ ಅವರ ಸಲಹೆಯಂತೆ ಕೆಂಪು ಕಲ್ಲು ಹಾಸುವ ಬಗ್ಗೆ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದರು.

Advertisement

ಸೋಲಾರ್‌ ದೀಪ ಕಳಪೆ :

ಗಿರಿಜನ ಕಲ್ಯಾಣ ಉಪಯೋಜನೆಯಡಿ ಹಿಂದೆ ನೀಡಲಾಗಿದ್ದ ಸೋಲಾರ್‌ ದೀಪಗಳು ಮಳೆಗಾಲದಲ್ಲಿ ಉರಿಯುತ್ತಿಲ್ಲ. ಒಂದು ಮನೆಗೆ 4 ದೀಪ ಸಾಲದು. ವಿದ್ಯುತ್‌ ಸಂಪರ್ಕ ನೀಡಬೇಕು ಎಂದು ಮನೆ ಮಂದಿ ಒತ್ತಾಯಿಸಿದರು. ಸದ್ಯ ಸೋಲಾರ್‌ ವ್ಯವಸ್ಥೆ ಅನಿವಾರ್ಯ ಶಾಸಕ ಹರೀಶ್‌ ಪೂಂಜ ಮಾತನಾಡಿ, ಅರಣ್ಯ ಇಲಾಖೆ ಅನುಮತಿ ನೀಡಿದಲ್ಲಿ ರಸ್ತೆಗೆ ಸಂಬಂಧ ಪಟ್ಟಂತೆ ಅನುದಾನ ತರುತ್ತೇನೆ. ಅರಣ್ಯ ಹಕ್ಕು ಕಾಯ್ದೆಯಡಿ ಮೆಸ್ಕಾಂ ಇಲಾಖೆಯವರು ಆನ್‌ಲೈನ್‌ ಅರ್ಜಿ ಸಲ್ಲಿಸಿದ್ದಾರೆ. ಇತ್ಯರ್ಥವಾಗುವ ವರೆಗೆ ಈಗಿರುವ ಸೋಲಾರ್‌ ವ್ಯವಸ್ಥೆಯನ್ನೇ ಮುಂದುವರಿಸಬೇಕಿದೆ. ಸವಣಾಲು ಮುಖ್ಯರಸ್ತೆಯಿಂದ ಇಲ್ಲಿಗೆ 6 ಕಿ.ಮೀ. ಇದ್ದು, 1.5 ಕಿ.ಮೀ. ಮಾತ್ರ ಅರಣ್ಯ ವ್ಯಾಪ್ತಿಗೆ ಸೇರುವುದಾಗಿದೆ. ಆದ್ದರಿಂದ ಪ್ರಾಕೃತಿಕವಾಗಿ ಸಿಗುವ ಕಲ್ಲುಗಳನ್ನೇ ಬಳಸಿ ರಸ್ತೆ ಅಭಿವೃದ್ಧಿಗೆ ಆದ್ಯತೆ ನೀಡೋಣ ಎಂದರು. ಎರಡು ತಿಂಗಳಲ್ಲಿ ಸುಲ್ಕೇರಿಮೊಗ್ರು ಆದಿವಾಸಿಗಳ ವಿದ್ಯುತ್‌ ಸಮಸ್ಯೆ ಬಗೆಯರಿಯಲಿದೆ ಎಂದರು.

ಕಾರ್ಕಳ ವಿಭಾಗ ವನ್ಯಜೀವಿ ಅರಣ್ಯ ಇಲಾಖೆ ಡಿಎಫ್‌ಒ ರುದ್ರೇನ್‌, ಎಸಿಎಫ್‌ ಕಾಜಲ್‌, ಪುತ್ತೂರು ಉಪವಿಭಾಗಾಧಿಕಾರಿ ಡಾ| ಯತೀಶ್‌ ಉಳ್ಳಾಲ್‌, ಸಮಗ್ರ ಗಿರಿಜನ ಅಭಿವೃದ್ಧಿ ಯೋಜನೆ ಜಿಲ್ಲಾ ಅಧಿಕಾರಿ ಡಾ| ಹೇಮಾಲತಾ, ಬೆಳ್ತಂಗಡಿ ತಹಶೀಲ್ದಾರ್‌ ಮಹೇಶ್‌ ಜೆ., ತಾಲೂಕು ಗ್ರೇಡ್‌-2 ತಹಶೀಲ್ದಾರ್‌ ನೊಂಗೆj  ಮಹಮ್ಮದ್‌ ಆಲಿ ಅಕ್ರಂ ಷಾ ಮತ್ತಿತರ ಅಧಿಕಾರಿಗಳು ಉಪಸ್ಥಿತರಿದ್ದರು.

ಬುಡಕಟ್ಟು ಜನರ ಮೂಲಸೌಕರ್ಯ ಅಭಿವೃದ್ಧಿಗೆ 133 ಕೋ.ರೂ.ಗಳ ಯೋಜನಾ ವರದಿ ಸಿದ್ಧವಾಗಿದೆ. ಬೆಳ್ತಂಗಡಿ ತಾಲೂಕಿಗೆ 3.70 ಕೋ.ರೂ. ಮೀಸಲಿಡಲಾಗಿದೆ. ಸರಕಾರದಿಂದ ಅನುಮತಿ ಸಿಕ್ಕಾಗ ಶಾಶ್ವತ ರಸ್ತೆ ನಿರ್ಮಾಣ ಮಾಡಲಾಗುವುದು. ತಾತ್ಕಾಲಿಕ ರಸ್ತೆಯ ವ್ಯವಸ್ಥೆಯನ್ನು ಕೂಡಲೇ ಮಾಡಲಾಗುವುದು.ಡಾ| ರಾಜೇಂದ್ರ ಕೆ.ವಿ., ದ.ಕ. ಜಿಲ್ಲಾಧಿಕಾರಿ

Advertisement

Udayavani is now on Telegram. Click here to join our channel and stay updated with the latest news.

Next