ಕಾರಟಗಿ: ನೂತನ ತಾಲೂಕು ಕೇಂದ್ರ ಕಾರಟಗಿ ಪಟ್ಟಣ ಪುರಸಭೆಯಾಗಿ ಮೇಲ್ದರ್ಜೆಗೇರಿದರೂ ಕೆಲ ವಾರ್ಡ್‌ಗಳ ಜನ ಮೂಲಸೌಲಭ್ಯಗಳಿಂದ ವಂಚಿತಗೊಂಡಿದ್ದಾರೆ. ತಂತಿ ಮೇಲಿನ ನಡಿಗೆ ಎಂಬಂತೆ ನಿತ್ಯ ಸರ್ಕಸ್ ಮಾಡುತ್ತ ಓಡಾಡುವ ಪರಿಸ್ಥಿತಿ ಎದುರಾಗಿದೆ.
ಪಟ್ಟಣದ 21ನೇ ವಾರ್ಡ್‌ನಲ್ಲಿ 20 ವರ್ಷಗಳಿಂದ ಚರಂಡಿಯಿಲ್ಲದೇ ಕೊಳಚೆ ನೀರು ಹರಿಬಿಡಲಾಗುತ್ತಿತ್ತು. ಆದರೆ ಎರಡು ವರ್ಷಗಳ ಹಿಂದೆ ಪಿಡಬ್ಲ್ಯೂಡಿ ಅನುದಾನದಲ್ಲಿ ಚರಂಡಿ ಕಾಮಗಾರಿ ಕೈಗೆತ್ತಿಕೊಂಡ ಪುರಸಭೆ ಅರೆಬರೆ ಕಾಮಗಾರಿ ನಡೆಸಿದೆ. ಅನುದಾನ ಮುಗಿದಿದೆ ಎಂಬ ಕಾರಣ ನೀಡಿ ಚರಂಡಿ ಕಾಮಗಾರಿಯನ್ನು ಅರ್ಧಕ್ಕೆ ಸ್ಥಗಿತಗೊಳಿಸಿದೆ. ಇದರಿಂದಾಗಿ ವಾರ್ಡ್ ನಿವಾಸಿಗಳು ಚರಂಡಿ ದಾಟಬೇಕಾದರೆ ನಿತ್ಯ ಹರಸಾಹಸ ಮಾಡಬೇಕು. ಬೈಕ್ ಸವಾರರು ಎಷ್ಟೋ ಬಾರಿ ಚರಂಡಿಯಲ್ಲಿ ಬಿದ್ದು ಗಾಯಗೊಂಡಿದ್ದಾರೆ. ಮಕ್ಕಳನ್ನು ಶಾಲೆಗೆ ಕಳುಹಿಸಬೇಕಾದರೆ ಪಾಲಕರು ಜತೆಗೆ ಬಂದು ಚರಂಡಿ ದಾಟಿಸಬೇಕು. ವಾರ್ಡ್‌ಗೆ ಸಂಪರ್ಕ ಕಲ್ಪಿಸುವ ರಸ್ತೆ ನಿರ್ಮಿಸದೇ ನಿರ್ಲಕ್ಷ್ಯ ವಹಿಸಿರುವ ಪುರಸಭೆ ಆಡಳಿತಕ್ಕೆ ಪಟ್ಟಣದ ಜನತೆ ಹಿಡಿಶಾಪ ಹಾಕುತ್ತಿದ್ದಾರೆ.
ಚರಂಡಿ ದಾಟಲು ಎರಡು ಬಂಡೆಗಳನ್ನು ಜೋಡಿಸಲಾಗಿದೆ. ಈ ಬಂಡೆಗಳ ಮೇಲೆ ನಡೆಯುವಾಗ ಸ್ವಲವೂ ಆಯತಪ್ಪಿದರೆ ಚರಂಡಿಯಲ್ಲಿ ಬೀಳುವ ಸಂಭವವಿದೆ. ಈ ಕುರಿತು ಹಲವಾರು ಬಾರಿ ಪುರಸಭೆಗೆ ಮನವಿ ಸಲ್ಲಿಸಿದರೂ ಯಾವುದೇ ಪ್ರಯೋಜನವಾಗಿಲ್ಲ. ಇನ್ನು ಬೀದಿ ದೀಪಗಳ ನಿರ್ವಹಣೆ ಕೂಡ ಸಮರ್ಪಕವಾಗಿಲ್ಲ. ಬೀದಿ ದೀಪಗಳ ನಿರ್ವಹಣೆ ಮಾಡುವವರಿಗೆ ಬೀದಿ ದೀಪ ಹಾಕಲು ಹೇಳಿದರೆ ಹಿರಿಯ ಅಧಿಕಾರಿಗಳಿಗೆ ಕೇಳಿ ಎನ್ನುತ್ತಾರೆ. ಹೀಗಾದರೆ ಇನ್ಯಾರಿಗೆ ನಾವು ಕೇಳಬೇಕು ಎಂದು ವಾರ್ಡ್ ನಿವಾಸಿ ಮಂಜುಳಾ ಸಮಸ್ಯೆ ಹೇಳಿಕೊಂಡರು.
ಅನುದಾನ ಕೊರತೆಯಿಂದ ಚರಂಡಿ ಕಾಮಗಾರಿ ನಿಲ್ಲಿಸಿದ್ದೇವೆ. ಹೆಚ್ಚಿನ ಬಜೆಟ್ ನೀಡುವಂತೆ ಪುರಸಭೆ ಮುಖ್ಯಾಧಿಕಾರಿ ಗಮನಕ್ಕೆ ತರಲಾಗಿದೆ. ಶೀಘ್ರದಲ್ಲೇ ಚರಂಡಿ ಕಾಮಗಾರಿ ಪೂರ್ಣಗೊಳಿಸಿ ನಜೀರ್‌ಸಾಬ್ ಕಾಲೋನಿಯಲ್ಲಿ ಕಾಂಕ್ರಿಟ್ ರಸ್ತೆ ಕೂಡ ನಿರ್ಮಿಸಲಾಗುವುದು. –
ಅನ್ನಪೂರ್ಣಮ್ಮ ಗಿರಿಯಪ್ಪ ಬೂದಿ, ವಾರ್ಡ್ ಸದಸ್ಯೆ
ಪಿಡಬ್ಲೂಡಿ ಗ್ರ್ಯಾಂನಲ್ಲಿ ಚರಂಡಿ ಕಾಮಗಾರಿ ನಡೆಸಲಾಗಿತ್ತು. ಬಜೆಟ್ ಕೊರತೆಯಿಂದ ಕಾಮಗಾರಿ ಅರ್ಧಕ್ಕೆ ನಿಲ್ಲಿಸಲಾಗಿದೆ. ಹೊಸ ಕ್ರಿಯಾ ಯೋಜನೆ ತಯಾರಿಸಿದ್ದು, ಶೀಘ್ರದಲ್ಲೇ 21ನೇ ವಾರ್ಡ್ ನಲ್ಲಿ ಚರಂಡಿ ಕಾಮಗಾರಿ ಸೇರಿದಂತೆ ಪಟ್ಟಣದ ವಿವಿಧ ವಾರ್ಡ್‌ಗಳಲ್ಲಿ ಬಾಕಿಯಿರುವ ಕಾಮಗಾರಿ ಪೂರ್ಣಗೊಳಿಸಲಾಗುವುದು. –
ಎನ್. ಶಿವಲಿಂಗಪ್ಪ, ಪುರಸಭೆ ಮುಖ್ಯಾಧಿಕಾರಿ