Advertisement

ಮೂಲಸೌಕರ್ಯ ವಂಚಿತ ಕಲ್ಯಾ

09:48 PM Aug 19, 2021 | Team Udayavani |

ಕಾಪು: ಕಾಪು ಪುರಸಭಾ ವ್ಯಾಪ್ತಿಯ ಉಳಿಯಾರಗೋಳಿ ಗ್ರಾಮದ 6ನೇ ವಾರ್ಡ್‌ ಕಲ್ಯಾ ಪರಿಸರದಲ್ಲಿನ ಮನೆಗಳಿಗೆ ಸಮರ್ಪಕ ರಸ್ತೆ ಮತ್ತು ಚರಂಡಿಯ ವ್ಯವಸ್ಥೆಗಳಿಲ್ಲದೆ ನಿವಾಸಿಗಳು ಪರದಾಡುವಂತಾಗಿದೆ. ಕಲ್ಯಾ ವಾರ್ಡ್‌ನ

Advertisement

ಸುತ್ತಲೂ ಕಾಂಕ್ರೀಟ್‌ ರಸ್ತೆಯಿದ್ದರೂ ಮನೆಗಳಿಗೆ ಕನಿಷ್ಠ ಸಂಪರ್ಕ ವ್ಯವಸ್ಥೆಗೂ ಇಲ್ಲದಂತಾಗಿದೆ. ಈ ರಸ್ತೆಯನ್ನೇ ಅವಲಂಬಿಸಿ ವಾರ್ಡ್‌ ಕೆಳಗಿನ 50ಕ್ಕೂ ಅಧಿಕ ಮನೆಗಳ ನಿವಾಸಿಗಳು ಸುತ್ತು ಬಳಸಿ ಸಂಚರಿಸುವಂತಾಗಿದೆ. ಇಲ್ಲಿ ಕೆಸರು ನೀರು ಹರಿಯಲು ಕನಿಷ್ಠ ಚರಂಡಿ ವ್ಯವಸ್ಥೆಗಳೂ ಇಲ್ಲದೆ ಜನತೆ ಮೂಲಸೌಕರ್ಯಗಳಿಂದ ವಂಚಿತರಾಗಿ ಬಿಟ್ಟಿದ್ದಾರೆ.

ಉಳಿಯಾರಗೋಳಿ ಗ್ರಾ.ಪಂ. ವ್ಯವಸ್ಥೆ ಇರುವಾಗದಿಂದಲೂ ಭಾರತ್‌ ನಗರ – ಕಲ್ಯಾ ವಾರ್ಡ್‌ನ ಮೂಲ ನಿವಾಸಿಗಳು ತಮ್ಮ ಪ್ರದೇಶದಲ್ಲಿ ರಸ್ತೆ ಮತ್ತು ಚರಂಡಿ ವ್ಯವಸ್ಥೆಗಾಗಿ ಗ್ರಾಮ ಸಭೆ, ವಾರ್ಡ್‌ ಸಭೆಗಳಲ್ಲಿ ಬೇಡಿಕೆ, ಹಕ್ಕುಗಳನ್ನು ಮಂಡಿಸುತ್ತಾ ಬಂದಿದ್ದಾರೆ. ಉಳಿಯಾರಗೋಳಿ ಗ್ರಾ. ಪಂ. ವ್ಯವಸ್ಥೆಯಿಂದ ಮೇಲ್ದರ್ಜೆಗೇರಿ ಕಾಪು ಪುರಸಭೆ ರಚನೆಯಾದ ಬಳಿಕವೂ ಸ್ಥಳೀಯರು ಪುರಸಭೆ ಐದಾರು ಬಾರಿ ಮನವಿ ನೀಡಿದ್ದರೂ ಸ್ಥಳೀಯರ ಬೇಡಿಕೆ ಮಾತ್ರ ಮನವಿ ಸ್ವೀಕಾರ ಪ್ರಕ್ರಿಯೆಗಷ್ಟೇ ಸೀಮಿತವಾಗಿ ಬಿಟ್ಟಿದೆ.

ಕಾಪು ಪುರಸಭಾ ವ್ಯಾಪ್ತಿಯ ಕಲ್ಯಾ ವಾರ್ಡ್‌ಗೆ ಸೇರಿಸುವ ಈ ರಸ್ತೆಯು ಸುತ್ತಲಿನ ಕಾಪು – ಕಲ್ಯಾ ರಸ್ತೆ, ಕಾಪು-ಇನ್ನಂಜೆ, ಕಲ್ಯಾ-ಭಾರತ್‌ನಗರಕ್ಕೆ ತೆರಳುವ ಜನರಿಗೆ ಹತ್ತಿರದ ವ್ಯವಸ್ಥೆಯಾಗಿದ್ದು, ರಸ್ತೆ ನಿರ್ಮಾಣವಾದಲ್ಲಿ ಇದು ನೂರಾರು ಮಂದಿಯ ಓಡಾಟಕ್ಕೆ ಉಪಯುಕ್ತವಾಗಲಿದೆ. ರಸ್ತೆ ನಿರ್ಮಾಣಕ್ಕಾಗಿ ಖಾಸಗಿಯವರು ಈಗಾಗಲೇ 0.02.25 ಎಕ್ರೆ ಜಾಗವನ್ನು ದಾನ ಪತ್ರದ ಮೂಲಕ ಪುರಸಭೆಗೆ ಲಿಖೀತವಾಗಿ ನೀಡಿದ್ದರೂ, ಪುರಸಭೆ ಮಾತ್ರ ರಸ್ತೆ ಮಾಡಲು ಮೀನಾಮೇಷ ಎಣಿಸುತ್ತಿದೆ ಎನ್ನುವುದು ಸ್ಥಳೀಯರ ಆರೋಪವಾಗಿದೆ.

ಸಾಂಕ್ರಾಮಿಕ ರೋಗ ಭೀತಿ :

Advertisement

ಸಮರ್ಪಕ ರಸ್ತೆಯೇ ಇಲ್ಲದ ಈ ಪ್ರದೇಶದಲ್ಲಿ ಚರಂಡಿಯೂ ಇಲ್ಲದಿರುವುದು ಸ್ಥಳೀಯರ ಪರಿಸ್ಥಿತಿ ಬೆಂಕಿಯಿಂದ ಬಾಣಲೆಗೆ ಎಂಬಂತಾಗಿದೆ. ಸಮರ್ಪಕ ಚರಂಡಿಯಿಲ್ಲದ ಇಲ್ಲಿ ಖಾಸಗಿ ವಸತಿ ಸಮುತ್ಛಯವೊಂದು ನಿರ್ಮಾಣಗೊಂಡಿದ್ದು, ಖಾಸಗಿ ಅಪಾರ್ಟ್‌ಮೆಂಟ್‌ನ ಕೊಳಚೆ ನೀರು ಕೂಡ ಇದೇ ರಸ್ತೆಯಲ್ಲಿ ಹರಿದು ಹೋಗುತ್ತಿರುವುದರಿಂದ ರಸ್ತೆಯ ಇಕ್ಕೆಲಗಳಲ್ಲಿ ಬಾತ್‌ರೂಂ, ಪಾತ್ರೆ ತೊಳೆದ ಕೊಳಚೆ ನೀರು ನಿಂತು ಸಾಂಕ್ರಾಮಿಕ ರೋಗದ ಭೀತಿ ಎದುರಾಗಿದೆ.

ಐದಾರು ಬಾರಿ ಮನವಿ :  ಪುರಸಭೆ ರಚನೆಯಾದ 5 ವರ್ಷದಲ್ಲಿ ಐದಾರು ಬಾರಿ ಮನವಿ ಯನ್ನೂ ನೀಡಿದ್ದೇವೆ. ಆದಷ್ಟು ಶೀಘ್ರ ನಮ್ಮ ಊರಿಗೂ ಒಂದು 200-350 ಮೀಟರ್‌ ಉದ್ದದ ಕಾಂಕ್ರೀಟ್‌ ರಸ್ತೆ ನಿರ್ಮಾಣವಾಗಲಿ ಎಲ್ಲರ  ಆಶಯವಾಗಿದೆ. – ಬಾಬು ಪೂಜಾರಿ ಕಲ್ಯಾ, ಸ್ಥಳೀಯರು

ಅನುದಾನದ ಕೊರತೆ :

ಅನುದಾನದ ಕೊರತೆಯಿಂದಾಗಿ ಮತ್ತು ಸ್ಥಳೀಯವಾಗಿ ಜಾಗದ ಕೊರತೆಯಿಂದ ರಸ್ತೆ ನಿರ್ಮಾಣದ ಬೇಡಿಕೆಯನ್ನು ಈಡೇರಿಸಲು ಸಾಧ್ಯವಾಗಿಲ್ಲ. ಕಾಂಕ್ರೀಟ್‌ ರಸ್ತೆ ನಿರ್ಮಾಣಕ್ಕೆ ಕನಿಷ್ಠ 25 ಲಕ್ಷ ರೂ. ಅನುದಾನದ ಅಗತ್ಯವಿದ್ದು, ರಸ್ತೆಯನ್ನು ಮುಂದುವರಿಸಿ ಬೇರೆ ಕಾಂಕ್ರೀಟ್‌ ರಸ್ತೆಗೆ ಜೋಡಿಸಲು ಸ್ಥಳೀಯರಿಂದಲೇ ಅಡ್ಡಿಯಿದೆ. ಆದರೂ ಪ್ರಸ್ತುತ ಸಾಲಿನಲ್ಲಿ 15ನೇ ಹಣಕಾಸು ಯೋಜನೆಯ ಅನುದಾನವನ್ನು ಬಳಸಿಕೊಂಡು ರಸ್ತೆ ಅಭಿವೃದ್ಧಿಗೆ ಚಾಲನೆ ನೀಡಲಾಗುವುದು. – ವೆಂಕಟೇಶ ನಾವಡ ಮುಖ್ಯಾಧಿಕಾರಿ, ಕಾಪು ಪುರಸಭೆ

ಇತರ ಸಮಸ್ಯೆಗಳೇನು? :

  • ರಿಕ್ಷಾ, ಕಾರು, ಪುರಸಭೆ ತ್ಯಾಜ್ಯ ಸಂಗ್ರಹಣೆ ವಾಹನ ಇತ್ಯಾದಿಗಳ ಓಡಾಟಕ್ಕೆ ತೊಂದರೆ
  • ಗ್ಯಾಸ್‌ ಸಿಲಿಂಡರ್‌ ಮನೆಗೆ ತರಲು 200 ಮೀಟರ್‌ ಓಡಾಡುವ ಅನಿವಾರ್ಯತೆ.
  • ಸಾಂಕ್ರಾಮಿಕ ರೋಗ ಭೀತಿ
  • ಚರಂಡಿಯಿಲ್ಲದೆ ರಸ್ತೆಯಲ್ಲೇ ನೀರು ಹರಿಯು ತ್ತಿದ್ದು, ಬಾವಿಯ ನೀರು ಕಲುಷಿತಗೊಳ್ಳುತ್ತಿದೆ.
  • ಮನೆಯಂಗಳಕ್ಕೆ ಹರಿದು ಬರುವ ಮಳೆ ನೀರು.

 

-ರಾಕೇಶ್‌ ಕುಂಜೂರು

Advertisement

Udayavani is now on Telegram. Click here to join our channel and stay updated with the latest news.

Next