ಜಗತ್ತಿನ ವಿವಿಧೆಡೆ ಹರಡಿಕೊಂಡಿರುವ ಇನ್ಫೋಸಿಸ್ ಸಾಮ್ರಾಜ್ಯದಲ್ಲಿ ಸುಮಾರು 2.6 ಲಕ್ಷ ಉದ್ಯೋಗಿ ಗಳಿದ್ದಾರೆ. ನಾನಾ ಕಡೆ ಇನ್ಫೋಸಿಸ್ ಕ್ಯಾಂಪಸ್‌ಗಳಿವೆ. ಮೈಸೂರು ಕ್ಯಾಂಪಸ್ ನೋಡಿದವರು ಅದು ಭಾರತದಲ್ಲಿದೆಯೇ ಎಂದು ಅಚ್ಚರಿ ಪಡಬಹುದಂತೆ. 2007ರಲ್ಲಿಯೇ ಸುಮಾರು 10,000 ನೌಕರರಿದ್ದರು ಇಲ್ಲಿ. ಕಂಪೆನಿಗೆ ಸೇರಿದ ಎಂಜಿನಿ ಯರ್‌ಗಳಿಗೆ ತರಬೇತಿ ನಡೆ ಯುವುದು ಅಲ್ಲಿ. 2007ರಲ್ಲಿ ಅಲ್ಲೊಂದು ಸ್ಟ್ರಾಟೆಜಿ ಕ್ಯಾಂಪ್ ನಡೆ ಯುತ್ತಿತ್ತು. ಮುಂದಿನ ವರ್ಷ ಏನು ಮಾಡಬೇಕೆಂದು ಚಿಂತನ-ಮಂಥನ ನಡೆ ಸುವ ಮೂರ್‍ನಾಲ್ಕು ದಿನಗಳ ಪ್ರಮುಖ ಮೀಟಿಂಗ್ ಇದು.
ಇನ್ಫೋಸಿಸ್ ಎಂದರೆ ಕೇಳಬೇಕೆ? ಬೃಹದಾಕಾರದ ಇಂದ್ರಲೋಕದ ಸಭಾಂಗಣವೆಂಬಂತಿದ್ದ ಅಲ್ಲಿ ದೊಡ್ಡ ಔತಣ ನಡೆಯುತ್ತಿತ್ತು. ಕಂಪೆನಿ ಉದ್ಯೋಗಿ ಬೆಂಗಳೂರಿನ ಸುಂದರ ಮಡಕ್ಷಿರ ಅವರೂ ಒಂದು ತಟ್ಟೆಯಲ್ಲಿ ಅನ್ನ, ಸಾರು, ಹಪ್ಪಳ ಹಾಕಿಕೊಂಡು ಊಟ ಮಾಡುತ್ತಿದ್ದರು. “ನಾನಿಲ್ಲಿ ಕೂತ್ಕೊಬಹುದಾ?’ ಎಂಬ ಧ್ವನಿ ಸುಂದರರಿಗೆ ಕೇಳಿಸಿತು. ಹಿಂದಿರುಗಿ ನೋಡುತ್ತಾರೆ ಇನ್ಫೋಸಿಸ್ ಸಾಮ್ರಾಜ್ಯಾಧಿಪತಿ ಎನ್.ಆರ್.ನಾರಾಯಣಮೂರ್ತಿ. ಸುಂದರರ ಊಟದ ತಟ್ಟೆ ನೋಡಿ “ದ್ಯಾಟ್ ಈಸ್ ಆಲ್ ವಿ ನೀಡ್’ ಎಂದರು. “ಇನ್ನೇನು ಬೇಕು ಹೇಳಿ. ಕೊನೆಗೆ ಬೇಕಾದದ್ದು ಇಷ್ಟೇ ಅಲ್ವೆ? ನೀವಾದರೂ ಅನ್ನ, ತಿಳಿಸಾರಿನ ಜತೆ ಒಂದು ಹಪ್ಪಳವನ್ನಾದರೂ ಹಾಕಿಕೊಂಡಿದ್ದೀರಿ. ನನ್ನ ದೇಹಕ್ಕೆ ಅದೂ ನಾಟೂದಿಲ್ಲ’ ಎಂದರು ಮೂರ್ತಿ. ಇದು ಮೂರ್ತಿಯವರ ಅಂತರಂಗದ (ಇಡೀ ವಿಶ್ವಕ್ಕೂ ಅನ್ವಯ) ವಸ್ತುಸ್ಥಿತಿ.
ಸಮಸ್ಯೆಗಳ ಬಗೆಗೆ ಕೇಳಿದರೆ “ಸಂಘ ಸಂಸ್ಥೆಗಳೆಂದರೆ ಸಮಸ್ಯೆ ಬಂದೇ ಬರುತ್ತದೆ. ಸತ್ತವನಿಗೆ ಮಾತ್ರ ಸಮಸ್ಯೆ ಬರುವುದಿಲ್ಲ. ಬದುಕಿದ್ದವನಿಗೆ ಸಮಸ್ಯೆ ಇದ್ದೇ ಇರುತ್ತದೆ. ಸಮಸ್ಯೆಗಳು ಬಂದಾಗ ಹಿಂದೇಟು ಹಾಕದೆ ಪರಿಹರಿಸಲು ಪ್ರಯತ್ನಿಸಬೇಕು’ ಎನ್ನುತ್ತಾರೆ ಮೂರ್ತಿಯವರು.
ಒಬ್ಬ ದೊಡ್ಡ ಗ್ರಾಹಕ ಕೈತಪ್ಪಿ ಹೋದರು. ಅದು ವ್ಯಾವಹಾರಿಕವಾಗಿ ದೊಡ್ಡ ನಷ್ಟ. ಮೂರ್ತಿಯವರು ಕೂಡಲೇ ಹಿರಿಯ ಅಧಿಕಾರಿಗಳನ್ನು ಕರೆದು ಸಭೆ ನಡೆಸಿ “ಮುಂದೆ ಈ ತೆರನಾದ ಸಮಸ್ಯೆ ಬರಬಾರದು. ಇದಕ್ಕೆ ಪರಿಹಾರ ಕಂಡು ಹುಡುಕಬೇಕು’ ಎಂದು ಕಿವಿಮಾತು ಹೇಳಿದರು. ದೊಡ್ಡ ಗ್ರಾಹಕ ತಪ್ಪಿ ಹೋದದಕ್ಕೆ ಬೈಯಲಿಲ್ಲ, ಸಿಟ್ಟುಗೊಳ್ಳಲಿಲ್ಲ. ಅವರ ಪ್ರಕಾರ ಬೈದರೆ, ಸಿಟ್ಟುಗೊಂಡರೆ ಸಮಸ್ಯೆ ಪರಿಹಾರವಾಗುವುದಿಲ್ಲ, ಬದಲಾಗಿ ಜಾಸ್ತಿಯೇ ಆಗುತ್ತದೆ. ಮುಂದೆ ಇಂತಹ ಸಮಸ್ಯೆ ಬರಬಾರದು. ಈ ಗ್ರಾಹಕ ಬಿಟ್ಟು ಹೋಗಲು ಏನೋ ಕಾರಣವಿದೆ. ಅದನ್ನು ಪರಿಹರಿಸಬೇಕು ಎಂಬುದು ಅವರ ನಿಲುವು.
ಇನ್ನೊಬ್ಬ ಐಟಿ ದಿಗ್ಗಜ ವಿಪ್ರೋ ಸಂಸ್ಥೆಯ ವರಿಷ್ಠ ಅಜೀಂ ಹಾಶಿಂ ಪ್ರೇಮ್‌ಜೀ. ಮುಂಬಯಿಯ ತಾಜ್ ಹೊಟೇಲ್‌ನಲ್ಲಿ 2003-04ರಲ್ಲಿ ಅವರಿಗೊಂದು ಸತ್ಕಾರ ಕೂಟ ನಡೆಯಿತು. ಇಕಾನಾಮಿಕ್ ಟೈಮ್ಸ್ ಲೈಫ್ಟೈಮ್ ಅಚೀವ್‌ಮೆಂಟ್ ಅವಾರ್ಡ್ ಅವರಿಗೆ ಸಲ್ಲುವ ಸಮಾರಂಭ. ಅಜೀಂ ಪ್ರೇಮ್‌ಜೀ ಮತ್ತು ಸುಂದರ ಮಡಕ್ಷಿರ ಒಂದೇ ವಿಮಾನದಲ್ಲಿ ಬೆಂಗಳೂರಿನಿಂದ ಹೋಗಿದ್ದರು. ಆಗ ಸುಂದರ ವಿಪ್ರೋದಲ್ಲಿ ಕೆಲಸ ಮಾಡುತ್ತಿದ್ದರು. ಹೊಟೇಲ್‌ನಲ್ಲಿ ಸಂಘಟಕರು ಸಭಾಂಗಣದ ಮುಂಭಾಗ ಅಜೀಂ ಪ್ರೇಮ್‌ಜೀಯವರನ್ನು ಬೆಂಝ್ನಂತಹ ಐಶಾರಾಮಿ ಕಾರಿನಲ್ಲಿ ಬರುವುದನ್ನು ನಿರೀಕ್ಷಿಸುತ್ತ ಸ್ವಾಗತಕ್ಕೆ ಕಾದು ನಿಂತಿದ್ದರು. ಅಜೀಂ ಪ್ರೇಮ್‌ಜೀ ಮತ್ತು ಸುಂದರ ಅವರು ಮುಂಬಯಿಯ ಖಾಲಿ- ಪೀಲಿ ಟ್ಯಾಕ್ಸಿಯಲ್ಲಿ (ಬ್ಲ್ಯಾಕ್ ಆ್ಯಂಡ್ ಯೆಲ್ಲೊ) ತಾಜ್ ಹೊಟೇಲ್‌ನತ್ತ ಹೊರಟರು. ಈ ತೆರನಾಗಿ ಅಜೀಂ ಪ್ರೇಮ್‌ಜೀ ಆಗಮನವನ್ನು ನಿರೀಕ್ಷಿಸಿರಲಿಲ್ಲ. ಹೊಟೇಲ್ ಆವರಣದೊಳಗೆ ಈ ಕಾರನ್ನು ಬಿಡಲೇ ಇಲ್ಲ. ಅದಕ್ಕಾಗಿ ತಕರಾರು ಎತ್ತದೆ ನಡೆದುಕೊಂಡು ಸಭಾಂಗಣಕ್ಕೆ ಬಂದರು. ಪ್ರೇಮ್‌ಜೀಯನ್ನು ಸ್ವಾಗತಿಸಲು ನಿಂತವರಿಗೆ ಪಾದಚಾರಿಗಳನ್ನು ಕಂಡು ಇದಾವ ಜನರು ಎಂಬ ಕುತೂಹಲ. ಬೆಸ್ಟ್ ಟಾಪ್‌ಮೋಸ್ಟ್ ಬಿಸಿನೆಸ್‌ಮ್ಯಾನ್ ಗುರುತು ಸಿಕ್ಕಿದಾಗ ಆಶ್ಚರ್ಯವೋ ಆಶ್ಚರ್ಯ.
ಒಮ್ಮೆ ಬೆಂಗಳೂರಿನ ವಿಪ್ರೋ ಆವರಣದೊಳಗೆ ನಡೆದ ಹಿರಿಯ ಕಾರ್ಯನಿರ್ವಾಹಕ ಅಧಿಕಾರಿಗಳ ಸಭೆಯಲ್ಲಿ ಅಧಿಕಾರಿಗಳ ಮಾತಿನ ಚಕಮಕಿ ತಾರಕ ಮಟ್ಟಕ್ಕೇರಿತ್ತು. ಕೋಪ ತಾಪಗಳೆಲ್ಲ ಇತ್ತು. ಮೂರು ಗಂಟೆ ಕಾಲ ಸಭೆಯಲ್ಲಿ ಪ್ರೇಮ್‌ಜೀ ಕುಳಿತು ಶಾಂತವಾಗಿ ಕೇಳಿಸಿಕೊಂಡರು. ಅನಂತರ “ವೈಯಕ್ತಿಕ ಟೀಕೆ ಬೇಡ. ಸಭ್ಯ ರೀತಿಯಲ್ಲಿ ಮಾತನಾಡಬಹುದಲ್ಲ’ ಎಂಬ ಕಿವಿಮಾತು ನುಡಿದರು. ಅಧಿಕಾರಿಗಳೇ ಅರ್ಧ ಗಂಟೆಯಲ್ಲಿ ಒಂದು ನಿರ್ಣಯಕ್ಕೆ ಬಂದರು. ಕೊನೆಯಲ್ಲಿ “ನಿಮಗೆ ಸರಿ ಅಂತ ಕಂಡರೆ ಹಾಗೆಯೇ ಮಾಡೋಣ’ ಎಂದು ಪ್ರೇಮ್‌ಜೀ ಅಂತಿಮ ತೀರ್ಪಿಗೆ ಸಹಿಮಾಡಿದಂತೆ ಉದ್ಗರಿಸಿದರು. ಪ್ರೇಮ್‌ಜೀ ಮಧ್ಯಪ್ರವೇಶ ಮಾಡಿದ್ದರೆ ಅವರು ಹೇಳಿದಂತೆ ನಿರ್ಣಯವನ್ನು ತಳೆಯ ಬಹುದಿತ್ತು. ತನ್ನೆದುರೇ ಹೀಗೆ ನಡೆಯುತ್ತಿದೆ ಎಂದು ಕೋಪ ಗೊಳ್ಳಬಹುದಿತ್ತು. ಇದಾವುದನ್ನೂ ಮಾಡಲಿಲ್ಲ.
ಸಭೆ ನಡೆಯುವ ಬೋರ್ಡ್ ರೂಮ್‌ನಲ್ಲಿ ಸಭೆ ನಡೆದ ಬಳಿಕ ಅಜೀಂ ಪ್ರೇಮ್‌ಜೀ ಸ್ವತಃ ಲೈಟ್‌ಗಳನ್ನು ಆರಿಸುತ್ತಿದ್ದರು.
”We had lot of money to spend. But no money to waste’ -ಇದು 2.5 ಲಕ್ಷ ಮಾನವ ಸಂಪನ್ಮೂಲವನ್ನು ಆಳುತ್ತಿದ್ದವನ ಉದ್ಗಾರ. ಎಲ್ಲದಕ್ಕೂ ಮೌಲ್ಯ ಇದೆ. ಖರ್ಚು ಮಾಡುವುದಾದರೆ ವಿಪ್ರೋಗೆ ಮಾಡೋಣ. ಆದರೆ ವೇಸ್ಟ್ ಮಾಡಬಾರದು ಎಂಬುದು ನಿಲುವು. ವಿಪ್ರೋ ಷೇರು ದರ ಬಹಳಷ್ಟು ಏರಿದ ದಿನ ಅಜೀಂ ಪ್ರೇಮ್‌ಜೀ ಭಾರತದ ಅತೀ ಸಿರಿವಂತ. ಸಹೋದ್ಯೋಗಿಗಳು ನಿಮಗೆ ಏನು ಅನಿಸುತ್ತಿದೆ ಎಂದು ಕೇಳಿದರಂತೆ. ‘Beyond a point it does not matter” (ಒಂದು ಹಂತದ ಅನಂತರ ಅದಕ್ಕೆ ಬೆಲೆ ಇಲ್ಲ) ಎಂದು ಉತ್ತರಿಸಿದ್ದರು. ಅಜೀಂ ಪ್ರೇಮ್‌ಜೀಯಾಗಲಿ, ಎನ್. ಆರ್. ನಾರಾಯಣಮೂರ್ತಿಯಾಗಲಿ ಅವರ ಪ್ರತಿಷ್ಠಾನಗಳ ಮೂಲಕ ಸಮಾಜ ಸೇವೆಯನ್ನು ಧಾರಾಳವಾಗಿ ಮಾಡುತ್ತಿದ್ದಾರೆ. ಇವರು ದುಡ್ಡಿದ್ದರೂ ಸಮಾಜಮುಖೀ ಸರಳಜೀವಿಗಳು.
-ಮಟಪಾಡಿ ಕುಮಾರಸ್ವಾಮಿ