Advertisement

ಇನ್ಫಿ ಷೇರು ದರದಲ್ಲಿ ಭಾರೀ ಕುಸಿತ : ಇದು ಕಳೆದ ಆರು ವರ್ಷಗಳಲ್ಲೇ ಗರಿಷ್ಠ

09:14 AM Oct 24, 2019 | |

ಮುಂಬಯಿ: ಪ್ರಸಿದ್ಧ ಬಹುರಾಷ್ಟ್ರೀಯ ಸಾಫ್ಟ್ವೇರ್ ಕಂಪೆನಿ ಇನ್ಫೋಸಿಸ್ ನ ಷೇರು ದರಗಳಲ್ಲಿ ಭಾರೀ ಕುಸಿತ ಕಂಡಿದೆ. ಕಂಪೆನಿಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸಲಿಲ್ ಪಾರೇಖ್ ಮತ್ತು ಮುಖ್ಯ ಹಣಕಾಸು ಅಧಿಕಾರಿ ನೀಲಾಂಜನ್ ರಾಯ್ ಅವರು ಆದಾಯ ವೃದ್ಧಿಗೆ ಅನೀತಿಯ ಕ್ರಮಗಳನ್ನು ಅನುಸರಿಸುತ್ತಿದ್ದಾರೆ ಎಂಬ ಆರೋಪಗಳು ಕೇಳಿಬಂದಿದ್ದು ಇದರ ನೇರ ಪರಿಣಾಮ ಕಂಪೆನಿಯ ಷೇರು ದರಗಳ ಮೇಲಾಗಿದೆ ಎನ್ನಲಾಗುತ್ತಿದೆ.

Advertisement

ಮಂಗಳವಾರದ ವ್ಯವಹಾರದ ವೇಳೆ ಇನ್ಫೋಸಿಸ್ ಷೇರುಗಳು ಕಳೆದ ಆರು ವರ್ಷಗಳಲ್ಲೇ ಸರ್ವಾಧಿಕ ಶೇ.16ರಷ್ಟು ಕುಸಿತ ಕಂಡಿದೆ. ಮಾರುಕಟ್ಟೆ ಪ್ರಾರಂಭದ ವೇಳೆಗೆ ಶೇ.10ರಷ್ಟು ಕುಸಿತದೊಂದಿಗೆ ಅಂದರೆ 691 ರೂ.ಗಳೊಂದಿಗೆ ಆರಂಭವಾಗಿದ್ದು, ಬಳಿಕ ಕೂಡಲೇ 634.35 ರೂ.ಗೆ ಕುಸಿಯಿತು. ದಿನದ ಅಂತ್ಯಕ್ಕೆ 640.30ರೂ.ಗೆ ತಲುಪಿದೆ. ಇದು 2013ರ ಎಪ್ರಿಲ್ ನಲ್ಲಿದ್ದ ಕಂಪೆನಿಯ ಶೇರು ದರವಾಗಿದೆ. ಇದರೊಂದಿಗೆ ಕಂಪೆನಿಯ ಮಾರುಕಟ್ಟೆ ಮೌಲ್ಯ 53,450.92 ಕೋಟಿ ರೂ.ಗಳಷ್ಟು ಇಳಿಕೆ ಕಂಡಿದ್ದು, ಈಗ ಅದು 2,76,300.08 ಕೋಟಿ ರೂ. ಆಗಿದೆ. ಇನ್ಫಿ ಷೇರುಗಳಲ್ಲಿನ ಈ ದಿಢೀರ್ ಇಳಿಕೆ ಷೇರು ಮಾರುಕಟ್ಟೆಯ ಮುಂಚೂಣಿ ಕಂಪೆನಿಗಳಲ್ಲೇ ಕಂಡುಬಂದ ಅತಿ ದೊಡ್ಡ ಇಳಿಕೆಯಾಗಿದೆ.

ಸೆ.30ರಂದು ಬಂದ ದೂರುಗಳ ಅನ್ವಯ ಇನ್ಫೋಸಿಸ್ ಅಧ್ಯಕ್ಷ ನಂದನ್ ನೀಲೇಕಣಿ ಅವರು ಹೇಳಿಕೆಯನ್ನು ನೀಡಿದ್ದು ಈ ದೂರುಗಳನ್ನು ಕಂಪೆನಿಯ ಲೆಕ್ಕಪತ್ರ ಸಮಿತಿಗೆ ವರ್ಗಾಯಿಸಿರುವುದಾಗಿ ಹೇಳಿದ್ದರು. “ನೈತಿಕ ಗುಂಪು’ ಎಂದು ಕರೆಯಲಾದ ಗುಂಪೊಂದು ಕಂಪೆನಿಯಲ್ಲಿ ಅನೀತಿಯ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ ಎಂದು ದೂರಿತ್ತು.

ಅದರನ್ವಯ ದೂರನ್ನು ಸಮಿತಿಗೆ ಹಸ್ತಾಂತರಿಸಲಾಗಿದ್ದು, ಸಮಿತಿಯು ನಿರ್ದಿಷ್ಟ ಸಮಯದಲ್ಲಿ ತನಿಖೆಯನ್ನು ಕೈಗೊಳ್ಳಲಿದೆ ಮತ್ತು ಕಾರ್ಪೊರೆಟ್ ಆಡಳಿತದ ಅತ್ಯುನ್ನತ ಮಟ್ಟವನ್ನು ಕಾಯ್ದುಕೊಳ್ಳುವುದರೊಂದಿಗೆ ಷೇರುದಾರರ ಹಿತಾಸಕ್ತಿಯನ್ನು ಕಾಪಿಟ್ಟುಕೊಳ್ಳಲು ಬದ್ಧವಾಗಿದೆ ಎಂದು ನಿಲೇಕಣಿ ತಿಳಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next