Advertisement

ಇನ್‌ಫೋಸಿಸ್‌: ಕೊಟ್ಟಾರದಿಂದ ಮುಡಿಪು ಕ್ಯಾಂಪಸ್ ಗೆ ಸ್ಥಳಾಂತರ

05:29 AM Mar 17, 2019 | |

ಮಹಾನಗರ : ಕೊಟ್ಟಾರದಲ್ಲಿ ಹಲವು ವರ್ಷ ಗಳಿಂದ ಕಾರ್ಯನಿರ್ವಹಿಸುತ್ತಿದ್ದ ದೇಶದ ಬೃಹತ್‌ ಐಟಿ ಕಂಪೆನಿ ಇನ್‌ಫೋಸಿಸ್‌ ಮಾರ್ಚ್‌ ಅಂತ್ಯದ ವೇಳೆಗೆ ತನ್ನದೇ ಸ್ವಂತ ಮುಡಿಪು ಕ್ಯಾಂಪಸ್‌ಗೆ ಪೂರ್ಣಮಟ್ಟದಲ್ಲಿ ಸ್ಥಳಾಂತರಗೊಳ್ಳಲಿದೆ.

Advertisement

ಕೊಣಾಜೆ ಸಮೀಪದ ಮುಡಿಪುವಿನ ಕಂಬಳಪದವಿನಲ್ಲಿ ಕೆಲವು ವರ್ಷಗಳ ಹಿಂದೆ ಸ್ಥಾಪನೆಯಾದ ಇನ್‌ಫೋಸಿಸ್‌ನ ಸುಸಜ್ಜಿತ ಕ್ಯಾಂಪಸ್‌ಗೆ ಕೊಟ್ಟಾರದ ಕ್ಯಾಂಪಸ್‌ನ ಸುಮಾರು 500ರಷ್ಟು ಉದ್ಯೋಗಿಗಳನ್ನು ಸ್ಥಳಾಂತರಿಸಲಾಗುತ್ತಿದೆ. ಇಲ್ಲಿದ್ದ ಬಿಪಿಒ ವಿಭಾಗವನ್ನು ಕಳೆದ ವರ್ಷವಷ್ಟೇ ಮುಡಿಪು ಕ್ಯಾಂಪಸ್‌ಗೆ ಸ್ಥಳಾಂತರಗೊಳಿಸಲಾಗಿತ್ತು. ಕೆಲವು ತಿಂಗಳಿನಿಂದ ಈ ಪ್ರಕ್ರಿಯೆ ಆರಂಭವಾಗಿದೆ. ಮಾರ್ಚ್‌ ಅಂತ್ಯದ ವೇಳೆಗೆ ಪೂರ್ಣಮಟ್ಟದಲ್ಲಿ ಕೊಟ್ಟಾರದಿಂದ ಮುಡಿಪು ಕ್ಯಾಂಪಸ್‌ಗೆ ಸ್ಥಳಾಂತರ ನಡೆಯಲಿದೆ. ಸ್ಥಳಾಂತರವಾದ ಬಳಿಕ ಕೊಟ್ಟಾರದ ಕ್ಯಾಂಪಸ್‌ನ ಬಳಕೆ ಬಗ್ಗೆ ಇನ್‌ಫೋಸಿಸ್‌ ಉನ್ನತ ಮಟ್ಟದ ಆಡಳಿತ ಸಮಿತಿ ನಿರ್ಧಾರ ಕೈಗೊಳ್ಳಲಿದೆ ಎಂದು ಇನ್‌ಫೋಸಿಸ್‌ನ ಉನ್ನತ ಮೂಲಗಳು ‘ಉದಯವಾಣಿ’ಗೆ ಸ್ಪಷ್ಟಪಡಿಸಿವೆ.

ಸದ್ಯ ಕೊಟ್ಟಾರದಲ್ಲಿರುವ ಇನ್ಫೋಸಿಸ್‌ ಕಟ್ಟಡದ ಜಾಗ ಮೊದಲು ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರದ ಕೈಯಲ್ಲಿತ್ತು. ಅವರು ಅಲ್ಲಿ ಶಾಪಿಂಗ್‌ ಕಾಂಪ್ಲೆಕ್ಸ್‌ ನಿರ್ಮಿಸುವ ಯೋಜನೆ ಹೊಂದಿ ಸ್ವಲ್ಪ ಕೆಲಸ ಪ್ರಾರಂಭಿಸಿದ್ದರು. ಆದರೆ ನಷ್ಟದಿಂದಾಗಿ ಕೆಲಸ ಸ್ಥಗಿತಗೊಂಡಿತ್ತು. ಅಂದಿನ ಜಿಲ್ಲಾಧಿಕಾರಿ ಭರತ್‌ಲಾಲ್‌ ಮೀಣಾ ಅವರು ಈ ಜಾಗವನ್ನು ಬಸ್‌ ನಿಲ್ದಾಣ ಮಾಡುವ ಬಗ್ಗೆಯೂ ಪ್ರಸ್ತಾವಿಸಿದ್ದರು. ಆ ಬಳಿಕ ಅದನ್ನು ಕೈಬಿಟ್ಟು ಎಸ್‌. ಎಂ. ಕೃಷ್ಣ ಅವರು ಈ ಭೂಮಿಯನ್ನು ಇನ್‌ ಫೋಸಿಸ್‌ಗೆ ನೀಡಿದ್ದರು. ಮಾಜಿ ಮುಖ್ಯಮಂತ್ರಿ ಎಸ್‌.ಎಂ.ಕೃಷ್ಣ ಇದನ್ನು ಉದ್ಘಾಟಿಸಿದ್ದರು. ಈಜುಕೊಳ, ಓಪನ್‌ ಥಿಯೇಟರ್‌, ಜಿಮ್ನಾಶಿಯಂ ಸಹಿತ ಸಮಗ್ರ ಸೌಲಭ್ಯ ಹೊಂದಿದ ಈ ಕಟ್ಟಡ 2 ಲಕ್ಷ ಚದರಡಿ ವಿಶಾಲವಾಗಿದೆ.

ಒಂದು ಕೋನದಿಂದ ಹಡಗಿನಂತೆಯು, ಇನ್ನೊಂದು ಕೋನದಿಂದ ಮರುಭೂಮಿಯ ಕಟ್ಟಡದಂತೆಯೂ ಕಾಣುತ್ತದೆ. ತನ್ನ ವಿಶೇಷ ವಿನ್ಯಾಸದಿಂದಲೇ ಗಮನ ಸೆಳೆಯುತ್ತಾ ದಶಕಗಳಿಂದ ಮಂಗಳೂರಿನ ಲ್ಯಾಂಡ್‌ಮಾರ್ಕ್‌ ಆಗಿತ್ತು.

ಸುಸಜ್ಜಿತ ಮುಡಿಪು ಕ್ಯಾಂಪಸ್‌
ಸುಮಾರು 350ಕ್ಕೂ ಅಧಿಕ ಎಕ್ರೆಯಲ್ಲಿ ಮುಡಿಪುವಿನಲ್ಲಿ ಇನ್‌ಫೋಸಿಸ್‌ ಕ್ಯಾಂಪಸ್‌ ಕೆಲವು ವರ್ಷದ ಹಿಂದೆ ನಿರ್ಮಾಣವಾಗಿದ್ದು, 11,000 ಸಿಬಂದಿ ಕೆಲಸ ಮಾಡುವ ಸಾಮರ್ಥ್ಯ ಹೊಂದಿದೆ. ಕ್ರಿಕೆಟ್‌ ಸ್ಟೇಡಿಯಂ ಸಹಿತ ಸುಸಜ್ಜಿತವಾಗಿ ಕ್ಯಾಂಪಸ್‌ ನಿರ್ಮಾಣವಾಗಿದೆ. ಕ್ಯಾಂಪಸ್‌ನ ಮುಂಭಾಗದ ರಸ್ತೆಯನ್ನು ಕೂಡ ಸುಸಜ್ಜಿತವಾಗಿ ಸಿದ್ಧಪಡಿಸಲಾಗಿದೆ.

Advertisement

ಸಂಚಾರ ಸವಾಲು
ಮುಡಿಪು ಕ್ಯಾಂಪಸ್‌ನಲ್ಲಿ ಸದ್ಯ ಸುಮಾರು 4,000ದಷ್ಟು ಉದ್ಯೋಗಿಗಳು ಬೇರೆ ಬೇರೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದಾರೆ. ಇದರಲ್ಲಿ ಬಹುತೇಕ ಉದ್ಯೋಗಿಗಳು ಕಂಪೆನಿಯ ಸಾರಿಗೆ ವ್ಯವಸ್ಥೆಯನ್ನೇ ನೆಚ್ಚಿಕೊಂಡಿದ್ದಾರೆ. ಉಳಿದವರು ಸ್ಥಳೀಯವಾಗಿ ವಾಸ್ತವ್ಯ ಹೂಡಿದ್ದಾರೆ. ಇದೀಗ ಕೊಟ್ಟಾರ ಕ್ಯಾಂಪಸ್‌ನಿಂದ ಮುಡಿಪು ಭಾಗಕ್ಕೆ ಶಿಫ್ಟ್ ಆದ ಕಾರಣದಿಂದ ಅಲ್ಲಿಗೆ ಬರುವ ಉದ್ಯೋಗಿಗಳು ಮುಂದೆ ಮುಡಿಪುವಿಗೆ ಬರಬೇಕಿದೆ.

ವಾಹನ ದಟ್ಟಣೆ
ಆದರೆ, ಪಂಪ್‌ವೆಲ್‌, ತೊಕ್ಕೊಟು ಫ್ಲೈಓವರ್‌ ಸಮಸ್ಯೆಯಿಂದ ಸದ್ಯ ಸಂಚಾರ ದಟ್ಟಣೆ, ತೊಕ್ಕೊಟ್ಟಿನಿಂದ ದೇರಳಕಟ್ಟೆಯವರೆಗೆ ರಸ್ತೆ ಕಿರಿದಾಗಿ ವಾಹನ ದಟ್ಟಣೆ ಅಧಿಕವಾಗಿ ಸಂಚಾರ ಸಮಸ್ಯೆ ಕಾಡುತ್ತಿದೆ. ಉದ್ಯೋಗಿಗಳ ಸಂಚಾರಕ್ಕೆ ಇದೊಂದು ದೊಡ್ಡ ತಲೆನೋವು. 

ವಿಪ್ರೋ ಇನ್ನೂ ಬರಲಿಲ್ಲ!
ಪೂರ್ಣಮಟ್ಟದಲ್ಲಿ ಕೊಟ್ಟಾರದಿಂದ ಮುಡಿಪುವಿಗೆ ಇನ್‌ಫೋಸಿಸ್‌ ಶಿಫ್ಟ್ಆಗುವುದರಿಂದ ನಗರದಲ್ಲಿ ಐಟಿ ಉದ್ಯಮಕ್ಕೆ ಹೊಡೆತ ಬಿದ್ದಂತಾಗಿದೆ. ಸದ್ಯ ಒಂದೆರಡು ಸಣ್ಣ ಐಟಿ ಉದ್ಯಮಗಳು ನಗರದಲ್ಲಿ ಕಾರ್ಯನಿರ್ವಹಿಸುತ್ತಿದ್ದರೂ ದೊಡ್ಡಮಟ್ಟದ ಐಟಿ ಕಂಪೆನಿ ಮಂಗಳೂರಿನಿಂದ ಹೊರಭಾಗಕ್ಕೆ ಸ್ಥಳಾಂತರವಾಗಿದೆ. ಈ ಮಧ್ಯೆ ವಿಪ್ರೋ ಕಂಪೆನಿಯು ಮಂಗಳೂರಿಗೆ ಆಗಮಿಸಲಿದೆ ಎಂಬ ಬಗ್ಗೆ ಒಂದಿಷ್ಟು ಮಾತುಕತೆಗಳು ನಡೆದಿತ್ತಾದರೂ ಅದು ಇನ್ನೂ ಕೈಗೂಡಿಬಂದಿಲ್ಲ.

 ವಿಶೇಷ ವರದಿ

Advertisement

Udayavani is now on Telegram. Click here to join our channel and stay updated with the latest news.

Next