Advertisement

ಇನ್ಫೋಸಿಸ್‌ ನೌಕರನ ದೋಚಿದ್ದವರ ಸೆರೆ

06:23 AM Feb 05, 2019 | Team Udayavani |

ಬೆಂಗಳೂರು: ಚೆನ್ನೈನ ಇನ್ಫೋಸಿಸ್‌ ಕಂಪನಿ ಉದ್ಯೋಗಿ ಅನುರಾಗ್‌ ಶರ್ಮಾ ಎಂಬುವವರಿಗೆ ಡ್ರಾಪ್‌ ನೀಡುವ ನೆಪದಲ್ಲಿ ಕಾರಿನಲ್ಲಿ ಹತ್ತಿಸಿಕೊಂಡು ದರೋಡೆ ಮಾಡಿದ್ದ ಮೂವರು ಆರೋಪಿಗಳನ್ನು ಪರಪ್ಪನ ಅಗ್ರಹಾರ ಪೊಲೀಸರು ಬಂಧಿಸಿದ್ದಾರೆ.

Advertisement

ಮಂಡ್ಯ ಮೂಲದ ಗಣೇಶ್‌ ಅಲಿಯಾಸ್‌ ಟಚ್ಚು (29), ಆನೇಕಲ್‌ ತಾಲೂಕಿನ ಶ್ರೀಧರ್‌ (30), ಮಡಿವಾಳದ ಉಮೇಶ್‌ (20) ಬಂಧಿತರು. ಮತ್ತೂಬ್ಬ ಆರೋಪಿ ವೇಣು ಎಂಬಾತ ತಲೆಮರೆಸಿಕೊಂಡಿದ್ದಾನೆ. ಬಂಧಿತರಿಂದ ಒಂದು ಕಾರು ಹಾಗೂ ಇತರೆ ವಸ್ತುಗಳನ್ನು ವಶಕ್ಕೆ ಪಡೆಯಲಾಗಿದೆ.

ಆರೋಪಿಗಳ ಪೈಕಿ ಗಣೇಶ್‌, ನಗರದಲ್ಲಿ ಪ್ಲಂಬರ್‌ ಆಗಿ ಕೆಲಸ ಮಾಡುತ್ತಿದ್ದು, ಶ್ರೀಧರ್‌ ಪೇಂಟರ್‌ ಹಾಗೂ ಉಮೇಶ್‌ ಫ‌ುಡ್‌ ಫ್ಯಾಕ್ಟರಿಯಲ್ಲಿ ಕೆಲಸ ಮಾಡುತ್ತಿದ್ದ. ಶ್ರೀಧರ್‌ ತನ್ನ ಸ್ನೇಹಿತರಾದ ಉಮೇಶ್‌ ಮತ್ತು ವೇಣುವನ್ನು ಗಣೇಶ್‌ಗೆ ಪರಿಚಯಿಸಿದ್ದ. ನಂತರ ನಾಲ್ವರೂ ಜತೆಯಾಗಿ ಸುಲಭವಾಗಿ ಹಣ ಸಂಪಾದಿಸಲು ರಾತ್ರಿ ಹೊತ್ತು ಅಮಾಯಕರ ಸುಲಿಗೆ, ದರೋಡೆ ಮಾಡುತ್ತಿದ್ದರು. ಬಂದ ಹಣದಲ್ಲಿ ಮೋಜು-ಮಸ್ತಿ ಮಾಡುತ್ತಿದ್ದರು ಎಂದು ಪೊಲೀಸರು ಹೇಳಿದರು.

ಗಣೇಶ್‌ ವಿರುದ್ಧ ವಿಜಯನಗರ, ಬಸವೇಶ್ವರನಗರ, ಸುಬ್ರಹ್ಮಣ್ಯಪುರ, ಚೆನ್ನಮ್ಮನಕೆರೆ ಅಚ್ಚುಕಟ್ಟು, ಅನ್ನಪೂರ್ಣೇಶ್ವರಿನಗರ ಹಾಗೂ ನಾಗಮಂಗಲ ಠಾಣೆಗಳಲ್ಲಿ ವಾಹನ ಕಳವು ಪ್ರಕರಣಗಳು ದಾಖಲಾಗಿವೆ. ಇತ್ತೀಚೆಗಷ್ಟೇ ಜೈಲಿನಿಂದ ಹೊರಬಂದಿದ್ದ ಗಣೇಶ್‌, ಸ್ನೇಹಿತರ ಜತೆ ಸೇರಿ ಕೃತ್ಯವೆಸಗಿದ್ದಾನೆ.

ಚೆನ್ನೈನ ಇನ್ಫೋಸಿಸ್‌ ಕಚೇರಿಯಲ್ಲಿ ಕೆಲಸ ಮಾಡುವ ಅನುರಾಗ್‌ ಶರ್ಮಾ, ಜ.26ರಂದು ಕಾರ್ಯ ನಿಮಿತ್ತ ಬೆಂಗಳೂರಿಗೆ ಬಂದಿದ್ದರು. ವಾಪಸ್‌ ಚೆನ್ನೈಗೆ ಹೋಗಲು ಜ.31ರಂದು ಬಸ್‌ ಟಿಕೆಟ್‌ ಕಾಯ್ದಿರಿಸಿದ್ದರು. ರಾತ್ರಿ ಅವರು ನಿಲ್ದಾಣಕ್ಕೆ ಹೋಗುವುದು ತಡವಾಗಿದ್ದರಿಂದ ಬಸ್‌ ಹೊರಟು ಹೋಗಿದೆ.

Advertisement

ಹೀಗಾಗಿ ಫೆ.1ರ ನಸುಕಿನ 1 ಗಂಟೆ ಸುಮಾರಿಗೆ ಬೇರೆ ವಾಹನದಲ್ಲಿ ಚೆನ್ನೈಗೆ ಹೋಗಲು ಹೊಸೂರು ಮುಖ್ಯ ರಸ್ತೆಯ ಆಡಿ ಸರ್ವಿಸ್‌ ಸೆಂಟರ್‌ ಬಳಿ ಲಗೇಜು ಸಮೇತ ನಿಂತಿದ್ದರು. ಇದನ್ನು ಗಮನಿಸಿದ ಆರೋಪಿಗಳ ತಂಡ, ಓಮ್ನಿ ಕಾರಿನಲ್ಲಿ ಬಂದು ಚೆನ್ನೈವರೆಗೂ ಡ್ರಾಪ್‌ ಕೊಡುವುದಾಗಿ ಹೇಳಿ ಹತ್ತಿಸಿಕೊಂಡಿದ್ದಾರೆ.

ಸ್ವಲ್ಪ ದೂರ ಹೋಗುತ್ತಿದ್ದಂತೆ ಕಾರಿನಲ್ಲಿ ಕುಳಿತಿದ್ದ ಆರೋಪಿಯೊಬ್ಬ ಶರ್ಮಾ ಅವರ ಮುಖಕ್ಕೆ ಗುದ್ದಿದ್ದಾನೆ. ಮತ್ತೂಬ್ಬ ಮಾರಕಾಸ್ತ್ರದಿಂದ ಅವರ ಮೊಣಕಾಲಿಗೆ ಹೊಡೆದಿದ್ದಾನೆ. ನಂತರ ಆರೋಪಿಗಳೆಲ್ಲರೂ ಸೇರಿ ಪರ್ಸ್‌ ಹಾಗೂ 2 ಸಾವಿರ ರೂ. ನಗದು ಕಸಿದುಕೊಂಡಿದ್ದಾರೆ. ಅಲ್ಲದೆ, ಐಸಿಐಸಿಐ ಬ್ಯಾಂಕ್‌ನ ಡೆಬಿಟ್‌ ಹಾಗೂ ಕ್ರಿಡಿಟ್‌ ಕಾರ್ಡ್‌, ಚಾಲನಾ ಪರವಾನಗಿ ಪತ್ರ, ಗುರುತಿನ ಚೀಟಿ ಕಿತ್ತುಕೊಂಡಿದ್ದರು.

ಕೈ, ಕಾಲು ಕಟ್ಟಿ ಹಿಂಸೆ: ನಂತರ ಶರ್ಮಾ ಅವರ ಕೈ, ಕಾಲುಗಳನ್ನು ಕಟ್ಟಿ ಹಾಕಿ ಎಟಿಎಂ ಕಾರ್ಡ್‌ನ ಪಾಸ್‌ವರ್ಡ್‌ ಹೇಳುವಂತೆ ಬೆದರಿಸಿದ್ದಾರೆ. ಇದಕ್ಕೆ ನಿರಾಕರಿಸಿದಾಗ ಶರ್ಮಾ ಅವರ ಕುತ್ತಿಗೆಗೆ ಚಾಕು ಹಿಡಿದು ಕೊಲ್ಲುವುದಾಗಿ ಬೆದರಿಸಿ ಪಾಸ್‌ವರ್ಡ್‌ ಪಡೆದುಕೊಂಡು 45 ಸಾವಿರ ರೂ. ಹಣ ಡ್ರಾ ಮಾಡಿಕೊಂಡು ಪರಾರಿಯಾಗಿದ್ದರು ಎಂದು ಪೊಲೀಸರು ಹೇಳಿದರು.

ಸಿಕ್ಕಿದ್ದು ಹೇಗೆ?: ಅನುರಾಗ್‌ ಶರ್ಮಾ ಅವರ ಎಟಿಎಂ ಕಾರ್ಡ್‌ ಕಸಿದುಕೊಂಡು ಹಣ ಡ್ರಾ ಮಾಡಿದ್ದ ಎಟಿಎಂ ಕೇಂದ್ರದಲ್ಲಿ ಅಳವಡಿಸಿದ್ದ ಸಿಸಿ ಕ್ಯಾಮೆರಾ ಪರಿಶೀಲಿಸಿದಾಗ ಆರೋಪಿಗಳ ಮುಖಚಹರೆ ಪತ್ತೆಯಾಗಿತ್ತು. ಅಲ್ಲದೆ, ಆರೋಪಿಗಳು ನಗರದಲ್ಲಿರುವ ಪ್ರಸಿದ್ಧ ಬಟ್ಟೆ ಮಳಿಗೆಗೆ ಹೋಗಿ ಡೆಬಿಟ್‌ ಕಾರ್ಡ್‌ ಮೂಲಕ ಹೊಸ ಬಟ್ಟೆ ಖರಿದಿಸಿದ್ದರು.

ಬಟ್ಟೆ ಮಳಿಗೆಯಲ್ಲಿದ್ದ ಸಿಸಿ ಕ್ಯಾಮೆರಾದಲ್ಲಿ ಆರೋಪಿಗಳ ಕಾರಿನ ನಂಬರ್‌ ಸೆರೆಯಾಗಿತ್ತು. ಬಳಿಕ ತನಿಖೆ ಚುರುಕುಗೊಳಿಸಿದಾಗ ಫೆ.4ರಂದು ಕಳವು ಮಾಡಿದ್ದ ಓಮ್ನಿ ಕಾರಿನಲ್ಲಿ ಅನೇಕಲ್‌ ಸುತ್ತಮುತ್ತ ಓಡಾಡುತ್ತಿರುವ ಮಾಹಿತಿ ಲಭ್ಯವಾಗಿತ್ತು. ಈ ಆಧಾರದ ಮೇಲೆ ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಪೊಲೀಸರು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next