Advertisement

ಅರಣ್ಯ ಮಾಹಿತಿ ಕೇಂದ್ರ ಸ್ಥಾಪಿಸಲು ಜಿಲ್ಲಾಧಿಕಾರಿ ಸೂಚನೆ

12:20 AM Oct 05, 2019 | Sriram |

ಉಡುಪಿ: ಮಣಿಪಾಲದ ಸಾಲುಮರದ ತಿಮ್ಮಕ್ಕ ಸಸ್ಯೋದ್ಯಾನವನದಲ್ಲಿ ಅರಣ್ಯ ಮಾಹಿತಿ ಕೇಂದ್ರವನ್ನು ಸ್ಥಾಪಿಸಿ, ಜನರಿಗೆ ಅರಣ್ಯದ ಬಗ್ಗೆ ಮಾಹಿತಿ ಹಾಗೂ ಅದರ ಪ್ರಯೋಜನಗಳನ್ನು ತಿಳಿಸಬೇಕು. ಆ ಮೂಲಕ ಜನರಲ್ಲಿ ಅರಣ್ಯ ಸಂರಕ್ಷಣೆಯ ಮಹತ್ವವನ್ನು ಜಾಗೃತಗೊಳಿಸಬೇಕು ಎಂದು ಜಿಲ್ಲಾಧಿಕಾರಿ ಜಿ. ಜಗದೀಶ್‌ ಹೇಳಿದರು.

Advertisement

ಕರ್ನಾಟಕ ಅರಣ್ಯ ಇಲಾಖೆ ಕುಂದಾಪುರ ವಿಭಾಗ, ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ ಹಾಗೂ ಪ್ರಸ್‌ಕ್ಲಬ್‌ ಆಶ್ರಯದಲ್ಲಿ ಮಣಿಪಾಲ ಟ್ಯಾಪ್ಮಿ ಬಳಿಯಿರುವ ಸಾಲುಮರದ ತಿಮ್ಮಕ್ಕ ಸಸ್ಯೋದ್ಯಾನವನದಲ್ಲಿ ಶುಕ್ರವಾರ ಆಯೋಜಿಸಿದ ವೃಕ್ಷೊàತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಇತ್ತೀಚಿನ ದಿನಗಳಲ್ಲಿ ಅರಣ್ಯ ಸಂಪತ್ತು ನಶಿಸುತ್ತಿದ್ದು, ಜನರ ಜೀವನ ಅಪಾಯದ ಅಂಚಿಗೆ ತಲುಪಿದೆ. ಹಾಗಾಗಿ ಅರಣ್ಯ ಸಂರಕ್ಷಣೆ ಮಾಡುವುದು ಎಲ್ಲರ ಜವಾಬ್ದಾರಿಯಾಗಿದೆ. ಈ ನಿಟ್ಟಿನಲ್ಲಿ ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಕಾರ್ಯಪ್ರವೃತ್ತರಾಗಬೇಕು. ಅರಣ್ಯ ಮನುಷ್ಯನ ಬದುಕಿನಲ್ಲಿ ಎಷ್ಟು ಮುಖ್ಯ ಪಾತ್ರ ನಿರ್ವಹಿಸುತ್ತದೆ ಎಂಬುವುದನ್ನು ಪ್ರತಿಯೊಬ್ಬರು ಅರ್ಥೈಸಿಕೊಳ್ಳಬೇಕು. ಕಾಡನ್ನು ಉಳಿಸಿ ಬೆಳೆಸುವುದರ ಜತೆಗೆ ಅದನ್ನು ಮುಂದಿನ ತಲೆಮಾರಿಗೆ ತಲುಪಿಸುವ ಜವಾಬ್ದಾರಿ ನಮ್ಮ ಮೇಲಿದೆ. ಹಾಗಾಗಿ ಗಿಡ ನೆಡುವ ಪ್ರವೃತ್ತಿ ಹಾಗೂ ಕಾಡು ಬೆಳೆಸುವ ಆಸಕ್ತಿಯನ್ನು ಪ್ರತಿಯೊಬ್ಬರೂ ರೂಢಿಸಿಕೊಳ್ಳಬೇಕು ಎಂದರು.

ಅರಣ್ಯ ಸಂಪತ್ತು ರಕ್ಷಿಸಿ
ಕುಂದಾಪುರ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಕೆ. ಕಮಲಾ ಮಾತನಾಡಿ, ಕಾಡು ಇದ್ದರೆ ಮಾತ್ರ ಮನುಷ್ಯ ಜೀವಂತವಾಗಿರಲು ಸಾಧ್ಯ. ಮನುಷ್ಯನ ಬದುಕಿಗೆ ಅವಶ್ಯಕವಾಗಿರುವ ಗಾಳಿ, ನೀರು, ಆಹಾರಗಳೆಲ್ಲವನ್ನು ಕಾಡಿನಿಂದಲೇ ಪಡೆಯಬೇಕು. ಆದ್ದರಿಂದ ಅರಣ್ಯ ನಾಶವನ್ನು ತಡೆಗಟ್ಟಿ, ನಮ್ಮ ಹಿರಿಯರು ನಮಗೆ ಬಿಟ್ಟುಹೋಗಿರುವ ಅರಣ್ಯ ಸಂಪತ್ತನ್ನು ರಕ್ಷಿಸುವುದು ನಮ್ಮೆಲ್ಲರ ಕರ್ತವ್ಯ ಎಂದರು.

ಮರ-ಗಿಡಗಳನ್ನು ರಕ್ಷಿಸಿ
ಅರಣ್ಯ ಇಲಾಖೆಯ ಹೆಚ್ಚುವರಿ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಪುನೀತ್‌ ಪಾಠಕ್‌ ಮಾತನಾಡಿ, ಗಿಡವನ್ನು ನೆಡುವುದರ ಜತೆಗೆ ಇರುವ ಮರ-ಗಿಡಗಳ ರಕ್ಷಣೆಯೂ ಅತ್ಯಗತ್ಯವಾಗಿದೆ. ಯುವಜನತೆ ಗಿಡ ನೆಟ್ಟು ಬೆಳೆಸುವ ಕಾರ್ಯದಲ್ಲಿ ಹೆಚ್ಚೆ ತೊಡಗಬೇಕು ಎಂದರು.

Advertisement

ಜಿ.ಪಂ.ಸಿಇಒ ಪ್ರೀತಿ ಗೆಹೊಟ್‌, ಉಡುಪಿ ವಿಭಾಗದ ಕರ್ನಾಟಕ ರಾಜ್ಯ ಉಪವಲಯ ಅರಣ್ಯ ಅಧಿಕಾರಿಗಳ ಸಂಘದ ಅಧ್ಯಕ್ಷ ಜೀವನ್‌ದಾಸ್‌ ಶೆಟ್ಟಿ, ಸಹಾಯಕ ಸಂರಕ್ಷಣಾಧಿಕಾರಿ ಲೋಹಿತ್‌, ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಕಾರ್ಯದರ್ಶಿ ಸಂತೋಷ್‌ ಸರಳೇಬೆಟ್ಟು ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಆರ್ಟಿಸ್ಟ್‌ ಫೋರಂ ಅಧ್ಯಕ್ಷ ಪುರುಷೋತ್ತಮ ಅಡ್ವೆ ಹಾಗೂ ಮಕ್ಕಳ ಮನೆ ನೇತೃತ್ವ ವಹಿಸಿದ ಗಣೇಶ್‌ ಕುಂದಾಪುರ ಅವರನ್ನು ಸಮ್ಮಾನಿಸಲಾಯಿತು.

ಉಡುಪಿ ವಲಯ ಅರಣ್ಯ ಸಂರಕ್ಷಣಾಧಿಕಾರಿ ಕ್ಲಿಫ‌ರ್ಡ್‌ ಲೋಬೊ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಪ್ರಸ್‌ಕ್ಲಬ್‌ ಸಂಚಾಲಕ ನಾಗರಾಜ್‌ ವರ್ಕಾಡಿ ವಂದಿಸಿದರು. ಪ್ರಶಾಂತ್‌ ಹಾವಂಜೆ ಕಾರ್ಯಕ್ರಮ ನಿರೂಪಿಸಿದರು.

ಮರ-ಗಿಡಗಳ ಬಗ್ಗೆ ಕುತೂಹಲವಿರಲಿ
ಪ್ರತಿಯೋರ್ವರು ಒಂದೊಂದು ಗಿಡಗಳನ್ನು ನೆಡುವ ಸಂಕಲ್ಪ ಮಾಡಬೇಕು. ವಿದ್ಯಾರ್ಥಿಗಳು ಅರಣ್ಯದಿಂದ ಹಲವಾರು ರೀತಿಯ ಪಾಠಗಳನ್ನು ಕಲಿಯಬಹುದು. ಪ್ರತಿಯೊಂದು ಮರ-ಗಿಡಗಳ ಬಗ್ಗೆ ತಿಳಿದುಕೊಳ್ಳುವ ಕುತೂಹಲ ಇರಬೇಕು. ಅರಣ್ಯಗಳಿದ್ದರೆ ಮಾತ್ರ ಪ್ರಾಣಿ, ಪಕ್ಷಿಗಳನ್ನು ನೋಡಿ ಆನಂದಿಸಲು ಸಾಧ್ಯವಾಗುತ್ತದೆ. ಇಂತಹ ಪ್ರವಾಸೋದ್ಯಮದ ತಾಣದ ಬಗ್ಗೆ ಹೆಚ್ಚು ಜನರಿಗೆ ತಿಳಿಯುವಂತಾಗಬೇಕು ಎಂದು ಜಿಲ್ಲಾಧಿಕಾರಿ ಜಿ.ಜಗದೀಶ್‌ ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next