Advertisement

ಜಾಗೃತಿ ಅಭಿಯಾನದ ಸರಣಿ ಪೊಲೀಸರಿಂದ ಚಾಲನೆ

11:16 AM May 26, 2019 | keerthan |

ಪುತ್ತೂರು: ವಾಹನಗಳಲ್ಲಿ ಅಪಾಯಕಾರಿಯಾಗಿ ಜನರನ್ನು ತುಂಬಿಸಿಕೊಂಡು ಹೋಗುತ್ತಿರುವ ಹಿನ್ನೆಲೆಯಲ್ಲಿ ಪುತ್ತೂರು ನಗರ ಪೊಲೀಸ್‌ ಠಾಣೆಯ ವತಿಯಿಂದ ಜಾಗೃತಿ ಅಭಿಯಾನದ ಸರಣಿ ಕಾರ್ಯಕ್ರಮಗಳನ್ನು ಆರಂಭಿಸಲಾಗಿದೆ.

Advertisement

ಸರಕು ಸಾಗಾಟ ವಾಹನಗಳಲ್ಲಿ ಅತ್ಯಂತ ಅಪಾಯಕಾರಿ ರೀತಿಯಲ್ಲಿ ಕಾರ್ಮಿಕರನ್ನು ತುಂಬಿಸಿಕೊಂಡು ಸಾಗಾಟ ಮಾಡುತ್ತಿರುವ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಇದನ್ನು ತಡೆಗಟ್ಟುವ ಉದ್ದೇಶದಿಂದ ಶುಕ್ರವಾರ ಅಭಿಯಾನಕ್ಕೆ ಚಾಲನೆ ನೀಡಲಾಯಿತು.

ಪುತ್ತೂರು ನಗರ ಪೊಲೀಸ್‌ ಠಾಣೆ ಇನ್‌ಸ್ಪೆಕ್ಟರ್‌ ಶಶಿಕುಮಾರ್‌ ಅವರ ನೇತೃತ್ವದಲ್ಲಿ ಆರಂಭದಲ್ಲಿ ಕೆಎಸ್‌ಆರ್‌ಟಿಸಿ ಪುತ್ತೂರು ವಿಭಾಗೀಯ ಕಚೇರಿಗೆ ತೆರಳಿದ ಪೊಲೀಸ್‌ ಅಧಿಕಾರಿಗಳ ತಂಡ ನಿಗಮದ ಎಲ್ಲ ಅಧಿಕಾರಿಗಳಿಗೆ ವಿಷಯ ಮನವರಿಕೆ ಮಾಡಿ ಸರಕಾರದ ಆದೇಶದ ಕುರಿತು ವಿವರಣೆ ನೀಡಿದರು. ಸಂಚಾರ ಪೊಲೀಸ್‌ ಠಾಣೆಯ ಸಬ್‌ ಇನ್‌ಸ್ಪೆಕ್ಟರ್‌ ಮಹಾಬಲ ಶೆಟ್ಟಿ ಜತೆಗಿದ್ದರು.

ರಿಕ್ಷಾ ಚಾಲಕರಿಗೆ ಸೂಚನೆ
ಅನಂತರ ನಗರದ ನಾನಾ ರಿಕ್ಷಾ ಪಾರ್ಕಿಂಗ್‌ ಪ್ರದೇಶಗಳಿಗೆ ತೆರಳಿ ಅಲ್ಲಿ ಚಾಲಕರಿಗೆ ಸಾಮೂಹಿಕವಾಗಿ ಮಾಹಿತಿ ನೀಡಿದರು. ಶಾಲಾ ಕಾಲೇಜುಗಳು ಇನ್ನೇನು ಕೆಲವೇ ದಿನಗಳಲ್ಲಿ ಆರಂಭಗೊಳ್ಳಲಿದ್ದು, ಆಟೋ ರಿಕ್ಷಾಗಳಲ್ಲಿ ಮಿತಿಗಿಂತ ಅಧಿಕ ಪ್ರಮಾಣದ ಶಾಲಾ ಮಕ್ಕಳನ್ನು ತುಂಬಿಸಿಕೊಂಡು ಹೋಗಬಾರದು ಎಂದು ಸೂಚಿಸಲಾಯಿತು.

ಸುರಕ್ಷಿತ ವಿಧಾನ ಅನುಸರಿಸಿ
ಕಟ್ಟಡ ನಿರ್ಮಾಣ ಸಂಸ್ಥೆಗಳ ಮಾಲಕರು ಮತ್ತು ಗುತ್ತಿಗೆದಾರರ ಸಭೆ ನಡೆಸಿ ಕಾರ್ಮಿಕರನ್ನು ಸಾಗಿಸಲು ಸುರಕ್ಷಿತ ವಿಧಾನ ಅನುಸರಿಸುವಂತೆ ಮನವರಿಕೆ ಮಾಡಲಾಗುವುದು. ಸಾರಿಗೆ ವಾಹನ ಗಳಲ್ಲೇ ಕಾರ್ಮಿಕರು ಪ್ರಯಾಣಿಸುವಂತೆ ಖಾತ್ರಿ ಪಡಿಸಿ ಕೊಳ್ಳಬೇಕು. ಯಾವುದೇ ಕಾರಣಕ್ಕೂ ಸರಕು ವಾಹನಗಳಲ್ಲಿ ಅವರು ಪ್ರಯಾಣಿ ಸಬಾರದು ಎಂದು ತಿಳಿಸಿ ನಿರ್ಮಾಣ ಸಂಸ್ಥೆಗಳ ಮಾಲೀಕರು, ಗುತ್ತಿಗೆದಾರರ ಪೂರ್ಣ ವಿವರ ಸಂಗ್ರಹಿಸಿ ಇಟ್ಟುಕೊಂಡು ನಿರಂತರ ಗಮನ ಹರಿಸಲಾಗುವುದು ಎಂದು ಇನ್‌ಸ್ಪೆಕ್ಟರ್‌ ಶಶಿಕುಮಾರ್‌ ತಿಳಿಸಿದ್ದಾರೆ.

Advertisement

ಎಲ್ಲಡೆ ಮಾಹಿತಿ
ಕಟ್ಟಡ ನಿರ್ಮಾಣ ಸ್ಥಳಗಳಿಗೆ ಭೇಟಿ ನೀಡಿ ಖುದ್ದಾಗಿ ಕಾರ್ಮಿಕರನ್ನು ಕಂಡು ಅವರಿಗೆ ವಿಷಯ ಮನದಟ್ಟು ಮಾಡಲಾಗುವುದು. ಜಾತ್ರೆ, ಸಂತೆ, ಬಸ್‌ ನಿಲ್ದಾಣ, ಪ್ರವಾಸಿ ಸ್ಥಳ, ಶೈಕ್ಷಣಿಕ ಸಂಸ್ಥೆಗಳು ಸೇರಿದಂತೆ ಹೆಚ್ಚು ಜನ ಸೇರುವ ಸ್ಥಳಗಳಲ್ಲಿ ಈ ಕುರಿತು ಮಾಹಿತಿ ನಿಚಡಲಾಗುವುದು. ಸರಕು ವಾಹನ ಮಾಲಕರು, ಚಾಲಕರ ಸಭೆ ನಡೆಸಿ ಯಾವುದೇ ಕಾರಣಕ್ಕೂ ಈ ವಾಹನಗಳಲ್ಲಿ ಜನರನ್ನು ಸಾಗಾಟ ಮಾಡದಂತೆ ಸೂಚನೆ ನೀಡಲಾಗುವುದು. ಒಂದು ವೇಳೆ ಇಂತಹ ವಾಹನಗಳಲ್ಲಿ ಜನರನ್ನು ಸಾಗಾಟ ಮಾಡಿದರೆ ಆ ವಾಹನದ ರಹದಾರಿ ಮತ್ತು ಡ್ರೈವಿಂಗ್‌ ಲೈಸನ್ಸ್‌ ರದ್ದುಪಡಿಸಲಾಗುವುದು ಎಂದು ತಿಳಿಸಲಾಗುವುದು. ಈ ಸಂಬಂಧ ಸರಕು ವಾಹನಗಳ ಮಾಲಕರಿಂದ ಮುಚ್ಚಳಿಕೆ ಬರೆಸಿಕೊಳ್ಳಲಾಗುವುದು. ಕಾರ್ಖಾನೆ ಮತ್ತು ಗಾರ್ಮೆಟ್ಸ್‌ ಮಾಲೀಕರ ಸಭೆ ನಡೆಸಿ ಜಾಗೃತಿ ಮೂಡಿಸಲಾಗುವುದು. ಖಾಸಗಿ ಸಂಸ್ಥೆಗಳ ಮಾಲೀಕರ ಸಭೆ ನಡೆಸಿ ವಿಷಯ ಮನವರಿಕೆ ಮಾಡಲಾಗುವುದು, ಶಾಲಾ ಕಾಲೇಜುಗಳಲ್ಲಿ ಜಾಗೃತಿ ಕಾರ್ಯಕ್ರಮ, ಚರ್ಚೆ, ಪ್ರಬಂಧ ಸ್ಪರ್ಧೆ ನಡೆಸುವುದು, ನಗರ ಪ್ರದೇಶಗಳಲ್ಲಿ ಜಾಗೃತಿ ಜಾಥಾ ಇತ್ಯಾದಿ ಕಾರ್ಯಕ್ರಮಗಳನ್ನು ನಡೆಸಲಾಗುವುದು ಎಂದು ಇನ್‌ಸ್ಪೆಕ್ಟರ್‌ ತಿಳಿಸಿದ್ದಾರೆ.

ದಿನಕ್ಕೊಂದು ಜಾಗೃತಿ
ರಾಜ್ಯ ಪೊಲೀಸ್‌ ಮಹಾನಿರ್ದೇಶಕರು ಮತ್ತು ರಾಜ್ಯ ಪೊಲೀಸ್‌ ಮಹಾನಿರೀಕ್ಷರು ಹೊರಡಿಸಿದ ಆದೇಶದ ಪ್ರಕಾರ ವಿವಿಧ ಹಂತಗಳಲ್ಲಿ ಜಾಗೃತಿ ಅಭಿಯಾನ ನಡೆಸಲು ನಿರ್ಧರಿಸಲಾಗಿದೆ. ಈ ನಿಟ್ಟಿನಲ್ಲಿ ದಿನಕ್ಕೊಂದು ಬಗೆಯ ಜಾಗೃತಿ ಉಪಕ್ರಮಗಳನ್ನು ಕೈಗೊಳ್ಳಲಾಗುವುದು.
ಶಶಿಕುಮಾರ್‌, ಇನ್‌ಸ್ಪೆಕ್ಟರ್‌, ಪುತ್ತೂರು ನಗರ ಪೊಲೀಸ್‌ ಠಾಣೆ

Advertisement

Udayavani is now on Telegram. Click here to join our channel and stay updated with the latest news.

Next