ಬೆಂಗಳೂರು : ಸೂಪರ್ ನ್ಯೂಮರರಿ ಕೋಟಾದಡಿ ಸೀಟು ಪಡೆದ ಜಮ್ಮು ಕಾಶ್ಮೀರದ ವಿದ್ಯಾರ್ಥಿಗಳಿಗೆ ಪ್ರಧಾನ ಮಂತ್ರಿ ವಿಶೇಷ ಯೋಜನೆಯಡಿ ವಿದ್ಯಾರ್ಥಿ ವೇತನ ನೀಡಿರುವ ಮಾಹಿತಿ ಮುಚ್ಚಿಡುತ್ತಿರುವ ಎಂಜಿನಿಯರಿಂಗ್ ಕಾಲೇಜಿನ ಪ್ರಾಂಶುಪಾಲರಿಗೆ ರಾಜ್ಯ ತಾಂತ್ರಿಕ ಶಿಕ್ಷಣ ಇಲಾಖೆ ಖಡಕ್ ಎಚ್ಚರಿಕೆ ನೀಡಿದೆ.
2017-18ನೇ ಸಾಲಿನ ಶೈಕ್ಷಣಿಕ ತರಗತಿಗಳು ಕೆಲವೇ ದಿನಗಳಲ್ಲಿ ಆರಂಭವಾಗಲಿದೆ. ಅದಕ್ಕೆ ಸಂಬಂಧಿಸಿದ ಕೌನ್ಸೆಲಿಂಗ್ ಹಾಗೂ ದಾಖಲೆ ಪರಿಶೀಲನಾ ಕಾರ್ಯವೂ ನಡೆಯುತ್ತಿದೆ. ಆದರೆ, ರಾಜ್ಯದ 63 ಎಂಜಿನಿಯರಿಂಗ್ ಕಾಲೇಜುಗಳು 2015-16ರಲ್ಲಿ ಸೂಪರ್ ನ್ಯೂಮರರಿ ಕೋಟಾದಡಿ ಎಷ್ಟು ವಿದ್ಯಾರ್ಥಿಗಳನ್ನು ದಾಖಲಿಸಿಕೊಳ್ಳಲಾಗಿದೆ ಹಾಗೂ ಆ ವಿದ್ಯಾರ್ಥಿಗಳಿಗೆ ಪ್ರಧಾನಮಂತ್ರಿ ವಿಶೇಷ ಯೋಜನೆಯಡಿ ನೀಡಲಾದ ವಿದ್ಯಾರ್ಥಿ ವೇತನ ಇತ್ಯಾದಿ ಯಾವ ಮಾಹಿತಿಯನ್ನು ಸರ್ಕಾರಕ್ಕೆ ಹಾಗೂ ತಾಂತ್ರಿಕ ಶಿಕ್ಷಣ ಇಲಾಖೆಗೆ ನೀಡುತ್ತಿಲ್ಲ.
ಸೂಪರ್ ನ್ಯೂಮರರಿ ಕೋಟಾದಡಿ ದಾಖಲಾದ ವಿದ್ಯಾರ್ಥಿಗಳ ವಿವರನ್ನು ಶಿಕ್ಷಣ ಸಂಸ್ಥೆಗಳು ಸರ್ಕಾರಕ್ಕೆ ನೀಡಬೇಕು. ಆದರೆ, 63 ಶಿಕ್ಷಣ ಸಂಸ್ಥೆಗಳು 2015-16ರ ಮಾಹಿತಿಯನ್ನೇ ನೀಡಿಲ್ಲ. ಈ ಬಗ್ಗೆ ಸರ್ಕಾರದಿಂದ ಆಗಾಗ ಮಾಹಿತಿ ಕೇಳಿದ್ದರೂ, ಯಾರೂ ಕೂಡ ಸರಿಯಾಗಿ ಸ್ಪಂದಿಸಿಲ್ಲ. ಸರ್ಕಾರಿ ಎಂಜಿನಿಯರಿಂಗ್ ಕಾಲೇಜು ಸೇರಿದಂತೆ ಖಾಸಗಿ ಸಂಸ್ಥೆಗಳು ಏಕೆ ಹೀಗೆ ಮಾಡುತ್ತಿವೆ ಎನ್ನುವುದನ್ನು ಬೇಧಿಸುವುದೇ ಇಲಾಖೆಗೆ ದೊಡ್ಡ ಸವಾಲಾಗಿದೆ.
ಸೂಪರ್ ನ್ಯೂಮರರಿ ಕೋಟಾದ ವಿದ್ಯಾರ್ಥಿಗಳ ಮಾಹಿತಿಗಾಗಿ ಸರ್ಕಾರದಿಂದ ತಾಂತ್ರಿಕ ಶಿಕ್ಷಣ ಇಲಾಖೆಗೆ ಒತ್ತಡ ಹೆಚ್ಚಾಗುತ್ತಿದೆ. ಹೀಗಾಗಿ ತಾಂತ್ರಿಕ ಶಿಕ್ಷಣ ಇಲಾಖೆಯು ಎಲ್ಲಾ ಎಂಜಿನಿಯರಿಂಗ್ ಕಾಲೇಜಿನ ಪ್ರಾಂಶುಪಾಲರಿಗೆ ಮಾಹಿತಿ ನೀಡುವಂತೆ ಮತ್ತು ಅದನ್ನು ರಾಜ್ಯ ಸರ್ಕಾರ ಹಾಗೂ ಕೇಂದ್ರ ಮಾನವ ಸಂಪನ್ಮೂಲ ಇಲಾಖೆಗೂ ಕಳುಹಿಸುವಂತೆ ಆದೇಶ ಹೊರಡಿಸಿದೆ. ಈ ಸುತ್ತೋಲೆಗೂ ಸ್ಪಂದಿಸಿದ ಪ್ರಾಂಶುಪಾಲರ ವಿರುದ್ಧ ಸರ್ಕಾರಕ್ಕೆ ದೂರು ಸಲ್ಲಿಸಲಾಗುತ್ತದೆ ಎಂದು ಎಚ್ಚರಿಕೆಯನ್ನು ನೀಡಿದೆ.
2015-16ರ ಮಾಹಿತಿಯನ್ನು 63 ಸಂಸ್ಥೆಗಳು ನೀಡಿಲ್ಲ. ಆ ವರ್ಷ ಈ 63 ಸಂಸ್ಥೆಗೆ ಕೇಂದ್ರೀಯ ಕೌನ್ಸೆಲಿಂಗ್ ಮೂಲಕ 109 ವಿದ್ಯಾರ್ಥಿಗಳಿಗೆ ಸೀಟು ನೀಡಲಾಗಿದೆ. ಸೂಪರ್ ನ್ಯೂಮರರಿ ಕೋಟಾದಡಿ ಸೀಟು ಪಡೆದ ವಿದ್ಯಾರ್ಥಿಗಳು ಅಖೀಲ ಭಾರತ ತಾಂತ್ರಿಕ ಶಿಕ್ಷಣ ಮಂಡಳಿಯ(ಎಐಸಿಟಿಇ) ವೆಬ್‌ಸೈಟ್ ಮೂಲಕ ಪ್ರಧಾನ ಮಂತ್ರಿ ವಿಶೇಷ ವಿದ್ಯಾರ್ಥಿ ವೇತನಕ್ಕೆ ಅರ್ಜಿ ಸಲ್ಲಿಸುತ್ತಾರೆ. ಎಲ್ಲವೂ ಆನ್‌ಲೈನ್ ಮೂಲಕವೇ ನಡೆಯುತ್ತದೆ. ವಿದ್ಯಾರ್ಥಿಗಳು ,ವಿದ್ಯಾರ್ಥಿ ವೇತನ ಪಡೆದಿರುವ ಮಾಹಿತಿಯನ್ನು ಸರ್ಕಾರಕ್ಕೆ ಹಾಗೂ ಕೇಂದ್ರ ಮಾನವ ಸಂಪನ್ಮೂಲ ಇಲಾಖೆಗೆ ಕಳುಹಿಸಬೇಕು.
ಏನಿದು ಸುಪರ್ ನ್ಯೂಮರರಿ ಕೋಟಾ?
ದೇಶದ ವಿವಿಧ ಭಾಗದ ಆರ್ಥಿಕವಾಗಿ ಹಿಂದುಳಿದ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಅಖೀಲ ಭಾರತ ತಾಂತ್ರಿಕ ಶಿಕ್ಷಣ ಮಂಡಳಿ(ಎಐಸಿಟಿಇ) ಸೂಪರ್ ನ್ಯೂಮರರಿ ಕೋಟಾವನ್ನುಪರಿಚಯಿಸಿದೆ. ದೇಶಾದ್ಯಂತ ಇರುವ ಎಂಜಿನಿಯರಿಂಗ್ ಕಾಲೇಜುಗಳು ತಮ್ಮ ದಾಖಲಾತಿ ಪ್ರಮಾಣದಲ್ಲಿ ಪ್ರತಿ ವರ್ಷ ಒಂದು ಅಥವಾ ಎರಡು ಸೀಟುಗಳನ್ನು(ಇನ್‌ಟೇಕ್ ಆಧಾರದಲ್ಲಿ ) ಮೀಸಲಿಡಬೇಕು. ಸಿಇಟಿ ಬರೆದ ವಿದ್ಯಾರ್ಥಿಗಳ ದಾಖಲಾತಿ ಮುಗಿದ ನಂತರ ಸೂಪರ್ ನ್ಯೂಮರರಿ ಕೋಟಾದ ಸೀಟು ಭರ್ತಿ ಮಾಡಿಕೊಳ್ಳಬೇಕು. ಈ ಕೋಟಾದ ವಿದ್ಯಾರ್ಥಿಗೆ ಶುಲ್ಕ ವಿನಾಯ್ತಿಯೂ ಇರುತ್ತದೆ.
ರಾಜ್ಯ ಸರ್ಕಾರ ಹಾಗೂ ಎಂಎಚ್‌ಆರ್‌ಡಿಯಿಂದ ಸೂಪರ್ ನ್ಯೂಮರರಿ ಕೋಟಾದ ವಿದ್ಯಾರ್ಥಿಗಳ ಹಾಗೂ ಅವರು ಪಡೆದಿರುವ ವಿದ್ಯಾರ್ಥಿ ವೇತನದ ಮಾಹಿತಿಯನ್ನು ಮೇಲಿಂದ ಮೇಲೆ ಕೇಳುತ್ತಿದ್ದಾರೆ. 2015-16ರ ಮಾಹಿತಿ ಸಲ್ಲಿಸುವಂತೆ ಎಲ್ಲಾ ಸಂಸ್ಥೆಗಳಿಗೂ ಸೂಚನೆ ನೀಡಿದ್ದೆವು. 63 ಸಂಸ್ಥೆಗಳು ಇನ್ನು ಮಾಹಿತಿ ನೀಡದೇ ಇರುವುದರಿಂದ ಅಂತಿಮ ಎಚ್ಚರಿಕೆ ರವಾನಿಸಿದ್ದೇವೆ.
– ಎಚ್.ಯು.ತಳವಾರ, ನಿರ್ದೇಶಕ, ತಾಂತ್ರಿಕ ಶಿಕ್ಷಣ ಇಲಾಖೆ
– ರಾಜು ಖಾರ್ವಿ ಕೊಡೇರಿ