Advertisement

ಶಾಲೆಗಳಲ್ಲಿ ಶಿಕ್ಷಕರ ಭಾವಚಿತ್ರ ಸಹಿತ ಮಾಹಿತಿ ಕಡ್ಡಾಯ

09:48 AM Oct 28, 2017 | Team Udayavani |

ಬೆಂಗಳೂರು: ರಾಜ್ಯದ ಸರ್ಕಾರಿ ಪ್ರಾಥಮಿಕ ಹಾಗೂ ಪ್ರೌಢಶಾಲೆಯಲ್ಲಿ ಸರ್ಕಾರಿ ಆದೇಶ, ಸುತ್ತೋಲೆಯ ಜತೆಗೆ ಎಲ್ಲಾ ಶಿಕ್ಷಕರ ಸಂಪೂರ್ಣ ಮಾಹಿತಿ ಭಾವಚಿತ್ರ ಸಹಿತ ಲಭ್ಯವಾಗಲಿದೆ.

Advertisement

ಸರ್ಕಾರಿ ಶಾಲೆಗೆ ಮಕ್ಕಳನ್ನು ಕರೆ ತರಲು ಪ್ರತಿವರ್ಷ ಒಂದಿಲ್ಲೊಂದು ಹೊಸ ತಂತ್ರವನ್ನು ಇಲಾಖೆ ಹುಡುಕುತ್ತಲೇ ಇರುತ್ತದೆ. ಅದು ಎಷ್ಟು ಪರಿಣಾಮಕಾರಿಯಾಗಿ ಅನುಷ್ಠಾನವಾಗಿದೆ ಮತ್ತು ಅದರಿಂದ ಆಗಿರುವ ಪ್ರಯೋಜನದ ಬಗ್ಗೆ ಪರಿಶೀಲನೆ ನಡೆಸುವುದು ತುಂಬಾ ಕಡಿಮೆ. ಸರ್ಕಾರಿ ಶಾಲೆಗೆ ಮಕ್ಕಳನ್ನು ಆಕರ್ಷಿಸುವ ನಿಟ್ಟಿನಲ್ಲಿ ಪಾಲಕರ ಗಮನ ಸೆಳೆಯುವುದಕ್ಕಾಗಿ ಸರ್ವಶಿಕ್ಷಾ ಅಭಿಯಾನ ಹೊಸ
ಪ್ರಯೋಗ ಆರಂಭಿಸಿದೆ. ಅದೇನೆಂದರೆ, ಸರ್ಕಾರಿ ಶಾಲೆಗಳಲ್ಲಿ ಸೇವೆ ಸಲ್ಲಿಸುತ್ತಿರುವ ಎಲ್ಲಾ ಶಿಕ್ಷಕರ ಭಾವಚಿತ್ರ ಸಮೇತವಾದ ವಿವರಗಳನ್ನು ನೋಟಿಸ್‌ ಬೋರ್ಡ್‌ನಲ್ಲಿ ಪ್ರದರ್ಶಿಸುವಂತೆ ಆದೇಶ ಹೊರಡಿಸಿದೆ. ಶಾಲೆಯಲ್ಲಿ ಎಷ್ಟು ಮಂದಿ ಶಿಕ್ಷಕರಿದ್ದಾರೆ, ಅವರ ವಿದ್ಯಾರ್ಹತೆ, ಸೇವಾನುಭವದ ಜತೆಗೆ ಅವರು ಬೋಧಿಸುವ ವಿಷಯದ ಜತೆಗೆ ಸಾಧನೆಯನ್ನು ಪ್ರದರ್ಶಿಸಲು ಆದೇಶದಲ್ಲಿ ಸೂಚಿಸಲಾಗಿದೆ.

ಬದ್ಧತೆಯ ಪರೀಕ್ಷೆ: ಶಾಲೆಗೆ ಮಕ್ಕಳನ್ನು ಕರೆತರಲು ಬೇಕಾದ ಹೊಸ ಪ್ರಯತ್ನದ ಜತೆಗೆ ಆಯಾ ಶಾಲಾ ಶಿಕ್ಷಕರ ಬದ್ಧತೆಯ ಪರೀಕ್ಷೆ ಮಾಡಲು ಸರ್ವಶಿಕ್ಷಾ ಅಭಿಯಾನ ಮುಂದಾಗಿದೆ. ಶಾಲೆಗಳಲ್ಲಿ ಸೇವೆ ಸಲ್ಲಿಸುತ್ತಿರುವ ಶಿಕ್ಷಕರ ಭಾವಚಿತ್ರ ಸಹಿತವಾದ ಮಾಹಿತಿಯನ್ನು ಪ್ರದರ್ಶನ ಮಾಡುವುದರಿಂದ ಅವರ ವಿದ್ಯಾರ್ಹತೆ, ಶೈಕ್ಷಣಿಕ ಸಾಧನೆ, ಸೇವಾನುಭವ ಮತ್ತು ವಿಷಯವಾರು, ಬೋಧನಾ ಸಾಮರ್ಥ್ಯದ ಬಗ್ಗೆ ವಿದ್ಯಾರ್ಥಿಗಳಿಗೆ, ಪೋಷಕರಿಗೆ ಮತ್ತು ಸಮುದಾಯಕ್ಕೆ ತಿಳಿಸುವ ಮೂಲಕ ಶಿಕ್ಷಕರಲ್ಲಿ ಬದ್ಧತೆಯ ಅರಿವು ಮೂಡಿಸಲು ಹೊರಟಿದ್ದಾರೆ. ಸರ್ಕಾರಿ ಶಾಲೆಗಳಲ್ಲಿ ವರ್ಷದಿಂದ ವರ್ಷಕ್ಕೆ ವಿದ್ಯಾರ್ಥಿಗಳ ಸಂಖ್ಯೆ ಇಳಿಮುಖವಾಗುತ್ತಿದೆ. ಸರ್ಕಾರ ಮತ್ತು ಶಿಕ್ಷಣ ಇಲಾಖೆ ಎಷ್ಟೇ ವಿನೂತನ ಪ್ರಯತ್ನ ನಡೆಸಿದರೂ, ಸರ್ಕಾರಿ ಶಾಲೆಗೆ ನಿರೀಕ್ಷಿತ ಮಟ್ಟದಲ್ಲಿ ಮಕ್ಕಳನ್ನು ಕರೆ ತರಲು ಸಾಧ್ಯವಾಗುತ್ತಿಲ್ಲ. ಖಾಸಗಿ ಶಾಲೆಗಳಿಗೆ ಹೋಲಿಸಿದರೆ, ಸರ್ಕಾರಿ ಶಾಲೆಯ ಶೈಕ್ಷಣಿಕ ಗುಣಮಟ್ಟವೂ ಚೆನ್ನಾಗಿಲ್ಲ. ಮೂಲ
ಸೌಕರ್ಯವೂ ಹೇಳಿಕೊಳ್ಳುವಷ್ಟು ಒಳ್ಳೆಯದಿಲ್ಲ. ಬೋಧನಾ ಕೊಠಡಿ, ಶೌಚಾಲಯ, ಕುಡಿಯುವ ನೀರಿನ ಸಮಸ್ಯೆ ಹೀಗೆ ಕೊರ ತೆ ಇದ್ದೇ ಇರುತ್ತದೆ. ಸರ್ಕಾರಿ ಶಾಲೆಯ 2,11,098 ಕೊಠಡಿಗಳ ಪೈಕಿ 73,129 ಕೊಠಡಿಗಳು ವಿದ್ಯಾರ್ಥಿಗಳು ಕುಳಿತುಕೊಳ್ಳಲು ಯೋಗ್ಯವಿಲ್ಲ ಎಂಬುದನ್ನು ಸರ್ಕಾರಿ ಶಾಲಾ ಸಬಲೀಕರಣ ಸಮಿತಿಯೇ ತಿಳಿಸಿದೆ. ಹೀಗಾಗಿ ಸರ್ಕಾರಿ ಶಾಲೆಗೆ ಮಕ್ಕಳನ್ನು ಕಳುಹಿಸಲು ಪಾಲಕರೇ ಹಿಂದೇಟು ಹಾಕುತ್ತಿದ್ದಾರೆ.

ಆರ್‌ಟಿಇ ಜಾರಿಗೆ ಬಂದ ನಂತರವಂತೂ ಖಾಸಗಿ ಶಾಲೆಗೆ ಮಕ್ಕಳನ್ನು ಸೇರಿಸಲು ಪಾಲಕರು ಇನ್ನಷ್ಟುಉತ್ಸುಕರಾಗಿದ್ದಾರೆ. ಪ್ರತಿ ವರ್ಷ ಲಕ್ಷಕ್ಕೂ ಅಧಿಕ ವಿದ್ಯಾರ್ಥಿಗಳು ಆರ್‌ಟಿಇ ಅಡಿಯಲ್ಲಿ ಖಾಸಗಿ ಶಾಲೆಯಲ್ಲಿ ಪ್ರವೇಶ ಪಡೆಯುತ್ತಿದ್ದಾರೆ. ಇತ್ತ, ಸರ್ಕಾರಿ ಶಾಲೆ ವಿದ್ಯಾರ್ಥಿಗಳಿಲ್ಲದೇ ಸೊರಗುತ್ತಿದೆ. 7 ವರ್ಷ ದಲ್ಲಿ 1778 ಸರ್ಕಾರಿ ಶಾಲೆಯನ್ನು ಮುಚ್ಚಲಾಗಿದೆ.

ಉಪ ನಿರ್ದೇಶಕರಿಗೆ ಸೂಚನೆ
ಆಡಳಿತವಾರು ತಮ್ಮ ಜಿಲ್ಲೆಯ ಎಲ್ಲಾ ಪ್ರಾಥಮಿಕ ಹಾಗೂ ಪ್ರೌಢಶಾಲೆಯ ಶಿಕ್ಷಕರ ಭಾವಚಿತ್ರ ಸಹಿತ ಮಾಹಿತಿ ಪ್ರದರ್ಶಿಸುವಂತೆ ಜಿಲ್ಲಾ ಉಪನಿರ್ದೇಶಕರಿಗೆ ಸೂಚಿಸಲಾಗಿದೆ. ಎಂಎಚ್‌ಆರ್‌ಡಿಗೆ ಮಾಹಿತಿ ನೀಡಬೇಕಿರುವುದರಿಂದ ವಾರದೊಳಗೆ ಈ ಕಾರ್ಯ ಪೂರೈಸುವಂತೆ ನಿರ್ದೇಶಿಸಲಾಗಿದೆ. 

Advertisement

ಸರ್ಕಾರಿ ಶಾಲಾ ಗುಣಮಟ್ಟವನ್ನು ಶಿಕ್ಷಕರ ಮೂಲಕವೂ ಅಳೆಯುತ್ತಾರೆ. ಹೀಗಾಗಿ ಶಾಲೆಗಳಲ್ಲಿ ಶಿಕ್ಷಕರ ಭಾವಚಿತ್ರ ಸಹಿತ ಮಾಹಿತಿ ಪ್ರದರ್ಶಿಸಲು ಕ್ರಮ ತೆಗೆದುಕೊಂಡಿದ್ದೇವೆ. ಇದರೊಂದಿಗೆ ಶಿಕ್ಷಕರ ಬದ್ಧತೆಯ ಅರಿವು ಆಗಲಿದೆ.
 ●ಎಸ್‌.ಹೊನ್ನಾಂಬ, ನಿರ್ದೇಶಕಿ, ಸರ್ವಶಿಕ್ಷಾ ಅಭಿಯಾನ

Advertisement

Udayavani is now on Telegram. Click here to join our channel and stay updated with the latest news.

Next