Advertisement

ಪ್ರಕೃತಿ ವಿಕೋಪ ನಿರ್ವಹಣೆಗೆ ಮಾಹಿತಿ

03:10 PM Nov 28, 2019 | Suhan S |

ಶಿರಹಟ್ಟಿ: ದೇಶದಲ್ಲಿ ಉಂಟಾಗಬಹುದಾದ ಪ್ರಕೃತಿ ವಿಕೋಪಗಳನ್ನು ಸಮರ್ಥವಾಗಿ ಎದುರಿಸುವುದರ ಜೊತೆಗೆ ಮುಂಜಾಗೃತಾ ಕ್ರಮಗಳ ಕುರಿತು ಅಧಿಕಾರಿಗಳಿಗೆ ತರಬೇತಿ ನೀಡುವುದು ಅವಶ್ಯಕವಾಗಿದೆ. ಕೇಂದ್ರ, ರಾಜ್ಯ ಸರಕಾರ, ಜಿಲ್ಲಾಡಳಿತ ಮತ್ತು ಸ್ಥಳೀಯ ಮಟ್ಟದ ಅಧಿಕಾರಿಗಳಿಗೆ ಜಾಗೃತಿಯನ್ನುಂಟು ಮಾಡುವ ತರಬೇತಿ ಲಾಭ ಪಡೆಯಬೇಕು. ಇದರಿಂದ ಪ್ರಕೃತಿ ವಿಕೋಪದಿಂದಾಗುವ ಪರಿಣಾಮ ನಿಯಂತ್ರಿಸಲು ಸಾಧ್ಯ ಎಂದು ಜಿಲ್ಲಾಧಿಕಾರಿ ಎಂ.ಜಿ. ಹಿರೇಮಠ ಹೇಳಿದರು.

Advertisement

ಪಟ್ಟಣದ ತಾಪಂ ಸಾಮರ್ಥ್ಯ ಸೌಧದಲ್ಲಿ ಜರುಗಿದ ರಾಜ್ಯ ವಿಕೋಪ ನಿರ್ವಹಣಾ ಪ್ರಾಧಿಕಾರ ಮತ್ತು ಜಿಲ್ಲಾಮಟ್ಟದ ಪ್ರಕೃತಿ ವಿಕೋಪ ನಿರ್ವಹಣಾ ಪ್ರಾಧಿಕಾರದಿಂದ ತಾಲೂಕು ಮಟ್ಟದ ಅಧಿಕಾರಿಗಳಿಗೆ ವಿಕೋಪ ನಿರ್ವಹಣಾ ಕೇಂದ್ರ ಆಡಳಿತ ತರಬೇತಿ ಸಂಸ್ಥೆ ಮೈಸೂರಿನ ಸಂಸ್ಥೆ ವತಿಯಿಂದ ಜರುಗಿದ ತರಬೇತಿ ಶಿಬಿರದ ಪ್ರಾರಂಭೋತ್ಸವಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಅತೀವೃಷ್ಟಿ ಮತ್ತು ಅನಾವೃಷ್ಟಿ ಮತ್ತು ಇನ್ನಿತರ ಪ್ರಕೃತಿ ವಿಕೋಪಗಳನ್ನು ಎದುರಿಸುವ ಸಂದರ್ಭ ಬಂದರೆ ಯಾವ ರೀತಿಯಲ್ಲಿ ಸನ್ನದ್ಧರಾಗಿರಬೇಕು, ಸಾರ್ವಜನಿಕರ ರಕ್ಷಣೆ ಮತ್ತು ಅವರ ಆಸ್ತಿ ಪಾಸ್ತಿಗಳ ರಕ್ಷಣೆಗೆ ತೆಗೆದುಕೊಳ್ಳಬಹುದಾದ ಪರಿಹಾರೋಪಾಯಗಳನ್ನು ನಾವೆಲ್ಲ ತಿಳಿದುಕೊಳ್ಳವುದು ಅವಶ್ಯಕವಾಗಿದೆ. ತರಬೇತಿಯಲ್ಲಿ ಪಡೆದ ಜ್ಞಾನ ಸಾರ್ವಜನಿಕರಿಗೆ ಸಂದರ್ಭನುಸಾರವಾಗಿ ಮನವರಿಕೆ ಮಾಡಿಕೊಡುವುದು ಅವಶ್ಯಕವಾಗಿದೆ. ಜಿಲ್ಲೆಯ ರೋಣ ಮತ್ತು ನಗರಗುಂದ ತಾಲೂಕಿನಲ್ಲಿ 40 ಹಳ್ಳಿಗಳು ನೆರೆ ಹಾವಳಿಗೆ ಒಳಗಾಗಿದ್ದವು. 45 ಗಂಜಿ ಕೇಂದ್ರ ತೆರೆಯಲಾಗಿತ್ತು.

40 ಸಾವಿರ ಜನರಿಗೆ ಊಟ, ನೀರು ಆರೋಗ್ಯ, ವಸತಿ ಒದಗಿಸುವುದರ ಜೊತೆಗೆ ವಿಪತ್ತಿನಲ್ಲಿ ಒಳಗಾದವರ ರಕ್ಷಣೆಗಾಗಿ ಎನ್‌ಡಿಎಫ್‌ಆರ್‌, ಹೆಲಿಪ್ಯಾಡ್‌ ಮತ್ತು ರೈಲಿನ ಬಳಕೆ ಮಾಡಿಕೊಂಡು ಜನರನ್ನು ರಕ್ಷಣೆ ಮಾಡಲಾಗಿದೆ. ಇಂತಹ ಹತ್ತು ಹಲವು ಸುರಕ್ಷತಾ ಕ್ರಮಗಳ ಬಗ್ಗೆ ನಮಗೆಲ್ಲ ಜ್ಞಾನವಿದ್ದರೆ ವಿಪತ್ತಿನಿಂದ ಪಾರಾಗಬಹುದಾಗಿದೆ ಎಂದು ಹೇಳಿದರು.

ವಿಕೋಪ ನಿರ್ವಹಣಾ ಕೇಂದ್ರ ಆಡಳಿತ ತರಬೇತಿ ಸಂಸ್ಥೆ ಮೈಸೂರಿನ ನಿರ್ದೇಶಕ ಡಾ| ಪರಮೇಶ್ವರ ಜಿ.ಆರ್‌., ರಾಷ್ಟ್ರೀಯ ವಿಕೋಪ ನಿರ್ವಹಣಾ ಪ್ರಾಧಿಕಾರವನ್ನು ನಾಲ್ಕು ಹಂತದಲ್ಲಿ ರಚಿಸಲಾಗಿದ್ದು, ಒಂದು ರಾಷ್ಟ್ರೀಯ, ರಾಜ್ಯ, ಜಿಲ್ಲಾ ಮತ್ತು ಸ್ಥಳೀಯ ಮಟ್ಟದಲ್ಲಿ ಪ್ರಾಧಿಕಾರವನ್ನು ನಿರ್ಮಿಸಲಾಗಿದೆ. ರಾಷ್ಟ್ರೀಯ ವಿಕೋಪ ನಿರ್ವಹಣೆ ಅಧ್ಯಕ್ಷರು ಪ್ರಧಾನ ಮಂತ್ರಿಗಳಿರುತ್ತಾರೆ. ರಾಜ್ಯಮಟ್ಟದಲ್ಲಿ ಮುಖ್ಯಮಂತ್ರಿಗಳು ಮತ್ತು ಜಿಲ್ಲಾಮಟ್ಟದಲ್ಲಿ ಜಿಲ್ಲಾಧಿಕಾರಿಗಳು ಮತ್ತು ಸ್ಥಳೀಯ ಮಟ್ಟದಲ್ಲಿ ತಾಲೂಕು ಮಟ್ಟದ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳನ್ನು ಸೇರಿದಂತೆ ಕಾರ್ಯನಿರ್ವಹಿಸುತ್ತಾರೆ ಎಂದರು.

Advertisement

ಜಿಲ್ಲಾ ತರಬೇತಿ ಸಂಸ್ಥೆ ಉಪಪ್ರಾಚಾರ್ಯ ಎನ್‌. ಎಸ್‌. ಸೋನೆ, ತಹಶೀಲ್ದಾರ್‌ ಯಲ್ಲಪ್ಪ ಗೋಣೆಣ್ಣವರ, ತಾಪಂ ಇಒ ಡಾ| ನಿಂಗಪ್ಪ ಓಲೇಕಾರ ಮತ್ತು ತಾಲೂಕ ಮಟ್ಟದ ಅಧಿಕಾರಿಗಳು ಮತ್ತು ಕಾಲೇಜುಗಳ ಪ್ರಾಚಾರ್ಯರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next