ಮಹಾನಗರ: ಕಾನೂನಿನ ವಿರುದ್ಧವಾಗಿ ಭ್ರೂಣ ಲಿಂಗ ಪತ್ತೆ ಮಾಡುವಂತಹ ಸ್ಕ್ಯಾನಿಂಗ್ ಸೆಂಟರ್‌ಗಳ ಮಾಹಿತಿ ನೀಡಿದವರಿಗೆ 10,000 ರೂ. ಹಾಗೂ ಪ್ರಶಸ್ತಿ ನೀಡಲು ಕ್ರಮ ಕೈಗೊಳ್ಳುವಂತೆ ಜಿಲ್ಲಾಧಿಕಾರಿ ಎಸ್. ಶಶಿಕಾಂತ್ ಸೆಂಥಿಲ್ ಅವರು ಅಧಿಕಾರಿಗಳಿಗೆ ಸೂಚಿಸಿದ್ದಾರೆ.
ಜಿಲ್ಲಾಧಿಕಾರಿ ಕಚೇರಿಯ ಕೋರ್ಟ್ ಹಾಲ್ನಲ್ಲಿ ಸೋಮವಾರ ನಡೆದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ವಿವಿಧ ಯೋಜನೆಗಳ ಜಿಲ್ಲಾ ಮಟ್ಟದ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ಭ್ರೂಣ ಹತ್ಯೆ ಕಾನೂನುಬಾಹಿರ ಚಟುವಟಿಕೆಯಾಗಿದ್ದರೂ ಇಂತಹ ಘಟನೆಗಳು ವರದಿಯಾಗುತ್ತಿವೆ. ಸ್ಕಾ ್ಯನಿಂಗ್ ಸೆಂಟರ್‌ಗಳಿಗೆ ಸಾಮಾನ್ಯರಂತೆ ತೆರಳಿ ಪರಿಶೀಲನೆ ನಡೆಸುವಂತೆ ಅವರು ಆರೋಗ್ಯ ಇಲಾಖೆ ಅಧಿಕಾರಿಗಳಿಗೆ ತಿಳಿಸಿದರು.
ಗರ್ಭಿಣಿಯರ ನಿಖರವಾದ ಮಾಹಿತಿಯನ್ನು ಅಂಗನವಾಡಿ ಕೇಂದ್ರದಿಂದ ಪಡೆದುಕೊಳ್ಳಬೇಕು. ಮಾತೃ ವಂದನಾ ಯೋಜನೆಯಡಿ ಗರ್ಭಿಣಿಯರಿಗೆ ದೊರಕಬೇಕಾದ ಸೌಲಭ್ಯಗಳನ್ನು ಸರಿಯಾದ ರೀತಿಯಲ್ಲಿ ತಲುಪಿಸಬೇಕು.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ವಿವಿಧ ಯೋಜನೆಗಳ ಬಗ್ಗೆ ಹಾಗೂ ಇಲಾಖೆ ವತಿಯಿಂದ ನಡೆಯುವಂತಹ ಜನಪರ ಕಾರ್ಯಕ್ರಮಗಳ ಕುರಿತು ಆನ್‌ಲೈನ್ ಪ್ರಚಾರ ನಡೆಸಿ ಬಡತನದಲ್ಲಿರುವವರಿಗೆ ನೆರವಾಗಬೇಕು ಎಂದು ಜಿಲ್ಲಾಧಿಕಾರಿ ಅಧಿಕಾರಿಗಳಿಗೆ ತಿಳಿಸಿದರು.
ಜಿಲ್ಲಾ ಕುಟುಂಬ ಕಲ್ಯಾಣಾಧಿಕಾರಿ ಸಿಕಂದರ್ ಪಾಶಾ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ ಸುಂದರ ಪೂಜಾರಿ, ವೆನ್ಲಾಕ್ ಆಸ್ಪತ್ರೆಯ ಅಧೀಕ್ಷಕಿ ಡಾ| ರಾಜೇಶ್ವರಿ ದೇವಿ ಉಪಸ್ಥಿತರಿದ್ದರು.