ತುಮಕೂರು: ಜಿಲ್ಲೆಯಲ್ಲಿ ಕೋವಿಡ್-19ರ ಸೋಂಕಿತ ಶಿರಾ ತಾಲೂಕಿನ ಪಿ-84 ಸಂಪೂರ್ಣ ಗುಣಮುಖರಾಗಿದ್ದು ಈಗ ಯಾವುದೇ ಸೋಂಕಿತ ಪ್ರಕರಣ ಜಿಲ್ಲೆಯಲ್ಲಿ ಇಲ್ಲ. ಜನರು ಸಾಮಾಜಿಕ ಅಂತರ ಕಾಯ್ದು ಕೊಳ್ಳುವುದರ ಜೊತೆಗೆ ಬೆಂಗಳೂರು ಸೇರಿದಂತೆ ಬೇರೆ ಜಿಲ್ಲೆಗಳಿಂದ ಯಾರಾದರೂ ತಮ್ಮ ಮನೆಗೆ ಬಂದಿದ್ದರೆ ತಿಳಿಸಿ ಕೋವಿಡ್ -19 ಹರಡದಂತೆ ಜಾಗೃತಿ ವಹಿಸಿ ಎಂದು ಜಿಲ್ಲಾಧಿಕಾರಿ ಡಾ.ಕೆ. ರಾಕೇಶ್‌ಕುಮಾರ್ ಮನವಿ ಮಾಡಿದ್ದಾರೆ. ಉದಯವಾಣಿಯೊಂದಿಗೆ ಮಾತನಾಡಿದ ಅವರು, ಬೆಂಗಳೂರಿನ ಇಂದಿರಾ ಗಾಂಧಿ ಆಸ್ಪತ್ರೆಗೆ ದಾಖಲಾಗಿದ್ದ ಕೋವಿಡ್ -19 ವೈರಸ್ ಸೋಂಕಿತ ಪಿ-84 ವ್ಯಕ್ತಿಯು ಸಂಪೂರ್ಣ ಗುಣಮುಖರಾಗಿ ಜಿಲ್ಲೆಗೆ ವಾಪಸ್ ಬಂದಿದ್ದು, ಅವರನ್ನು ಮನೆಯಲ್ಲಿಯೇ ಪ್ರತ್ಯೇಕವಾಗಿ ಇರಿಸಲು ತಿಳಿಸಲಾಗಿದೆ ಎಂದರು. ಈ ಸಂಬಂಧ ಶಿರಾ ನಗರಕ್ಕೆ ಭೇಟಿ ನೀಡಿ ಅವರ ಸಂಬಂಧಿಕರಿಗೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ. ಮುಂದಿನ 14 ದಿನಗಳವರೆಗೂ ಹೋಂ ಕ್ವಾರೆಂಟೈನ್ ಮಾಡಲಾಗಿದ್ದು, 2 ಬಾರಿಯೂ ಅವರ ಸಂಬಂಧಿಕರದ್ದು ನೆಗೆಟಿವ್ ಬಂದಿದ್ದು, ಅವರನ್ನು ಮನೆಗೆ ಕಳುಹಿಸಲಾಗಿದೆ ಎಂದು ಹೇಳಿದರು.
ಈ ಹಿಂದೆ ತಬ್ಲೀ ಜಮಾತ್‌ಗೆ ತೆರಳಿರುವವರ ಮಾದರಿಗಳನ್ನು ಕಳುಹಿಸಲಾಗಿದೆ. ಅಲ್ಲದೇ ಮೇ 3ರವರೆಗೆ ಲಾಕ್‌ಡೌನ್ ವಿಸ್ತರಿಸಿದ್ದು, ಸಾರ್ವಜನಿಕರು ಇದನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು, ಜಿಲ್ಲೆಗೆ ಬೆಂಗಳೂರು ಸೇರಿದಂತೆ ಬೇರೆ ಜಿಲ್ಲೆಗಳಿಂದ ಯಾರಾದರೂ ಬಂದಿದ್ದರೆ ಮಾಹಿತಿ ನೀಡಬೇಕು ಎಂದು ನುಡಿದರು. ನಗರವೂ
ಸೇರಿದಂತೆ ವಿವಿಧ ಕಡೆಗಳಲ್ಲಿ ಆರೋಗ್ಯ ಕಾರ್ಯಕರ್ತೆಯರು, ಆಶಾ ಕಾರ್ಯಕರ್ತೆಯರು ಮನೆ ಮನೆಗೆ ಭೇಟಿ ನೀಡಿ ಮಾಹಿತಿ ಸಂಗ್ರಹಿಸುತ್ತಿದ್ದಾರೆ.
ಸಾರ್ವಜನಿಕರು ಇದಕ್ಕೆ ಸಹ ಕಾರ ನೀಡಬೇಕು, ಬೇರೆ ಜಿಲ್ಲೆಯಿಂದ ಬಂದವರಿಗೆ ಪರೀಕ್ಷೆ ಮಾಡಬೇಕು, ಜೊತೆಗೆ ಅವರನ್ನು 14 ದಿನ ಗಳ ವರೆಗೂ ಹೋಂ ಕ್ವಾರೆಂಟೈನ್‌ನಲ್ಲಿ ಇರಿಸಿ ಅವರ ರಕ್ತ ಮತ್ತು ಗಂಟಲು ಸ್ರಾವ ಪರೀಕ್ಷೆ ಮಾಡಿಸಿ ಕೊಳ್ಳಬೇಕು ಎಂದರು.
ಬೇರೆ ಜಿಲ್ಲೆಯಿಂದ ಬಂದವರಲ್ಲಿ ಸೋಂಕಿತ ವ್ಯಕ್ತಿ ಇದ್ದರೆ ಈಗ ಯಾವುದೇ ಸೋಂಕು ಪ್ರಕರಣ ಇಲ್ಲದ ಜಿಲ್ಲೆ ಯಲ್ಲಿ ಹೆಚ್ಚುವ ಸಾಧ್ಯತೆ ಇದೆ, ಆದ್ದರಿಂದ ಸಾರ್ವಜನಿಕರ ಮೇ 3 ರ ವರೆಗೂ ಮನೆಯಲ್ಲಿಯೇ ಇತುವಂತೆ ಮನವಿ ಮಾಡಿದರು. ಜಿಲ್ಲೆಗೆ ಬಂದಿರುವ 480 ಮಂದಿಯನ್ನು ತೀವ್ರ ನಿಗಾವಣೆಯಲ್ಲಿಡಲಾಗಿದ್ದು, ಈ ಪೈಕಿ 49 ಮಂದಿ ಯನ್ನು ಹೋಂ ಕ್ವಾರೆಂಟೈನ್‌ನಲ್ಲಿ ಇರಿಸಲಾಗಿದೆ. ಅವರು ಮನೆಯಿಂದ ಹೊರಬರಬಾರ ದೆಂದು ಸೂಚಿಸಲಾಗಿದೆ. ಒಟ್ಟು 274 ಮಂದಿಯನ್ನು ಐಸೋಲೇಷನ್‌ನಲ್ಲಿ ಇಡಲಾಗಿದ್ದು, 321 ಜನರ 28 ದಿನ ಹೋಂ ಕ್ವಾರೆಂಟೈನ್ ಅವಧಿ ಪೂರ್ಣ ಗೊಂಡಿದೆ. ಈ ವರೆಗೂ 556 ಜನರ
ಗಂಟಲುಸ್ರಾವ ಸಂಗ್ರಹಿಸಿ ತಪಾಸಣೆಗೊಳಪಡಿಸಿದ್ದು, 384 ಮಾದರಿಗಳು ನೆಗೆಟಿವ್ ಎಂದು ದೃಢಪಟ್ಟಿದೆ ಎಂದು ಜಿಲ್ಲಾಧಿಕಾರಿ ರಾಕೇಶ್ ಕುಮಾರ್ ತಿಳಿಸಿದರು.