Advertisement

ಆತಂಕ ಸೃಷ್ಟಿಸಿದ್ದ ಸಚಿವ ಆರ್‌.ಅಶೋಕ್‌ ಮಾಹಿತಿ

07:11 AM Jun 03, 2020 | Lakshmi GovindaRaj |

ಬೆಂಗಳೂರು: ಕೋವಿಡ್‌ 19 ಪ್ರಕರಣಗಳ ಕುರಿತು ಉಡುಪಿ ಜಿಲ್ಲೆಗೆ ಸಂಬಂಧಿಸಿದಂತೆ ಕಂದಾಯ ಸಚಿವ ಆರ್‌.ಅಶೋಕ್‌ ಹೇಳಿಕೆಗೂ ಆರೋಗ್ಯ ಇಲಾಖೆ ಅಧಿಕೃತ ಮಾಹಿತಿಗೂ ವ್ಯತ್ಯಾಸವಿದ್ದು, ಸಚಿವರ ಹೇಳಿಕೆಯಿಂದ ಉಡುಪಿ  ಜಿಲ್ಲೆಯ ಜನತೆ ಆತಂಕಗೊಂಡಿದ್ದರು. ಉಡುಪಿ ಜಿಲ್ಲೆಯಲ್ಲಿ ಮಂಗಳವಾರ ಹೊಸದಾಗಿ 150 ಮಂದಿಗೆ ಕೋವಿಡ್‌- 19 ವೈರಸ್‌ ಕಾಣಿಸಿಕೊಂಡಿರುವುದು ದೃಢಪಟ್ಟಿದೆ.

Advertisement

ಆದರೆ ಮಂಗಳವಾರ ಮಧ್ಯಾಹ್ನದ ಹೊತ್ತಿಗೆ ಉಡುಪಿಯಲ್ಲಿ 210  ಪಾಸಿಟಿವ್‌ ಪ್ರಕರಣ ಪತ್ತೆಯಾಗಿದೆ ಎಂದು ಸಚಿವ ಆರ್‌.ಅಶೋಕ್‌ ಹೇಳಿದ್ದು ಜಿಲ್ಲೆಯ ಜನರನ್ನು ಆತಂಕಕ್ಕೆ ದೂಡಿತು. ಕೋವಿಡ್‌ 19 ಪ್ರಕರಣಗಳಿಗೆ ಸಂಬಂಧಿಸಿದಂತೆ ರಾಜ್ಯ ಸರ್ಕಾರ ಮಾಹಿತಿ  ಮುಚ್ಚಿಡುತ್ತಿದೆಯೇ ಎಂಬ ಅನುಮಾನಕ್ಕೂ ಕಾರಣವಾಗಿತ್ತು.  ಹೆಚ್ಚು ಪ್ರಕರಣಗಳು ವರದಿಯಾಗಿವೆ ಎಂದು ಅಧಿಕೃತವಾಗಿ ತಿಳಿಸಿದರೆ ಜನತೆ ಆತಂಕಗೊಳ್ಳಬಹುದು ಎಂದು ಕಡಿಮೆ ತೋರಿಸಲಾಗಿದೆ ಎಂಬ ಮಾತುಗಳು ಕೇಳಿಬಂದವು.

ಆದರೆ ಆರೋಗ್ಯ ಇಲಾಖೆ ರಾತ್ರಿ ಪ್ರಕಟಿಸಿದ  ಅಧಿಕೃತ ವರದಿಯಲ್ಲಿ ಉಡುಪಿಯಲ್ಲಿ ಹೊಸ 150 ಸೋಂಕು ಪ್ರಕರಣಗಳು ಪತ್ತೆಯಾಗಿತ್ತು. ಅಂದರೆ ಉಡುಪಿ ಜಿಲ್ಲಾ ಆರೋಗ್ಯಾಧಿಕಾರಿ ನೀಡಿದ್ದ ಮಾಹಿತಿ ನಿಖರವಾಗಿದ್ದರೆ, ಸಚಿವ ಅಶೋಕ್‌ ನೀಡಿದ್ದ ಮಾಹಿತಿ ತಪ್ಪಾಗಿತ್ತು. ಆತಂಕ  ಸೃಷ್ಟಿಗೆ ಕಾರಣರಾದ ಅಶೋಕ್‌ ವಿರುದ್ಧ ಸಾಕಷ್ಟು ಆಕ್ರೋಶ ವ್ಯಕ್ತವಾಗಿತ್ತು.

ಮಾಹಿತಿ ಮುಚ್ಚಿಡುವ ಶಂಕೆ: ಉಡುಪಿ ಜಿಲ್ಲೆಯ ಹೊಸ ಸೋಂಕಿತರ ಸಂಖ್ಯೆಗೆ ಸಂಬಂಧಪಟ್ಟಂತೆ ಸಚಿವ ಅಶೋಕ್‌ ನೀಡಿರುವ ಮಾಹಿತಿಯೇ ಸುಳ್ಳಾಗಿರುವುದು ಇದೀಗ ಅನುಮಾನಕ್ಕೆ ಎಡೆ ಮಾಡಿಕೊಟ್ಟಿದೆ. ಜವಾಬ್ದಾರಿಯುತ ಸ್ಥಾನದಲ್ಲಿರುವ ಸಚಿವರು ನೀಡಿದ ಮಾಹಿತಿ ಸರಿಯೋ  ಅಥವಾ ಆರೋಗ್ಯ ಇಲಾಖೆ ನೀಡುತ್ತಿರುವ ಮಾಹಿತಿ ತಪ್ಪೇ ಎಂಬ ಶಂಕೆ ಶುರುವಾಗಿದೆ. ಕೋವಿಡ್‌ 19 ಸೋಂಕು ಪರೀಕ್ಷೆ, ದೃಢಪಟ್ಟ ಪ್ರಕರಣ ಹಾಗೂ ಗುಣಮುಖರಾದ ವಿವರಕ್ಕೆ ಸಂಬಂಧಪಟ್ಟಂತೆ ಗೊಂದಲಮಯ ಮಾಹಿತಿ ನೀಡುತ್ತಿರುವುದು ಎಷ್ಟು ಸರಿ ಎಂಬ ಪ್ರಶ್ನೆ ಮೂಡಿದೆ.

Advertisement

Udayavani is now on Telegram. Click here to join our channel and stay updated with the latest news.

Next