Advertisement

ಲಸಿಕೆ ಅಭಿವೃದ್ಧಿ ಹಂತಗಳ ಬಗ್ಗೆ ಮಾಹಿತಿ

07:45 PM Oct 30, 2021 | Team Udayavani |

ಸೂಕ್ಷ್ಮಜೀವಿಗಳಿಂದ ಉಂಟಾಗುವ ರೋಗಗಳ ವಿರುದ್ಧ ದೇಹದ ಪ್ರತಿರಕ್ಷಣ ಪ್ರತಿಕ್ರಿಯೆಯನ್ನು ಉತ್ತೇಜಿಸಲು ಬಳಸುವ ತಯಾರಿಯನ್ನು ಲಸಿಕೆ ಎನ್ನುತ್ತೇವೆ. ಲಸಿಕೆಗಳನ್ನು ಸಾಮಾನ್ಯವಾಗಿ ಚುಚ್ಚುಮದ್ದಿನ ಮೂಲಕ ನೀಡಲಾಗುತ್ತದೆ, ಆದರೆ ಕೆಲವು ಬಾಯಿಯ ಮೂಲಕ ಅಥವಾ ಮೂಗಿನ ಮೂಲಕ ನೀಡಲಾಗುವುದು.

Advertisement

ಲಸಿಕೆ ಹೇಗೆ
ಕೆಲಸ ಮಾಡುತ್ತದೆ?
ರೋಗಕಾರಕಗಳನ್ನು ಗುರುತಿಸಲು ಮತ್ತು ಎದುರಿಸಲು ರೋಗನಿರೋಧಕ ವ್ಯವಸ್ಥೆಗೆ ತರಬೇತಿ ನೀಡುವ ಮೂಲಕ ಲಸಿಕೆ ಕೆಲಸ ಮಾಡುತ್ತದೆ. ರೋಗನಿರೋಧಕ ಪ್ರತಿಕ್ರಿಯೆಯನ್ನು ಪ್ರಚೋದಿಸಲು ಕೆಲವು ಅಣುಗಳನ್ನು ಪ್ರತಿಜನಕಗಳನ್ನಾಗಿ ದೇಹಕ್ಕೆ ಪರಿಚಯಿಸಬೇಕು. ಈ ಪ್ರತಿಜನಕಗಳನ್ನು ದೇಹಕ್ಕೆ ಚುಚ್ಚುವ ಮೂಲಕ ನಮ್ಮ ದೇಹದ ಪ್ರತಿರಕ್ಷಣ ವ್ಯವಸ್ಥೆಯು ಎಲ್ಲ ವೈರಸ್‌ ಮತ್ತು ಬ್ಯಾಕ್ಟೀರಿಯಾಗಳನ್ನು ಗುರುತಿಸುತ್ತದೆ ಮತ್ತು ಪ್ರತಿಕಾಯಗಳನ್ನು ಉತ್ಪಾದಿಸುತ್ತದೆ. ಬ್ಯಾಕ್ಟೀರಿಯಾ ಅಥವಾ ವೈರಸ್‌ ಮತ್ತೆ ಕಾಣಿಸಿಕೊಂಡರೆ, ರೋಗನಿರೋಧಕ ವ್ಯವಸ್ಥೆಯು ತತ್‌ಕ್ಷಣವೇ ಪ್ರತಿಜನಕಗಳನ್ನು ಗುರುತಿಸಿ ರೋಗ ಹರಡುವ ಮತ್ತು ಅನಾರೋಗ್ಯ ಉಂಟುಮಾಡುವ
ವೈರಸ್‌ , ಬ್ಯಾಕ್ಟೀರಿಯಾಗಳನ್ನು ನಾಶಪಡಿಸುತ್ತದೆ.

ಲಸಿಕೆಗಳನ್ನು ಹೇಗೆ ತಯಾರಿಸಲಾಗುತ್ತದೆ?
-ವೈರಸ್‌ ಅನ್ನು ದುರ್ಬಲಗೊಳಿಸುವ ಮೂಲಕ: ದುರ್ಬಲಗೊಂಡಿರುವ ವೈರಸ್‌ ದೇಹದೊಳಗೆ ಪ್ರವೇಶಿಸಿದರೆ ಬಹಳ ಕಡಮೆಯಾಗಿ ಪುನರುತ್ಪತ್ತಿಯಾಗು ತ್ತವೆ. ಸೋಂಕಿನ ಸಮಯದಲ್ಲಿ ನೈಸರ್ಗಿಕ ವೈರಸ್‌ಗಳು ಸಾವಿರಾರು ಬಾರಿ ಪುನರುತ್ಪತ್ತಿಯಾದರೆ, ಲಸಿಕೆ ವೈರಸ್‌ಗಳು ಸಾಮಾನ್ಯವಾಗಿ 20ಕ್ಕಿಂತ ಕಡಿಮೆ ಬಾರಿ ಪುನರುತ್ಪತ್ತಿಯಾಗುತ್ತವೆ. ಈ ಮೂಲಕ ಅತೀ ಕಡಿಮೆ ಸೋಂಕು ಉಂಟು ಮಾಡಿ ದೇಹದ ಪ್ರತಿರಕ್ಷಣ ಕ್ರಿಯೆಯನ್ನು ಉತ್ತೇಜಿಸಲಾಗುತ್ತದೆ.
-ವೈರಸ್‌ ಅನ್ನು ನಿಷ್ಕ್ರಿಯಗೊಳಿಸಿ: ಈ ತಂತ್ರವನ್ನು ಬಳಸಿ, ವೈರಸ್‌ಗಳನ್ನು ರಾಸಾಯನಿಕದೊಂದಿಗೆ ಸಂಪೂರ್ಣವಾಗಿ ನಿಷ್ಕ್ರಿಯಗೊಳಿಸಲಾಗುತ್ತದೆ (ಅಥವಾ ಕೊಲ್ಲಲಾಗುತ್ತದೆ). ವೈರಸ್‌ ಅನ್ನು ಕೊಲ್ಲುವ ಮೂಲಕ ಅದು ಸ್ವತಃ ಪುನರುತ್ಪತ್ತಿಯಾಗಲು ಅಥವಾ ರೋಗವನ್ನು ಉಂಟುಮಾಡಲು ಸಾಧ್ಯವಿಲ್ಲ.
-ಲಸಿಕೆ/ಬ್ಯಾಕ್ಟೀರಿಯಾದ ಒಂದು ಭಾಗವನ್ನು ಬಳಸಿ: ವೈರಸ್‌ನ ಒಂದು ಭಾಗವನ್ನು ತೆಗೆದು ಲಸಿಕೆಯಾಗಿ ಬಳಸಲಾಗುತ್ತದೆ. ವೈರಸ್‌ ಅಥವಾ ಬ್ಯಾಕ್ಟೀರಿಯಾದ ಒಂದು ಭಾಗ ಪ್ರತಿರಕ್ಷಣ ಪ್ರತಿಕ್ರಿಯೆಗೆ ಕಾರಣವಾದಾಗ ಈ ತಂತ್ರವನ್ನು ಬಳಸಬಹುದು.
-ವೈರಸ್‌ನ ಭಾಗಕ್ಕೆ ಜೆನೆಟಿಕ್‌ ಕೋಡ್‌ ಒದಗಿಸುವ ಮುಖಾಂತರ: ಕೆಲವು ಲಸಿಕೆಗಳನ್ನು ಎಂಆರ್‌ಎನ್‌ಎ (MRNA), ಡಿಎನ್‌ಎ (DNA), ವೆಕ್ಟರ್‌ ವೈರಸ್‌ ಲಸಿಕೆ ಎಂದು ಕರೆಯಲಾಗುತ್ತದೆ.

ಲಸಿಕೆ ತಯಾರಿಕೆಯ
ಹಂತಗಳು ಯಾವುವು?
-ಪರಿಶೋಧಕ ಹಂತ, ಪೂರ್ವ ಪರಿಶೋಧಕ ಹಂತಈ ಸಂಶೋಧನ- ತೀವ್ರ ಹಂತವನ್ನು ರೋಗವನ್ನು ತಡೆಗಟ್ಟಲು ಅಥವಾ ಚಿಕಿತ್ಸೆ ನೀಡಲು ಸಹಾಯ ಮಾಡುವ ನೈಸರ್ಗಿಕ ಅಥವಾ ಸಿಂಥೆಟಿಕ್‌ ಪ್ರತಿಜನಕಗಳನ್ನು ಗುರುತಿಸಲು ವಿನ್ಯಾಸಗೊಳಿಸಲಾಗಿದೆ.
-ಪೂರ್ವ-ಪ್ರಾಯೋಗಿಕ ಔಷಧವನ್ನು ಜನರಲ್ಲಿ ಪರೀಕ್ಷಿಸಬೇಕೇ ಬೇಡವೇ ಎಂದು ನಿರ್ಧರಿಸುವ ಹಂತ. ಈ ಹಂತದಲ್ಲಿ ಔಷಧವನ್ನು ಪ್ರಾಣಿಗಳಲ್ಲಿ ಬಳಸಿ ಅದರ ವಿಷತ್ವದ ಮಟ್ಟದ ಬಗ್ಗೆ ಮಾಹಿತಿ ಸಂಗ್ರಹಿಸಲಾಗುತ್ತದೆ. ಸಾಮಾನ್ಯವಾಗಿ, ಪೂರ್ವಭಾವಿ ಅಧ್ಯಯನಗಳು ತುಂಬಾ ದೊಡ್ಡದಾಗಿರುವುದಿಲ್ಲ.ಜನರಲ್ಲಿ/ ಮನುಷ್ಯರಲ್ಲಿ ನಡೆಸುವ ಪ್ರಯೋಗ ಹಂತಗಳು:

ಇದನ್ನೂ ಓದಿ:ಸರಕಾರಿ ಆಸ್ಪತ್ರೆ ವೈದ್ಯರು-ಸಿಬ್ಬಂದಿ ಸೇವೆ ಅನನ್ಯ

Advertisement

ಹಂತ 1
ಹೊಸ ಲಸಿಕೆಯನ್ನು ದೇಹವು ಸಹಿಸಿಕೊಳ್ಳುತ್ತದೆಯೇ ಮತ್ತು ಊಹಿಸಿದ ರೀತಿಯಲ್ಲಿ ವರ್ತಿಸುತ್ತದೆಯೇ ಎಂಬುದನ್ನು ನಿರ್ಧರಿಸು ವುದು ಈ ಹಂತದ ಉದ್ದೇಶವಾಗಿದೆ. ವೈದ್ಯರ ಮೇಲ್ವಿಚಾರಣೆಯ ಪ್ರಕಾರ ಔಷಧವನ್ನು ಕಡಿಮೆ ಸಂಖ್ಯೆಯ ಜನರಲ್ಲಿ, ಕನಿಷ್ಠ 2 ಆರೋಗ್ಯವಂತ, ಮಾಹಿತಿಯುಕ್ತ ಸ್ವಯಂಸೇವಕರಿಗೆ ನೀಡುವುದು.

ಹಂತ 2
ಔಷಧ ಪ್ರಮಾಣ ಹಾಗೂ ಅದರ ಪರಿಣಾಮವನ್ನು ನಿರ್ಧರಿಸುವುದು ಮತ್ತು ಯಾವುದೇ ರೀತಿಯ ಅಡ್ಡಪರಿಣಾಮಗಳನ್ನು ಪರೀಕ್ಷಿಸುವುದು ಈ ಹಂತದ ಉದ್ದೇಶ. ಕನಿಷ್ಠ ಸುಮಾರು 4ರಿಂದ 5 ಕೇಂದ್ರಗಳಲ್ಲಿ 500-600 ಮಾಹಿತಿಯುಳ್ಳ ಅರ್ಹ ಜನರಿಗೆ ಲಸಿಕೆ ನೀಡಲಾಗುತ್ತದೆ.

ಹಂತ 3
ಹೆಚ್ಚಿನ ಸಂಖ್ಯೆಯ ರೋಗಿಗಳಲ್ಲಿ ಔಷಧದ ಪರಿಣಾಮಕಾರಿತ್ವ ಮತ್ತು ಸುರಕ್ಷತೆಯ ಬಗ್ಗೆ ಸಾಕಷ್ಟು ಪುರಾವೆಗಳನ್ನು ಪಡೆಯುವುದು ಈ ಹಂತದ ಉದ್ದೇಶವಾಗಿದೆ. ಈ ಹಂತದಲ್ಲಿ ರೋಗಿಗಳನ್ನು ಎರಡು ಗುಂಪುಗಳನ್ನಾಗಿ ಮಾಡಿ ಒಂದಕ್ಕೆ ಪ್ರಮಾಣಿತ ಔಷಧ ಹಾಗೂ ಇನ್ನೊಂದಕ್ಕೆ ಪ್ಲಸೀಬೊ (ಔಷಧರಹಿತ )ನೀಡಲಾಗುತ್ತದೆ. ಇದರಿಂದ ಪ್ರಮಾಣಿತ ಔಷಧದ ಪ್ರತ್ಯೇಕ ಪರಿಣಾಮ ಗೊತ್ತಾಗುತ್ತದೆ. ಈ ಹಂತದಲ್ಲಿ ಗುಂಪು 1,000-3,000 ರೋಗಿಗಳ ನಡುವೆ ಇರುತ್ತದೆ. ಫ‌ಲಿತಾಂಶಗಳು ಅನುಕೂಲಕರವಾಗಿದ್ದರೆ, ರೋಗಿಗಳಲ್ಲಿ ನಿಯಮಿತವಾಗಿ ಬಳಕೆ ಮಾಡಲು ಸಂಗ್ರಹಿಸಿದ ಔಷಧದ ಮಾಹಿತಿಯನ್ನು ಪರವಾನಗಿ ಅಧಿಕಾರಿಗಳಿಗೆ ಪ್ರಸ್ತುತಪಡಿಸಲಾಗುತ್ತದೆ.

ಹಂತ 4
ಕಣ್ಗಾವಲಿನ ಹಂತದಲ್ಲಿ ವೈದ್ಯರಿಗೆ ಔಷಧ ಲಭ್ಯವಾದ ಅನಂತರ ಅವರು ಅದನ್ನು ಶಿಫಾರಸು ಮಾಡಲು ಪ್ರಾರಂಭಿಸುತ್ತಾರೆ. ಯಾವುದೇ ಅನಿರೀಕ್ಷಿತ ಅಡ್ಡಪರಿಣಾಮಗಳನ್ನು ಗುರುತಿಸಲು ಸಾವಿರಾರು ರೋಗಿಗಳ ಮೇಲೆ ಪರಿಣಾಮಗಳನ್ನು ಮೇಲ್ವಿಚಾರಣೆ ಮಾಡಲಾಗುತ್ತದೆ.

ಲಸಿಕೆ ತಯಾರಿಕೆಯನ್ನು ಯಾರು ನಿಯಂತ್ರಿಸುತ್ತಾರೆ?
ವಿವಿಧ ಸರಕಾರಿ ಸಂಸ್ಥೆಗಳು ಮತ್ತು ಕಾನೂನುಗಳು ಭಾರತದಲ್ಲಿ ಲಸಿಕೆ ಪ್ರಯೋಗವನ್ನು ನಿಯಂತ್ರಿಸುತ್ತವೆ. ಭಾರತದ ಡ್ರಗ್ಸ್‌ ಕಂಟ್ರೋಲರ್‌ ಜನರಲ್‌ (ಈಇಎಐ) ಲಸಿಕೆ/ ಔಷಧ ಪ್ರಯೋಗಗಳಿಗೆ ಅನುಮೋದನೆ ನೀಡುತ್ತಾರೆ. ಈ ಪ್ರಯೋಗಗಳ ಮೇಲ್ವಿಚಾರಣೆ ಮಾಡಲು ಉನ್ನತ ಮಟ್ಟದ ಪ್ರಾಧಿಕಾರವಾಗಿದೆ. ಡಿಸಿಜಿಐ ಹಾಗೂ ಸಿಡಿಎಸ್‌ಸಿಒ (ಕೇಂದ್ರ ಔಷಧಗಳ ಗುಣಮಟ್ಟ ನಿಯಂತ್ರಣ ಸಂಸ್ಥೆ) ಉನ್ನತ ಮಟ್ಟದ ಪ್ರಾಧಿಕಾರಗಳಾಗಿವೆ. ಈ ಎರಡು ಸಂಸ್ಥೆಗಳು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯಕ್ಕೆ ಔಷಧ ಮತ್ತು ಆರೋಗ್ಯಕ್ಕೆ ಸಂಬಂಧಿಸಿದ ಎಲ್ಲವನ್ನೂ ಮೇಲ್ವಿಚಾರಣೆ ಮಾಡುವ ಸರಕಾರಿ ಸಂಸ್ಥೆಗಳಾಗಿವೆ. ಔಷಧಗಳು, ಶಸ್ತ್ರಚಿಕಿತ್ಸಾ ವಿಧಾನಗಳು, ತಡೆಗಟ್ಟುವ ಕ್ರಮಗಳು, ಜೀವನಶೈಲಿಯ ಮಾರ್ಪಾಡುಗಳು, ಸಾಧನಗಳು, ಶೈಕ್ಷಣಿಕ ಅಥವಾ ನಡವಳಿಕೆಯ ಚಿಕಿತ್ಸೆ, ಪುನರ್ವಸತಿ ತಂತ್ರಗಳು ಮತ್ತು ಆಯುಷ್‌ ಇಲಾಖೆಯ ವ್ಯಾಪ್ತಿಯಲ್ಲಿ ನಡೆಸುವ ಪ್ರಯೋಗಗಳಂತಹ ಯಾವುದೇ ಸಂಶೋಧನೆ ಇದ್ದಲ್ಲಿ, ಮನುಷ್ಯರನ್ನು ಒಳಗೊಂಡ ಯಾವುದೇ ಔಷಧ ಪ್ರಯೋಗವಿದ್ದರೆ ಅದನ್ನು ಸಿಟಿಆರ್‌ಐ (ಕ್ಲಿನಿಕಲ್‌ ಟ್ರಯಲ್ಸ್‌ ರಿಜಿಸ್ಟ್ರಿ ಆಫ್ ಇಂಡಿಯಾದಲ್ಲಿ) ಸಂಶೋಧನೆಯನ್ನು ನೋಂದಾಯಿಸಬೇಕಾಗುತ್ತದೆ. ಈ ಸಿಟಿಆರ್‌ಐ ಮುಖಾಂತರ ಸಾರ್ವಜನಿಕರಿಗೆ ನಡೆಸುವಂತ ಪ್ರಯೋಗಗಳ ಉದ್ದೇಶ ಮತ್ತು ಆರೋಗ್ಯದ ಲಾಭಗಳ ಬಗ್ಗೆ ಅರಿವು ಉಂಟುಮಾಡಬಹುದು(ctri.nic.in).

ಲಸಿಕೆಗಳ ತುರ್ತು ಬಳಕೆಯ ಅಧಿಕಾರ
ಘೋಷಿತ ತುರ್ತುಪರಿಸ್ಥಿತಿ ಇದ್ದಾಗ, ಡಿಸಿಜಿಐಯು ಔಷಧ ಅಥವಾ ಲಸಿಕೆಯನ್ನು ಪರಿಣಾಮಕಾರಿಯಾಗಿ ಮತ್ತು ಸುರಕ್ಷೆಗಾಗಿ ಸಂಪೂರ್ಣವಾಗಿ ಪರೀಕ್ಷಿಸದಿದ್ದರೂ ಬಿಡುಗಡೆ ಮಾಡಲು ಯೋಗ್ಯವಾಗಿದೆಯೇ ಎಂದು ತಿಳಿಸುವುದರೊಂದಿಗೆ ಅವರ ತುರ್ತು ಬಳಕೆಗೆ ಅಧಿಕಾರ ನೀಡಲಾಗುತ್ತದೆ.

ಭಾರತದಲ್ಲಿ ಪ್ರಸ್ತುತಲಸಿಕೆಗಳನ್ನು ಹೊಂದಿರುವರೋಗಗಳು
ಟ್ಯುಬರ್‌ಕ್ಯುಲೋಸಿಸ್‌ (ಕ್ಷಯರೋಗ)
ಪೋಲಿಯೊ
ಡಿಫ್ತಿರಿಯಾ (ಗಂಟಲಮಾರಿ)
ಪರ್ಟುಸಿಸ್‌
ಟೆಟನಸ್‌
ಮಂಪ್ಸ್‌ (ಮಂಗನಬಾವು)
ಮೀಸೆಲ್ಸ್‌ (ದಡಾರ)
ರುಬೆಲ್ಲಾ
ಹ್ಯುಮನ್‌ ಪ್ಯಾಪಿಲೋಮಾ ವೈರಸ್‌ (ಎಚ್‌ಪಿವಿ)
ರೋಟವೈರಸ್‌
ಹೆಪಟೈಟಿಸ್‌
ಟೈಫಾಯ್ಡ
ನ್ಯೂಮೋಕೊಕಸ್‌
ಚಿಕನ್‌ಪಾಕ್ಸ್‌ (ಸಿಡುಬು)
ಜಪಾನೀಸ್‌ ಎನ್ಸೆಫಾಲಿಟಿಸ್‌(ಮೆದುಳಿನ ಉರಿಯೂತ)
ಕಾಲರಾ (ವಾಂತಿ ಭೇದಿ)
ಕೋವಿಡ್‌-19
ರೇಬೀಸ್‌

ಭಾರತದಲ್ಲಿ ಪ್ರಸ್ತುತ ಅಭಿವೃದ್ಧಿ ಯಲ್ಲಿರುವ ಲಸಿಕೆಗಳು
ಚಿಕೂನ್‌ ಗುನ್ಯಾ
ಉಸಿರಾಟದ ಸಿನ್ಸಿಟಿಯಾ ವೈರಸ್‌
ಡೆಂಗ್ಯೂ
ಕೋವಿಡ್‌-19 ಮತ್ತು ಇನ್ನಿತರ ಸಾಂಕ್ರಾಮಿಕ ಹಾಗೂ ಅಸಾಂಕ್ರಾಮಿಕ ಕಾಯಿಲೆಗಳ ವಿರುದ್ಧ ಲಸಿಕೆಗಳು ಅಭಿವೃದ್ಧಿಯಲ್ಲಿವೆ.

ಸಂಶೋಧನ ಪ್ರಯೋಗದಲ್ಲಿ ಯಾರೆಲ್ಲ ಭಾಗವಹಿಸಬಹುದು
-ಪ್ರಯೋಗದ ಹಂತದ ಮೇಲೆ ಭಾಗವಹಿಸುವವರ ಅರ್ಹತೆ ನಿರ್ಧರಿಸಲಾಗುತ್ತದೆ.
– ಅರ್ಹ ರೋಗಿಗಳು ಅಥವಾ ಆರೋಗ್ಯವಂತರು ಸಂಶೋಧನೆಯಲ್ಲಿ ಭಾಗವಹಿಸಬಹುದು ಹಾಗೂ ಕಾರ್ಯವಿಧಾನಕ್ಕೆ, ಮಧ್ಯಸ್ಥಿಕೆಗೆ ಒಳಗಾಗದೇ ಸ್ವಯಂಪ್ರೇರಿತ ನಿರ್ಧಾರ ತೆಗೆದುಕೊಳ್ಳಲು ಸಮರ್ಥನಾದ ವ್ಯಕ್ತಿ.

ಲಸಿಕೆಗಳ ಅಭಿವೃದ್ಧಿಯಲ್ಲಿ ಸಾರ್ವಜನಿಕರ ಪಾತ್ರ
ರೋಗಗಳಿಗೆ ಶೀಘ್ರದಲ್ಲಿ ಹೊಸ ಲಸಿಕೆ/ಔಷಧ ಪತ್ತೆಹಚ್ಚಲು ಪ್ರಯೋಗಗಳು ಮುಖ್ಯವಾಗಿವೆ, ರೋಗವನ್ನು ಶೀಘ್ರದಲ್ಲಿ ಪತ್ತೆಹಚ್ಚಲು ಮತ್ತು ಕಡಿಮೆ ಮಾಡುವ ಹೊಸ ವಿಧಾನಗಳನ್ನು ಪ್ರಯೋಗಗಳ ಮೂಲಕ ನಿರ್ದಿಷ್ಟಗೊಳಿಸಲಾಗುವುದು. ಪ್ರಯೋಗಾಲಯದಲ್ಲಿ ಪ್ರಾಣಿಗಳಲ್ಲಿ ಅಥವಾ ಜನಸಮಾನ್ಯರಲ್ಲಿ ಔಷಧದ ಪ್ರತಿಕ್ರಿಯೆಯು ಪ್ರಯೋಗಗಳ ಸಂಶೋಧನೆಯಿಂದಲೇ ತಿಳಿಯುತ್ತದೆ. ಸಂಭಾವ್ಯ ಪ್ರಯೋಜನಗಳ ಜತೆಗೆ ಹೊಸ ಚಿಕಿತ್ಸೆಯ ಅಡ್ಡಪರಿಣಾಮಗಳು ಸ್ವೀಕಾರಾರ್ಹವೇ ಎಂದು ನಿರ್ಧರಿಸಲು ಪ್ರಯೋಗಗಳು ವೈದ್ಯರಿಗೆ ಸಹಾಯ ಮಾಡುತ್ತವೆ. ಸಂಪೂರ್ಣ ಮಾಹಿತಿಯನ್ನು ಪಡೆದು ಸ್ವಇಚ್ಛೆಯಿಂದ ಪ್ರಯೋಗಗಳಲ್ಲಿ ಸಾರ್ವಜನಿಕರು ಭಾಗವಹಿಸುವುದರಿಂದ ಅನೇಕ ಲಸಿಕೆ/ ಔಷಧಗಳು ಬೆಳವಣಿಗೆ ಹಾಗೂ ಅಭಿವೃದ್ಧಿ ಹೊಂದುವುದು ಖಚಿತ. ಕ್ಲಿನಿಕಲ್‌ ಪ್ರಯೋಗದಲ್ಲಿ ಭಾಗವಹಿಸಲು ನಿಮ್ಮನ್ನು ಆಯ್ಕೆ ಮಾಡಿದಾಗ, ನೀವು ವೈಜ್ಞಾನಿಕ ಸಂಶೋಧನೆಯಲ್ಲಿ ಪಾಲುದಾರರಾಗುತ್ತೀರಿ. ನಿಮ್ಮ ಕೊಡುಗೆ ಭವಿಷ್ಯದ ಪೀಳಿಗೆಗೆ ಆರೋಗ್ಯಕರ ಜೀವನ ನಡೆಸಲು ಸಹಾಯ ಮಾಡುತ್ತದೆ. ಕ್ಲಿನಿಕಲ್‌ ಟ್ರಯಲ್‌ ಹಾಗೂ ಇತರ ಪ್ರಯೋಗಗಳಲ್ಲಿ ಭಾಗವಹಿಸುವವರ ಸಹಕಾರವಿಲ್ಲದೆ ಪ್ರಮುಖ ವೈದ್ಯಕೀಯ ಪ್ರಗತಿಗಳು ಆಗುವುದಿಲ್ಲ.

ಸಂಶೋಧನ ಪ್ರಯೋಗದಲ್ಲಿ ಭಾಗವಹಿಸುವವರ ಹಕ್ಕುಗಳು
– ಸಂಶೋಧನಾ ಅಧ್ಯಯನದಲ್ಲಿ ಸ್ವಯಂಪ್ರೇರಿತ ಭಾಗವಹಿಸುವಿಕೆ.
– ನೈತಿಕ (ಛಿಠಿಜಜಿcs) ಸಮಿತಿಯ ಬಗ್ಗೆ ಮತ್ತು ರೋಗಿಗಳ ಹಕ್ಕುಗಳು, ಸುರಕ್ಷೆ ಮತ್ತು ಯೋಗಕ್ಷೇಮವನ್ನು ಸಂರಕ್ಷಿಸುವ ಸಂಶೋಧನ ಯೋಜನೆಯ ಜವಾಬ್ದಾರಿಗಳ ಬಗ್ಗೆ ತಿಳಿದುಕೊಳ್ಳುವುದು.
– ಅರ್ಥವಾಗುವ ಭಾಷೆಯಲ್ಲಿ ಸಂಶೋಧನ ಅಧ್ಯಯನದ ಬಗ್ಗೆ ಮಾಹಿತಿ ಪಡೆಯುವುದು.
– ತಿಳುವಳಿಕೆಯುಳ್ಳ ಒಪ್ಪಿಗೆ ಮತ್ತು ಅಗತ್ಯವಿದ್ದರೆ ಆಡಿಯೋ-ವೀಡಿಯೋ ಒಪ್ಪಿಗೆ.
– ಯಾವುದೇ ಕಾರಣವನ್ನು ಬಹಿರಂಗಪಡಿಸದೆ ಅಧ್ಯಯನದ ಯಾವುದೇ ಹಂತದಲ್ಲಿ ಭಾಗವಹಿಸುವಿಕೆಯನ್ನು ನಿರಾಕರಿಸುವ ಹಕ್ಕು.
– ಸುರಕ್ಷಿತ, ಸ್ವತ್ಛ ವಾತಾವರಣದಲ್ಲಿ ಗುಣಮಟ್ಟದ ಆರೋಗ್ಯ ಸೇವೆಯನ್ನು ಜನಾಂಗ, ಧರ್ಮ, ಭಾಷೆ, ಅಂಗವೈಕಲ್ಯ, ಲಿಂಗ ಮತ್ತಿತರ ಯಾವುದೇ ತಾರತಮ್ಯ ಇಲ್ಲದೆ ಪಡೆಯುವ ಹಕ್ಕು.
– ಘನತೆ, ಗೌರವ ಮತ್ತು ಸೌಜನ್ಯದಿಂದ ನಿರ್ಣಯಿಸದ ಮತ್ತು ಬೆದರಿಕೆಯಿಲ್ಲದ ರೀತಿಯಲ್ಲಿ ಪರಿಗಣಿಸುವ ಹಕ್ಕು.
-ಅಧ್ಯಯನ ಉತ್ಪನ್ನ, ಅವಧಿ ಹಾಗೂ ಆರೈಕೆಯ ಮಾನದಂಡದ ಖರ್ಚುಗಳು, ಅಧ್ಯಯನ ಸಂಬಂಧಿ ತೊಂದರೆಗಳು ಹಾಗೂ ಅವುಗಳ ನಿರ್ವಹಣೆ, ಪರಿಹಾರಗಳ ಬಗ್ಗೆ ಮಾಹಿತಿ ಪಡೆಯುವುದು.
– ಅಪಾಯಗಳು, ಪ್ರಯೋಜನಗಳು ಮತ್ತು ಪ್ರಸ್ತಾವಿತ ಪರ್ಯಾಯ ಚಿಕತ್ಸೆಯ ಮಾಹಿತಿ.
– ರೋಗಿಯ ಮಾಹಿತಿಯ ಗೌಪ್ಯತೆ.
– ಕಳವಳಗಳನ್ನು ವ್ಯಕ್ತಪಡಿಸಲು, ನಿಮ್ಮ ಹಕ್ಕುಗಳ ಉಲ್ಲಂಘನೆ ಮತ್ತು/ಅಥವಾ ಕುಂದು ಕೊರತೆಗಳನ್ನು ವ್ಯಕ್ತಪಡಿಸಲು ದೂರನ್ನು ಹೇಗೆ ನೀಡಬಹುದು ಎಂಬುದರ ಕುರಿತು ಮಾಹಿತಿ.
– ಇತರ ಸಂಶೋಧನೆ ಮತ್ತು ಹೊಸ ಚಿಕಿತ್ಸೆಗಳಲ್ಲಿ ಭಾಗವಹಿಸುವ ಹಕ್ಕು.
– ಪರೀಕ್ಷೆ ಮತ್ತು ಚಿಕಿತ್ಸಕ ವಿಧಾನಗಳಿಗೆ ಒಪ್ಪಿಕೊಳ್ಳುವುದು.
– ಅಧ್ಯಯನದ ದಾಖಲೆಗಳನ್ನು ಪಡೆಯುವ ಹಕ್ಕು.
-ಸಂಶೋಧನ ವೈದ್ಯರ 24 ಗಂಟೆಗಳ ತುರ್ತು ಸಂಪರ್ಕ ವಿವರಗಳನ್ನು ಪಡೆಯುವುದು.
– ನೈತಿಕ ಸಮಿತಿಯ ಅಧ್ಯಕ್ಷರು ಮತ್ತು ಸದಸ್ಯ ಕಾರ್ಯದರ್ಶಿಯ ಸಂಪರ್ಕ ವಿವರಗಳನ್ನು ಪಡೆಯುವುದು.

ಸಂಶೋಧನೆಯಲ್ಲಿ ಭಾಗವಹಿಸುವವರ
ಜವಾಬ್ದಾರಿಗಳು
ಪೂರ್ಣ ಹೆಸರು, ವಯಸ್ಸು, ವಿಳಾಸ, ದೂರವಾಣಿ ಸಂಖ್ಯೆ ಮತ್ತು ಇ-ಮೇಲ್‌ ಐಡಿ (ಲಭ್ಯವಿದ್ದಲ್ಲಿ) ಸೇರಿದಂತೆ ಸರಿಯಾದ ಮತ್ತು ಸಂಪೂರ್ಣ ಮಾಹಿತಿಯನ್ನು ಒದಗಿಸುವುದು.
-ಸಂಶೋಧನ ಕಾರ್ಯವಿಧಾನಗಳಿಗೆ ಅನುಸಾರವಾಗಿರುವುದು.
– ಸಂಶೋಧನ ಅಧ್ಯಯನ ಸಂಬಂಧಿ ಪ್ರಶ್ನೆಗಳಿದ್ದಲ್ಲಿ ಆರೋಗ್ಯ ತಂಡದ ಸದಸ್ಯರು ಅರ್ಥೈಸುವುದು.
-ಅಧ್ಯಯನ ಸಂಬಂಧಿತ ವೈದ್ಯಕೀಯ ಪರಿಸ್ಥಿತಿಗಳ ಬೆಳವಣಿಗೆಯ ಮಾಹಿತಿಯನ್ನು ತತ್‌ಕ್ಷಣವೇ ತಿಳಿಸುವುದು.
– ಸಂಶೋಧನ ವೈದ್ಯರ ಅರಿವಿಲ್ಲದೆ ಯಾವುದೇ ಔಷಧಗಳನ್ನು ತೆಗೆದುಕೊಳ್ಳಬಾರದು.
– ಪ್ರಸ್ತುತ ಯಾವುದೇ ಲಸಿಕೆ ಅಧ್ಯಯನದಲ್ಲಿ ಭಾಗಿಯಾಗಿದ್ದರೆ ಅಥವಾ ಕಳೆದ ಒಂದು ವರ್ಷದಲ್ಲಿ ಯಾವುದೇ ಅಧ್ಯಯನದಲ್ಲಿ ಭಾಗವಹಿಸಿದ್ದಲ್ಲಿ ವೈದ್ಯರು ಮತ್ತು ಸಂಶೋಧನ ಅಧ್ಯಯನ ತಂಡಕ್ಕೆ ಬಹಿರಂಗಪಡಿಸಬೇಕು.
– ನಿಮ್ಮ ಹಿಂದಿನ ವೈದ್ಯಕೀಯ ಇತಿಹಾಸು ಪ್ರಸ್ತುತ ತೆಗೆದುಕೊಳ್ಳುತ್ತಿರುವ ಎಲ್ಲ ಔಷಧಗಳು, ಆಯುರ್ವೇದ, ಹೋಮಿಯೋಪತಿ, ಯುನಾನಿ ಅಥವಾ ಗಿಡಮೂಲಿಕೆಗಳ ಹಿಂದಿನ ಪರೀಕ್ಷೆಗಳು, ದಾಖಲೆಗಳು ಮತ್ತು ಅಲರ್ಜಿ ಪ್ರತಿಕ್ರಿಯೆಗಳು, ವಿಶೇಷವಾಗಿ ಯಾವುದೇ ಔಷಧಕ್ಕೆ ಸೂಕ್ಷ್ಮತೆ ಬಗ್ಗೆ ಸಂಪೂರ್ಣ ಮತ್ತು ನಿಖರವಾದ ಮಾಹಿತಿಯನ್ನು ಒದಗಿಸಿ.
– ಚಿಕಿತ್ಸಾ ಯೋಜನೆ ಮತ್ತು ಭೇಟಿ ವೇಳಾಪಟ್ಟಿಗಳಿಗೆ ಸಂಬಂಧಿಸಿದಂತೆ ಸೂಚನೆಗಳು, ಸಲಹೆ ಮತ್ತು ನಿರ್ಬಂಧಗಳನ್ನು ಅನುಸರಿಸುವುದು.
– ಆಸ್ಪತ್ರೆಯ ಸಿಬಂದಿ ಮತ್ತು ಅಧ್ಯಯನ ತಂಡವನ್ನು ಸೌಜನ್ಯದಿಂದ ನಡೆಸಿಕೊಳ್ಳುವುದು.

ಡಾ| ಈಶ್ವರಿ
ಸಹಾಯಕ ಪ್ರಾಧ್ಯಾಪಕಿ
ಸಮುದಾಯ ವೈದ್ಯಕೀಯ ವಿಭಾಗ
ಮಾಹೆ, ಮಣಿಪಾಲ
ಡಾ| ಸಂದೇಶ್‌ ಕುಮಾರ್‌ ಎಂ.ಆರ್‌.
ಸಮುದಾಯ ವೈದ್ಯಕೀಯ ವಿಭಾಗ

Advertisement

Udayavani is now on Telegram. Click here to join our channel and stay updated with the latest news.

Next