Advertisement

ಈ ವರ್ಷದ ಆದಾಯ ತೆರಿಗೆ ರಿಟರ್ನ್ ಫಾರ್ಮ್ಗಳು

05:30 PM Jul 03, 2017 | Team Udayavani |

ಆದಾಯ ತೆರಿಗೆ ಇಲಾಖೆ ಪ್ರತಿವರ್ಷವೂ ಹೊಸ ರಿಟರ್ನ್ ಫಾರ್ಮುಗಳನ್ನು ಪ್ರಕಟಿಸುತ್ತದೆ. ಆದಾಯ ತೆರಿಗೆಯ ಹೇಳಿಕೆ ಅಥವಾ ರಿಟರ್ನ್ಸ್ ಸಲ್ಲಿಕೆ ಮಾಡುವವರು ಆಯಾ ವರ್ಷ ಬಿಡುಗಡೆ ಮಾಡಿದ ಫಾರ್ಮುಗಳನ್ನೇ ಉಪಯೋಗಿಸತಕ್ಕದ್ದು. ಕೆಲವೊಮ್ಮೆ ಇಲಾಖೆಯು ಹಳೆಯ ಫಾರ್ಮುಗಳಲ್ಲಿ ಬದಲಾವಣೆ ತರುತ್ತದೆ. ಆದರೆ ಕೆಲವೊಮ್ಮೆ ಬದಲಾವಣೆಗಳಿಲ್ಲದೆ ಹಳೆ ಫಾರ್ಮುಗಳನ್ನು ಹಾಗೆಯೇ ಮರುಬಿಡುಗಡೆ ಮಾಡುತ್ತದೆ. ಇತ್ತೀಚಿನ ವರ್ಷಗಳಲ್ಲಿ ಬದಲಾವಣೆ ಪ್ರತಿ ವರ್ಷ ಎಂಬಂತೆ ಇರುತ್ತದೆ. ಈ ವರ್ಷವೂ ಕೆಲವು ಬದಲಾವಣೆಗಳನ್ನು ಹೊಂದಿದ ಅಧಿಕೃತ ಫಾರ್ಮುಗಳನ್ನು ಇಲಾಖೆಯು ಬಹಳ ಹಿಂದೆ ಮಾರ್ಚ್‌ ತಿಂಗಳಲ್ಲಿಯೇ ಬಿಡುಗಡೆ ಮಾಡಿದೆ. ಅವು ಇಲಾಖೆಯ ಜಾಲತಾಣದಲ್ಲಿ ಲಭ್ಯವಿದೆ. ರಿಟರ್ನ್ ಫೈಲಿಂಗ್‌ ಮಾಡುವವರು ಆ ಫಾರ್ಮುಗಳನ್ನು ಬಳಸಿಕೊಂಡು ಇದೀಗ ರಿಟರ್ನ್ ಫೈಲಿಂಗ್‌ ಮಾಡಬಹುದು.

Advertisement

ಈ ವರ್ಷವೂ ಜನ ಸಾಮಾನ್ಯರು ರಿಟರ್ನ್ಸ್ ಫೈಲಿಂಗ್‌ ಮಾಡುವ ಕೊನೆಯ ದಿನಾಂಕ ಜುಲೈ 31 ಆಗಿದೆ. ಆದರೆ ಬಿಸಿನೆಸ್‌ ಆದಾಯ ಅಥವಾ ಪ್ರೊಫೆಶನಲ್‌ ಆದಾಯ ಇದ್ದುಕೊಂಡು ಕಡ್ಡಾಯ ಆಡಿಟ್‌ ಇರುವವರಿಗೆ ರಿಟರ್ನ್ಸ್ ಫೈ ಲಿಂಗ್‌ ಮಾಡಲು ಕೊನೆಯ ದಿನಾಂಕ ಸೆ. 30 – ದಯವಿಟ್ಟು ಗಮನಿಸಿ. ಅಂದರೆ ಜುಲೈ ಮಾಸದಲ್ಲಿ ಬಹುತೇಕ ಸಂಬಳದ ಆದಾಯ, ಗೃಹ ಸಂಬಂಧಿ ಆದಾಯ, ಇತರ ಆದಾಯ ಮತ್ತು ಕ್ಯಾಪಿಟಲ್‌ ಗೈನ್ಸ್‌ ಇರುವವರು ಮಾತ್ರ ರಿಟರ್ನ್ಸ್ ಫೈಲಿಂಗ್‌ ಮಾಡುತ್ತಾರೆ.

ಫಾರ್ಮುಗಳು:
ಕರ ಹೇಳಿಕೆ: ಈ ವರ್ಷ ಈ ಫಾರ್ಮುಗಳು ಬಿಡುಗಡೆಗೊಂಡಿವೆ. ಈ ಫಾರ್ಮುಗಳಲ್ಲಿ ಅವರವರ ಸಂದರ್ಭಕ್ಕೆ ಅನುಸಾರವಾಗಿ ಯಾವುದಾದರು ಒಂದು ಫಾರ್ಮನ್ನು ಮಾತ್ರವೇ ಬಳಸಿ ಆದಾಯ ತೆರಿಗೆಯ ಹೇಳಿಕೆಯನ್ನು ಸಲ್ಲಿಸತಕ್ಕದ್ದು. ಫಾರ್ಮಿನ ಆಯ್ಕೆ ಅವರವರ ಆದಾಯದ ಮೂಲವನ್ನು ಅವಲಂಬಿಸಿದೆ.

ಐಟಿಆರ್‌-1/ಸಹಜ್‌: ವೈಯಕ್ತಿಕ- ಸಂಬಳ/ ಪೆನ್ಷನ್‌ ಆದಾಯ, ಒಂದು ಮನೆಯ ಗೃಹಸಂಬಂಧಿ ಆದಾಯ, ಇತರ ಆದಾಯ, ರೂ. 5,000ಕ್ಕಿಂತ ಕಡಿಮೆ ಕೃಷಿ ಆದಾಯ ಹಾಗೂ ರೂ. 50 ಲಕ್ಷ ಮೀರದ ಒಟ್ಟು ಆದಾಯ ಉಳ್ಳವರು ಈ ಫಾರ್ಮನ್ನು ಉಪಯೋಗಿಸಬಹುದು. ಈ ಬಾರಿ ಇದು ಸರಳವಾಗಿ ಕೇವಲ ಒಂದು ಪುಟದಲ್ಲಿ ಬಂದಿದೆ. ಕಳೆದ ವರ್ಷ ಕೇಳಿದ್ದ ಆಸ್ತಿ ಮತ್ತು ಸಾಲಗಳ ವಿವರಗಳನ್ನು ಕೈಬಿಡಲಾಗಿದೆ.

ಐಟಿಆರ್‌- 2: ವೈಯಕ್ತಿಕ ಹಾಗೂ ಹಿಂದೂ ಅವಿಭಕ್ತ ಕುಟುಂಬದವರಿಗಾಗಿ – ಹಾಗೂ ಇದು ಸ್ವಂತ ಬಿಸಿನೆಸ್‌/ಪ್ರೊಫೆಶನ್‌ ಆದಾಯ ಇಲ್ಲದವರಿಗಾಗಿ ಮಾತ್ರ ಸೀಮಿತ. ಇದು ಹಳೆಯ 2, 2ಎ ಹಾಗೂ 3ರ ಮಿಶ್ರಣ. ಇದೊಂದು ವಿಸ್ತೃತವಾದ ಫಾರ್ಮ್. ಇಲ್ಲಿ ಆಸ್ತಿ – ಸಾಲ ವಿವರಗಳು, ಬ್ಯಾಂಕ್ ಬ್ಯಾಲೆನ್ಸ್‌, ಸ್ತಿರಾಸ್ಥಿ ವಿವರಗಳು, ಷೇರುಗಳ ವಿವರಗಳು, ವಿಮಾ ಪಾಲಿಸಿಗಳು, ನೀಡಿದ ಸಾಲದ ವಿವರಗಳು ಅಲ್ಲದೆ, ವಿವಿಧ ಕಂಪೆನಿಗಳಲ್ಲಿ ಪಾಲುಗಾರಿಕೆ ಇತ್ಯಾದಿ ಸಮಗ್ರ ವೈಯಕ್ತಿಕ ವಿತ್ತೀಯ ಮಾಹಿತಿಗಳನ್ನು ನೀಡಬೇಕಾಗುತ್ತದೆ.

Advertisement

ಐಟಿಆರ್‌- 3: ಇದು ಸ್ವಂತ ಬಿಸಿನೆಸ್‌/ಪ್ರೊಫೆಶನ್‌ ಆದಾಯ ಉಳ್ಳವರಿಗಾಗಿ. ಇಲ್ಲೂ ನಿಮ್ಮ ಕೆಲ ವಿತ್ತೀಯ ವಿವರಗಳನ್ನು ನೀಡಬೇಕಾಗುತ್ತದೆ.

ಐಟಿಆರ್‌- 4/ಸುಗಮ್‌: ಇದು ಬಿಸಿನೆಸ್‌/ಪ್ರೊಫೆಶನ್‌ ಆದಾಯಕ್ಕೆ ಸಂಬಂಧಪಟ್ಟದ್ದು. ಕೇವಲ ಬಿಸಿನೆಸ್‌ ಟರ್ನ್ ಓವರ್‌ ಅನುಸರಿಸಿ ಅದರ ಮೇಲೆ ಯಾವುದೇ ಲೆಕ್ಕ ಪತ್ರಗಳಿಲ್ಲದೆ ಒಂದು ನಿಗದಿತ ಶೇಕಡಾ ಲಾಭವನ್ನು ಊಹಿಸಿ ಅದರ ಮೇಲೆ ತೆರಿಗೆ ಕಟ್ಟುವಂತಹ ‘ಪ್ರಿಸಂಪ್ಟಿವ್‌ಟ್ಯಾಕ್ಸ್‌ ಪದ್ಧತಿ’ಯಲ್ಲಿ ಕರ ಕಟ್ಟುವವರಿಗಾಗಿ ಈ ಫಾರ್ಮ್.

ಈ ವರ್ಷ ಏನು ವಿಶೇಷ? 
1. ಈ ವರ್ಷದ ಪ್ರಮುಖ ವಿಶೇಷತೆ, ಐಟಿ ಫೈಲ್‌ ಮಾಡುವವರು ಕಡ್ಡಾಯವಾಗಿ ಆಧಾರ್‌ ನಂಬರ್‌ ನಮೂದಿಸಬೇಕು. ಆಧಾರ್‌ /ನಂಬರ್‌‌ ಇಲ್ಲದವರು ಅದಕ್ಕಾಗಿ ಹಾಕಿದ ಅರ್ಜಿ ನಂಬರನ್ನಾದರೂ ಹಾಕಬೇಕು. (ಈ ಕಾನೂನು ಅಸ್ಸಾಮ್, ಮೇಘಾಲಯ, ಜಮ್ಮು-ಕಾಶ್ಮೀರದ ಪ್ರಜೆಗಳಿಗೆ, ಅನಿವಾಸಿ ಭಾರತೀಯರಿಗೆ, 80 ದಾಟಿದ ಅತಿ ಹಿರಿಯ ನಾಗರಿಕರಿಗೆ ಹಾಗೂ ಭಾರತದ ಪ್ರಜೆ ಅಲ್ಲದವರಿಗೆ ಅನ್ವಯಿಸುವುದಿಲ್ಲ)

2. ನಿಮ್ಮ ಪಾನ್‌ಗೆ ಆಧಾರ್‌ ಅನ್ನು ಜೋಡಣೆ ಮಾಡಿಸಿಕೊಳ್ಳುವುದು ಈ ವರ್ಷ ಕಡ್ಡಾಯ. ಆಧಾರ್‌ ಜೋಡಣೆ ಇಲ್ಲದ ಪಾನ್‌ ಕಾರ್ಡ್‌ ಜುಲೈ 1ನೇ ತಾರೀಕಿನ ಬಳಿಕ ನಿಷ್ಕ್ರಿಯವಾಗುವುದಿಲ್ಲ ಎನ್ನುವ ಸ್ಪಷ್ಟೀಕರಣವನ್ನು ಸರಕಾರವು ನೀಡಿದೆ.ಆದರೂ ಈ ಆಧಾರ್‌-ಪಾನ್‌ ವಿವಾಹ ಕಡ್ಡಾಯವೇ ಸರಿ.

3. ನೀವು ಡಿಮಾನೆಟೈಸೇಶನ್‌ ಅವಧಿ, ಅಂದರೆ ನ.9 ರಿಂದ ಡಿ. 30 ರ ನಡುವೆ ನಿಮ್ಮೆಲ್ಲಾ ಬ್ಯಾಂಕ್‌ ಖಾತೆಗಳನ್ನು ಸೇರಿಸಿ ಒಟ್ಟು ರೂ 2 ಲಕ್ಷಕ್ಕಿಂತ ಜಾಸ್ತಿ ನಗದು ಡೆಪಾಸಿಟ್‌ ಮಾಡಿದ್ದಲ್ಲಿ ಆ ವಿವರಗಳನ್ನು ರಿಟರ್ನ್ಸ್ ಸಲ್ಲಿಕೆ ವೇಳೆ ನೀಡತಕ್ಕದ್ದು. ಫಾರ್ಮ್-1 ಹೊರತುಪಡಿಸಿ ಉಳಿದವುಗಳನ್ನು ಆನ್‌ಲೈನ್‌ ಆಗಿಯೇ ಸಲ್ಲಿಸತಕ್ಕದ್ದು. ಫಾರ್ಮ್ -1 ಕೂಡ ರೂ. 5 ಲಕ್ಷಕ್ಕಿಂತ ಕಡಿಮೆ ಆದಾಯ ಉಳ್ಳವರು ಅಥವಾ 80 ವಯಸ್ಸು ಮೀರಿದ ಅತಿ ಹಿರಿಯ ನಾಗರಿಕರು ಮಾತ್ರ ಕಾಗದದ ರೂಪದಲ್ಲಿ ಫೈಲಿಂಗ್‌ ಮಾಡಬಹುದಾಗಿದೆ. ಉಳಿದ ಎಲ್ಲರೂ ಫಾರ್ಮ್ -1 ಅಥವಾ ಸಹಹ್‌ ಅನ್ನು ಕೂಡ ಆನ್‌ಲೈನ್‌ ಆಗಿ ಇ – ಫೈಲಿಂಗ್‌ ಮಾಡುವುದು ಕಡ್ಡಾಯ.

ಇ-ಫೈಲಿಂಗ್‌: ಇ-ಫೈಲಿಂಗ್‌ ಕಡ್ಡಾಯ ಉಳ್ಳವರು ಆ ರೀತಿಯೂ ಉಳಿದವರು ಐಚ್ಛಿಕವಾಗಿ ಆದಾಯ ತೆರಿಗೆ ಇಲಾಖೆಯ ವೆಬ್‌ಸೈಟಿಗೆ (www.incometaxindia.gov.in) ಸ್ವತಃ ಹೋಗಿ ಅಥವಾ ಸಿಎಗಳ ಮೂಲಕ ತಮ್ಮ ರಿಟರ್ನ್ಸ್ ಫೈಲಿಂಗ್‌ ಮಾಡಬಹುದು.

ಕ್ವಿಕ್‌ ಫೈಲಿಂಗ್‌: ಜನಸಾಮಾನ್ಯರಿಗೆ – ಕೇವಲ ಸಂಬಳದ ಆದಾಯ, ಒಂದು ಮನೆಯ ಗೃಹ ಸಂಬಂದಿ ಆದಾಯ ಮತ್ತು ಇತರ ಆದಾಯ ಇದ್ದು ಐಟಿಆರ್‌- 1 ಉಪಯೋಗಿಸುವವರಿಗೆ ಹಾಗೂ ಪ್ರಿಸಂಪ್ಟಿವ್‌ ಬಿಸಿನೆಸ್‌ ಆದಾಯ ಹೊಂದಿದ್ದು ಐಟಿಆರ್‌ 4 ಉಪಯೋಗಿಸಿವವರಿಗೆ ಕರಇಲಾಖೆಯು ತನ್ನ ವೆಬ್‌ಸೈಟಿನಲ್ಲಿ ವಿಶೇಷ ಸೌಲಭ್ಯ ನೀಡಿದೆ. ಅಂತವರು ‘ಕ್ವಿಕ್‌ ಫೈಲಿಂಗ್‌’ ಎಂಬ ಆಯ್ಕೆಯ ಮೂಲಕ ಇ-ಫೈಲಿಂಗ್‌ ಮಾಡಬಹುದು. ಇದು ಅತ್ಯಂತ ಸರಳ ರೀತಿಯಲ್ಲಿ ನಡೆಯುತ್ತದೆ ಹಾಗೂ ಅಂತವರು ಫಾರ್ಮನ್ನು ಡೌನ್ಲೋಡ್‌ ಮಾಡಿ ತುಂಬಿ ಪುನಃ ಅಪ್‌ಲೋಡ್‌ ಮಾಡುವ ಅಗತ್ಯಲ್ಲ. ಅಂತರ್ಜಾಲ ಚಾಲೂ ಇಟ್ಟೂ ಆನ್‌ಲೈನ್‌ ಆಗಿಯೇ ಅದನ್ನು ತುಂಬಬಹುದು. ಬಹುತೇಕ ಜನರು ಬಳಸುವ ಈ ಕ್ವಿಕ್‌ ಫೈಲಿಂಗ್‌ ಪದ್ಧತಿಯ ಬಗ್ಗೆ ವಿವರಗಳು ಮುಂದಿನ ವಾರ.

ಕರ ಉಳಿತಾಯಕ್ಕೆ ಹೂಡಿಕೆ ಈಗ ಸಾಧ್ಯವಿಲ್ಲ!
ಹಲವಾರು ಜನ ಕೇಳುತ್ತಾರೆ ಮಾರ್ಚ್‌ ಆಯ್ತು ಇನ್ನೂ ಕೂಡ ಕರ ವಿನಾಯಿತಿಗಾಗಿ ಹೂಡಿಕೆ ಮಾಡಬಹುದಲ್ಲವೇ? ಅಂತ. ಇದು ಅಸಾಧ್ಯ. ಒಂದು ವಿತ್ತ ವರ್ಷದ ಕರವನ್ನು ಉಳಿಸಲಿಕ್ಕಾಗಿ ಉಳಿತಾಯದ ಹೂಡಿಕೆಯನ್ನು ಅದೇ ವಿತ್ತ ವರ್ಷ ಮುಗಿಯುವುದರ ಒಳಗೇನೇ ಮಾಡಬೇಕು. ಎಪ್ರಿಲ್‌ 1ರ ಬಳಿಕ ಮಾಡಿದ ಹೂಡಿಕೆ ಹೊಸ ವಿತ್ತ ವರ್ಷಕ್ಕೆ ಮಾತ್ರ ಅನ್ವಯವಾಗುತ್ತದೆ. ಮಾರ್ಚ್‌ ಬಳಿಕದ ಈ ಅವಧಿಯಲ್ಲಿ ಕಟ್ಟಲು ಬಾಕಿ ಕರ ಇದ್ದಲ್ಲಿ ಅದನ್ನು ಬಡ್ಡಿ ಸಹಿತ ಪಾವತಿ ಮಾಡಬಹುದಾಗಿದೆ. ಹಾಗಾದರೆ ಜುಲೈ 31ರ ವರೆಗೆ ಟೈಮ್‌ ಉಂಟಲ್ವಾ ಅದೆಂತದ್ದು ಮತ್ತೆ? ಅಂತ ಮರು ಪ್ರಶ್ನೆ ಹಾಕುತ್ತಾರೆ. ಜು. 31 ಎಂಬುದು ಟ್ಯಾಕ್ಸ್‌ ರಿಟರ್ನ್ಸ್ ಫೈಲ್‌ ಮಾಡುವ ಕೊನೆ ದಿನಾಂಕ. (ಬಿಸಿನೆಸ್‌ ಮತ್ತು ಪ್ರೊಫೆಶನ್‌ ಆದಾಯವಿದ್ದು, ಕಡ್ಡಾಯ ಆಡಿಟ್‌ ಉಳ್ಳವರಿಗೆ ಇದು ಸೆ.30) ಹಾಗಾಗಿ ಈ ಎರಡು ದಿನಾಂಕಗಳನ್ನು ಸರಿಯಾಗಿ ಅರ್ಥೈಸಿಕೊಂಡು ಆಯಾ ಕೆಲಸಗಳನ್ನು ಸರಿಯಾಗಿ ಮಾಡಿಕೊಳ್ಳಿ. ಅನಗತ್ಯ ಗೊಂದಲ ಬೇಡ.

– ಜಯದೇವ ಪ್ರಸಾದ ಮೊಳೆಯಾರ ; jayadev.prasad@gmail.com

Advertisement

Udayavani is now on Telegram. Click here to join our channel and stay updated with the latest news.

Next