Advertisement

ಜೀವ ಉಳಿಸುವ ವಾಟ್ಸಪ್‌ ಬಳಗ!

02:33 AM Mar 22, 2018 | Team Udayavani |

ಕುಂದಾಪುರ: ವೈದ್ಯರೊಬ್ಬರು ರೂಪಿಸಿದ ‘ಕಾರ್ಡಿಯಾಲಜಿ ಎಟ್‌ ಡೋರ್‌ಸ್ಟೆಪ್‌’ (ಮನೆಬಾಗಿಲಿಗೆ ಹೃದ್ರೋಗ ಚಿಕಿತ್ಸೆ) ಎಂಬ ವಾಟ್ಸಪ್‌ ವೈದ್ಯಕೀಯ ಬಳಗ 6 ದಿನಗಳಲ್ಲಿ ಐವರ ಜೀವ ಉಳಿಸಿದೆ! ಕೆಎಂಸಿಯ ಖ್ಯಾತ ಹೃದ್ರೋಗ ತಜ್ಞ ಡಾ| ಪದ್ಮನಾಭ ಕಾಮತ್‌ ಅವರು ‘ಯಕ್ಷಮಿತ್ರ ನಮ್ಮ ವೇದಿಕೆ’ ವಾಟ್ಸಪ್‌ ಬಳಗದ ಮುಖಾಂತರ ಯಕ್ಷಗಾನ ಚಟುವಟಿಕೆಗಳಿಗೆ ಪ್ರೋತ್ಸಾಹ ನೀಡಿದ ಹುಮ್ಮಸ್ಸಿನಲ್ಲೇ ಈ ವಾಟ್ಸಪ್‌ ಬಳಗ ರಚಿಸಿದ್ದು, ಕೊಡಗು, ದ.ಕ., ಉಡುಪಿ, ಚಿಕ್ಕಮಗಳೂರು, ಉತ್ತರ ಕನ್ನಡದ 250 ವೈದ್ಯರು, ಈ ಜಿಲ್ಲೆಗಳ ಜಿಲ್ಲಾ ಆರೋಗ್ಯಾಧಿಕಾರಿಗಳು ಇದರ ಸದಸ್ಯರಾಗಿದ್ದಾರೆ. ಸರಕಾರಿ ಹಾಗೂ ಖಾಸಗಿ ಆಸ್ಪತ್ರೆಗಳ ವೈದ್ಯರೂಇದ್ದಾರೆ. ಐದು ಜಿಲ್ಲೆಗಳ ಆ್ಯಂಬುಲೆನ್ಸ್‌ ಚಾಲಕರಿದ್ದಾರೆ. ಮಂದಾರ್ತಿ, ಶಂಕರನಾರಾಯಣ, ತ್ರಾಸಿ, ತೆಕ್ಕಟ್ಟೆ, ತಲ್ಲೂರು, ಬಾಕೂìರು, ಉಪ್ಪುಂದ, ಸಿದ್ದಾಪುರದಂತಹ ಗ್ರಾಮಾಂತರ ಪ್ರದೇಶದ ವೈದ್ಯರಿದ್ದಾರೆ. ಎಂಬಿಬಿಎಸ್‌ ಹಾಗೂ ಆಯುಷ್‌ನ ಆಯುರ್ವೇದ, ಯುನಾನಿ, ಅಲೋಪತಿಯವರಿಗೂ ಇಲ್ಲಿ ಸದಸ್ಯತ್ವದ ಅವಕಾಶ ಇದೆ. ವೈದ್ಯಕೀಯ ಹಾಗೂ ಹೃದ್ರೋಗಕ್ಕೆ ಸಂಬಂಧಿಸಿದ ಮಾಹಿತಿ ವಿನಿಮಯಕ್ಕಷ್ಟೇ ಸೀಮಿತವಾಗಿ ಮನೆಬಾಗಿಲಿನಲ್ಲಿ ಹೃದ್ರೋಗ ಚಿಕಿತ್ಸೆ ನೀಡುತ್ತಿದೆ ಈ ಬಳಗ.

Advertisement

ಜೀವ ಉಳಿಸುತ್ತದೆ
ಗ್ರಾಮಾಂತರ ಪ್ರದೇಶದಲ್ಲಿ ರೋಗಿಯೊಬ್ಬರು ಹೃದ್ರೋಗ ಅಥವಾ ಹೃದಯಾಘಾತಕ್ಕೆ ಈಡಾದಾಗ ತತ್‌ಕ್ಷಣ ಸಮೀಪದ ಸರಕಾರಿ ಅಥವಾ ಖಾಸಗಿ ಆಸ್ಪತ್ರೆಗೆ ತೆರಳುತ್ತಾರೆ. ಅಲ್ಲಿ ಇಸಿಜಿ ಮಾಡಿಸಿ ಅನಂತರ ವೈದ್ಯರ ಸಲಹೆ ಮೇರೆಗೆ ಬೇರೆ ಆಸ್ಪತ್ರೆಗೆ ಕಳುಹಿಸಲಾಗುತ್ತದೆ. ಇಸಿಜಿಯಿಂದ ರೋಗಿಯ ಹೃತ್ಕ್ರಿಯೆಯ ಬಗ್ಗೆ ವೈದ್ಯರಿಗೆ ತಿಳಿಯುತ್ತದೆ. ರೋಗಿ ಇನ್ನೊಂದು ಆಸ್ಪತ್ರೆ ತಲುಪಿದಾಗ ಅಲ್ಲಿನ ವೈದ್ಯರು ಹೊಸದಾಗಿ ಇಸಿಜಿ ಮಾಡಿಸಿ, ಚಿಕಿತ್ಸೆ ಆರಂಭಿಸುವ ಬದಲು ಈ ವಾಟ್ಸಪ್‌ ಬಳಗದಲ್ಲಿ ರವಾನೆಯಾಗಿರುವ, ಈಗಾಗಲೇ ಮಾಡಿಸಿದ ಇಸಿಜಿ ವರದಿಯನ್ನು ಪರಿಶೀಲಿಸಿದರೆ ಸಮಯ ಉಳಿಯುತ್ತದೆ, ಚಿಕಿತ್ಸೆ ತ್ವರಿತವಾಗುತ್ತದೆ. ಇದಕ್ಕಾಗಿ ಈ ಬಳಗದಲ್ಲಿರುವ ಯಾವುದೇ ವೈದ್ಯರು ತಾವು ಪರೀಕ್ಷಿಸಿದ ರೋಗಿಯ ಇಸಿಜಿ ವರದಿಯನ್ನು ಅಪ್‌ ಲೋಡ್‌ ಮಾಡುತ್ತಾರೆ. ರೋಗಿ ಹೃದ್ರೋಗ ತಜ್ಞರ ಬಳಿ ತೆರಳುತ್ತಿದ್ದಂತೆ ವಾಟ್ಸಪ್ ಬಳಗದಲ್ಲಿ ದಾಖಲಾಗಿರುವ ಇಸಿಜಿ ವರದಿ ಗಮನಿಸಿ ಚಿಕಿತ್ಸೆಯನ್ನು ತತ್‌ಕ್ಷಣ ಆರಂಭಿಸಬಹುದು. ಪರಿಣಾಮವಾಗಿ ಚಿಕಿತ್ಸೆ ತ್ವರಿತವಾಗಿ ರೋಗಿ ಅಪಾಯಕ್ಕೀಡಾಗುವ ಸಾಧ್ಯತೆ ಕಡಿಮೆಯಾಗುತ್ತದೆ.

5 ಮಂದಿ ಅಪಾಯದಿಂದ ಪಾರು
ವಾಟ್ಸಪ್‌ ಬಳಗ ರಚನೆಯಾದ ಆರು ದಿನಗಳ ಒಳಗೆ ಮೂಡಿಗೆರೆಯ ಬಣಕಲ್‌, ಶಿರ್ತಾಡಿಯ ಮಾಂಟ್ರಾಡಿ, ಮೂಲ್ಕಿ, ಕಿನ್ನಿಗೋಳಿ, ಕಾರ್ಕಳದ ಅಜೆಕಾರು ಹೀಗೆ ಒಟ್ಟು 5 ಮಂದಿಗೆ ಹೃದಯ ಸಂಬಂಧಿ ತುರ್ತು ಸಂದರ್ಭಗಳಲ್ಲಿ ಈ ಬಳಗ ಸಂಜೀವಿನಿಯಂತೆ ಕೆಲಸ ಮಾಡಿದೆ. 

ಉಪಕರಣಗಳಿಲ್ಲ
ಸಾಮಾನ್ಯವಾಗಿ ಹೃದಯ ಸಂಬಂಧಿ ಸಮಸ್ಯೆ ಉಂಟಾದಾಗ ತಪಾಸಣೆಗೆ ದೊಡ್ಡ ಆಸ್ಪತ್ರೆಗೆ ಹೋಗಬೇಕೆಂಬ ನಂಬಿಕೆ ಅನೇಕರಲ್ಲಿದೆ. ಆದರೆ ಯಾವುದೇ ಸಾಮಾನ್ಯ ಆಸ್ಪತ್ರೆಯಲ್ಲಿ, ಸರಕಾರಿ ಆಸ್ಪತ್ರೆಯಲ್ಲಿ ಇಸಿಜಿ ಮಾಡಿಸಿಕೊಳ್ಳಬಹುದು. ಇದನ್ನನುಸರಿಸಿ ಹೃದಯದ ಸ್ಥಿತಿಗತಿ ಗಮನಿಸಿ ಅಗತ್ಯ ಚಿಕಿತ್ಸೆ ಅಲ್ಲೇ ಲಭ್ಯವಿದ್ದರೆ ದೊಡ್ಡಾಸ್ಪತ್ರೆಗಳ ಸಹವಾಸ ತಪ್ಪುತ್ತದೆ. ಆದರೆ ಹೆಚ್ಚಿನ ಆಸ್ಪತ್ರೆಗಳಲ್ಲಿ ಇಸಿಜಿ ಯಂತ್ರಗಳಿಲ್ಲ. 28ರಿಂದ 36 ಸಾವಿರ ರೂ.ಗಳಿಗೆ ಇಸಿಜಿ ಯಂತ್ರ ದೊರೆಯುವ ಕಾರಣ ದಾನಿಗಳು ಸರಕಾರಿ ಆಸ್ಪತ್ರೆಗಳಿಗೆ ಇದನ್ನು ಕೊಡುಗೆಯಾಗಿ ನೀಡಿದರೆ ಸಾವಿರಾರು ಮಂದಿಯ ಜೀವ ಉಳಿಸಿದ ಫ‌ಲ ದೊರೆಯುತ್ತದೆ.

ನೆಬ್ಯುಲೈಸರ್‌ ಕೂಡ ಅಗತ್ಯ
ಇಸಿಜಿ ಯಂತ್ರದಷ್ಟೇ ಅಗತ್ಯವಾದದ್ದು ನೆಬ್ಯುಲೈಸರ್‌ ಸಾಧನ. ಮೂರೂವರೆ ಸಾವಿರ ರೂ.ಗಳಷ್ಟು ಕನಿಷ್ಠ ಬೆಲೆಗೆ ಇದು ಲಭ್ಯ. ಉಸಿರಾಟದ ತೊಂದರೆ ಕಾಣಿಸಿದಾಗ ನಿಯಂತ್ರಣಕ್ಕೆ ತರುವ ಸಾಧನ ಇದು. ಆದರೆ ಹೆಚ್ಚಿನ ಸರಕಾರಿ ಆಸ್ಪತ್ರೆಗಳಲ್ಲಿ ನೆಬ್ಯುಲೈಸರ್‌ ಇಲ್ಲ. ಇದ್ದರೂ ಹಿರಿಯರ ಮುಖಕ್ಕೆ ಅಳವಡಿಸುವ ಇದರ ಮುಖ ಕವಚವನ್ನು ಮಕ್ಕಳಿಗೂ ಹಾಕಲಾಗುತ್ತದೆ. ಆದ್ದರಿಂದ ದಾನಿಗಳು ಈ ಬಗ್ಗೆ ಕೂಡ ಗಮನಹರಿಸಿದರೆ ಮಕ್ಕಳಿಗಾಗುವ ತೊಂದರೆ ತಪ್ಪಿಸಬಹುದು ಎನ್ನುತ್ತಾರೆ ಮಕ್ಕಳ ತಜ್ಞ ಡಾ| ಗೋವಿಂದ ಕಿಶೋರ್‌.

Advertisement

ಎಕ್ಸ್‌ರೇ ಯಂತ್ರ
ಭಟ್ಕಳದಿಂದ ಮಣಿಪಾಲ, ಮೂಡಿಗೆರೆಯಿಂದ ಮಂಗಳೂರಿಗೆ ಅದೆಷ್ಟೋ ವಾಹನಗಳು, ಆ್ಯಂಬುಲೆನ್ಸ್‌ಗಳು ಪ್ರತಿನಿತ್ಯ ರೋಗಿಗಳನ್ನು ಸಾಗಿಸುತ್ತವೆ. ಈ ಪೈಕಿ ಹೆಚ್ಚಿನ ಪ್ರಕರಣಗಳು ಹೃದ್ರೋಗ ಹಾಗೂ ಅಪಘಾತಕ್ಕೆ ಸಂಬಂಧಿಸಿದ್ದಾಗಿವೆ. ಸರಕಾರಿ ಆಸ್ಪತ್ರೆಗಳಲ್ಲಿ ಎಕ್ಸ್‌ರೇ ಯಂತ್ರಗಳ ಕೊರತೆಯಾದಾಗ ರೋಗಿಗಳು ಮತ್ತೆ ದೊಡ್ಡಾಸ್ಪತ್ರೆಗೆ ಎಡತಾಕಬೇಕಾಗುತ್ತದೆ. ಪ್ರಸ್ತುತ ಬ್ರಹ್ಮಾವರ, ಕೋಟ, ಕುಂಭಾಶಿ ಆಸ್ಪತ್ರೆಗಳಲ್ಲಿ ಇಸಿಜಿ ಯಂತ್ರ ಹಾಗೂ ನೆಬ್ಯುಲೈಸರ್‌ ಗಳಿವೆ. ಕುಂದಾಪುರದ ಮರವಂತೆ ಹಾಗೂ ಸಾಲಿಗ್ರಾಮ; ದ.ಕ.ದಲ್ಲಿ ಸಿದ್ಧಕಟ್ಟೆ, ಶಿರ್ತಾಡಿ, ಇಂದಬೆಟ್ಟು, ಕಿನ್ನಿಗೋಳಿ ಸರಕಾರಿ ಆಸ್ಪತ್ರೆಗಳಿಗೆ ಇಸಿಜಿ ಯಂತ್ರದ ಅಗತ್ಯವಿದೆ. ಅಂತೆಯೇ ಎರಡೂ ಜಿಲ್ಲೆಯ ಎಲ್ಲ ಸರಕಾರಿ ಆಸ್ಪತ್ರೆಗಳಲ್ಲಿ ಎಕ್ಸ್‌ರೇ ಯಂತ್ರಗಳು ಕೂಡ ಇದ್ದಾಗ ಅಪಘಾತ ಗಾಯಾಳುಗಳಿಗೆ ತುರ್ತು ಚಿಕಿತ್ಸೆ ದೊರಕಿಸಿಕೊಡಲು ಸಾಧ್ಯ.

ಜೀವ ಉಳಿಸಿದ ಆ್ಯಂಬುಲೆನ್ಸ್‌ ಚಾಲಕ
ಬಣಕಲ್‌ನಲ್ಲಿ ರೋಗಿಯೊಬ್ಬರಿಗೆ ವೈದ್ಯರು ಇಸಿಜಿ ನಡೆಸಿ ಹೃದ್ರೋಗ ತಜ್ಞರಲ್ಲಿಗೆ ಕರೆದೊಯ್ಯಲು ಸಲಹೆಯಿತ್ತರು. ರೋಗಿಯ ಕಡೆಯವರು ಕಂಗಾಲಾದರು. ತತ್‌ಕ್ಷಣ ಆ್ಯಂಬುಲೆನ್ಸ್‌ ಚಾಲಕ ಇಸಿಜಿ ವರದಿಯನ್ನು ವಾಟ್ಸಪ್‌ ಬಳಗಕ್ಕೆ ಏರಿಸಿ, ಶರವೇಗದಲ್ಲಿ ಮಂಗಳೂರು ತಲುಪಿ ಸಕಾಲದಲ್ಲಿ ಚಿಕಿತ್ಸೆ ದೊರೆಯುವಂತೆ ಮಾಡಿ ರೋಗಿಯ ಪ್ರಾಣ ಉಳಿಸಿದರು.

ಗ್ರಾಮಾಂತರಕ್ಕಾಗಿ ಈ ವಾಟ್ಸಪ್‌ ಬಳಗ
ಗ್ರಾಮಾಂತರದ ರೋಗಿಗಳ ಬವಣೆ ನೀಗುವ ಸಲುವಾಗಿ ಇಸಿಜಿ ವಾಟ್ಸಪ್‌ ಬಳಗ ರೂಪಿಸಿದ್ದೇವೆ. ರೋಗಿಗೆ ತುರ್ತು ಚಿಕಿತ್ಸೆ ನೀಡಲು ಇದು ಸಹಾಯಕ. ಸಾಮಾಜಿಕ ತಾಣಗಳನ್ನು ಈ ರೀತಿ ಸದುಪಯೋಗ ಮಾಡಿಕೊಂಡರೆ ಸಮಾಜಕ್ಕೂ ಉಪಯೋಗ. 
– ಡಾ| ಪದ್ಮನಾಭ ಕಾಮತ್‌ , ಕೆಎಂಸಿಯ ಖ್ಯಾತ ಹೃದ್ರೋಗ ತಜ್ಞ

— ಲಕ್ಷ್ಮೀ ಮಚ್ಚಿನ

Advertisement

Udayavani is now on Telegram. Click here to join our channel and stay updated with the latest news.

Next