Advertisement

ಕ್ಯಾನ್ಸರ್‌ ಬಗ್ಗೆ ಮಾಹಿತಿ

03:45 AM Jan 15, 2017 | |

ಪ್ರ: ಕ್ಯಾನ್ಸರ್‌ ಎಂದರೇನು? 
ಕ್ಯಾನ್ಸರ್‌ ಅನ್ನು ಅರ್ಥಮಾಡಿಕೊಳ್ಳಲು ನಾನು ಒಂದಷ್ಟು ಸರಳ ಉದಾಹರಣೆಗಳನ್ನು ಕೊಡುತ್ತೇನೆ. ಸಾಮಾನ್ಯವಾಗಿ ನಮಗೆ ಗಾಯವಾದರೆ, ಗಾಯವನ್ನು ಮಾಯಿಸಲು ಅಥವಾ ಗುಣಪಡಿಸಲು ನಮ್ಮ ಶರೀರವು ಮತ್ತೆ ಹೊಸ ಅಂಗಾಂಶವನ್ನು ಬೆಳೆಸುತ್ತದೆ. ನಮ್ಮ ಶರೀರದಲ್ಲಿ, ಯಾವ ಭಾಗದಲ್ಲಿಯಾದರೂ ಪ್ರಚೋದನೆ ಇದ್ದಲ್ಲಿ ಬೆಳವಣಿಗೆಯನ್ನು ಉತ್ತೇಜಿಸುವ ಒಂದು ವ್ಯವಸ್ಥೆ ಇದೆ (ಇಲ್ಲಿ ಪ್ರಚೋದನೆ ಅಂದರೆ ಗಾಯ ಆಗಿರುವುದು). ಇದಕ್ಕೆ ವ್ಯತಿರಿಕ್ತವಾಗಿ, ಗಾಯ ಗುಣವಾದ ಅನಂತರ ಅಲ್ಲಿನ ಬೆಳವಣಿಗೆಯು ನಿಂತು ಹೋಗುತ್ತದೆ. ಅಂದರೆ ಪ್ರಚೋದನೆಯು ನಿಂತು ಹೋದಾಗ ಬೆಳವಣಿಗೆಯು ನಿಲ್ಲುವಂತಹ ವ್ಯವಸ್ಥೆಯೂ ನಮ್ಮ ಶರೀರದಲ್ಲಿ ಇದೆ. ಕ್ಯಾನ್ಸರ್‌ ಅಂದರೆ ನಮ್ಮ ಶರೀರದಲ್ಲಿ ಆಗುವ ಜೀವಕೋಶಗಳ ಅಸಹಜ ಉತ್ಪತ್ತಿ ಅಥವಾ ಬೆಳವಣಿಗೆ ಎಂದು ಹೇಳಬಹುದು. ಅಂದರೆ ಕ್ಯಾನ್ಸರ್‌ ಪರಿಸ್ಥಿತಿ ಇದ್ದಾಗ ಶರೀರದಲ್ಲಿ ಅಕಾರಣವಾಗಿ ಪ್ರಚೋದನೆಯಾ ನಿರ್ಬಂಧವಿಲ್ಲದೆ ಅಸಹಜ ಊತವು ಬೆಳೆಯುತ್ತಿರುತ್ತದೆ. ನಾವು ವೈದ್ಯರುಗಳು ಇದಕ್ಕೆ ಮೂರು ರೀತಿಯ ವಿಶೇಷಣಗಳನ್ನು ಕೊಡುತ್ತೇವೆ – ಕ್ಯಾನ್ಸರ್‌ ಅಂದರೆ ಸ್ವತಂತ್ರ, ಉದ್ದೇಶ ರಹಿತ ಮತ್ತು ಆಶ್ರಯದಾತನನ್ನೇ ಬಲಿತೆಗೆದುಕೊಳ್ಳುವ ಒಂದು ಕಾಯಿಲೆ.   

Advertisement

ಪ್ರ: ಯಾರಿಗೆ ಕ್ಯಾನ್ಸರ್‌ ಬರಬಹುದು?  
ಕ್ಯಾನ್ಸರ್‌ ಎಂಬುದು ನಮ್ಮ ಶರೀರದಲ್ಲಿ ಆರಂಭವಾಗಿ ಶರೀರದಲ್ಲಿಯೇ ಕೊನೆಗೊಳ್ಳುವ ಒಂದು ಕಾಯಿಲೆ. ಈ ಕಾಯಿಲೆಯು ಸಂಪೂರ್ಣವಾಗಿ ಗುಣವಾಗಬಹುದು ಅಥವಾ ರೋಗಿಯ ಜೀವವನ್ನೇ ಬಲಿ ತೆಗೆದುಕೊಳ್ಳಬಹುದು. ಕ್ಯಾನ್ಸರ್‌ ಕಾಯಿಲೆಯು ಒಬ್ಬರಿಂದ ಇನ್ನೊಬ್ಬರಿಗೆ ಹರಡುವುದಿಲ್ಲ ಮತ್ತು ಇದು ಹೊರಗಿನಿಂದ ಮನುಷ್ಯನ ಶರೀರಕ್ಕೆ ಅಂಟಿಕೊಳ್ಳುವುದಿಲ್ಲ. ಕ್ಯಾನ್ಸರ್‌ ಉಂಟು ಮಾಡುವ ಕಾರಕಗಳಾದ ವೈರಸ್‌ಗಳು, ತಂಬಾಕು, ಮದ್ಯಪಾನ, ರಾಸಾಯನಿಕಗಳು ನಮ್ಮ ಶರೀರದಲ್ಲಿ ಕ್ಯಾನ್ಸರ್‌ ಮ್ಯುಟೇಶನ್‌ ಅನ್ನು ಉತ್ತೇಜಿಸುವ ಅಂಶಗಳು. ಕೆಲವು ರೀತಿಯ ಮ್ಯುಟೇಷನ್‌ಗಳನ್ನು ದಾಟಿಸುವಲ್ಲಿ ಆನುವಂಶಿಕತೆಯು ಬಹುಮುಖ್ಯ ಪಾತ್ರವನ್ನು ವಹಿಸುತ್ತದೆ, ಇದು ಹಲವಾರು ಪೀಳಿಗೆಗಳಿಂದ ಸಾಗುತ್ತ ಬರಬಹುದು ಮತ್ತು ಕೆಲವು ವ್ಯಕ್ತಿಗಳಲ್ಲಿ ಕ್ಯಾನ್ಸರ್‌ ಕಾಣಿಸಿಕೊಳ್ಳಲು ಇದೂ ಸಹ ಕಾರಣ ಆಗಬಹುದು. 70% ನಷ್ಟು ಕ್ಯಾನ್ಸರ್‌ ಪ್ರಕರಣಗಳಿಗೆ ವ್ಯಕ್ತಿಯ ದುರದೃಷ್ಟ ಕಾರಣ ಆಗಿರಬಹುದು ಅನ್ನುವುದು ಅಧ್ಯಯನ ಒಂದರ ಅಭಿಪ್ರಾಯ.   ಒಂದು ನಿರ್ದಿಷ್ಟ ಮಗುವಿನಲ್ಲಿ ಯಾಕೆ ಲ್ಯುಕೇಮಿಯಾ ಕಾಣಿಸಿಕೊಳ್ಳುತ್ತದೆ ಮತ್ತು ತಾಯ್ತನವನ್ನು ಉತ್ತಮವಾಗಿ ನಿರ್ವಹಿಸಿದ ಒಬ್ಬ ತಾಯಿಯಲ್ಲೆ ಯಾಕೆ ಸ್ತನದ ಕ್ಯಾನ್ಸರ್‌ ಕಾಣಿಸಿಕೊಳ್ಳುತ್ತದೆ ಎಂಬುದನ್ನು ವಿವರಿಸಲು ಅಥವಾ ಕಾರಣ ನೀಡಲು ಕಷ್ಟವಾಗಬಹುದು. ಹಲವಾರು ಬಗೆಯ ಕ್ಯಾನ್ಸರ್‌ಗಳಿಗೂ, ತಂಬಾಕು, ಗುಟ್ಕಾ, ಪಾನ್‌ ಮಸಾಲ, ಅಡಿಕೆ ಜಗಿಯುವುದಕ್ಕೂ ಅಥವಾ ಅಧಿಕ ಮದ್ಯಪಾನ ಮಾಡುವುದಕ್ಕೂ ಬಹಳ ಹತ್ತಿರದ ಸಂಬಂಧವಿದೆ. ಈ ಎಲ್ಲಾ ದುಶ್ಚಟಗಳಿಗೆ ಮತ್ತು ಬಾಯಿ, ಗಂಟಲು, ಅನ್ನನಾಳ ಹಾಗೂ ಶ್ವಾಸಕೋಶದ ಕ್ಯಾನ್ಸರ್‌ಗಳಿಗೆ ಸಂಬಂಧ ಇದೆ ಎಂಬುದಾಗಿ ವರದಿಗಳು ಹೇಳುತ್ತವೆ. ಹಲವಾರು ವರ್ಷಗಳಿಂದ ಈ ಚಟಗಳಿಗೆ ದಾಸರಾಗಿರುವವರು ತಮಗೆ ತಾವೇ ಕ್ಯಾನ್ಸರ್‌ ತಂದುಕೊಳ್ಳುತ್ತಾರೆ ಅಥವಾ ಅವರ ಶರೀರವು ಅನೇಕ ಕಾಯಿಲೆಗಳ ಗೂಡಾಗಿರುತ್ತದೆ.  
ಕ್ಯಾನ್ಸರ್‌ ಯಾವ ವ್ಯಕ್ತಿಯನ್ನು ಬೇಕಾದರೂ ಬಾಧಿಸಬಹುದು, ಇದು ನಾವು ನೆನಪಿಡಬೇಕಾದ ಬಹುಮುಖ್ಯ ಅಂಶ. ಕ್ಯಾನ್ಸರ್‌ ಕಾಯಿಲೆಗೆ ತುತ್ತಾಗಿರುವ ಕ್ಯಾನ್ಸರ್‌ ತಜ್ಞರಿದ್ದಾರೆ, ವೈದ್ಯರಿದ್ದಾರೆ, ವ್ಯಾಪಾರಿಗಳು, ಎಂಜಿನಿಯರ್‌ಗಳು, ನಟರು, ಕ್ರಿಕೆಟರುಗಳು ಹೀಗೆ ಅನೇಕರಲ್ಲಿ ಕ್ಯಾನ್ಸರ್‌ ತಪಾಸಣೆ ಆಗಿದೆ- ಇವರಲ್ಲಿ ಅನೇಕರು ಕ್ಯಾನ್ಸರ್‌ ಕಾಯಿಲೆಯ ಕಾರಣದಿಂದ ಸಾವಿಗೆ ಶರಣಾಗಿದ್ದಾರೆ.  ಕ್ಯಾನ್ಸರ್‌ ಯಾರನ್ನು ಬೇಕಾದರೂ ಬಾಧಿಸಬಹುದು ಅನ್ನುವುದು ಇಲ್ಲಿ ನಾವು ವಿಶೇಷವಾಗಿ ಗಮನಿಸಬೇಕಾದ ಅಂಶ. ನಿಮ್ಮಲ್ಲಿ ಭೀತಿ ಹುಟ್ಟಿಸುವುದು ಲೇಖನದ ಉದ್ದೇಶ ಅಲ್ಲ. ನನಗೆ ಕ್ಯಾನ್ಸರ್‌ ಬರಲು ಸಾಧ್ಯವೇ ಇಲ್ಲ ಯಾಕೆಂದರೆ ನಾನು ಮದ್ಯಪಾನ ಮಾಡುವುದಿಲ್ಲ, ನಾನು ಸಿಗರೇಟು ಸೇದುವುದಿಲ್ಲ, ನಾನು ಬಹಳ ಧಾರ್ಮಿಕ ವ್ಯಕ್ತಿ ಮತ್ತು ನಾನು ಬಹಳ ಶುದ್ಧಾಚಾರವುಳ್ಳ ವ್ಯಕ್ತಿ ಎಂಬ ಭಾವನೆಗಳು ನಿಮ್ಮಲ್ಲಿದ್ದರೆ ಅಂತಹ ಅನಿಸಿಕೆಗಳನ್ನು ನಿಮ್ಮ ಮನಸ್ಸಿನಿಂದ ತೆಗೆದು ಹಾಕುವುದು ಬಹಳ ಆವಶ್ಯಕ. ಯಾಕೆಂದರೆ ಕ್ಯಾನ್ಸರ್‌ ಎಂಬ ಕಾಯಿಲೆಯು ಯಾವ ತಾರತಮ್ಯವೂ ಇಲ್ಲದೆ ಯಾವ ವ್ಯಕ್ತಿಯಲ್ಲೂ ಕಾಣಿಸಿಕೊಳ್ಳಬಹುದು.   

ಪ್ರ: ಕ್ಯಾನ್ಸರ್‌ ಬರುವುದನ್ನು 
ಹೇಗೆ ತಡೆಗಟ್ಟಬಹುದು?  

ಕ್ಯಾನ್ಸರ್‌ ಕಾಯಿಲೆ ಬರದಂತೆ ಸಂಪೂರ್ಣವಾಗಿ ತಡೆಗಟ್ಟುವುದು ಅಸಾಧ್ಯ, ಆದರೆ ಕ್ಯಾನ್ಸರ್‌ಗೆ ಕಾರಣ ಆಗಬಹುದಾದ ಅಪಾಯಗಳನ್ನು ತಡೆಯಬಹುದು. ತಾಜಾ ಹಣ್ಣು ತರಕಾರಿಗಳ ಸೇವನೆಯು ನಮ್ಮ ಶರೀರದಲ್ಲಿನ ಆಂಟಿ-ಆಕ್ಸಿಡಾಂಟ್‌ ಪ್ರಮಾಣವನ್ನು ಹೆಚ್ಚಿಸುತ್ತದೆ ಮತ್ತು ಮುಕ್ತ ಧಾತುಗಳಿಂದ  ಹಾನಿ ಆಗುವುದನ್ನು ತಡೆಯುತ್ತದೆ. ನೀವು ತಂಬಾಕನ್ನು ಯಾವುದೇ ರೂಪದಲ್ಲಿ ಸೇವಿಸುತ್ತಿದ್ದರೂ ಆ ಎಲ್ಲ ರೀತಿಯ ತಂಬಾಕು ಸೇವನೆಯನ್ನು ನಿಲ್ಲಿಸಿಬಿಡಿ. ತಂಬಾಕು ಅನ್ನುವುದು ಬಹಳ ಅಪಾಯಕಾರಿ ಉತ್ಪನ್ನ ಆಗಿದ್ದು, ಕ್ಯಾನ್ಸರ್‌ ಮತ್ತು ಅವಧಿ- ಪೂರ್ವ ಮರಣ ಸೇರಿದಂತೆ ಇದು ಹಲವಾರು ರೀತಿಯ ತೊಂದರೆಗಳನ್ನು ಉಂಟು ಮಾಡುತ್ತದೆ. ಬೊಜ್ಜು ಬಾರದಂತೆ ನೋಡಿಕೊಳ್ಳುವುದು ಮತ್ತು ಫಿಟ್‌ ಆಗಿ ಇರುವುದರಿಂದ ಸ್ತನದ ಕ್ಯಾನ್ಸರ್‌, ಎಂಡೋಮೆಟ್ರಿಯಲ್‌ ಕ್ಯಾನ್ಸರ್‌ ಮತ್ತು ಕರುಳಿನ ಕ್ಯಾನ್ಸರ್‌ನಂತಹ ಅನೇಕ ಕ್ಯಾನ್ಸರ್‌ಗಳನ್ನು ತಡೆಯಬಹುದು. ಒಂದು ವಾರದಲ್ಲಿ 150 ನಿಮಿಷಗಳ ಸಮಯ ಮಾಡುವ ಸಾಧಾರಣ ಪ್ರಮಾಣದ ವ್ಯಾಯಾಮದಿಂದ ಆರೋಗ್ಯದಲ್ಲಿ ಸುಧಾರಣೆ ಆಗುತ್ತದೆ ಮತ್ತು ಒತ್ತಡದ ಮಟ್ಟವನ್ನು ತಗ್ಗಿಸಿಕೊಂಡು ಕ್ಯಾನ್ಸರ್‌ ಅಪಾಯವನ್ನು ತಗ್ಗಿಸಿಕೊಳ್ಳಬಹುದು. ಮದ್ಯಪಾನದ ಪ್ರಮಾಣವನ್ನು ತಗ್ಗಿಸಿಕೊಳ್ಳಬೇಕು ಯಾಕೆಂದರೆ ಅಧಿಕ ಮದ್ಯಪಾನವು ಅನೇಕ ರೀತಿಯ ಕ್ಯಾನ್ಸರ್‌ಗಳಿಗೆ ಕಾರಣ ಆಗಬಹುದು. ಅನೇಕ ವ್ಯಕ್ತಿಗಳ ಜತೆಗೆ ಲೈಂಗಿಕ ಸಂಬಂಧವನ್ನು ಹೊಂದಿರುವುದೂ ಸಹ ಒಳ್ಳೆಯದಲ್ಲ. ಒಂದು ವೇಳೆ ಹಾಗಿದ್ದರೆ ಕಾಂಡೋಂ ಬಳಸುವುದು ಸೂಕ್ತ. ಕಾಂಡೋಂ ಬಳಸುವ ಮೂಲಕ ಏಐV, ಹೆಪಾಟೈಟಿಸ್‌ ಬಿ ಮತ್ತು ಸಿ ವೈರಸ್‌ಗಳು (ಕಾಮಾಲೆಯನ್ನು ಉಂಟು ಮಾಡುವ ಮತ್ತು ಕ್ರಮೇಣ ಪಿತ್ತಜನಕಾಂಗದ ಕ್ಯಾನ್ಸರ್‌ಗೆ ಕಾರಣ ಆಗುವ) ಮತ್ತು ಹ್ಯೂಮನ್‌ ಪ್ಯಾಪಿಲೋಮಾ ವೈರಸ್‌ (ಗರ್ಭಕೊರಳಿನ ಕ್ಯಾನ್ಸರ್‌ ಮತ್ತು ಪುರುಷ ಜನನಾಂಗದ ಕ್ಯಾನ್ಸರ್‌ಗೆ ಕಾರಣ ಆಗುವ) ಹರಡುವುದನ್ನು ತಡೆಯಬಹುದು. ಸೂರ್ಯನ ಪ್ರಖರ ಬಿಸಿಲನ್ನು ತಪ್ಪಿಸಿಕೊಳ್ಳುವ ಮೂಲಕ ಚರ್ಮದ ಕ್ಯಾನ್ಸರ್‌ ಬರುವುದನ್ನು ತಡೆಗಟ್ಟಬಹುದು. ಆದರೆ ಭಾರತೀಯರ ಚರ್ಮವು ಚರ್ಮದ ಕ್ಯಾನ್ಸರಿಗೆ ಈಡಾಗುವ ಸಾಧ್ಯತೆ ಕಡಿಮೆ ಇರುವ ಕಾರಣ, ವಿಟಾಮಿನ್‌ ಡಿ ಯ ಕೊರತೆ ಉಂಟಾಗುವುದನ್ನು ತಡೆಗಟ್ಟುವುದಕ್ಕಾಗಿ ಬಿಸಿಲಿಗೆ ಚರ್ಮವನ್ನು ಒಡ್ಡಿಕೊಳ್ಳುವಂತೆ ಸಲಹೆ ನೀಡಲಾಗುತ್ತದೆ. ಇಂತಹ ಕೆಲವು ಕ್ರಮಗಳನ್ನು ಅನುಸರಿಸುವ ಮೂಲಕ ಕ್ಯಾನ್ಸರ್‌ ಬೆಳೆಯುವ ಅಪಾಯವನ್ನು ನಾವು ತಗ್ಗಿಸಿಕೊಳ್ಳಬಹುದು. ಆದರೆ ಬಹಳ ಉತ್ತಮ ಅಭ್ಯಾಸಗಳನ್ನು ರೂಢಿಸಿಕೊಂಡಿರುವ ಕೆಲವು ವ್ಯಕ್ತಿಗಳನ್ನೂ ಸಹ ಕ್ಯಾನ್ಸರ್‌ ಬಾಧಿಸುವುದನ್ನು ನಾವು ಕಾಣುತ್ತೇವೆ. ಇದನ್ನು ಕೇವಲ ಅವರ ದುರದೃಷ್ಟ ಎಂದಷ್ಟೇ ಹೇಳಬಹುದು. 

ಪ್ರ: ಕ್ಯಾನ್ಸರ್‌ ಅನ್ನು ಸಂಪೂರ್ಣವಾಗಿ ತಡೆಗಟ್ಟುವುದು ಅಸಾಧ್ಯವಾದರೆ, ಬೇರೆ ಉಪಾಯ ಏನಿದೆ? 
ಒಳ್ಳೆಯ ಅಭ್ಯಾಸಗಳು ಮತ್ತು ಕ್ರಮಗಳನ್ನು ಅನುಸರಿಸಿಯೂ ವ್ಯಕ್ತಿಯಲ್ಲಿ ಕ್ಯಾನ್ಸರ್‌ ಕಾಯಿಲೆ ಕಾಣಿಸಿಕೊಳ್ಳಬಹುದು ಎಂಬ ಅರಿವು ನಮಗಿರಬೇಕು. ಯಾವುದೇ ರೋಗಲಕ್ಷಣವನ್ನಾದರೂ ನಿರ್ಲಕ್ಷ್ಯ ಮಾಡದೆ ವೈದ್ಯರಲ್ಲಿ ಆರಂಭದಲ್ಲಿಯೇ ತೋರಿಸುವುದು ಬಹಳ ಆವಶ್ಯಕ. ಕ್ಯಾನ್ಸರ್‌ ತಪಾಸಣೆಯ ಬಹುಮುಖ್ಯ ಸಮಯಾವಧಿ ಅಂದರೆ ಮೂರು ವಾರಗಳು. ಯಾವುದೇ ರೋಗಲಕ್ಷಣವಾಗಿದ್ದರೂ ಅದು ಮೂರು ವಾರಗಳಿಗಿಂತ ಹೆಚ್ಚು ಸಮಯದಿಂದ ಬಾಧಿಸುತ್ತಿದ್ದರೆ ಮತ್ತು ತನ್ನಷ್ಟಕ್ಕೆ ತಾನೆ ಸರಿ ಹೋಗದಿದ್ದರೆ, ಅದಕ್ಕೆ ತತ್‌ಕ್ಷಣ ವೈದ್ಯೋಪಚಾರ ಮಾಡಿಸುವುದು ಆವಶ್ಯಕ. ಅದು ಕ್ಯಾನ್ಸರ್‌ ಅಲ್ಲ ಎಂಬುದನ್ನು ಖಚಿತಮಾಡಿಕೊಳ್ಳಲು ಪರೀಕ್ಷೆಗಳನ್ನು ನಡೆಸುವುದು ಆವಶ್ಯಕ ಎಂಬುದನ್ನು ನಾವು ತಿಳಿದಿರಬೇಕು. ಯಾವುದೇ ರೀತಿಯ ಕ್ಯಾನ್ಸರ್‌ ಆರಂಭಿಕ ಹಂತದಲ್ಲಿಯೇ ಪತ್ತೆ ಆದರೆ, ಅದು ಗುಣವಾಗುವ ಪ್ರಮಾಣ ದರವು 80% ಗಿಂತಲೂ ಹೆಚ್ಚಾಗಿರು
ತ್ತದೆ. ಹಾಗಾಗಿ 3 ವಾರಕ್ಕಿಂತಲೂ ಹೆಚ್ಚು ಸಮಯದಿಂದ ಬಾಧಿಸುತ್ತಿರುವ ರೋಗಲಕ್ಷಣ ವನ್ನು ವಿಶ್ಲೇಷಣೆ ಮಾಡಿಸುವುದು ಮತ್ತು ಅದು ಮಾರಕ ಕಾಯಿಲೆಯ ಲಕ್ಷಣ ಅಲ್ಲ ಎಂಬುದನ್ನು ಖಚಿತ ಪಡಿಸಿಕೊಳ್ಳುವುದು ಬಹಳ ಆವಶ್ಯಕ.  

ಪ್ರ: ಕ್ಯಾನ್ಸರ್‌ ಇದೆ ಎಂದು ಯಾವಾಗ ಸಂದೇಹ ಪಡಬಹುದು? 
ಈ ಹಿಂದೆ ತಿಳಿಸಿದ ಹಾಗೆ – ಕ್ಯಾನ್ಸರ್‌ ಅನ್ನುವುದು ಶರೀರ ಭಾಗವು ಅಸಹಜವಾಗಿ ಊದಿಕೊಳ್ಳುವ ಒಂದು ರೋಗ ಲಕ್ಷಣ (ರಕ್ತದ ಕ್ಯಾನ್ಸರ್‌ ಅನ್ನು ಹೊರತು ಪಡಿಸಿ, ಇಲ್ಲಿ ಇದು ಶರೀರದಾದ್ಯಂತ ಹರಿಯುತ್ತಿರುತ್ತದೆ). ನಾವು ಇಲ್ಲಿ ಗಮನಿಸಬೇಕಾದ ಬಹುಮುಖ್ಯ ಸಂಗತಿ ಅಂದರೆ, ಕ್ಯಾನ್ಸರ್‌ಗೆ ಸಂಬಂಧಿಸಿದ ಊತವು ಬಹುಮಟ್ಟಿಗೆ ನೋವು ರಹಿತವಾಗಿರುತ್ತದೆ. ಸಮಸ್ಯೆ ಇರುವುದು ಇಲ್ಲಿಯೇ, ಯಾಕೆಂದರೆ ದೇಹದ ಯಾವುದಾದರೂ ಭಾಗದಲ್ಲಿ ನೋವು ಇದ್ದರೆ ನಾವು ವೈದ್ಯರನ್ನು ಭೇಟಿ ಮಾಡುತ್ತೇವೆ ಮತ್ತು ಆಗ ಅವರು ಕ್ಯಾನ್ಸರ್‌ ಇರಬಹುದೇ ಎಂದು ಸಂದೇಹ ಪಡುವ ಸಾಧ್ಯತೆ ಇದೆ.  ಆದರೆ ನೋವೇ ಇಲ್ಲದಿದ್ದರೆ, ರೋಗಿಯು ಹೆಚ್ಚಾಗಿ ಆ ರೋಗ ಲಕ್ಷಣವನ್ನು ನಿರ್ಲಕ್ಷಿಸುತ್ತಾನೆ. ಕ್ಯಾನ್ಸರ್‌ನ ಮತ್ತೂಂದು ಲಕ್ಷಣ ಅಂದರೆ ರಕ್ತಸ್ರಾವವಾಗುವುದು. ಯಾವುದೇ ರೀತಿಯ ಅಸಹಜ ಮತ್ತು ಅತಿಯಾದ ರಕ್ತಸ್ರಾವವನ್ನು ನಿರ್ಲಕ್ಷ್ಯ ಮಾಡದೆ ಅದನ್ನು ಗಂಭೀರವಾಗಿ ತೆಗೆದುಕೊಳ್ಳಬೇಕು. ಲೈಂಗಿಕ ಕ್ರಿಯೆ ನಡೆಸಿದ ಅನಂತರ ರಕ್ತಸ್ರಾವವಾಗುವುದು ಗರ್ಭಕೊರಳಿನ ಕ್ಯಾನ್ಸರಿನ ಬಹುಮುಖ್ಯ ಲಕ್ಷಣ ಮತ್ತು ಇದನ್ನು ವೈದ್ಯರ ಬಳಿ ಪರೀಕ್ಷೆ ಮಾಡಿಸಿಕೊಳ್ಳಲೇ ಬೇಕು. 
  
ರಕ್ತಸ್ರಾವ ಎನ್ನುವುದು ಹೆಚ್ಚಿನ ರೋಗಿಗಳು ನಿರ್ಲಕ್ಷಿಸದಂತಹ ಒಂದು ರೋಗ ಲಕ್ಷಣ. ಕ್ಯಾನ್ಸರಿನ ಲಕ್ಷಣಗಳು ಮತ್ತೆ ಮತ್ತೆ ಮರುಕಳಿಸುತ್ತವೆ ಅನ್ನುವುದು ನಾವು ತಿಳಿದಿರಬೇಕಾದ ಒಂದು ಬಹುಮುಖ್ಯ ಸಂಗತಿ. ಕೆಮ್ಮು, ನುಂಗಲು ಕಷ್ಟವಾಗುವುದು, ಗಂಟಲಿನಲ್ಲಿ ನೋವಾಗುವುದು, ಬಾಯಿಯಲ್ಲಿ ಹುಣ್ಣಾಗುವುದು, ಧ್ವನಿ ಬದಲಾಗುವುದು, ಗಂಟಲಿನಲ್ಲಿ ಏನೋ ಸಿಕ್ಕಿಕೊಂಡಂತೆ ಇರುವುದು, ಕಿಬ್ಬೊಟ್ಟೆಯ ನೋವು, ಬೆನ್ನು ನೋವು, ಮಲವಿಸರ್ಜನೆಯ ಕ್ರಮದಲ್ಲಿ ವ್ಯತ್ಯಾಸವಾಗುವುದು ಇತ್ಯಾದಿ ಯಾವುದೇ ರೋಗ ಲಕ್ಷಣವಾಗಿದ್ದರೂ – ಅದು ಮೂರು ವಾರಕ್ಕಿಂತಲೂ ಹೆಚ್ಚು ಸಮಯ ಬಾಧಿಸಿದರೆ ಆಗ ಅದು ಕ್ಯಾನ್ಸರ್‌ ಇರಬಹುದೇ ಎಂದು ಸಂದೇಹ ಪಡಬೇಕು.  

Advertisement

ಪ್ರ: ಕ್ಯಾನ್ಸರ್‌ ಎಂದರೆ 
ಯಾಕೆ ಭಯವಾಗುತ್ತದೆ? 

ಕ್ಯಾನ್ಸರ್‌ ಅಂದರೆ ನೋವು, ಯಾತನೆ, ವೇದನೆ. ಈ ಕಾರಣಕ್ಕಾಗಿ ಕ್ಯಾನ್ಸರ್‌ ಅಂದರೆ ಭಯ ಹುಟ್ಟಿಕೊಳ್ಳುತ್ತದೆ. ಗುಣವಾಗುವ ಕ್ಯಾನ್ಸರ್‌ ಆಗಿದ್ದರೆ ಚಿಕಿತ್ಸೆಯ ಸಂದರ್ಭದ ನೋವು-ಒಂದೋ ಶಸ್ತ್ರಚಿಕಿತ್ಸೆ ಅಥವಾ ಕೀಮೋತೆರಪಿ ಅಥವಾ ರೇಡಿಯೋತೆರಪಿಯ ಸಂದರ್ಭದ ನೋವು, ಬಳಲಿಕೆ ರೋಗಿಯನ್ನು ಭಯಪಡಿಸಿದರೆ. ಕ್ಯಾನ್ಸರ್‌ ಗುಣವಾಗದಿದ್ದರೆ ಆ ಕಾಯಿಲೆಗೆ ಸಂಬಂಧಿಸಿದ ನೋವು, ಯಾತನೆ ಇದ್ದೇ ಇರುತ್ತದೆ. ಈ ಮುಂದೆ ಹೇಳುವ ಕಾರಣಗಳಿಗಾಗಿ ಕ್ಯಾನ್ಸರ್‌ ಆರೈಕೆಯ ಚಿಕಿತ್ಸೆಯೂ ಸಹ ದುಬಾರಿ ಎನಿಸಿದೆ. ಕ್ಯಾನ್ಸರ್‌ ರೋಗಿಗಳ ಚಿಕಿತ್ಸೆಗಾಗಿ ಬಳಕೆಯಾಗುವ ರೇಡಿಯೋತೆರಪಿ ಯಂತ್ರವು ಕನಿಷ್ಠ 8-10 ಕೋಟಿ ರೂ. ಬೆಲೆ ಬಾಳುತ್ತದೆ. ಯಾವುದೇ ಆಸ್ಪತ್ರೆಗಾದರೂ ಇದು ಒಂದು ದುಬಾರಿ ವೆಚ್ಚವೇ ಸರಿ. ಕೀಮೋತೆರಪಿ ಔಷಧಿಯು ಮಾರುಕಟ್ಟೆಯಲ್ಲಿ ಜನಸಾಮಾನ್ಯರಿಗೆ ಸಿಗುವ ಮೊದಲು ಸಂಶೋಧನೆ ಆಗಿ ಸುಮಾರು 10 ವರ್ಷ ಆಗಿರಬೇಕಾದುದು ಕಡ್ಡಾಯವಾಗಿರುವ ಕಾರಣ, ಕ್ಯಾನ್ಸರ್‌ ರೋಗಿಗಳ ಕೀಮೋತೆರಪಿ ಔಷಧಿಗಳೂ ಸಹ ಬಹಳ ದುಬಾರಿ ಎನಿಸಿಕೊಂಡಿವೆ. ಕೀಮೋತೆರಪಿಯ ಔಷಧಿ ಅಷ್ಟೇ ಅಲ್ಲದೆ, ಕ್ಯಾನ್ಸರ್‌ ರೋಗಿಗಳಿಗೆ ನೀಡಬೇಕಾಗಿರುವ ಪೂರಕ ಔಷಧಿಗಳು ಮತ್ತು ಪೋಷಕಾಂಶ ಪೂರಣಗಳೂ ಸಹ ದುಬಾರಿಯಾಗಿದ್ದು, ಚಿಕಿತ್ಸಾ ವೆಚ್ಚವು ಇನ್ನಷ್ಟು ಹೆಚ್ಚಾಗುತ್ತದೆ. ಈ ಎಲ್ಲ ಕಾರಣಗಳಿಂದ ಕ್ಯಾನ್ಸರ್‌ ಅಂದರೆ ಭಯ ಹುಟ್ಟುತ್ತದೆ. ಆದರೆ ಈ ಹಿಂದೆ ಮರಣ ಸಮಾನ ಎನಿಸಿದ್ದ ಕ್ಯಾನ್ಸರ್‌ ಬಗೆಗಿನ ಹೆದರಿಕೆ ಈಗ ನಿಧಾನವಾಗಿ ಕಡಿಮೆಯಾಗುತ್ತಿದೆ. ಹಿಂದಿನ ದಿನಗಳಿಗೆ ಹೋಲಿಸಿದರೆ, ಈಗ ಕ್ಯಾನ್ಸರ್‌ ಬಗೆಗಿನ ಅರಿವು ಹೆಚ್ಚಾಗುತ್ತಿದೆ. ಕ್ಯಾನ್ಸರ್‌ ಅನ್ನು ಬಹಳ ಬೇಗನೆ ಪತ್ತೆ ಮಾಡಿ ಔಷಧಿ ಮಾಡಿಕೊಳ್ಳುವುದರಿಂದ ಮಾನಸಿಕವಾಗಿ ಮತ್ತು ದೈಹಿಕವಾಗಿ ಹೆಚ್ಚು ತೊಂದರೆಯಾಗುವುದಿಲ್ಲ ಮತ್ತು ಗುಣವಾಗುವ ಸಾಧ್ಯತೆಯೂ ಹೆಚ್ಚು. ಕ್ಯಾನ್ಸರ್‌ ರೋಗ ಅಂದರೆ ಅದೊಂದು ಕಳಂಕ ಎಂಬ ಭಾವನೆ ಈಗಿಲ್ಲ ಮತ್ತು ಕ್ಯಾನ್ಸರ್‌ ರೋಗಿಗಳೂ ಸಹ ತಮಗಿರುವ ತೊಂದರೆಗಳ ಬಗ್ಗೆ ಸಮಾಜದಲ್ಲಿ ಹೆಚ್ಚು ಮುಕ್ತವಾಗಿ ಮಾತನಾಡುತ್ತಿದ್ದಾರೆ. ಕ್ಯಾನ್ಸರ್‌ ಆರಂಭಿಕ ಹಂತದಲ್ಲಿ ಇದ್ದರೆ, ಭಯಪಡಬೇಕಾದ ಅಗತ್ಯವೇ ಇಲ್ಲ ಯಾಕೆಂದರೆ ಚಿಕಿತ್ಸೆಯಿಂದ ಅದನ್ನು ಗುಣಪಡಿಸಬಹುದು.
  
ಪ್ರ: ಕ್ಯಾನ್ಸರಿಗೆ ಚಿಕಿತ್ಸಾ 
ಆಯ್ಕೆಗಳು ಯಾವುವು? 

ಕ್ಯಾನ್ಸರ್‌ ಚಿಕಿತ್ಸೆಯನ್ನು 4 ಮುಖ್ಯ ಭಾಗಗಳಾಗಿ ವಿಂಗಡಿಸಲಾಗಿದೆ – ಶಸ್ತ್ರಚಿಕಿತ್ಸೆ, ರೇಡಿಯೋತೆರಪಿ ಅಥವಾ ವಿಕಿರಣ ಚಿಕಿತ್ಸೆ, ಕೀಮೊತೆರಪಿ ಮತ್ತು ಜೈವಿಕ ಚಿಕಿತ್ಸೆ (ಬಯೋಲಾಜಿಕಲ್‌ ತೆರಪಿ). ಶಸ್ತ್ರಚಿಕಿತ್ಸೆಯ ಬಗ್ಗೆ ಯಾರಿಗೂ ಹೆಚ್ಚಿನ ವಿವರಣೆಯ ಆವಶ್ಯಕತೆಯಿಲ್ಲ. ಶರೀರದ ಒಂದು ಭಾಗದಿಂದ ಇನ್ನೊಂದು ಭಾಗಕ್ಕೆ ಹರಡದ ಕ್ಯಾನ್ಸರ್‌ ಆಗಿದ್ದರೆ ಮಾತ್ರ ಶಸ್ತ್ರಚಿಕಿತ್ಸೆಯನ್ನು ಸೂಚಿಸುತ್ತಾರೆ ಎನ್ನುವುದು ಎಲ್ಲರೂ ತಿಳಿದಿರಬೇಕಾದ ಒಂದು ವಿಚಾರ. ಆದರೆ ಕೆಲವು ಪ್ರಕರಣಗಳಲ್ಲಿ ಕ್ಯಾನ್ಸರ್‌ ಮುಂದುವರಿದ ಹಂತದಲ್ಲಿದ್ದರೆ, ಅದರ ದೊಡ್ಡ ಗಾತ್ರದಿಂದಾಗಿ ಶಸ್ತ್ರಚಿಕಿತ್ಸೆ ಅಸಾಧ್ಯವಾಗುತ್ತದೆ ಮತ್ತು ಶಸ್ತ್ರಚಿಕಿತ್ಸೆ ಮಾಡಲು ಸಾಧ್ಯವಾಗುವಂತೆ ಗಡ್ಡೆಯ ಗಾತ್ರವನ್ನು ಕುಗ್ಗಿಸಲು ಕೆಲವು ಚಿಕಿತ್ಸೆಗಳನ್ನು ನೀಡಬೇಕಾಗುತ್ತದೆ.    

ಮುಂದಿನದು ರೇಡಿಯೋತೆರಪಿ ಅಥವಾ ವಿಕಿರಣ ಚಿಕಿತ್ಸೆ: ಈ ಚಿಕಿತ್ಸೆಯಲ್ಲಿ ಕ್ಯಾನ್ಸರ್‌ ಕೋಶಗಳನ್ನು ನಾಶಪಡಿಸಲು ಅಧಿಕ ಶಕ್ತಿಶಾಲಿಯಾದ ವಿಕಿರಣವನ್ನು ಹೊಮ್ಮಿಸುತ್ತಾರೆ. ಸಾಮಾನ್ಯವಾಗಿ ಆಡುಭಾಷೆಯಲ್ಲಿ ಈ ಚಿಕಿತ್ಸೆಗೆ ಕರೆಂಟ್‌ ಅಥವಾ ಲೈಟ್‌ ಚಿಕಿತ್ಸೆ ಎಂದು ಕರೆಯುತ್ತಾರೆ. ಆದರೆ ಇವೆರಡೂ ತಪ್ಪು$ ಪದ ಪ್ರಯೋಗಗಳು. ವಿಕಿರಣ ಚಿಕಿತ್ಸೆ ಅಂದರೆ ಎಕ್ಸ್‌-ರೇ ಬಳಸಿ ಕೊಡುವ ಚಿಕಿತ್ಸೆ, ಅಂದರೆ ಮೂಳೆ ಮುರಿತ, ನ್ಯೂಮೋನಿಯಾ ಇದೆಯೇ ಎಂದು ನೋಡಲು ಎಕ್ಸ್‌-ರೇಯನ್ನು ಬಳಸುವ ರೀತಿಯಲ್ಲಿಯೇ ಇಲ್ಲೂ ಸಹ ಎಕ್ಸ್‌-ರೇಯನ್ನು ಬಳಸುತ್ತಾರೆ. ಆದರೆ ಕ್ಯಾನ್ಸರ್‌ ಚಿಕಿತ್ಸೆಯಲ್ಲಿ ಬಳಸುವ ಎಕ್ಸ್‌-ರೇಯ ಸಾಮರ್ಥಯವು 1000 ಪಟ್ಟು ಹೆಚ್ಚು ಶಕ್ತಿಶಾಲಿ ಆಗಿರುತ್ತದೆ. ರೇಡಿಯೇಷನ್‌ ಅಥವಾ ವಿಕಿರಣ ರಹಿತ ಬದುಕನ್ನು ಕಲ್ಪಿಸಿಕೊಳ್ಳುವುದೂ ಅಸಾಧ್ಯ- ಮೊಬೈಲ್‌ನಿಂದ ಆರಂಭವಾಗಿ ಟಿ.ವಿ. ಸಿಗ್ನಲ್‌ ಮತ್ತು ಸೂರ್ಯನಿಂದ ಬರುವ ಬೆಳಕು ಇವೆಲ್ಲವೂ ಕಿರಣಗಳೆ. ಈ ಚಿಕಿತ್ಸೆಯಲ್ಲಿ ಅದೇ ಶಕ್ತಿಶಾಲಿಯಾದ ಅಗೋಚರ ಕಿರಣವನ್ನು, ಲೀನಿಯರ್‌ ಆಕ್ಸಲರೇಟರ್‌ ಎಂದು ಕರೆಯಲಾಗುವ  ಉದ್ದನೆಯ ಎಕ್ಸ್‌-ರೇ ಟ್ಯೂಬ್‌ನ ಮೂಲಕ ಕ್ಯಾನ್ಸರ್‌ ಕೋಶಗಳ ಮೇಲೆ ಹಾಯಿಸುತ್ತಾರೆ. ಆಧುನಿಕ ತಂತ್ರಜಾnನದಿಂದಾಗಿ ಕ್ಯಾನ್ಸರ್‌ ಕೋಶಗಳ ಮೇಲಷ್ಟೇ ಕಿರಣವನ್ನು ಹಾಯಿಸಿ, ಉಳಿದ ಆರೋಗ್ಯಕರ ಮತ್ತು ಕ್ಯಾನ್ಸರಿಗೆ ಸೇರದ ಕೋಶಗಳನ್ನು ಸಂರಕ್ಷಿಸಿ ಚಿಕಿತ್ಸೆ ನೀಡಲು ಇಂದು ಸಾಧ್ಯವಾಗುತ್ತಿದೆ.  

ಕೀಮೋತೆರಪಿ ಅಂದರೆ ಕ್ಯಾನ್ಸರ್‌ ಕೋಶಗಳನ್ನು ನಾಶಪಡಿಸುವುದಕ್ಕಾಗಿ ರಾಸಾಯನಿಕಗಳನ್ನು ಬಳಸುವುದು. ಈ ಚಿಕಿತ್ಸೆಯಲ್ಲಿ ರಾಸಾಯನಿಕವನ್ನು ಗುÉಕೋಸ್‌ ಬಾಟಲಿಗೆ ಚುಚ್ಚಿ ಅದನ್ನು ರಕ್ತನಾಳದ ಮೂಲಕ ಇಡಿಯ ದೇಹಕ್ಕೆ ಹರಿಯುವಂತೆ ಮಾಡುತ್ತಾರೆ. ಇದನ್ನು ರಕ್ತನಾಳದ ಮೂಲಕ ಹಾಯಿಸುವುದರಿಂದಾಗಿ ಅದು ರಕ್ತಪರಿಚಲನೆಯ ಮೂಲಕ ಶರೀರದಾದ್ಯಂತ ಇರುವ ಕ್ಯಾನ್ಸರ್‌ ಕೋಶಗಳನ್ನು ನಾಶಪಡಿಸುತ್ತದೆ. ಆದರೆ ಈ ಕಿಮೋತೆರಪಿ ಚಿಕಿತ್ಸೆಯ ಅಡ್ಡಪರಿಣಾಮವು ಶರೀರದ ಅನೇಕ ಅಂಗಗಳ ಮೇಲೆ ಆಗಬಹುದು. ಪರಿಣಾಮವಾಗಿ ತಲೆ ಕೂದಲು ಉದುರುವುದು, ವಾಂತಿ, ತೀವ್ರ ವಾಕರಿಕೆ, ಸುಸ್ತು ಮತ್ತು ಇತರ ಸಮಸ್ಯೆಗಳು ಉಂಟಾಗಬಹುದು.  ಜೈವಿಕ ಚಿಕಿತ್ಸೆ (ಬಯೋಲಾಜಿಕಲ್‌ ತೆರಪಿ) ಅಥವಾ ಪ್ರತಿರಕ್ಷಣಾ ಚಿಕಿತ್ಸೆ ಅನ್ನುವುದು ಕೀಮೋತೆರಪಿಯಷ್ಟೇ ಪರಿಣಾಮಕಾರಿಯಾದ ಮತ್ತು ಪ್ರಮುಖ ಚಿಕಿತ್ಸೆ. ಇದನ್ನು ಒಂದೋ ಲವಣಾಂಶಗಳ ಬಾಟಲಿಗೆ ಚುಚ್ಚಿ ರಕ್ತನಾಳದ ಮೂಲಕ ದೇಹದೊಳಕ್ಕೆ ಹಾಯಿಸುತ್ತಾರೆ ಅಥವಾ ಬಾಯಿಯ ಮೂಲಕ ಕೊಡಬಹುದು. ಈ ಚಿಕಿತ್ಸೆಯು ನಿರ್ದಿಷ್ಟವಾಗಿ ಕ್ಯಾನ್ಸರ್‌ ಕೋಶಗಳನ್ನು ಗುರಿಮಾಡುತ್ತದೆ ಮತ್ತು ಕಿಮೋತೆರಪಿಯಂತೆ ಅದು ವಿಶೇಷ ಅಡ್ಡ ಪರಿಣಾಮಗಳನ್ನು ಉಂಟು ಮಾಡುವುದಿಲ್ಲ. ಇಂತಹದೇ ಸಮಾನ ಪ್ರಯೋಜನವನ್ನು ಕೊಡುವ ಕೆಲವು ಹಾರ್ಮೋನ್‌ ಮಾತ್ರೆಗಳೂ ಸಹ ಲಭ್ಯ ಇದ್ದು, ಅವನ್ನು ಕೆಲವು ವಿಧದ ಕ್ಯಾನ್ಸರ್‌ಗಳಲ್ಲಿ ವ್ಯಾಪಕವಾಗಿ ಬಳಸುತ್ತಾರೆ.   

ಕ್ಯಾನ್ಸರ್‌ನಲ್ಲಿ ಅನುಸರಣೆ 
ಬಹಳ ಆವಶ್ಯಕ ಯಾಕೆ? 

ಕ್ಯಾನ್ಸರ್‌ 1-3 ನೇ ಹಂತದಲ್ಲಿ ಪತ್ತೆ ಆಗಿ, ಯೋಜಿತ ಕ್ರಮದಲ್ಲಿಯೇ ಕ್ಯಾನ್ಸರ್‌ ಚಿಕಿತ್ಸೆ ನೀಡಿದ ಅನಂತರ, ಯಾವಾಗಲೂ ನಿಯಮಿತ ಅನುಸರಣೆ ಅಥವಾ ಫಾಲೋ-ಅಪ್‌ಗೆ ಬರುವಂತೆ ಕ್ಯಾನ್ಸರ್‌ ತಜ್ಞರು ರೋಗಿಯಲ್ಲಿ ಕೇಳಿಕೊಳ್ಳುತ್ತಾರೆ. ಆದರೆ ರೋಗಿಯು ಆಸ್ಪತ್ರೆಯಿಂದ ಬಹಳ ದೂರ ನೆಲೆಸಿರುವವರಾಗಿದ್ದರೆ ಅಥವಾ ಯಾತನಾಮಯ ಚಿಕಿತ್ಸೆಯನ್ನು ಪಡೆದ ಇದೇ ಆಸ್ಪತ್ರೆಗೆ ಮತ್ತೆ ಬರಬೇಕಲ್ಲಾ ಎಂಬ ವಿಚಾರವು ಅವರನ್ನು ಭಾವನಾತ್ಮಕವಾಗಿ ಕುಗ್ಗಿಸಬಹುದು ಮತ್ತು ನಿಯಮಿತ ಅನುಸರಣೆಗೆ ಬರುವುದು ಅವರಿಗೆ ಕಷ್ಟವಾಗಬಹುದು.  ಒಂದುವೇಳೆ ಕ್ಯಾನ್ಸರ್‌ ಮತ್ತೆ ಮರುಕಳಿಸಿದರೆ ಅದು ಒಂದು ಸಣ್ಣ ಗಂಟಿನ ರೂಪದಲ್ಲಿ ಆರಂಭವಾಗುತ್ತದೆ ಮತ್ತು ಕ್ರಮೇಣ ದೊಡ್ಡದಾಗುತ್ತಾ ಹೋಗುತ್ತದೆ. ಅನುಸರಣೆ ಅನ್ನುವುದು ಬಹಳ ಸಂಕೀರ್ಣ ಸಂಗತಿ ಯಾಕೆಂದರೆ ರೋಗಿಗೆ ಶಸ್ತ್ರಚಿಕಿತ್ಸೆ ಅಥವಾ ರೇಡಿಯೋತೆರಪಿ ಆದ ಜಾಗದಲ್ಲಿ ಆಮೇಲೆಯೂ ಸ್ವಲ್ಪ$ ನೋವು ಇರಬಹುದು. ಸಾಮಾನ್ಯವಾಗಿ ಈ ರೋಗಲಕ್ಷಣವನ್ನು ವೈದ್ಯರು ಮತ್ತು ರೋಗಿ ನಿರ್ಲಕ್ಷಿಸುತ್ತಾರೆ. ಆದರೆ ನಿಯಮಿತ ಅನುಸರಣೆಯಲ್ಲಿ ಇರುವುದರಿಂದ ಅಂದರೆ ಚಿಕಿತ್ಸೆ ಮುಗಿದ ಅನಂತರವೂ ಫಾಲೋ-ಅಪ್‌ ಗೆ ಬರುವುದರಿಂದ, ಆ ಜಾಗವನ್ನು ಪರೀಕ್ಷೆ ಮಾಡಲು ಕ್ಯಾನ್ಸರ್‌ ತಜ್ಞರಿಗೆ ಅವಕಾಶ ಸಿಕ್ಕದಂತಾಗುತ್ತದೆ ಮತ್ತು ಕ್ಯಾನ್ಸರ್‌ ಮತ್ತೆ ಮರುಕಳಿಸುತ್ತಿಲ್ಲ ಎಂಬುದನ್ನು ನೋಡಿ ಅಥವಾ ಮುಟ್ಟಿ ಖಚಿತಪಡಿಸಿಕೊಳ್ಳಲು ಸಾಧ್ಯವಾಗುತ್ತದೆ. ಮರುಕಳಿಸುತ್ತಿರುವ ಗಡ್ಡೆಯು ದೊಡ್ಡದಾಗುವವರೆಗೆ ಯಾವ ರೋಗಲಕ್ಷಣವನ್ನೂ ಸಹ ತೋರಿಸದೆಯೇ ಇರಬಹುದು ಮತ್ತು ಅದು ಸಮೀಪದ ಇನ್ನಿತರ ಅಂಗಗಳಿಗೆ ಹರಡಬಹುದು ಹಾಗಾಗಿ ಅದನ್ನು ತೀರಾ ಸಣ್ಣದಿರುವಾಗಲೇ ಪತ್ತೆ ಮಾಡುವುದು ಸೂಕ್ತ. ಇಷ್ಟು ಮಾತ್ರ ಅಲ್ಲ, ಕಾಯಿಲೆ ಆಗಿರುವ ಆ ನಿರ್ದಿಷ್ಟ ಜಾಗಕ್ಕೆ ಸಂಬಂಧಿಸಿದ ಹಾಗೆ ಶಸ್ತ್ರಚಿಕಿತ್ಸೆ ಮತ್ತು/ಅಥವಾ ಬಿಡುಗಡೆ ಮಾಡಬೇಕಿರುವ ರೇಡಿಯೇಷನ್‌ನ ಗರಿಷ್ಠ ಮಿತಿಯನ್ನು ಈಗಾಗಲೇ ಮೀರಿರುವ ಕಾರಣ ಕ್ಯಾನ್ಸರ್‌ ಮತ್ತೆ ಮರುಕಳಿಸಿದರೆ ಅದಕ್ಕೆ ಚಿಕಿತ್ಸೆ ನೀಡುವುದು ಇನ್ನೂ ಕಠಿನ. ಸಾಮಾನ್ಯವಾಗಿ ಮೊದಲ 2 ವರ್ಷದಲ್ಲಿ 3 ತಿಂಗಳಿಗೆ ಒಮ್ಮೆ ಭೇಟಿ (ವರ್ಷಕ್ಕೆ 4 ಬಾರಿ) ಮಾಡಬೇಕಾಗುತ್ತದೆ, 3ನೇ ವರ್ಷದಲ್ಲಿ 4 ತಿಂಗಳಿಗೆ ಒಮ್ಮೆ (ವರ್ಷಕ್ಕೆ 3 ಬಾರಿ) ಮತ್ತು 6-ತಿಂಗಳಿಗೆ ಒಮ್ಮೆ ಆಮೇಲೆ (ವರ್ಷಕ್ಕೆ 2 ಬಾರಿ) ಮತ್ತು 5 ವರ್ಷಗಳ ಅನಂತರ ವರ್ಷಕ್ಕೆ ಒಂದು ಬಾರಿ ಅನುಸರಣೆಯ ಭೇಟಿ ಇರುತ್ತದೆ.  

ಸಾರಾಂಶ  
ಕ್ಯಾನ್ಸರ್‌ನ ಜೀವ-ವಿಜಾnನ ಬಹಳ ವೈವಿಧ್ಯಮಯವಾದುದು -ಕೆಲವು ಕ್ಯಾನ್ಸರ್‌ಗಳಿಗೆ ಚಿಕಿತ್ಸೆ ನೀಡುವುದು ಸುಲಭ ಮತ್ತು ಆ ಕ್ಯಾನ್ಸರ್‌ಗಳು ಜೀವಿತಾವಧಿಯಲ್ಲಿ ಮತ್ತೆ ಮರುಕಳಿಸುವುದಿಲ್ಲ (ಕ್ರಿಕೆಟರ್‌ ಯುವರಾಜ್‌ ಸಿಂಗ್‌ಗೆ ಆದಂತೆ) ಆದರೆ ಕೆಲವು ಕ್ಯಾನ್ಸರ್‌ಗಳು ಬಹಳ ತೀವ್ರವಾಗಿರುತ್ತವೆ ಮತ್ತು ತಪಾಸಣೆಯಾದ ಕೆಲವೇ ದಿನಗಳಲ್ಲಿ ರೋಗಿಯ ಸಾವಿಗೆ ಕಾರಣವಾಗುವುದಿದೆ. ಹೆಚ್ಚಿನ ರೋಗಿಗಳಿಗೆ (ವಿಶೇಷವಾಗಿ ಧೂಮಪಾನ ಮಾಡುವವರು) ಕ್ಯಾನ್ಸರ್‌ ತಪಾಸಣೆ ಅನ್ನುವುದು ಒಂದು ಆಘಾತದ ವಿಷಯವೇ ಆಗಿರುತ್ತದೆ.  ಯಾವುದೇ ರೋಗ ಲಕ್ಷಣ ಅಥವಾ ಗಡ್ಡೆ 3 ವಾರಗಳಿಗಿಂತ ಹೆಚ್ಚು ಸಮಯ ಇದ್ದರೆ ಅದನ್ನು ಆವಶ್ಯಕವಾಗಿ ಪರೀಕ್ಷೆ ಮಾಡಿಸಿ ಕೊಳ್ಳಬೇಕು. ಕ್ಯಾನ್ಸರ್‌ ಕಾಯಿಲೆಯನ್ನು ಸಂಪೂರ್ಣವಾಗಿ ತಡೆಗಟ್ಟುವುದು ಅಸಾಧ್ಯವಾಗಿರುವ ಕಾರಣ, ಅದನ್ನು ಆರಂಭಿಕ ಹಂತದಲ್ಲಿಯೇ ಪತ್ತೆ ಮಾಡಿ ಚಿಕಿತ್ಸೆ ಮಾಡಿಸಿಕೊಳ್ಳುವುದು ಸೂಕ್ತ. ಕ್ಯಾನ್ಸರ್‌ ಕಾಯಿಲೆಗೆ ಆರಂಭಿಕ ಹಂತದಲ್ಲಿಯೇ ಚಿಕಿತ್ಸೆ ಪಡೆದರೆ ಗುಣ ಮುಖವಾಗುವ ಸಾಧ್ಯತೆ ಮತ್ತು ಪ್ರಮಾಣ ಹೆಚ್ಚು.  

ಕ್ಯಾನ್ಸರ್‌ ಕಾಯಿಲೆಯನ್ನು  ತಡೆಯಲು ಏಳು ಸಲಹೆಗಳು  
1. ತಂಬಾಕು ಬಳಸಬೇಡಿ 
2. ಸೂರ್ಯನ ಪ್ರಖರ ಬಿಸಿಲಿನಿಂದ ನಿಮ್ಮ ತ್ವಚೆಯನ್ನು ರಕ್ಷಿಸಿಕೊಳ್ಳಿ 
3. ಒಳ್ಳೆಯ ಆರೋಗ್ಯಕರ ಆಹಾರ ಸೇವಿಸಿ. 
4. ಸರಿಯಾದ ದೇಹತೂಕವನ್ನು ಕಾಪಾಡಿಕೊಳ್ಳಿ ಮತ್ತು ದೈಹಿಕವಾಗಿ ಸಕ್ರಿಯರಾಗಿರಿ 
5. ಸುರಕ್ಷಿತ ಲೈಂಗಿಕ ಅಭ್ಯಾಸವನ್ನು ಬೆಳೆಸಿಕೊಳ್ಳಿ ಮತ್ತು ಅಪಾಯಕಾರಿ ನಡವಳಿಕೆಯಿಂದ ದೂರವಿರಿ 
6. ರೋಗ ಪ್ರತಿರೋಧಕ ಚುಚ್ಚುಮದ್ದು ತೆಗೆದುಕೊಳ್ಳಿ ( ಏಕV ಮತ್ತು ಹೆಪಟೈಟಿಸ್‌ ಚುಚ್ಚುಮದ್ದು) 
7. ನಿಮ್ಮ ಕೌಟುಂಬಿಕ ಆರೋಗ್ಯ ಹಿನ್ನೆಲೆಯ ಅರಿವಿರಲಿ ಮತ್ತು ನಿಯಮಿತವಾಗಿ ಕ್ಯಾನ್ಸರ್‌ ಸ್ಕ್ರೀನಿಂಗ್‌ ಮಾಡಿಸಿಕೊಳ್ಳಿ. 

ಕ್ಯಾನ್ಸರ್‌ ಬಗೆಗಿನ ತಪ್ಪು ನಂಬಿಕೆಗಳು
 1.  ತಪಾಸಣೆಯ ಅವಧಿಯಲ್ಲಿ ಕ್ಯಾನ್ಸರ್‌ ರೋಗಿಗಳು ಬಹಳ ನಿಸ್ತೇಜರಾಗಿರುತ್ತಾರೆ ಮತ್ತು ರೋಗಿಷ್ಟರಂತೆ ಕಾಣುತ್ತಾರೆ. ಇದು ಸತ್ಯ ಅಲ್ಲ, ಕ್ಯಾನ್ಸರ್‌ ತಪಾಸಣೆ ಅನ್ನುವುದೂ ಸಹ ಇನ್ನಿತರ ತಪಾಸಣೆಯ ರೀತಿಯಲ್ಲಿಯೇ ಆಕಸ್ಮಿಕವಾಗಿ ಆಗಿ ಹೋಗಬಹುದು. ಹೆಚ್ಚಿನ ರೋಗಿಗಳಲ್ಲಿ ಸಣ್ಣ ಲಕ್ಷಣಗಳು ಅಂದರೆ – ಕೆಲವು ತಿಂಗಳಿನಿಂದ ಆಹಾರ ನುಂಗಲು ಆಗದೆ ಇರುವುದು ಅಥವಾ 3 ತಿಂಗಳಿಗಿಂತಲೂ ಹೆಚ್ಚು ಸಮಯದ ನಿರಂತರ ಕೆಮ್ಮು ಇತ್ಯಾದಿ ಲಕ್ಷಣಗಳು ಇರಬಹುದು. ಅಂಗಾಂಶ ಪರೀಕ್ಷೆ ಮತ್ತು ಸ್ಕ್ಯಾನ್‌ ಅನಂತರ ಅದು ಕ್ಯಾನ್ಸರ್‌ ಎನ್ನುವುದು ಬಯಲಾಗಬಹುದು. ಕ್ಯಾನ್ಸರ್‌ಗೆ ಪರ್ಯಾಯ ಎಂದೆನಿಸಿರುವ ನಿಶ್ಯಕ್ತಿ ಅಥವಾ ಆಯಾಸದ ಅನುಭವ ತಮ್ಮಲ್ಲಿ ಇಲ್ಲದಿರುವ ಕಾರಣ ಹೆಚ್ಚಿನ ರೋಗಿಗಳು ತಮಗೆ ಕ್ಯಾನ್ಸರ್‌ ಇದೆ ಎಂಬ ವಿಚಾರವನ್ನು ನಿರಾಕರಿಸಬಹುದು.  ಬಹುಶ: ಕ್ಯಾನ್ಸರಿನ ಕೊನೆಯ ಹಂತದಲ್ಲಿ, ಅಂದರೆ ಯಾವುದೇ ಚಿಕಿತ್ಸಾ ಆಯ್ಕೆ ಇಲ್ಲದಿರುವಾಗ ಮತ್ತು ರೋಗಿಯು ಬಹು-ಕಿಮೋತೆರಪಿ ಚಿಕಿತ್ಸೆಯಲ್ಲಿರುವಾಗ ರೋಗಿಯು ನಿಸ್ತೇಜನಾಗಿ ಮತ್ತು ದುರ್ಬಲನಾಗಿರುವಂತೆ ಕಾಣಿಸಬಹುದು.
  
2. ತನಗೆ ಕ್ಯಾನ್ಸರ್‌ ಇದೆ ಎಂದು ತಪಾಸಣೆಯಾದ ಬಳಿಕ ರೋಗಿಯು ಆ ತಪಾಸಣಾ ಫ‌ಲಿತಾಂಶವನ್ನೆ ನಿರಾಕರಿಸಬಹುದು. ಇದು ಬಹಳ ಸಾಮಾನ್ಯ ಮತ್ತು ಸಹಜ ವಿಚಾರ, ಆದರೆ ಈ ನಿರಾಕರಣೆಯ ಸಮಯಾವಧಿಯಲ್ಲಿ ವ್ಯತ್ಯಾಸ ಇರಬಹುದು. ಪ್ರತಿಭಾನ್ವಿತ ವ್ಯಕ್ತಿ, ಆಪಲ್‌ ಸಂಸ್ಥೆಯ ಸಹ-ಸ್ಥಾಪಕ ಸ್ಟೀವ್‌ ಜಾಬ್ಸ್ ಸಹ ತನಗೆ ಕ್ಯಾನ್ಸರ್‌ ಇದೆ ಎಂಬ ವಿಚಾರವನ್ನು ಒಪ್ಪಿಕೊಳ್ಳಲು ತಯಾರಿರಲಿಲ್ಲ. 

ತಪಾಸಣೆಯನ್ನು ನಿರಾಕರಿಸಿದ ಸ್ಟೀವ್‌ ಜಾಬ್ಸ್ ಜೀವರಕ್ಷಕ ಎನಿಸಿದ್ದ ಶಸ್ತ್ರಚಿಕಿತ್ಸೆಯನ್ನು ಒಂಬತ್ತು ತಿಂಗಳ ಕಾಲ ವಿಳಂಬ ಮಾಡಿದ್ದರು! ಒಂದು ಬಾರಿ ಕ್ಯಾನ್ಸರ್‌ ತಪಾಸಣೆ ಆದರೆ, ರೋಗಿಗಳು ಕೆಲವು ವಾರ ಅಥವಾ ತಿಂಗಳುಗಳ ಕಾಲ ಆಸ್ಪತ್ರೆ ಕಡೆಗೆ ಮುಖ ಹಾಕದೆ ಇರುವುದನ್ನು ಮತ್ತು ತಮ್ಮಷ್ಟಕ್ಕೆ ತಾವೇ ಆಹಾರ ಪಥ್ಯ ಅಥವಾ ವ್ಯಾಯಾಮದ ಮೂಲಕ ಸರಿಪಡಿಸಲು ಪ್ರಯತ್ನಿಸುವುದನ್ನು ನಾನು ನೋಡಿದ್ದೇನೆ. ಆ ರೋಗಿಗಳು ಮತ್ತೆ ಆಸ್ಪತ್ರೆಗೆ ಮರಳುವುದು ಕ್ಯಾನ್ಸರ್‌ ಬೆಳೆದ ಅನಂತರ; ಅಷ್ಟು ಹೊತ್ತಿಗೆ ಚಿಕಿತ್ಸೆ ಸಾಧ್ಯವಾಗಬಹುದಾಗಿದ್ದ ಅತ್ಯಮೂಲ್ಯ ಸಮಯ ಕಳೆದು ಹೋಗಿರುತ್ತದೆ. ಕ್ಯಾನ್ಸರ್‌ ಚಿಕಿತ್ಸೆಯಲ್ಲಿ ಸಮಯ ಅನ್ನುವುದು ಬಹಳ ಅಮೂಲ್ಯವಾದುದು, ತಮಗಾಗಿರುವ ತಪಾಸಣೆಯನ್ನು ಒಪ್ಪಿಕೊಂಡು ಬಹಳ ಬೇಗನೆ ಚಿಕಿತ್ಸೆಯನ್ನು ಆರಂಭಿಸುವ ರೋಗಿಗಳು ಬಹಳ ಬೇಗನೆ ಚೇತರಿಸಿಕೊಳ್ಳುತ್ತಾರೆ. 
 
3. ಚಿಕಿತ್ಸೆಯನ್ನು ನಿರಾಕರಿಸುವುದು ಕ್ಯಾನ್ಸರ್‌ ಚಿಕಿತ್ಸೆಯ ಭಾಗವಾದ ವಿಶೇಷ ಶಸ್ತ್ರಚಿಕಿತ್ಸೆ, ರೇಡಿಯೋತೆರಪಿ ಮತ್ತು ಕೀಮೋತೆರಪಿಗಳು ಅಪ್ರಯೋಜಕ ಎಂಬುದು ಕೆಲವು ವ್ಯಕ್ತಿಗಳ ಅಭಿಪ್ರಾಯ. ಇದು ಬಹಳ ದುರದೃಷ್ಟಕರ ವಿಚಾರ. ಜಗತ್ತಿನಾದ್ಯಂತ ಪ್ರತಿದಿನ ಸಾವಿರಾರು ರೋಗಿಗಳು ಕ್ಯಾನ್ಸರ್‌ ಕಾಯಿಲೆಯಿಂದ ಗುಣಮುಖರಾಗುತ್ತಿದ್ದಾರೆ – ಕೆಲವರು ಪವಾಡ ಸದೃಶ ರೀತಿಯಲ್ಲಿ ಗುಣಮುಖರಾದರೆ ಇನ್ನು ಕೆಲವರು ಕ್ಯಾನ್ಸರಿನ ಪ್ರಾಮಾಣಕ ಚಿಕಿತ್ಸೆಯ ಮೂಲಕ ನಿರೀಕ್ಷಿತ ರೀತಿಯಲ್ಲಿ ಗುಣಹೊಂದುತ್ತಿದ್ದಾರೆ. ಚಿಕಿತ್ಸೆಯನ್ನು ಹೆಚ್ಚು ಸುರಕ್ಷಿತಗೊಳಿಸಲು, ಕ್ಯಾನ್ಸರ್‌ ಕೋಶಗಳನ್ನು ಮಾತ್ರ ನಾಶಪಡಿಸಿ ಆರೋಗ್ಯಕರ ಜೀವಕೋಶಗಳನ್ನು ಸಂರಕ್ಷಿಸುವ ನಿಟ್ಟಿನಲ್ಲಿ ಪ್ರತಿದಿನವೂ ಹೊಸ ತಂತ್ರಜಾnನಗಳು ಅಭಿವೃದ್ಧಿಗೊಳ್ಳುತ್ತಿವೆ.  

4. ಬದಲಿ ಔಷಧಿಗಳಿಂದ ಕ್ಯಾನ್ಸರ್‌ ಅನ್ನು ಗುಣಪಡಿಸಬಹುದು ಬದಲಿ ವೈದ್ಯಕೀಯ ವಿಧಾನಗಳು ಅಂದರೆ – ಆಯುರ್ವೇದ, ಹೋಮಿಯೋಪಥಿ, ಸಿದ್ಧ ಇತ್ಯಾದಿ ವಿಧಾನಗಳು. ಒಳ್ಳೆಯ ಔಷಧಿಗಳು ಒಬ್ಬ ವ್ಯಕ್ತಿಯ ರೋಗ ಪ್ರತಿರೋಧಕ ವ್ಯವಸ್ಥೆಯನ್ನು ಉತ್ತಮಗೊಳಿಸಿ ಕ್ಯಾನ್ಸರ್‌ನ ವಿರುದ್ಧ ಹೋರಾಡಲು ಆತನಿಗೆ ಸಹಾಯ ಮಾಡಬಹುದು. ಆದರೆ ಅವು ಕ್ಯಾನ್ಸರ್‌ ಅನ್ನು ಗುಣಪಡಿಸುತ್ತವೆ ಎನ್ನುವುದು ಬಹಳ ಅಸಹಮಾನ್ಯ ಸಂಗತಿ. ಆಯುರ್ವೇದದಂತಹ ಔಷಧಿ ಕ್ರಮಗಳು ಒಬ್ಬ ವ್ಯಕ್ತಿಯ ರೋಗ ಪ್ರತಿರೋಧಕ ವ್ಯವಸ್ಥೆಯನ್ನು ಉತ್ತಮಪಡಿಸಿ ಆ ಕಾಯಿಲೆಯು ಮತ್ತೆ ಬರುವುದನ್ನು ತಡೆಯಬಹುದು. ಕೀಮೋತೆರಪಿ ಮತ್ತು ಇತರ ಬದಲಿ ಔಷಧಿಗಳು ಸಹಾಯಕ ಅಥವಾ ಪ್ರತಿರೋಧಕ ಪರಿಣಾಮವನ್ನು ಉಂಟುಮಾಡುತ್ತವೆಯೇ ಎಂಬುದು ಇನ್ನೂ ತಿಳಿದಿಲ್ಲ. ಹಾಗಾಗಿ ಇಂತಹ ಔಷಧಿಗಳು ಸುರಕ್ಷಿತ ಮತ್ತು ಪರಿಣಾಮಕಾರಿ ಎಂಬುದಾಗಿ ಸಂಶೋಧನೆಗಳಿಂದ ಸಾಬೀತಾಗುವವರೆಗೆ ಎರಡು ಚಿಕಿತ್ಸಾ ಕ್ರಮಗಳನ್ನು ಸಂಯೋಜನೆಯಲ್ಲಿ ಬಳಸದೆ ಇರುವಂತೆ ಶಿಫಾರಸು ಮಾಡಲಾಗುತ್ತದೆ. 
   
5. ಮಾತ್ರೆಗಳಿಂದ ಕ್ಯಾನ್ಸರ್‌ ಅನ್ನು ಗುಣಪಡಿಸಬಹುದು ಕೆಲವೇ ಕೆಲವು ಕ್ಯಾನ್ಸರ್‌ಗಳನ್ನು ಮಾತ್ರ ಮಾತ್ರೆಗಳಿಂದ ಗುಣಪಡಿಸಬಹುದು. ಸಾಮಾನ್ಯವಾಗಿ ಕ್ಯಾನ್ಸರ್‌ ಚಿಕಿತ್ಸೆಯ ಅಡ್ಡ ಪರಿಣಾಮಗಳನ್ನು ತಗ್ಗಿಸಲು ಅಥವಾ ಕ್ಯಾನ್ಸರಿನ ನೋವನ್ನು ತಗ್ಗಿ ಸಲು ಮಾತ್ರೆಗಳನ್ನು ಕೊಡುತ್ತಾರೆ. ಹೆಚ್ಚಾಗಿ ಎಲ್ಲ ರೀತಿಯ ಕ್ಯಾನ್ಸರ್‌ಗಳಿಗೆ ಒಂದೋ ಕಿಮೋತೆರಪಿ ಅಥವಾ ರೇಡಿಯೋತೆರಪಿ ಅಥವಾ ಶಸ್ತ್ರಚಿಕಿತ್ಸೆ ಅಥವಾ ವಿವಿಧ ಚಿಕಿತ್ಸೆ ಕ್ರಮಗಳನ್ನು ಒಟ್ಟಾಗಿ ಬಳಸುವ ಮೂಲಕ ಚಿಕಿತ್ಸೆ ನೀಡಲಾಗುತ್ತದೆ.
  
6. ರಾಸಾಯನಿಕಗಳು ಮತ್ತು ಆಹಾರದಲ್ಲಿನ ಕೀಟನಾಶಕಗಳಿಂದಾಗಿ ಕ್ಯಾನ್ಸರ್‌ ಪ್ರಕರಣಗಳು ಹೆಚ್ಚಾಗುತ್ತಿವೆಯೇ? ಇಂದಿನ ದಿನಗಳಲ್ಲಿ ಕ್ಯಾನ್ಸರ್‌ ಪ್ರಕರಣಗಳು ಹೆಚ್ಚಾಗುತ್ತಿವೆ ಇದಕ್ಕೆ ಹಲವಾರು ಅಂಶಗಳು ಕಾರಣವಾಗಿವೆ – ಮನುಷ್ಯನ ಜೀವಿತಾವಧಿ ಹೆಚ್ಚಾಗಿರುವುದು, ಮಹಿಳೆಯರಲ್ಲಿ ತಂಬಾಕು ಮತ್ತು ಮದ್ಯಪಾನದ ಅತಿ-ಬಳಕೆ, ಬೊಜ್ಜು, ತಾಜಾ ಹಣ್ಣು, ತರಕಾರಿಗಳನ್ನು ಕಡಿಮೆ ಸೇವಿಸುವುದು ಮತ್ತು ದಿಢೀರ್‌ ಆಹಾರಗಳನ್ನು ಹೆಚ್ಚು ಸೇವಿಸುವುದು. ಇಂದು ಅನೇಕ ಜನರು ಕ್ಯಾನ್ಸರ್‌ ಬಗ್ಗೆ ಸಾರ್ವಜನಿಕವಾಗಿ ಮಾತನಾಡುತ್ತಿದ್ದಾರೆ ಆದರೆ ಹಿಂದಿನ ದಿನಗಳಲ್ಲಿ ಈ ಕಾಯಿಲೆಯನ್ನು ಗೌಪ್ಯವಾಗಿ ಇಡಲಾಗುತ್ತಿತ್ತು. ಒಂದುವೇಳೆ ರಾಸಾಯನಿಕಗಳು ಮತ್ತು ಕೀಟನಾಶಕಗಳು ಕ್ಯಾನ್ಸರ್‌ ಪ್ರಕರಣಗಳ ಹೆಚ್ಚಳಕ್ಕೆ ಕಾರಣ ಆಗಿದ್ದರೆ, ಆ ಬಗ್ಗೆ ಸಾಕ್ಷ್ಯ ಇಲ್ಲದೆ ಉತ್ತರಿಸುವುದು ಅಸಾಧ್ಯ- ಸದ್ಯಕ್ಕೆ ಈ ವಿಚಾರವನ್ನು ಅನುಮೋದಿಸುವ ಯಾವ ಸಾಕ್ಷ್ಯಗಳೂ ಇಲ್ಲ.  

– ಡಾ| ಪ್ರಹ್ಲಾದ್‌ ಎಚ್‌. ಯತಿರಾಜ್‌, 
ಅಸಿಸ್ಟೆಂಟ್‌ ಪ್ರೊಫೆಸರ್‌, ರೇಡಿಯೋ ತೆರಪಿ ಮತ್ತು ಆಂಕಾಲಜಿ ವಿಭಾಗ
ಕೆಎಂಸಿ ಆಸ್ಪತ್ರೆ, ಮಣಿಪಾಲ .

Advertisement

Udayavani is now on Telegram. Click here to join our channel and stay updated with the latest news.

Next